ಶುಕ್ರವಾರ, ಡಿಸೆಂಬರ್ 6, 2019
24 °C
ಮಲೆನಾಡಿನ ವಾಣಿಜ್ಯ ಬೆಳೆ ಅಡಿಕೆಗೆ ರೋಗ, ಭತ್ತಕ್ಕೆ ಸಿಗದ ಬೆಂಬಲ

ಕಾಫಿ ಬೆಳೆಯತ್ತ ಬೆಳೆಗಾರರ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿ ಬೆಳೆಯತ್ತ ಬೆಳೆಗಾರರ ಚಿತ್ತ

ಶೃಂಗೇರಿ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಎನಿಸಿಕೊಂಡಿರುವ ಅಡಿಕೆಗೆ ಬಂದಿರುವ ರೋಗಗಳಿಂದ ಜನರು ಬೇಸತ್ತಿದ್ದು, ಜನರು ಕಾಫಿ ಬೆಳೆಗೆ ಆಕರ್ಷಿತರಾಗಿದ್ದಾರೆ. ಪ್ರಮುಖ ಸ್ಥಾನ ಪಡೆದುಕೊಂಡಿರುವ ಈ ಬೆಳೆಯ ಕೊಯ್ಲು ಮುಕ್ತಾಯ ಹಂತದಲ್ಲಿದೆ.

ಡಿಸೆಂಬರ್‍ನಿಂದ ಆರಂಭಗೊಂಡಿರುವ ಕಾಫಿ ಹಣ್ಣಿನ ಕೊಯ್ಲು ಈಗ ಮತ್ತಷ್ಟು ಚುರುಕುಗೊಂಡಿದ್ದು, ತಾಲ್ಲೂಕಿನಲ್ಲಿ ಎಸ್ಟೇಟ್‍ನಂತಹ ದೊಡ್ಡ ಪ್ರಮಾಣದ ಬೆಳೆಗಾರರು ಇಲ್ಲವಾದರೂ, ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಳೆ ಸಾಕಷ್ಟು ವಿಸ್ತರಣೆಯಾಗಿದೆ.

ಅಡಿಕೆ ಸುಲಿಯಲು, ಭತ್ತ ಕಟಾವು ಮಾಡಲು ಯಂತ್ರಗಳು ಬಂದಿದ್ದರೂ, ಕಾಫಿ ಮತ್ತು ಕಾಳು ಮೆಣಸು ಕೊಯ್ಲು ಮಾಡಲು ಕಾರ್ಮಿಕರು ಬೇಕೆ ಬೇಕು. ಅಡಿಕೆ, ಭತ್ತ ಕಟಾವು ಜತೆಗೆ ಕಾಫಿ ಹಣ್ಣಿನ ಕೊಯ್ಲು ಆಗಬೇಕಾಗಿರುವುದರಿಂದ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆ ಉಂಟಾಗಿದೆ. ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರಿಗೆ ದೊರಕುವುದರಿಂದ ಹೆಚ್ಚು ಆಸಕ್ತಿಯಿಂದ ಕೊಯ್ಲು ಮಾಡಲು ಮುಂದಾಗುತ್ತಾರೆ.

ತಾಲ್ಲೂಕಿನ ಮತ್ತೊಂದು ಬೆಳೆ ಭತ್ತ ಬೆಳೆಯಲು ಕಾರ್ಮಿಕರ ಕೊರತೆ, ಬೆಂಬಲ ಬೆಲೆ ಕಡಿಮೆ ಇದ್ದು, ಕೃಷಿಕರು ಕಾಫಿ ಬೆಳೆ ಬೆಳೆಸುವತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ರೇವತಿ ಮಳೆ ಕಾಫಿ ಬೆಳೆಗೆ ಸೂಕ್ತವಾಗಿದ್ದು ಮಾರ್ಚ್ ತಿಂಗಳಲ್ಲಿ ಕಾಣಿಸಿಕೊಂಡ ಮಳೆಯಿಂದ ಉತ್ತಮ ಫಸಲು ಬರಬಹುದು ಎಂಬ ನಿರೀಕ್ಷೆ ಮಲೆನಾಡಿನ ರೈತರಲ್ಲಿದೆ. ಕಾರ್ಮಿಕರ ಖರ್ಚು ಕಳೆದು ಕಡಿಮೆ ಲಾಭ ಬಂದರೂ ಕೃಷಿಕರು ಈ ಬೆಳೆ ಬೆಳೆಸುವುದು ಅನಿವಾರ್ಯವಾಗಿದೆ.

ಕಾಫಿ ಅಂತರರಾಷ್ಟ್ರೀಯ ಮಾರುಕಟ್ಟೆ ಹೊಂದಿರುವುದರಿಂದ ಕೊಯ್ಲು ಮತ್ತು ಒಣಗಿಸುವಿಕೆ ಸೂಕ್ಷ್ಮ ಘಟ್ಟ. ದೊಡ್ಡ ರೈತರು ಕಾಫಿ ಒಣಗಿಸಲು ಕಾಂಕ್ರೀಟ್ ಕಣಗಳನ್ನು ನಿರ್ಮಿಸುತ್ತಾರೆ. ಆದರೆ ಸಣ್ಣ ಮತ್ತು ಮಧ್ಯಮವರ್ಗದ ರೈತರು ಟಾರ್ಪಾಲ್‌ ಅಥವಾ ಮಣ್ಣಿನ ನೆಲದ ಮೇಲೆ ಹರಡುತ್ತಾರೆ. ಆದರೆ ಮಣ್ಣಿನ ಮೇಲೆ ಹರಡಿದ ಕಾಫಿಯ ಗುಣಮಟ್ಟ ಕುಸಿಯುತ್ತದೆ.ಕಾಫಿ ಮಂಡಳಿ ಅಥವಾ ಕೃಷಿ ಇಲಾಖೆ ಸಹಾಯಧನದಲ್ಲಿ ಟಾರ್ಪಲ್‍ಗಳನ್ನು ಪೂರೈಸಿದರೆ ರೈತರಿಗೆ ಸಹಾಯಕವಾಗಲಿದೆ.

ಅಧಿಕ ಇಳುವರಿ, ಲಾಭ ಕಡಿಮೆ: 3 ವರ್ಷಗಳ ಹಿಂದೆ ಅಂಗಡಿಗೆ 10 ರಿಂದ 20 ಮೂಟೆ ಕಾಫಿ ಬೀಜ ತಂದು ಹಾಕುತ್ತಿದ್ದ ತಾಲ್ಲೂಕಿನ ರೈತರು. ಈಗ 300 ಮೂಟೆ ತಂದು ಕೊಡುತ್ತಿದ್ದಾರೆ. ಈಗಿನ ಬೆಲೆ 50 ಕೆ.ಜಿಗೆ ₹2,900 ರಿಂದ 3ಸಾವಿರ ತನಕ ಇದೆ. ಇದರಿಂದ ರೈತರಿಗೆ ಅಧಿಕ ಲಾಭವಿಲ್ಲದಿದ್ದರೂ ಕಾಫಿ ಬೆಳೆ ಬೆಳೆಯುವ ಅನಿವಾರ್ಯತೆ ಇದೆ. ಹಾಗಾಗಿ ಬೆಳೆಗಳ ಕುರಿತು ತಂತ್ರಜ್ಞಾನದ ಬಳಕೆಯ ಬಗ್ಗೆ ಅಧ್ಯಯನ ಮಾಡಿದ ಕೃಷಿಕರು ಕಾಫಿ ಬೆಳೆ ಬೆಳೆಸುವತ್ತ ಇಲ್ಲಿನ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಕಾಫಿಪುಡಿ ಅಂಗಡಿಯವರ ಅಭಿಪ್ರಾಯ.

ಕಾಡು ಪ್ರಾಣಿಗಳ ಕಾಟ: ಕಾಫಿ ಹಣ್ಣಿಗೆ ಮಂಗಗಳ ಕಾಟ ಅತಿ ಹೆಚ್ಚಾಗಿದ್ದು, ಆಹಾರ ಅರಸಿ ಬಂದು ಕಾಫಿ ಹಣ್ಣನ್ನು ತಿನ್ನುತ್ತವೆ. ಗಿಡದ ಮಧ್ಯ ಭಾಗದಲ್ಲಿ ಕುಳಿತು ರೆಂಬೆಗಳನ್ನು ಎಳೆದು ಹಣ್ಣು ತಿನ್ನುವ ಮಂಗಗಳು ಫಸಲಿನ ರೆಂಬೆಯನ್ನು ಹಾಳು ಮಾಡುತ್ತವೆ. ಇದಲ್ಲದೇ ಇನ್ನಿತರ ಕಾಡು ಪ್ರಾಣಿಗಳು ಅಲ್ಪ ಪ್ರಮಾಣದ ಹಾನಿ ಉಂಟು ಮಾಡುತ್ತವೆ. ಮಂಗಗಳ ನಿಯಂತ್ರಣ ಮಾಡುವುದು ರೈತರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಕೊಯ್ಲು ಮಾಡುವ ಕಾರ್ಮಿಕರಿಗೆ ಹಣ್ಣಿನೊಡನೆ ಇರುವ ಇರುವೆಗಳು ಸಾಕಷ್ಟು ತೊಂದರೆ ಕೊಡುತ್ತದೆ.

ಕಾಫಿ ಬೆಳೆ ಉತ್ತಮವಾಗಿರಲು ಹವಾಮಾನವನ್ನು ನೆಚ್ಚಿಕೊಂಡಿರುವ ರೈತರ ಸಂಖ್ಯೆ ಹೆಚ್ಚು. ಮಾರ್ಚ್-ಏಪ್ರಿಲ್‍ನಲ್ಲಿ ಉತ್ತಮ ಮಳೆಯಾದರೆ ಮಾತ್ರ ಕಾಫಿ ಉತ್ತಮ ಫಸಲು ಬರುತ್ತದೆ. ಪ್ರತಿ ವರ್ಷ ಉತ್ತಮ ಮಳೆಯಾಗದೆ ಪೈರಿನ ಮೇಲೆ ಸಾಕಷ್ಟು ಹೊಡೆತ ನೀಡುತ್ತಿದೆ.ಆದರೂ ಹೊಸ ಜಾಗದಲ್ಲಿ ಕಾಫಿ ವಿಸ್ತರಣೆ ಮುಂದುವರೆದಿದೆ.

ಸಾಂಪ್ರಾದಾಯಿಕ ಕಾಫಿ ತಳಿಗೆ ಒತ್ತು: ಬ್ರಿಟಿಷರ ಕಾಲದಿಂದ ಇದ್ದ ಕಾಫಿ ಬೆಳೆ ಹೆಚ್ಚು ಆದಾಯ ನೀಡದೆ ಇರುವುದರಿಂದ ಮನೆ ಖರ್ಚಿಗಾಗಿ ಮಾತ್ರ ಅದನ್ನು ಬೆಳೆಸಲಾಗುತ್ತಿತ್ತು. ಆದರೆ ಪ್ರಸ್ತುತ ತಾಲ್ಲೂಕಿನಲ್ಲಿ ಅಡಿಕೆ ಬೆಳೆ ಶೇ 75ರಷ್ಟು ಭಾಗ ಹಳದಿ ಎಲೆ ರೋಗದಿಂದ ನಾಶವಾಗಿವೆ. ಈ ಕಾರಣದಿಂದ  25 ವರ್ಷಗಳಿಂದ ನಾಶವಾದ ಅಡಿಕೆ ತೋಟದಲ್ಲಿ ಕಾಫಿ ಗಿಡ ನೆಡಲಾಗುತ್ತಿದೆ. ಮಲೆನಾಡಿನ ಸಾಂಪ್ರದಾಯಿಕ ಗಿಡವಾದ ರೊಬೊಸ್ಟಾ ಕಾಫಿ ಗಿಡಗಳನ್ನು ನೆಡಲಾಗುತ್ತಿದೆ. ಇದು ದೀರ್ಘಾವಧಿ ಬೆಳೆಯಾಗಿದ್ದು, ಈ ತಳಿಗೆ ಉಷ್ಟಾಂಶ ಹಾಗೂ ತೇವಾಂಶಗಳನ್ನು ತಡೆಯುವ ಶಕ್ತಿ ಇದೆ. ಕೊಳೆರೋಗ ಕಾಡುವ ಭೀತಿ ಕಡಿಮೆ. ಅರೇಬಿಕಾ, ಚಂದ್ರಗಿರಿ, ಕಾವೇರಿ ತಳಿಗಳನ್ನು ಬೆಳೆಸಲಾಗುತ್ತಿದೆ. ಆದರೆ ಈ ತಳಿಗಳಿಗೆ ಅಧಿಕ ಮಳೆ ಬಂದರೆ ಕೊಳೆರೋಗ ಕಾಡುತ್ತವೆ.

**

ಕಾಫಿಗೆ ಕೆಲಸ ಜಾಸ್ತಿ ಇದ್ದು, ಕಸಿ ಮಾಡಲು ಮಾತ್ರ ನುರಿತ ಕಾರ್ಮಿಕರು ಬೇಕು. ಈಗಿನ ದರ ಕಡಿಮೆ ಇದ್ದು, ಕನಿಷ್ಠ ಚೀಲವೊಂದಕ್ಕೆ ₹4,500 ಬರಬೇಕು – ಶ್ರೀನಿವಾಸ್ ಗೌಡ ಕೂಳೆಗದ್ದೆ ಕೃಷಿಕರು.

**

ಅಡಿಕೆಗೆ ಪರ್ಯಾಯವಾಗಿ ಬೆಳೆಯುತ್ತಿರುವ ಕಾಫಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಕಾಫಿ ಮಂಡಳಿ ಸುಲಭ ನಿಯಮಗಳ ಮೂಲಕ ರೈತರಿಗೆ ಸೌಲಭ್ಯ ನೀಡಬೇಕು – ಕಾನೋಳ್ಳಿ ಚಂದ್ರಶೇಖರ್, ಅಧ್ಯಕ್ಷರು ರೈತ ಸಂಘ ಶೃಂಗೇರಿ.

**

ರಾಘವೇಂದ್ರ

ಪ್ರತಿಕ್ರಿಯಿಸಿ (+)