ಬುಧವಾರ, ಜುಲೈ 15, 2020
22 °C
ಜಿಲ್ಲಾ ಎಸ್‍ಸಿ, ಎಸ್‍ಟಿ ಸಮನ್ವಯ ಸಮಿತಿಯಿಂದ ಪ್ರತಿಭಟನೆ

ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆ

ಚಿತ್ರದುರ್ಗ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಖಂಡಿಸಿ ಜಿಲ್ಲಾ ಎಸ್‍ಸಿ, ಎಸ್‍ಟಿ ಸಮನ್ವಯ ಸಮಿತಿಯಿಂದ ಇಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ಡಾ.ಬಿ.ಆರ್. ಅಂಬೇಡ್ಕ್‌ರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆ ನಡೆಸಲಾಯಿತು. ತೀರ್ಪು ಮರು ಪರಿಶೀಲನೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.

ಹಿರಿಯೂರಿನ ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ, ಪ್ರಜಾಪ್ರಭುತ್ವದ ನ್ಯಾಯಾಂಗ ವ್ಯವಸ್ಥೆಯ ನ್ಯಾಯಪೀಠದಲ್ಲಿ ಕುಳಿತಿರುವವರು ನೀಡಿರುವ ತೀರ್ಪು ಎಸ್‍ಸಿ, ಎಸ್‍ಟಿ ಸಮುದಾಯಗಳ ಶಕ್ತಿಯನ್ನೇ ಕುಂದಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದ ಮುಖ್ಯವಾಹಿನಿಗೆ ಬರಲು ಇನ್ನು ಪ್ರಯತ್ನಿಸುತ್ತಿರುವ ದಲಿತರನ್ನು ಬಲಹೀನಗೊಳಿಸುವ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿಶೀಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಸಮ್ಮತವಾದ ತೀರ್ಪು ನೀಡಬೇಕೇ ಹೊರತು ಸಂವಿಧಾನದ ಆಶಯಕ್ಕೆ ವಿರುದ್ಧವಾದ ತೀರ್ಪು ನೀಡಬಾರದು. ಉತ್ತರ ಭಾರತದಲ್ಲಿ ದಲಿತರನ್ನು ಹೀನಾಯವಾಗಿ ನಡೆಸಿಕೊಂಡು ಹಲ್ಲೆ ಮಾಡಲಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಪರಿಶಿಷ್ಟ ಜಾತಿಯವರನ್ನು ನಿಕೃಷ್ಠವಾಗಿ ಅವಮಾನಿಸುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಅದಕ್ಕಾಗಿ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ದಲಿತರಿಗೆ ಶಕ್ತಿಯನ್ನು ತುಂಬಿದ್ದಾರೆ. ಅದನ್ನು ಸಹಿಸದ ಕೆಲವು ವಿಕೃತ ಮನಸ್ಸುಗಳ ಪಿತೂರಿಯಿಂದ ಸುಪ್ರೀಂ ಕೋರ್ಟ್ ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ತೀರ್ಪು ನೀಡಿರುವುದು ಅತ್ಯಂತ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ನೋವುಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ, ನ್ಯಾಯಪೀಠದಲ್ಲೂ ಪರಿಶಿಷ್ಟರು ಕೂರಲಿ. ಪರಿಶಿಷ್ಟ ಜಾತಿಯವರನ್ನು ಜಾತಿ ಹೆಸರಿನಲ್ಲಿ ನಿಂದಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾಯ್ದೆಯನ್ನು ಜಾರಿಗೆ ತರಲಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಮುಖಂಡರಾದ ಎಚ್.ಸಿ. ನಿರಂಜನಮೂರ್ತಿ, ಮುರುಘರಾಜೇಂದ್ರ ಒಡೆಯರ್, ನರೇನಹಳ್ಳಿ ಅರುಣ್‌ಕುಮಾರ್, ವೈ.ಕುಮಾರ್, ಡಿ. ಗೋಪಾಲಸ್ವಾಮಿ ನಾಯಕ, ಎಚ್.ತಿಪ್ಪೇಸ್ವಾಮಿ, ಚಂದ್ರಣ್ಣ, ಟಿ.ತಿಪ್ಪೇಸ್ವಾಮಿ, ಡಿ.ದುರುಗೇಶಪ್ಪ, ಮಾಡನಾಯಕನಹಳ್ಳಿ ರಂಗಪ್ಪ, ಎಚ್.ಹಾಲೇಶಪ್ಪ, ಕೆ. ರಾಜಣ್ಣ, ಎಚ್. ಮಹಂತೇಶ್, ಗಿರಿಮಲ್ಲಿಗೆ ರಾಜಗಿರಿ, ರಾಜಣ್ಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.