ಮತ ಖಚಿತಕ್ಕೆ ವಿವಿ ಪ್ಯಾಟ್‌ ನೆರವು

7
ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್ ಬಳಕೆ ಕುರಿತ ಕಾರ್ಯಾಗಾರ

ಮತ ಖಚಿತಕ್ಕೆ ವಿವಿ ಪ್ಯಾಟ್‌ ನೆರವು

Published:
Updated:

ಗುಂಡ್ಲುಪೇಟೆ: ಪಟ್ಟಣದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಬಳಕೆ ಕುರಿತ ಸೋಮವಾರ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕೃ.ಪಾ.ಗಣೇಶ್ ಮಾತನಾಡಿ, ಇಷ್ಟವಾದ ಅಭ್ಯರ್ಥಿ ಅಥವಾ ಪಕ್ಷಕ್ಕೆ ಮತದಾನ ಮಾಡಿರುವುದನ್ನು ಮತದಾರ ಮುಕ್ತವಾಗಿ ಖಚಿತಪಡಿಸಿಕೊಳ್ಳಲು ವಿವಿ ಪ್ಯಾಟ್ ಬಳಸಲಾಗುತ್ತದೆ. ಮತಯಂತ್ರದ ಪಕ್ಕದಲ್ಲೇ ಇರಿಸುವ ವಿ.ವಿ ಪ್ಯಾಟ್‍ನಲ್ಲಿ ಯಾವ, ಎಷ್ಟನೇ ಕ್ರಮಸಂಖ್ಯೆ ಮತ್ತು ಚಿಹ್ನೆಗೆ ಮತ ಚಲಾವಣೆ ಆಗಿದೆ ಎಂಬುದು ಏಳು ಸೆಕೆಂಡ್ ವರೆಗೆ ಕಾಣುತ್ತದೆ. ಮತದಾರರು ಅದನ್ನು ನೋಡುವ ಮೂಲಕ ತಾವು ಚಲಾಯಿಸಿರುವ ಮತವನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ವಿವಿ ಪ್ಯಾಟ್‍ವೊಂದರಲ್ಲಿ 1500 ಮತಗಳ ಸಂಗ್ರಹಕ್ಕೆ ಅವಕಾಶ ಇರುತ್ತದೆ. ಪಕ್ಷದ ಏಜೆಂಟರ ಸಮ್ಮುಖದಲ್ಲಿ ಮೊದಲು ಅಣಕು ಮತದಾನ ಮಾಡಿಸುವ ಮೂಲಕ ವಿ.ವಿ ಪ್ಯಾಟ್ ಬಳಕೆಗೆ ಚಾಲನೆ ನೀಡಲಾಗುತ್ತದೆ. ಮತ ಯಂತ್ರದ ಭವಿಷ್ಯ ತಿಳಿಸುವ ವಿ.ವಿ ಪ್ಯಾಟ್ ಯಂತ್ರಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಯಂತ್ರದೊಳಗೆ 7 ಚೀಟಿಗಳು ಬೀಳುತ್ತವೆ. ಅವು ಮತಯಂತ್ರ ಮತ್ತು ವಿ.ವಿ ಪ್ಯಾಟ್‍ನಲ್ಲಿ ಕೆಲಸ ಮಾಡುವ ಏಳು ಸೆನ್ಸಾರ್‌ಗಳ ಸ್ಥಿತಿಗತಿ ಬಗ್ಗೆ ತಿಳಿಸುತ್ತವೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ಒಟ್ಟು 250 ಮತಗಟ್ಟೆಗಳಿದ್ದು, ಇಲ್ಲಿ ಬಳಸುವ 250 ವಿ.ವಿ ಪ್ಯಾಟ್‍ಗಳ ಪೈಕಿ ಒಂದು ಮತಗಟ್ಟೆಯಲ್ಲಿ ಬಳಸಿದ ಒಂದು ಯಂತ್ರವನ್ನು ತೆರೆದು ತಾಳೆ ಮಾಡಿ ನೋಡಲಾಗುತ್ತದೆ. ವಿವಿ ಪ್ಯಾಟ್‍ನಲ್ಲಿ ಪ್ರಿಂಟ್‍ಗೆ ಬಳಸುವ ಪೇಪರ್ 5 ವರ್ಷದವರೆಗೆ ಹಾಳಾಗದಷ್ಟು ಗುಣ ಹೊಂದಿರುತ್ತದೆ. ಆದರೂ, ಚುನಾವಣೆ ನ್ಯಾಯ ಸಮ್ಮತವಾಗಿಲ್ಲ ಎಂಬ ಬಗ್ಗೆ ನ್ಯಾಯಾಲಯಕ್ಕೆ ಮೊರೆ  ಹೋಗಲು ಆರು ತಿಂಗಳಷ್ಟೆ ಕಾಲವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಮತಯಂತ್ರದ ಸಾಚಾತನ ದೃಢಪಡಿಸುವ ವಿವಿ ಪ್ಯಾಟ್ ನಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶಗಳಿವೆ ಎಂಬುದನ್ನು ಸಾಬೀತುಪಡಿಸಲು ಯಾರೇ ಆದರೂ ಮುಂದೆ ಬರಬಹುದು ಎಂದು ರಾಜ್ಯ ಚುನಾವಣೆ ಆಯೋಗ ಮುಕ್ತ ಅವಕಾಶ ನೀಡಿದೆ ಎಂದು ತಿಳಿಸಿದರು.

ಹಿರಿಯ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ 130 ಕೋಟಿ ಜನಸಂಖ್ಯೆ ಇದ್ದು, ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸುವುದು ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಭಾರತ ಸರಕಾರದ ಅಂಗ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ ಸಂಸ್ಥೆ ಸಿದ್ಧಗೊಳಿಸಿರುವ ಮತಯಂತ್ರ, ಕಂಟ್ರೋಲ್ ಯೂನಿಟ್ ಮೂಲಕ ಕಾಗದ ರಹಿತವಾಗಿ, ಮಾನವ ಶ್ರಮವಿಲ್ಲದೇ, ಕಡಿಮೆ ಸಮಯದಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಮತಯಂತ್ರ ಬಳಕೆಯಿಂದ ಒಂದೇ ಪಕ್ಷ ಅಥವಾ ವ್ಯಕ್ತಿಗೆ ಮತ ಬೀಳುವಂತೆ ಮಾಡುವ ಅವಕಾಶ ಇರುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿವಿ ಪ್ಯಾಟ್ ಬಳಸಲಾಗುತ್ತಿದೆ. ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆ ಸಂದರ್ಭ ಎರಡು ಕ್ಷೇತ್ರಗಳ ಪ್ರತಿಮತಗಟ್ಟೆಯಲ್ಲೂ ಪ್ರಾಯೋಗಿಕವಾಗಿ ವಿವಿ ಪ್ಯಾಟ್ ಬಳಸಲಾಗಿತ್ತು. ಈಗ ರಾಜ್ಯದಾದ್ಯಂತ ವಿವಿಪ್ಯಾಟ್ ಬಳಸಲಾಗುತ್ತಿದೆ ಎಂದು ತಿಳಿಸಿದರು.

ಚುನಾವಣಾಧಿಕಾರಿ ಕೆ.ಎಚ್.ಸತೀಶ್, ಸಹಾಯಕ ಚುನಾವಣಾಧಿಕಾರಿ ಎಚ್.ಆರ್.ಚಂದ್ರಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry