ಶುಕ್ರವಾರ, ಡಿಸೆಂಬರ್ 6, 2019
25 °C
ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳ ಪ್ರತಿಭಟನೆ

ಸುಪ್ರೀಂ ತೀರ್ಪು ಹಿಂಪಡೆಯಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಪ್ರೀಂ ತೀರ್ಪು ಹಿಂಪಡೆಯಲು ಒತ್ತಾಯ

ಚಿಕ್ಕಬಳ್ಳಾಪುರ: ದಲಿತ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪನ್ನು ವಿರೋಧಿಸಿ, ಅದನ್ನು ಹಿಂಪಡೆಯುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸು.ಧಾ ವೆಂಕಟೇಶ್ ಮಾತನಾಡಿ, ‘ದೇಶದ ದಲಿತರಿಗೆ ಸಂವಿಧಾನ ಒದಗಿಸಿರುವ ಸಾಮಾಜಿಕ ಸಮಾನತೆ ಅವಕಾಶವನ್ನು ನಿರಾಕರಿಸಲು ಷಡ್ಯಂತ್ರ ಮಾಡಲಾಗುತ್ತಿದೆ. ಮೊದಲು ಬಡ್ತಿ ಮೀಸಲಾತಿ ಕಸಿದುಕೊಳ್ಳಲಾಯಿತು. ಈಗ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ದಲಿತರ ಹಿತಕ್ಕೆ ವಿರುದ್ಧವಾಗಿದೆ. ದಲಿತ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳ್ಳುವಂತಹ ತೀರ್ಪು ಇದಾಗಿದೆ’ ಎಂದು ಆರೋಪಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿ ಸಂತ್ರಸ್ತರು ದೂರು ನೀಡಿದಾಗ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಜತೆಗೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಬಾರದು. ಆದರೆ, ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಇದಕ್ಕೆ ವಿರುದ್ಧವಾಗಿದೆ. ದಲಿತರ ರಕ್ಷಣೆಗೆ ಮಾರಕವಾಗಿದೆ’ ಎಂದು ಎಂದು ಹೇಳಿದರು.

‘ಈಗಾಗಲೇ ಸುಪ್ರೀಂ ಕೋಟ್‌ ತೀರ್ಪಿಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪುನರ್‌ ಪರಿಶೀಲನಾ ಅರ್ಜಿಯ ಪರವಾಗಿ ವಕಾಲತ್ತು ವಹಿಸಲು ಪರಿಣಿತ ವಕೀಲರನ್ನು ನೇಮಿಸಬೇಕು. ಸುಪ್ರೀಂ ಕೋಟ್‌ ತೀರ್ಪನ್ನು ವಿರೋಧಿಸಿ ಇತ್ತೀಚೆಗೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಭಾರತ್‌ ಬಂದ್‌ಗೆ ಕರೆ ನೀಡಿ ಪ್ರತಿಭಟಿಸುತ್ತಿದ್ದ ವೇಳೆಯಲ್ಲಿ ಹಿಂಸೆ, ಗಲಭೆಗೆ ಕಾರಣವಾದ ಸಮಾಜ ವಿರೋಧಿ ಶಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ವೇಳೆ ಮೃತಪಟ್ಟ ಕುಟುಂಬದವರಿಗೆ ಕೇಂದ್ರ ಸರ್ಕಾರ ತಲಾ ₨1ಕೋಟಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಎಂ.ನಾಗೇಶ್‌ ಮಾತನಾಡಿ, ‘ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ಕಾಯ್ದೆ ಸಡಿಲಗೊಳಿಸುವ ಸುಪ್ರೀಂಕೋರ್ಟ್ ಆದೇಶ ಕೇಂದ್ರ ಸರ್ಕಾರದ ಒಳಸಂಚಿನಂತಿದೆ. ಪರಿಶಿಷ್ಟರಿಗೆ ಇರುವ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಕಾನೂನು ವ್ಯಾಪ್ತಿಯನ್ನು ಮೀರಿದೆ. ಈ ತೀರ್ಪು ದಲಿತ ವಿರೋಧಿ ನಿಲುವಾಗಿದೆ’ ಎಂದು ಆರೋಪಿಸಿದರು.

ಗುಡಿಬಂಡೆ ಮಂಜುನಾಥ್‌, ಎಂ.ವೇಣು, ಎಂ.ನರಸಿಂಹಮೂರ್ತಿ, ವೆಂಕಟರಮಣಪ್ಪ ಪ್ರತಿಭಟನೆಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)