ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಬೇಟೆಗೆ ನೀರಿನ ಸಂಕಷ್ಟವೇ ಅಸ್ತ್ರ

ಎಲ್ಲ ಇದ್ದೂ ಇಲ್ಲದಂತಾದ ಪರಿಸ್ಥಿತಿ: ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪದಲ್ಲಿ ಬಡವಾದ ಜನರು
Last Updated 10 ಏಪ್ರಿಲ್ 2018, 8:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರತಿ ವರ್ಷದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ, 20 ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಕಾಯಂ ಪರಿಹಾರ ಒದಗಿಸುವ ಕೆಲಸವನ್ನು ಯಾವ ರಾಜಕೀಯ ಪಕ್ಷಗಳೂ ಮಾಡಿಲ್ಲ. ಆದ್ದರಿಂದ, ಈ ವಿಷಯ ಪ್ರತಿ ಚುನಾವಣೆ ಬಂದಾಗ ಮತಬೇಟೆಗೆ ಅಸ್ತ್ರವಾಗುತ್ತಲೇ ಇದೆ.

ಆಡಳಿತ ವ್ಯವಸ್ಥೆಯಲ್ಲಿನ ಲೋಪ, ರಾಜಕೀಯ ಪಕ್ಷಗಳ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳ ನಡುವೆ ಸಿಲುಕಿ ಅವಳಿ ನಗರದ ಜನ ನಲುಗುತ್ತಿದ್ದಾರೆ. ನಿತ್ಯ ಬೆಳಗಾದರೆ ನೀರಿಗೆ ಏನು ಮಾಡಬೇಕು ಎನ್ನುವ ಯೋಚನೆಯಲ್ಲಿ ದಿನಗಳನ್ನು ದೂಡುತ್ತಿದ್ದಾರೆ.

ಹುಬ್ಬಳ್ಳಿಯ ಉಣಕಲ್‌ ಭಾಗ, ಸುಣಗಾರ ಓಣಿ, ಡಂಬಾರ ಓಣಿ, ಸೋನಿಯಾ ಗಾಂಧಿ ನಗರ, ಬೀಡಿ ಕಾರ್ಮಿಕರ ಕಾಲೊನಿ, ಹಳೇ ಹುಬ್ಬಳ್ಳಿ ಭಾಗ, ರಾಮನಗರ, ತಾರಿಹಾಳ, ಸ್ವಾತಂತ್ರ್ಯ ಯೋಧರ ಕಾಲೊನಿ, ರಾಜೀವ ನಗರ, ಗದಗ ರಸ್ತೆಯಲ್ಲಿರುವ ಕನ್ಯಾನಗರ ಹೀಗೆ ಅನೇಕ ಪ್ರದೇಶಗಳಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಅದರಲ್ಲಿಯೂ ಬೇಸಿಗೆ ಬಂದರಂತೂ ಹನಿ ನೀರಿಗೂ ಕಿ.ಮೀ. ಗಟ್ಟಲೆ ದೂರ ಹೋಗಬೇಕಾಗುತ್ತದೆ. ಹಳೇ ಹುಬ್ಬಳ್ಳಿ, ಸೋನಿಯಾ ಗಾಂಧಿ ನಗರ, ಉಣಕಲ್‌ ಭಾಗಕ್ಕೆ ಭೇಟಿ ನೀಡಿದರೆ ಅಲ್ಲಿನ ಜನ ಸಾಲು, ಸಾಲು ಕೊಡಗಳನ್ನು ಇಟ್ಟುಕೊಂಡು ಕಾಯುವ ಚಿತ್ರಣ ಸಾಮಾನ್ಯವಾಗಿರುತ್ತದೆ.

ಈಗ ಚುನಾವಣೆ ಬಂದಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳ ನಾಯಕರು ನೀರಿನ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಕಾಯಂ ಪರಿಹಾರ ಒದಗಿಸುವ ಭರವಸೆ ನೀಡುತ್ತಿದ್ದಾರೆ. 2013ರ ಚುನಾವಣೆಯ ವೇಳೆ ರಾಜಕೀಯ ನಾಯಕರು ಇದೇ ಭರವಸೆ ನೀಡಿದ್ದರು. ಆದರೂ, ಸಮಸ್ಯೆ ಪರಿಹಾರವಾಗಿಲ್ಲ. ಮುಂದೆ ಗೆದ್ದು ಬಂದವರು ಸಮಸ್ಯೆ ಇತ್ಯರ್ಥ್ಯ ಮಾಡುತ್ತಾರೆನ್ನುವ ಯಾವ ನಂಬಿಕೆಯೂ ನಮ್ಮಲ್ಲಿಲ್ಲ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇನ್ನೂ ಕೆಲವರು ಅವಳಿ ನಗರಕ್ಕೆ ಕೆಲ ದಿನಗಳಲ್ಲಿ ನಿರಂತರ ನೀರು ಪೂರೈಕೆಯಾಗಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ಸಮಸ್ಯೆ: 1980ಕ್ಕೂ ಮೊದಲು ಹುಬ್ಬಳ್ಳಿ–ಧಾರವಾಡಕ್ಕೆ ನೀರಿನ ಸಮಸ್ಯೆ ಇರಲಿಲ್ಲ. ಪ್ರತಿ ಓಣಿಗಳಲ್ಲಿ ಸಾರ್ವಜನಿಕ ನಲ್ಲಿಗಳಿರುತ್ತಿದ್ದವು. ಅಲ್ಲಿಯೇ ನೀರು ತುಂಬಿಕೊಂಡು ಹೋಗುತ್ತಿದ್ದರಿಂದ ನೀರಿನ ಕರ ಕಟ್ಟುವ ಅಗತ್ಯವೂ ಇರಲಿಲ್ಲ.

ನೀರಸಾಗರ, ಧಾರವಾಡ ಬಳಿಯ ಕೆಲಗೇರಿ ಕೆರೆ ಮತ್ತು ಉಣಕಲ್‌ ಕರೆಯ ನೀರನ್ನು ಶುದ್ಧೀಕರಿಸಿ ಜನರಿಗೆ ಪೂರೈಕೆ ಮಾಡಲಾಗುತ್ತಿತ್ತು.
1983–84ರಲ್ಲಿ ಮಲಪ್ರಭೆಯ ನೀರು ಕೂಡ ಬಳಕೆಗೆ ಸಿಗಲು ಆರಂಭವಾಯಿತು. ಮೊದಲು ಸವದತ್ತಿಯಿಂದ ಧಾರವಾಡಕ್ಕೆ ಬಂದು, ನಂತರ ಹುಬ್ಬಳ್ಳಿಗೆ ಪೂರೈಕೆಯಾಗುತ್ತಿತ್ತು. ಈ ಮಾರ್ಗ ಮಧ್ಯದಲ್ಲಿಯೇ ಅರ್ಧ ನೀರು ಒಡೆದುಹೋದ ಕೊಳವೆಗಳಲ್ಲಿ ಸೋರಿಕೆಯಾಗುತ್ತಿತ್ತು.

1996–97ರ ವೇಳೆಗೆ ಉಣಕಲ್‌ ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಪರೀಕ್ಷಾ ವರದಿಯಿಂದ ಸಾಬೀತಾದ ಕಾರಣ ಆ ಕೆರೆಯಿಂದ ನೀರು ಪೂರೈಕೆ ಮಾಡುವುದನ್ನು ನಿಲ್ಲಿಸಲಾಯಿತು.

ಆಗಿನಿಂದಲೇ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು.ಆಗ ಪ್ರತಿ ಮೂರು,ನಾಲ್ಕು ದಿನಕ್ಕೊಮ್ಮೆ ಬರುತ್ತಿದ್ದ ನೀರು ಈಗ 8ರಿಂದ 10 ದಿನಕ್ಕೆ ವಿಸ್ತಾರಗೊಂಡಿದೆ. ಕೆಲ ಸಲ 15 ದಿನಕ್ಕೊಮ್ಮೆ ನೀರು ಬರುತ್ತದೆ. ಮಲಪ್ರಭಾ, ನೀರಸಾಗರದಿಂದ ನೀರು ಪಂಪ್‌ ಮಾಡಲು ವಿದ್ಯುತ್‌ ಸಮಸ್ಯೆಯಾಗುತ್ತಿರುವುದರಿಂದ  ನೀರಿನ ಸಂಕಷ್ಟ ಇನ್ನಷ್ಟು ಬಿಗಡಾಯಿಸಿದೆ.

‘ಮಲಪ್ರಭೆಯ ಡೆಡ್‌ ಸ್ಟೋರೆಜ್‌ನಲ್ಲಿ ಒಂದು ಟಿಎಂಸಿ ಅಡಿಗಿಂತಲೂ ಹೆಚ್ಚು ನೀರು ಇದೆ. ಮುಂದಿನ ಒಂದು ವರ್ಷ ಮಳೆ ಬಾರದಿದ್ದರೂ, ಅವಳಿ ನಗರದ ಜನರಿಗೆ ನೀರು ಪೂರೈಕೆ ಮಾಡಬಹುದು. ಅಲ್ಲಿಂದ ನೀರು ಪಂಪ್‌ ಮಾಡುವ ಸಾಮರ್ಥ್ಯ ಹೆಚ್ಚಿಸಲು ಅಗತ್ಯವಿರುವ ₹ 24 ಕೋಟಿ ಹಣ ಬಳಸಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದರೆ, ಬೇಸಿಗೆಯಲ್ಲಿ ನೀರಿನ ಸಮಸ್ಯೆಯೇ ಇರುತ್ತಿರಲಿಲ್ಲ. ಎರಡರಿಂದ, ಮೂರು ದಿನಕ್ಕೊಮ್ಮೆ ಸುಲಭವಾಗಿ ನೀರು ಪೂರೈಕೆ ಮಾಡಲು ಸಾಧ್ಯವಿತ್ತು’ ಎಂದು ಪಾಲಿಕೆ ಸದಸ್ಯ ಪಾಂಡುರಂಗ ಪಾಟೀಲ ಹೇಳುತ್ತಾರೆ.

ವಿಸ್ತರಣೆಯಾಗದ 24X7 ಯೋಜನೆ: ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ತಲಾ ನಾಲ್ಕು ವಾರ್ಡ್‌ಗಳಲ್ಲಿ 24X7 ಯೋಜನೆ ಆರಂಭಿಸಿದ್ದರು. ಉಳಿದ ವಾರ್ಡ್‌ಗಳಲ್ಲಿಯೂ ನಿರಂತರ ನೀರು ಪೂರೈಕೆ ಮಾಡಲು ಸರ್ವೆ ಮಾಡಿ, ಪೈಪ್‌ ಅಳವಡಿಸಲಾಗಿದೆ. ಆದರೆ, ಈ ಯೋಜನೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

ಬಳಸುವ ನೀರಿಗೂ ಸಂಕಷ್ಟ:ಕುಡಿಯುವ ನೀರಿಗೆ ಸಮಸ್ಯೆ ಇರುವುದು ಸಾಮಾನ್ಯ. ಆದರೆ, ಕೆಲ ಕಡೆಗಳಲ್ಲಿ ಬಳಸುವ ಕೊಳವೆ ಬಾವಿಯ ನೀರಿಗೂ ಸಮಸ್ಯೆಯಿದೆ. ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಇಂದಿಗೂ ಟ್ಯಾಂಕರ್‌ ನೀರೇ ಆಧಾರ. ಅವಳಿ ನಗರದಲ್ಲಿ ಒಟ್ಟು 1,250 ಕೊಳವೆ ಬಾವಿಗಳಿದ್ದು, ಅದರಲ್ಲಿ 150 ಕೆಟ್ಟಿವೆ.

ಸಮಸ್ಯೆಗೆ ಮೂಲ ಕಾರಣ ಏನು?

ಮಲಪ್ರಭಾದಲ್ಲಿ ಸಂಗ್ರಹವಿರುವ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗದ್ದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಹೊಸ ಯಂತ್ರ ಜೋಡಿಸುವ ಕಾಮಗಾರಿ ನನೆಗುದಿಗೆ ಬಿದ್ದಿದೆ. ಹಾಗಾಗಿ, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.

‘ಜಿಲ್ಲೆಯ ಜನರ ನೀರಿನ ಸಮಸ್ಯೆಗೆ ಸ್ಪಂದಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಐದು ವರ್ಷಗಳಲ್ಲಿ ಅಪ್ಪಿತಪ್ಪಿಯೂ ಇದರ ಬಗ್ಗೆ ಮಾತನಾಡಿಲ್ಲ. ಜನರ ಬಳಿ ಹೋಗಿ ನೀರಿಗಾಗಿ ಏನು ಮಾಡುತ್ತಿದ್ದೀರಿ ಎಂದು ಕೇಳಿಲ್ಲ. ಸಮಸ್ಯೆಗೆ ಕಾಯಂ ಪರಿಹಾರ ಒದಗಿಸುವುದು ಅವರಿಗೆ ಬೇಕಾಗಿಯೇ ಇಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ದೂರುತ್ತಾರೆ.

ಸಿಬ್ಬಂದಿ ಕೊರತೆಯೂ ಕಾರಣ: ಜಲಮಂಡಳಿಯಲ್ಲಿ ಸಿಬ್ಬಂದಿ ಕೊರತೆ ಇರುವುದು ಕೂಡ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ನೀರು ಪೂರೈಕೆಯಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಪರಿಹರಿಸಲು ಒಟ್ಟು 12 ಕಾಯಂ ಎಂಜಿನಿಯರ್‌ಗಳ ಅಗತ್ಯವಿದೆ. ಆದರೆ ಇರುವುದು ಇಬ್ಬರೇ ಎಂಜಿನಿಯರ್‌ಗಳು! ಆರು ಜನ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

‘ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಎಂಜಿನಿಯರ್‌ಗಳ ಮೇಲೆ ಒತ್ತಡ ಹಾಕುವುದು ಆಗುವುದಿಲ್ಲ. ಇಬ್ಬರು ಕಾಯಂ ಎಂಜಿನಿಯರ್‌ಗಳೇ ಅವಳಿ ನಗರದ ನೀರಿನ ಸಮಸ್ಯೆ ನೋಡಿಕೊಳ್ಳಬೇಕು. ಆದ್ದರಿಂದ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಕಾಯಂ ಸಿಬ್ಬಂದಿ ನೇಮಕ ಮಾಡುವ ತನಕ ನಾವೂ ಅಸಹಾಯಕರು’ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಪ್ರತಿಷ್ಠೆಗಾಗಿ ಸಾರ್ವಜನಿಕರು ಬಲಿ’

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ, ಇಲ್ಲಿನ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ಆದ್ದರಿಂದ, ಎರಡೂ ಪಕ್ಷಗ‌ಳು ಹಠಕ್ಕೆ ಬಿದ್ದು ಯಾವ ಕೆಲಸವನ್ನೂ ಮಾಡುತ್ತಿಲ್ಲ. ಈ ಎರಡೂ ಪಕ್ಷಗಳ ನಡುವಿನ ಕಿತ್ತಾಟದಿಂದ ಸಾರ್ವಜನಿಕರು ನಿತ್ಯ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ನೀರು ಬಿಡುವ ವಾಲ್‌ಮನ್‌ಗಳು ನೌಕರಿ ಕಾಯಂಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಅವರ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿಲ್ಲ. ಜಲಮಂಡಳಿಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮಸ್ಯೆಯನ್ನು ಪರಿಹರಿಸಿ ಅವಳಿ ನಗರದ ಜನರಿಗೆ ಪ್ರತಿದಿನ ನೀರು ಸಿಗುವಂತೆ ಮಾಡುತ್ತೇವೆ – ಅಲ್ತಾಫ್‌ ಕಿತ್ತೂರ, ಜೆಡಿಎಸ್‌ ಮುಖಂಡ

‘ಒಣ ರಾಜಕೀಯದಿಂದ ಸಂಕಷ್ಟ’

ಹಿಂದಿನ ಐದು ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡದೇ ಹೋಗಿದ್ದರೆ, ಈ ವೇಳೆಗಾಗಲೇ ಸಮಸ್ಯೆ ಸಂಪೂರ್ಣ ಪರಿಹಾರವಾಗಿ ಎಲ್ಲರಿಗೂ ನೀರು ಸಿಗುತ್ತಿತ್ತು.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೀರಿನ ಸಮಸ್ಯೆ ಪರಿಹಾರಕ್ಕೆ ₹ 700 ಕೋಟಿ ನೀಡಿದ್ದರು. ಮಲಪ್ರಭಾದಿಂದ ಹೆಚ್ಚಿನ ನೀರುತರಲು ಅಗತ್ಯವಿರುವ ಹಣ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಇದರಿಂದಾಗಿಯೇ ಈಗಲೂ ನೀರು ಬಹುದೊಡ್ಡ ಸಮಸ್ಯೆಯಾಗಿ ಉಳಿದುಕೊಂಡಿದೆ. ಕುಡಿಯುವ ನೀರಿನ ವಿಷಯ ಆಗಿರುವುದರಿಂದ ಜಿಲ್ಲಾಧಿಕಾರಿಯಿಂದ ಅನುದಾನ ಬಳಕೆಗೆ ಅನುಮತಿ ಪಡೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ – ನಾಗೇಶ ಕಲಬುರ್ಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

‘ವಿನಾಕಾರಣ ವಿವಾದ ಬೆಳೆಸುವ ಯತ್ನ’

ಧಾರವಾಡ ಜಿಲ್ಲೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಹಣ ನೀಡಿದೆ. ನೀರಿನ ಸಮಸ್ಯೆ ಪರಿಹರಿಸಲು ಅಗತ್ಯವಿರುವ ₹ 24 ಕೋಟಿ ಹಣ ಬಳಸಿಕೊಳ್ಳಲು ಅನುಮತಿ ಕೊಡಲಾಗುತ್ತದೆ. ಆದರೆ, ಹತ್ತು ವರ್ಷಗಳಿಂದ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಏನು ಮಾಡುತ್ತಿದೆ. ವಿನಾಕಾರಣ ನೀರಿನ ಸಮಸ್ಯೆ ದೊಡ್ಡದು ಮಾಡಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಜಗದೀಶ ಶೆಟ್ಟರ್‌ ತಮ್ಮ ಕ್ಷೇತ್ರವ್ಯಾಪ್ತಿಯ ಅಭಿವೃದ್ಧಿಗೆ ಬೇಕಾದಷ್ಟು ಹಣವನ್ನು ರಾಜ್ಯ ಸರ್ಕಾರದಿಂದ ತರುತ್ತಾರೆ. ಆದರೆ, ನೀರಿಗೆ ಅಗತ್ಯವಿರುವ ಹಣವನ್ನು ತರಲು ಅವರಿಗೇಕೆ ಆಗುವುದಿಲ್ಲ. ಅನುದಾನ ಬಳಕೆ ಅನುಮತಿಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಶೀಘ್ರದಲ್ಲಿಯೇ ಸಮಸ್ಯೆಯನ್ನು ಪರಿಹರಿಸಲಾಗುವುದು – ಅಲ್ತಾಫ್‌ ಹಳ್ಳೂರು, ಕಾಂಗ್ರೆಸ್‌ ಮಹಾನಗರ ಜಿಲ್ಲಾಧ್ಯಕ್ಷ

ಸಾರ್ವಜನಿಕರು ಏನಂತಾರೆ

ಕಾಯಂ ಪರಿಹಾರ ಯಾವಾಗ ?

ಕೆಲ ದಿನಗಳಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ಸಮಸ್ಯೆ ಪರಿಹರಿಸಲಾಗುವುದು ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ. ಆ ದಿನ ಯಾವಾಗ ಬರುತ್ತದೆ ಎಂದು ನಿತ್ಯ ಕಾಯುತ್ತಲೇ ಇದ್ದೇನೆ. ಮೊದಲಾದರೆ, ಆರೇಳು ದಿನಕ್ಕೊಮ್ಮೆ ನೀರು ಬರುತ್ತಿತ್ತು. ಈಗ 10ರಿಂದ 12 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಚುನಾವಣೆ ಬಂದಾಗ ನೀರಿನ ಸಮಸ್ಯೆ ಬಗ್ಗೆ ಮಾತನಾಡುವ ರಾಜಕಾರಣಿಗಳು ಚುನಾವಣೆ ಬಳಿಕ ಗಂಭೀರ ಸಮಸ್ಯೆ ಬಗ್ಗೆ ಚಕಾರ ಎತ್ತುವುದಿಲ್ಲ – ರೇಣುಕಾ ಕುಂದಗೋಳ, ಸಿದ್ದಾಂತ ಕಾಲೊನಿ, ಹಳೇ ಹುಬ್ಬಳ್ಳಿ

‘ಬೇಕಾದಷ್ಟು ನೀರು ಬರುವುದಿಲ್ಲ’

ಎಂಟರಿಂದ ಹತ್ತು ದಿನಗಳಿಗೊಮ್ಮೆ ನೀರು ಬರುವುದರಿಂದ ಸಮಸ್ಯೆಯಾಗುತ್ತಿದೆ. ಹೀಗೆ, ನೀರು ಬಿಟ್ಟರೆ ತುಂಬಿಟ್ಟುಕೊಳ್ಳಲು ಬೇಕಾದ ಟ್ಯಾಂಕ್‌ಗಳಿಲ್ಲ. ಎರಡರಿಂದ ಮೂರು ಗಂಟೆ ಮಾತ್ರ ನೀರು ಸರಬರಾಜು ಮಾಡಲಾಗುತ್ತದೆ. ಸಮಸ್ಯೆಯನ್ನು ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಟ್ಯಾಂಕರ್‌ ಕಟ್ಟಿಸಿ ಕೊಡುತ್ತೇವೆ. ನಳದ ಸೌಲಭ್ಯ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಭರವಸೆ ಈಡೇರಿಸಿಲ್ಲ. ಒಂದು ಓಣಿಯಲ್ಲಿ ಕೆಲವು ಮನೆಗಳಿಗೆ ನೀರು ಬಂದರೆ, ಅದೇ ಓಣಿಯ ಇನ್ನಷ್ಟು ಮನೆಗಳಿಗೆ ಬರುವುದಿಲ್ಲ. ಕೊಳವೆಬಾಯಿಯ ಸವಳು ನೀರು ಕುಡಿದು ಗಂಟಲಿನ ಸಮಸ್ಯೆಯಾಗುತ್ತಿದೆ – ಜೈನಾಬಿ, ಮಹಲ್ದಾರ್‌ ಗಲ್ಲಿ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT