ಬುಧವಾರ, ಜುಲೈ 15, 2020
22 °C
ಹಿರಿಯ ಮುಖಂಡ ಎಸ್‌.ಎ.ರವೀಂದ್ರನಾಥ್‌ಗೆ ದಾವಣಗೆರೆ ಜಿಲ್ಲೆಯಲ್ಲಿ ಮೊದಲ ಬಿಜೆಪಿ ಟಿಕೆಟ್‌ ಘೋಷಣೆ

ಅನುದಾನ ತಂದಿದ್ದೇ ನಿರ್ಣಾಯಕ ಅಲ್ಲ

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಅನುದಾನ ತಂದಿದ್ದೇ ನಿರ್ಣಾಯಕ ಅಲ್ಲ

ದಾವಣಗೆರೆ: ಬಿಜೆಪಿ ಬಿಡುಗಡೆ ಮಾಡಿದ 72 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ದಾವಣಗೆರೆ ಹಿರಿಯ ಮುಖಂಡ ಎಸ್‌.ಎ.ರವೀಂದ್ರನಾಥ್‌ ಹೆಸರಿದೆ. ನಿರೀಕ್ಷೆಯಂತೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಅವರಿಗೆ ಖಾತ್ರಿಯಾಗಿದೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮುಖಂಡರಿಗೆ ಟಿಕೆಟ್‌ ಘೋಷಣೆ ಇನ್ನಷ್ಟು ಹುಮ್ಮಸ್ಸು ತುಂಬಿದೆ.

ಟಿಕೆಟ್‌ ಸಿಕ್ಕ ಖುಷಿಯಲ್ಲಿರುವ ರವೀಂದ್ರನಾಥ್‌ ‘ಪ್ರಜಾವಾಣಿ’ ಜತೆ ಅಭಿಪ್ರಾಯಗಳನ್ನು ಹಂಚಿಕೊಂಡರು. ‘ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತೇವೆ. ಅಲ್ಲದೇ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಏನೇನು ಕೆಲಸಗಳನ್ನು ಮಾಡಿದ್ದೇವೆ ಎಂಬುದನ್ನೂ ಜನರಿಗೆ ಹೇಳುತ್ತೇವೆ. ಇವುಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ’ ಎಂದು ದೃಢ ವಿಶ್ವಾಸದಿಂದ ನುಡಿದರು.

‘ದಾವಣಗೆರೆ ಭಾಗದಲ್ಲಿ ಕಾಂಗ್ರೆಸ್‌ ಸರ್ಕಾರ ಭದ್ರಾ ಅಚ್ಚುಕಟ್ಟುದಾರರಿಗೆ ನಾಲ್ಕು ಬೆಳೆಗಳಿಗೆ ನೀರು ಕೊಟ್ಟಿಲ್ಲ. ನಗರದಲ್ಲಿ ಕುಡಿಯುವ ನೀರಿಗೆ ಇಷ್ಟೊಂದು ಹಾಹಾಕಾರ ಸೃಷ್ಟಿಯಾಗಿರುವುದು ನನಗೆ ಗೊತ್ತಿದ್ದ ಹಾಗೆ 50 ವರ್ಷಗಳಲ್ಲೇ ಮೊದಲು. ಈಗಷ್ಟೇ ಬೇಸಿಗೆ ಆರಂಭವಾಗಿದೆ, ಈಗಲೂ ನಗರದಲ್ಲಿ 12 ದಿವಸಕ್ಕೊಮ್ಮೆ ನೀರು ಬಿಡಲಾಗುತ್ತದೆ. ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇನೆ’ ಎಂದರು.

ಜೆ.ಎಚ್. ಪಟೇಲ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಂ.ಪಿ. ಪ್ರಕಾಶ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಇಲಾಖೆ ಅನುದಾನವನ್ನೆಲ್ಲಾ ಹಡಗಲಿ ತಾಲ್ಲೂಕಿಗೆ ಖರ್ಚು ಮಾಡಿದ್ದರು. ಸಂದಿ, ಮೂಲೆ ಬಿಡದಂತೆ ರಸ್ತೆ, ಚರಂಡಿ, ಸೇತುವೆಗಳನ್ನು ನಿರ್ಮಿಸಿದ್ದರು. ಅಲ್ಲಿ ಮುಂದಿನ ಚುನಾವಣೆಯಲ್ಲಿ ಅವರು ಗೆಲ್ಲಲ್ಲಿಲ್ಲ. ಇದರಿಂದ ಒಂದು ಅಂಶ ತಿಳಿಯುತ್ತದೆ. ಚರಂಡಿ, ರಸ್ತೆ ಅಭಿವೃದ್ಧಿ ಲೆಕ್ಕವೇ ಚುನಾವಣೆಗೆ ನಿರ್ಣಯ ಅಲ್ಲ; ರಾಜಕಾರಣದಲ್ಲಿ ನಾವು ಹೇಗೆ ನಡೆಯುತ್ತಿದ್ದೇವೆ. ಸರ್ಕಾರ ಜನರಿಗೆ ಹೇಗೆ ಸ್ಪಂದಿಸುತ್ತಿದೆ ಎಂಬುದು ಮುಖ್ಯ ಎಂದು ರವೀಂದ್ರನಾಥ್‌ ಅಭಿಪ್ರಾಯಪಟ್ಟರು.

‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲ ಬರಗಾಲ ಬಂದಿದೆ. ಈ ಬಾರಿಯೂ ಬರಗಾಲ ಇತ್ತು. ದಾವಣಗೆರೆಯಿಂದ 30 ಕಿ.ಮೀ ದೂರದಲ್ಲಿ ತುಂಗಭದ್ರಾ ನದಿ ಇದೆ. ಜಿಲ್ಲೆಗೆ ₹ 10 ಸಾವಿರ ಕೋಟಿ ಅನುದಾನ ತಂದಿದ್ದೇವೆ. ರಾಜ್ಯದಲ್ಲೇ ಇಷ್ಟೊಂದು ಅನುದಾನ ಯಾವ ಜಿಲ್ಲೆಗೂ ಸಿಕ್ಕಿಲ್ಲ ಎಂದು ಹೇಳುತ್ತಾರೆ. ಆದರೆ, ಬರೀ ₹ 50 ಕೋಟಿ ಖರ್ಚು ಮಾಡಿ ಒಂದು ತಡೆಗೋಡೆ ಮಾಡಿದ್ದರೆ, 22 ಕೆರೆಗಳನ್ನು ತುಂಬಿಸಬಹುದಾಗಿತ್ತು. ಕುಡಿಯುವ ನೀರನ್ನೂ ಕೊಡಬಹುದಾಗಿತ್ತು’ ಎಂದು ಸಲಹೆ ನೀಡಿದರು.

ಅಣೆಕಟ್ಟೆಯಿಂದ ನೀರು ಬಿಟ್ಟಾಗ ನದಿಯಲ್ಲಿ ನಾಲ್ಕು ದಿನ ನೀರು ಹರಿಯುತ್ತದೆ. ಬಿಡದಿದ್ದಾಗ ನದಿಯಲ್ಲಿ ನೀರು ಇರುವುದಿಲ್ಲ. ದಾವಣಗೆರೆ ಭಾಗದ ರೈತರಿಗೆ ಬೆಳೆ ಬೆಳೆಯಲು ಕೆಟ್ಟ ಸ್ಥಿತಿ ಎದುರಾಗಿದೆ. ಆವರಗೊಳ್ಳ, ಕಕ್ಕರಗೊಳ್ಳ, ಹಳೇಬಾತಿ, ದೊಡ್ಡಬಾತಿ, ಕಡ್ಲೇಬಾಳು, ಓಬಜ್ಜಿಹಳ್ಳಿ, ಮಾಡಾನಹಳ್ಳಿ, ಕ್ಯಾಂಪ್‌ಗಳಿಗೆ ನೀರು ಸಿಗಲಿಲ್ಲ. ಯಾವ ಕೆಲಸ ಮಾಡಿದರೂ ಅದು ಲೆಕ್ಕಕ್ಕೆ ಬರುವುದಿಲ್ಲ. ದುರದ್ದೇಶ ಇಟ್ಟುಕೊಂಡೇ ರೈತರಿಗೆ ತೊಂದರೆ ಕೊಡಲಾಯಿತು ಎಂದು ಅವರು ಆರೋಪಿಸಿದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಪಾಲಿಕೆ ಸಭೆಯಲ್ಲೇ, ‘ಎಷ್ಟೇ ಅನುದಾನ ತಂದರೂ ಕೆಲಸ ಸರಿಯಾಗದ್ದಿದ್ದರೆ ಪ್ರಯೋಜನವಿಲ್ಲ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು. ಇದರರ್ಥ ಅನುದಾನ ತಂದು ಹಾಕಿದ ತಕ್ಷಣ ಅಭಿವೃದ್ಧಿಯಾಗುವುದಿಲ್ಲ. ಇದನ್ನು ಅವರೇ ಒಪ್ಪಿಕೊಂಡಂತಾಗಿದೆ. ಬ್ಯೂಟಿ‍ಫುಲ್‌ ಸಿಟಿ, ಕ್ಲೀನ್‌ ಸಿಟಿ ಎಂದು ಹೇಳಿಕೊಳ್ಳುತ್ತಾರೆ. ಆದರೆ, ನಗರವನ್ನು ಒಮ್ಮೆ ಸುತ್ತಾಡಿದರೆ ಮಾತ್ರ ಎಲ್ಲಾ ಗೊತ್ತಾಗುತ್ತದೆ. ಚರಂಡಿ, ಹಂದಿಗಳ ಕಾಟ ಜಾಸ್ತಿಯಾಗಿದೆ. ಚಿಕೂನ್ ಗುನ್ಯಾ ಪ್ರಕರಣಗಳ ಸಂಖ್ಯೆ ಇಡೀ ರಾಜ್ಯದಲ್ಲೇ ದಾವಣಗೆರೆಗೇ ಮೊದಲ ಸ್ಥಾನ. ಒಟ್ಟಿನಲ್ಲಿ ಕಾಂಗ್ರೆಸ್‌ನ ಆಡಳಿತಾವಧಿಯಲ್ಲಿ ಜನರಿಗೆ ಕೆಟ್ಟದ್ದು ಜಾಸ್ತಿಯಾಗಿದೆ. ಒಳ್ಳೆಯದು ಕಡಿಮೆಯಾಗಿದೆ. ಜನರು ಬಹಿರಂಗವಾಗಿ ಮಾತಾಡುವುದಿಲ್ಲ; ಆದರೆ, ಅವರಿಗೆ ಅವರದ್ದೇ ಆದ ಅಭಿಪ್ರಾಯಗಳಿವೆ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮೊದಲ ಟಿಕೆಟ್‌ ಘೋಷಣೆಯಾಗಿದ್ದರಲ್ಲಿ ಹೆಚ್ಚುಗಾರಿಕೆ ಏನೂ ಇಲ್ಲ. ಮೊದಲಿನಿಂದಲೂ ಬಿಜೆಪಿಯಲ್ಲಿದ್ದೆ; ನಿಷ್ಠಾವಂತ ಕಾರ್ಯಕರ್ತ ಎಂದು ನನ್ನನ್ನು ಗುರುತಿಸಿರಬಹುದು ಅಷ್ಟೇ’ ಎಂದು ಪ್ರತಿಕ್ರಿಯಿಸಿದರು.

‘ಉತ್ತರ ಪ್ರದೇಶ, ತ್ರಿಪುರಗಳಲ್ಲಿ ಯಾವ ರೀತಿ ಪಕ್ಷ ಸಂಘಟನೆ ಮಾಡಿತ್ತೋ ಅದೇ ರೀತಿ ಪಕ್ಷ ನೀಡಿದ ಜವಾಬ್ದಾರಿಯನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶೇ 75ರಷ್ಟು ನಿರ್ವಹಿಸಿದ್ದೇವೆ; ಶೇ 100ರಷ್ಟು ಅಲ್ಲ’ ಎಂದು ಉತ್ತರಿಸಿದರು.ಇದೇ 16ರಿಂದ 24ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆಮೇಲೆ ದಿನಾಂಕ ನಿಗದಿಪಡಿಸಲಾಗುವುದು ಎಂದರು.

‘ಆಡಳಿತ ಮಾಡಿದ ಸಂದರ್ಭದಲ್ಲಿ ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ನಮ್ಮ ಕಚ್ಚಾಟ, ಕಿತ್ತಾಟ ನೋಡಿ ಜನ ಸ್ವಲ್ಪ ಬೇಸರಗೊಂಡರು ಅಂತ ಕಾಣಿಸುತ್ತದೆ. ಈಗ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಕೇಂದ್ರದಲ್ಲಿ ಮೋದಿ ಸರ್ಕಾರ ಹೇಗೆ ಇದೆ; ಅದೇ ರೀತಿ ರಾಜ್ಯದಲ್ಲೂ ಯಡಿಯೂರಪ್ಪ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂಬುದು ಜನರ ಭಾವನೆ’ ಎನ್ನುತ್ತಾರೆ ಅವರು.

ಜೆಡಿಎಸ್‌ ಈಗಾಗಲೇ ಮೊದಲಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಜಿಲ್ಲೆಯ ಮಾಯಕೊಂಡ, ಹರಿಹರ ಹಾಗೂ ಚನ್ನಗಿರಿ ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ ಘೋಷಿಸಲಾಗಿದೆ. ಶೀಲಾನಾಯ್ಕ, ಎಚ್‌.ಎಸ್‌.ಶಿವಶಂಕರ್‌, ಹೊದಿಗೆರೆ ರಮೇಶ್‌ ಕ್ರಮವಾಗಿ ಅಭ್ಯರ್ಥಿಗಳು. ಬಿಜೆಪಿಯ ಮೊದಲ ಪಟ್ಟಿಯಲ್ಲಿ ದಾವಣಗೆರ ಉತ್ತರ ಕ್ಷೇತ್ರದ್ದು ಘೋಷಣೆಯಾಗಿದೆ.

‘232 ಬೂತ್‌ಗಳಲ್ಲೂ ಓಡಾಟ’

‘ಉಸ್ತುವಾರಿ ವಹಿಸಿಕೊಂಡ ಮೇಲೆ ಸಂಘಟನಾತ್ಮಕವಾಗಿ ಸಣ್ಣ ಬದಲಾವಣೆ ಮಾಡಲಾಗಿದೆ. ಕ್ಷೇತ್ರದಲ್ಲಿ 232 ಬೂತ್‌ಗಳಿವೆ. ಇಡೀ ಕ್ಷೇತ್ರವನ್ನು 7 ಮಹಾಶಕ್ತಿ ಕೇಂದ್ರಗಳು ಎಂದು ವಿಂಗಡಿಸಿದೆ. ಪ್ರತಿಯೊಂದಕ್ಕೂ ಪ್ರಭಾರಿ, ಸಹ ಪ್ರಭಾರಿ ನೇಮಕ ಮಾಡಲಾಗಿದೆ. 54 ಶಕ್ತಿ ಕೇಂದ್ರಗಳಲ್ಲಿ ತಲಾ ಒಂದರಲ್ಲಿ 4ರಿಂದ 5 ಬೂತ್‌ಗಳು ಬರುತ್ತವೆ. ಅಂತಹ ಐದು ಬೂತ್‌ಗಳಿಗೆ ಒಬ್ಬರನ್ನು ಉಸ್ತುವಾರಿ ಪ್ರಮುಖ್‌ ಆಗಿ ನೇಮಕ ಮಾಡಲಾಗಿದೆ. ಅಷ್ಟೂ ಬೂತ್‌ಗಳಿಗೆ ಓಡಾಟ ಮಾಡಿದ್ದೇವೆ. ಅಲ್ಲದೆ, ಪರಿವಾರ ಸಂಘಟನೆಗಳು ನೆರವಿಗೆ ಬಂದಿವೆ’ ಎನ್ನುತ್ತಾರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾದ ಶಿವಮೊಗ್ಗ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ.

2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದಿದ್ದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ. ಇದುವರೆಗೂ ಇಲ್ಲಿ ಎರಡು ಚುನಾವಣೆಗಳು ಮಾತ್ರ ನಡೆದಿವೆ. ಒಮ್ಮೆ ಬಿಜೆಪಿ ಗೆಲುವು ಪಡೆದರೆ, ಮತ್ತೊಮ್ಮೆ ಕಾಂಗ್ರೆಸ್‌ ಜಯ ಸಾಧಿಸಿದೆ.

2008ರಲ್ಲಿ ಕಾಂಗ್ರೆಸ್‌ನಲ್ಲಿ ನಾಮಪತ್ರ ಸಲ್ಲಿಕೆ ಸಂದರ್ಭ ನಡೆದ ಹೈಡ್ರಾಮಾದಿಂದಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೇ ಸ್ಪರ್ಧಿಸಲಿಲ್ಲ. ಹಾಗಾಗಿ ರವೀಂದ್ರನಾಥ್‌ ಅವರಿಗೆ 53,910 ಮತಗಳ ದೊಡ್ಡ ಅಂತರದ ಗೆಲುವು ಸಿಕ್ಕಿತು. 2013ರಲ್ಲಿ ಬಿಜೆಪಿ–ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ನಡೆಯಿತು. ಎಸ್‌.ಎಸ್‌.ಮಲ್ಲಿಕಾರ್ಜುನ 88,101 ಮತಗಳನ್ನು ಪಡೆದು 57,280 ಮತಗಳ ಅಂತರದಿಂದ ರವೀಂದ್ರನಾಥ್ (30,821) ಅವರನ್ನು ಪರಾಭವಗೊಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.