7
ಉದ್ಯೋಗ ಅರಸಿ ನಗರಕ್ಕೆ ಬರುವವರ ಮಧ್ಯೆ ಅಭಿಯಾನ ನಡೆಸಿದ ಅಧಿಕಾರಿಗಳೇ ಸುಸ್ತು

ಕೂಲಿ ಕೊಡ್ತೇವಿ ಅಂದ್ರ ಓಡಿ ಹೋಗ್ತಾರ!

Published:
Updated:

ಹುಬ್ಬಳ್ಳಿ: ‘ನಿಮ್ಮೂರ್ನಾಗ... ಕೆಲ್ಸಾ ಕೊಡ್ತೇವಿ, ದಿನಾಲೂ ₹ 249 ಕೂಲಿ ರೊಕ್ಕ ಸಿಗ್ತೇತಿ. ಬ್ಯಾಸಿಗಿ ದಿನದಾಗ ಮುಂಜಾನೆ 6ಕ್ಕ ಕೆಲಸ ಶುರು ಮಾಡಿ, 11ಕ್ಕೆ ಮನಿಗಿ ಹೋದರೂ ನಡೀತೈತಿ. 15 ದಿನಕ್ಕೊಮ್ಮೆ ಕೂಲಿ ರೊಕ್ಕ ನಿಮ್ಮ ಬ್ಯಾಂಕ್‌ ಅಕೌಂಟಿಗೇ ಜಮಾ ಆಕ್ಕೇತಿ...’

–ಹೀಗೆ, ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಹೇಳುವುದನ್ನು ಕೇಳುತ್ತಲೇ ನಗರದ ರೈಲ್ವೆ ನಿಲ್ದಾಣದ ಬಳಿ ಬುತ್ತಿ ಚೀಲ ಹಿಡಿದುಕೊಂಡು ಕೆಲಸಕ್ಕೆ ಕರೆದೊಯ್ಯುವವರಿಗಾಗಿ ಕಾಯುತ್ತ ನಿಂತವರು ಅಲ್ಲಿಂದ ಕಾಲು ಕೀಳುತ್ತಾರೆ!

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಅಡಿ ಕೂಲಿ ಕೆಲಸ ನೀಡುವುದರ ಬಗ್ಗೆ ಜಾಗೃತಿ ಮೂಡಿಸಲು ತೆರಳಿದ ಅಧಿಕಾರಿಗಳಿಗೆ ಇಂಥ ಅನುಭವಗಳು ಆಗುತ್ತಲೇ ಇವೆ. ಒಂದೆಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸುವಂತೆ ಸೂಚನೆ ನೀಡುತ್ತಿದೆ. ಆದರೆ, ಇಲ್ಲಿ ನೋಡಿದರೆ ಜನರು ಕೂಲಿಗೆ ಬರಲು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಏನು ಮಾಡಬೇಕೆಂಬುದೇ ತೋಚದಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಕಾರಣ ಏನು?:

ನಿತ್ಯ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವ ಪ್ಯಾಸೆಂಜರ್‌ ರೈಲಿನ ಮೂಲಕ ಸವಣೂರು, ಯಲವಿಗಿ, ಗುಡಗೇರಿ, ಸಂಶಿ, ಕುಂದಗೋಳ, ಶಿರೂರ ಸೇರಿದಂತೆ ರೈಲು ನಿಲ್ದಾಣ ಇರುವ ಊರಿನ ಅಕ್ಕಪಕ್ಕದ ನೂರಾರು ಜನರು ಉದ್ಯೋಗ ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ. ಹೀಗಾಗಿ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದ ಬಳಿ ನಿತ್ಯ ಬೆಳಿಗ್ಗೆ ಕೆಲಸ ಹುಡುಕಿ ಬಂದವರ ಜಾತ್ರೆಯೇ ನೆರೆದಿರುತ್ತದೆ. ಕಟ್ಟಡ ನಿರ್ಮಾಣ ಕೆಲಸಕ್ಕೆ ಕೆಲಸಗಾರರನ್ನು ಹುಡುಕುವವರು ಇಲ್ಲಿಗೆ ಬಂದು ಅವರನ್ನು ಕರೆದೊಯ್ಯುತ್ತಾರೆ. ಸಂಜೆಯವರೆಗೆ ಕೆಲಸ ಮಾಡಿಸಿಕೊಂಡು ಪ್ರತಿಯೊಬ್ಬರ ಕೈಗೆ ₹ 300ರಿಂದ ₹ 500 ಕೂಲಿ ಕೊಡುತ್ತಾರೆ. ಬಂದ ಹಣದಲ್ಲಿ ಈ ಗ್ರಾಮೀಣ ಕೂಲಿಕಾರರು ಒಂದಷ್ಟು ಖರ್ಚು ಮಾಡಿ ಉಳಿದ ಹಣವನ್ನು ಊರಿಗೆ ಕೊಂಡೊಯ್ಯುತ್ತಾರೆ.

ತಾವು ಕೈಗೊಂಡಿರುವ ಜಾಗೃತಿ ಅಭಿಯಾನ ಹಾಗೂ ಅದಕ್ಕೆ ಸಿಕ್ಕ ಪ್ರತಿಕ್ರಿಯೆಯ ಬಗ್ಗೆ ವಿವರಿಸಿದ ಹುಬ್ಬಳ್ಳಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ಹೊಸಮನಿ, ’ನಗರದಲ್ಲಿ ಆ ದಿನದ ದುಡಿಮೆಗೆ ಅಂದೇ ಕೂಲಿ ಹಣ ಸಿಗುವುದರಿಂದ ನರೇಗಾ ಯೋಜನೆಯ ಜಾಬ್‌ ಕಾರ್ಡ್‌ ಪಡೆಯಲು ಸಾಕಷ್ಟು ಜನ ಆಸಕ್ತಿ ತೋರಿಸುತ್ತಿಲ್ಲ. ಇನ್ನೊಂದು ಪ್ರಮುಖ ಕಾರಣವೆಂದರೆ, ಊರಿನಲ್ಲಿ ಸಾಕಷ್ಟು ಜಮೀನು ಇದ್ದವರೂ ಪರಿಸ್ಥಿತಿಯ ಒತ್ತಡದಿಂದಾಗಿ ದುಡಿಮೆ ಹುಡುಕಿ ಬರುತ್ತಾರೆ. ಅವರಿಗೆ ಅದೇ ಊರಿನಲ್ಲಿ ಕೂಲಿ ಕೆಲಸಕ್ಕೆ ಹೋಗುವುದು ಮುಜುಗರ ಉಂಟು ಮಾಡಬಹುದು. ಹೀಗಾಗಿ, ಹುಬ್ಬಳ್ಳಿಯಂತಹ ಮಹಾನಗರಗಳಿಗೆ ಕೆಲಸ ಹುಡುಕಿಕೊಂಡು ಬರುತ್ತಾರೆ. ಆದರೂ ಅವರಿಗೆ ಅವರ ಊರಲ್ಲೇ ಕೆಲಸ ನೀಡಲು ನಮ್ಮ ಪ್ರಯತ್ನ ಮುಂದುವರಿಸಿದ್ದೇವೆ’ ಎಂದರು.

ತಾಲ್ಲೂಕು ಪಂಚಾಯ್ತಿಯಲ್ಲಿ ಗ್ರಾಮೀಣ ಉದ್ಯೋಗ ಯೋಜನೆಯ ಸಹಾಯಕ ನಿರ್ದೇಶಕ ಜಿ.ಎಂ. ಕಂದಕೂರ ಕೂಡ ಈ ಮಾತಿಗೆ ಸಹಮತ ವ್ಯಕ್ತಪಡಿಸುತ್ತಾರೆ.

‘ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ) ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸುವಂತೆ ಸೂಚನೆ ನೀಡಿದ್ದಾರೆ. ರೈಲು ನಿಲ್ದಾಣದ ಬಳಿ ಕೂಲಿ ಕೆಲಸಕ್ಕಾಗಿ ಕಾಯುತ್ತಿರುವವರ ಬಳಿ ತೆರಳಿ ಯೋಜನೆ ಬಗ್ಗೆ ತಿಳಿ ಹೇಳುತ್ತೇವೆ. ನಾಳೆಯಿಂದಲೇ ಜಾಬ್ ಕಾರ್ಡ್‌ ಕೊಡಿಸುತ್ತೇವೆ ಎಂದರೂ ಕೇಳುವುದಿಲ್ಲ. ಅವರೂರಿನ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ ಎಂದು ಹೇಳಿ ಅವರ ಮೊಬೈಲ್‌ ಸಂಖ್ಯೆ ಕೊಟ್ಟರೂ ಅವರಿಗೆ ಕರೆ ಮಾಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ಮನ್ಯಾಗ ಸಾಕಷ್ಟು ಸಮಸ್ಯೆ ಇರ್ತಾವ್ರಿ. ಹಿಂಗಾಗಿ ದುಡಿಮಿ ಮಾಡಿದ ತಕ್ಷಣ ಪಗಾರ ಕೊಡ್ಬೇಕು ಅಂತ ಮೊದ್ಲ ಮೇಸ್ತ್ರಿಗೆ ಕೇಳ್ತೇವಿ. ಅವರೂ ಗೌಂಡಿ (ಕಟ್ಟಡ ಕೆಲಸ) ಕೆಲಸ ಮುಗದ್ ಕೂಡ್ಲೇ ರೊಕ್ಕಾ ಕೊಡ್ತಾರ’ ಎಂದು ಕುಂದಗೋಳ ತಾಲ್ಲೂಕು ಬರದ್ವಾಡ ಗ್ರಾಮದ ಯುವಕ ರಮೇಶ ಮಾಡಳ್ಳಿ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry