ಫೇಸ್‌ಬುಕ್‌ ಪ್ರಚಾರಕ್ಕೆ ಅನುಮತಿ ಕಡ್ಡಾಯ

7
ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಸಭೆಯಲ್ಲಿ ಚುನಾವಣಾಧಿಕಾರಿ ಸ್ಪಷ್ಟನೆ

ಫೇಸ್‌ಬುಕ್‌ ಪ್ರಚಾರಕ್ಕೆ ಅನುಮತಿ ಕಡ್ಡಾಯ

Published:
Updated:

ಬಳ್ಳಾರಿ: ‘ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ವಾಟ್ಸ್ಆ್ಯಪ್, ಟ್ಟಿಟರ್ ಮತ್ತು ಯೂಟ್ಯೂಬ್‌ನಲ್ಲಿ ಚುನಾವಣೆ ಪ್ರಚಾರ ನಡೆಸುವ ಮುನ್ನ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯಿಂದ ಮಾಧ್ಯಮ ಪ್ರಮಾಣೀಕರಣ ಪತ್ರ ಪಡೆಯುವುದು ಕಡ್ಡಾಯ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಸ್ಪಷ್ಟಪಡಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಅನುಮತಿ ಪಡೆಯದೆ ಪ್ರಚಾರ ಮಾಡುವವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಅಡಿ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಮಾಹಿತಿ ಕಡ್ಡಾಯ: ‘ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಅಭ್ಯರ್ಥಿಗಳು ಅರ್ಜಿ ನಮೂನೆ -26ರಲ್ಲಿ ತಮ್ಮ ಫೇಸ್‌ಬುಕ್‌, ವಾಟ್ಸ್ಆ್ಯಪ್, ಟ್ಟಿಟರ್ ಖಾತೆ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ರಾಜಕೀಯ ಪಕ್ಷಗಳಿಗೂ ಇದು ಅನ್ವಯಿಸುತ್ತದೆ’ ಎಂದು ಹೇಳಿದರು.

ಖರ್ಚು ವೆಚ್ಚ: ‘ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿಯನ್ನು ಹಾಕುವ ಮುನ್ನ, ಅದರ ವಿನ್ಯಾಸ, ತಗುಲಿದ ಹಾಗೂ ತಗಲುವ ವೆಚ್ಚದ ಮಾಹಿತಿ ನೀಡಬೇಕು. ಅದನ್ನು ಸಮಿತಿ ಪರಿಶೀಲಿಸಿ ಸಮಿತಿಯು ಪ್ರಮಾಣಪತ್ರ ನೀಡಲಿದೆ. ಅದನ್ನು ಮಾತ್ರ ಪ್ರಚಾರ ಮಾಡಬೇಕು’ ಎಂದು ಹೇಳಿದರು. ‘ಅನುಮತಿ ಪಡೆಯದ ವಿನ್ಯಾಸಗಳನ್ನು ಪ್ರಚಾರ ಮಾಡಿದ್ದರೆ ಗ್ರುಪ್ ಅಡ್ಮಿನ್‌, ಮಾಹಿತಿಯನ್ನು ಶೇರ್ ಮಾಡಿದವರು ಹಾಗೂ ಅಭ್ಯರ್ಥಿಗಳ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ಕಾಸಿಗಾಗಿ ಸುದ್ದಿ: ‘ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಿಸಲಾಗಿದೆ ಎಂಬ ಸಂಶಯ ಬಂದರೆ ಕೂಡಲೇ ಗಮನಕ್ಕೆ ತರಬೇಕು. ಅದನ್ನು ಆಧರಿಸಿ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ನೋಟಿಸ್‌ ಜಾರಿ ಮಾಡುತ್ತಾರೆ. ಎಷ್ಟು ಕಾಸಿಗಾಗಿ ಸುದ್ದಿ ಪ್ರಕಟಿಸಲಾಗಿದೆ ಎಂಬುದನ್ನು ಆಧರಿಸಿ ಅದನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು’ ಎಂದರು.

ಕ್ಷೇತ್ರವಾರು ರಚನೆ: ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಕೂಡಲೇ ಮಾದರಿ ನೀತಿ ಸಂಹಿತೆಯ ಉಪಸಮಿತಿಯನ್ನು ರಚಿಸಬೇಕು. ಕೇಬಲ್‌ ಚಾನೆಲ್‌ಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾಸಿಗಾಗಿ ಸುದ್ದಿಯನ್ನು ಪರಿಶೀಲಿಸಬೇಕು, ಜಿಲ್ಲಾ ಸಮಿತಿಗೆ ಪ್ರತಿನಿತ್ಯ ವರದಿ ನೀಡಬೇಕು’ ಎಂದರು.

ಜಿಲ್ಲಾ ಸಮಿತಿಯ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ, ಸದಸ್ಯರಾದ ಬಿ.ಕಾಳಪ್ಪ. ಚಂದ್ರನಾಯಕ್, ಎನ್. ವೀರಭದ್ರಗೌಡ, ಎನ್.ಎಸ್.ಸುಭಾಷ ಇದ್ದರು.

ಪಂಜಿನ ಮೆರವಣಿಗೆ ಇಂದು

ಬಳ್ಳಾರಿ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ, ನೈತಿಕ ಹಾಗೂ ಕಡ್ಡಾಯ ಮತದಾನವನ್ನು ಉತ್ತೇಜಿಸುವ ಸಲುವಾಗಿ ಸ್ವೀಪ್ ಸಮಿತಿಯು ಏ.10ರಂದು ಸಂಜೆ 5ಕ್ಕೆ ನಗರದಲ್ಲಿ ಪಂಜಿನ ಮೆರವಣಿಗೆಯನ್ನು ಆಯೋಜಿಸಿದೆ.ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗುವ ಮೆರವಣಿಗೆಯು ಜೋಳದರಾಶಿ ದೊಡ್ಡನಗೌಡ ರಂಗಮಂದಿರ, ಎಚ್‌.ಆರ್‌.ಗವಿಯಪ್ಪ ವೃತ್ತ, ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಸಾಗಿ ಮುನ್ಸಿಪಲ್ ಕಾಲೇಜಿನಲ್ಲಿ ಕೊನೆಗೊಳ್ಳಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry