ಶುಕ್ರವಾರ, ಡಿಸೆಂಬರ್ 13, 2019
19 °C
ಸಚಿವ ಮಂಜು ವಿರುದ್ಧ ಅಧಿಕಾರ ದುರ್ಬಳಕೆ ಆರೋಪ

ಚುನಾವಣೆಗೆ ಸ್ಪರ್ಧಿಸದಂತೆ ತಡೆ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆಗೆ ಸ್ಪರ್ಧಿಸದಂತೆ ತಡೆ ನೀಡಲು ಆಗ್ರಹ

ಹಾಸನ: ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜುಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತೊಂದು ನೋಟಿಸ್ ಜಾರಿ ಮಾಡಿದ್ದಾರೆ.

ಅಕ್ರಮ-ಸಕ್ರಮ ಸಾಗುವಳಿದಾರರಿಗೆ ಕಾನೂನು ಬಾಹಿರವಾಗಿ ಭೂ ಮಂಜೂರು ಮಾಡಲು ಸಚಿವರೊಂದಿಗೆ ಕೈಜೋಡಿಸಿದ ಅರಕಲಗೂಡು ಹಿಂದಿನ ತಹಶೀಲ್ದಾರ್ ಪ್ರಸನ್ನ ಮೂರ್ತಿ ಎಂಬುವರನ್ನು ಅಮಾನತ್ತಿನಲ್ಲಿಟ್ಟು ಇಲಾಖಾ ತನಿಖೆ ನಡೆಸುವಂತೆಯೂ ಚುನಾವಣಾ ಆಯೋಗಕ್ಕೆ ರೋಹಿಣಿ ಶಿಫಾರಸ್ಸು ಮಾಡಿದ್ದಾರೆ.

ಈ ನಡುವೆ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಅರಕಲಗೂಡು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಯೋಗಾ ರಮೇಶ್‌, ‘ಅಕ್ರಮ ಎಸಗಿರುವ ಮಂಜು ಅವರು ಚುನಾವಣೆಗೆ ಸ್ಪರ್ಧೆ ಮಾಡದಂತೆ ತಡೆಯಬೇಕು. ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಸ್ವಕ್ಷೇತ್ರ ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಒಂದು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿ ಭೂಮಿ ಮಂಜೂರು ಮಾಡಿದ್ದಾರೆ. ಮಾರ್ಚ್ 30, 31 ರಂದು ತಮ್ಮ ನಿವಾಸದಲ್ಲೇ ಮಂಜೂರಾತಿ ಪತ್ರ ವಿತರಣೆ ಮಾಡಿರುವ ಸಚಿವರು, ದಿನಾಂಕವನ್ನು ಮಾರ್ಚ್ 20 ರಂದು ನಮೂದಿಸಿದ್ದಾರೆ’ ಎಂದು ಆರೋಪಿಸಿದರು.

‘ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಲಾಗಿತ್ತು. ಅರಕಗಲಗೂಡು ತಹಶೀಲ್ದಾರ್‌ ಮತ್ತು ಸಹಾಯಕ ಚುನಾವಣಾಧಿಕಾರಿ ವೆಂಕಟರಮಣ ರೆಡ್ಡಿ ಅವರು ಜಂಟಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಮಂಜು ಅವರು ಚುನಾವಣೆಗೆ ಸ್ಪರ್ಧೆ ಮಾಡದಂತೆ ತಡೆ ಹಿಡಿಯಬೇಕು. ಅವರ ನಾಮಪತ್ರ ಅಸಿಂಧುಗೊಳಿಸಬೇಕು’ ಎಂದು ಆಗ್ರಹಿಸಿದರು.

‘ತನಿಖೆ ವೇಳೆ ಸಾಗುವಳಿ ಪತ್ರ ನೀಡಲಾಗಿದೆ ಎಂದು ನಮೂದಾಗಿರುವ ಮಾರ್ಚ್ 20 ರಂದು ಅರಕಲಗೂಡು ತಾಲ್ಲೂಕು ಕಚೇರಿಯಲ್ಲಿ ಬಗರಂ ಹುಕುಂ ಸಾಗುವಳಿ ಸಕ್ರಮೀಕರಣ ಸಭೆ ನಡೆದಿಲ್ಲ ಎಂಬುದು ಖಾತ್ರಿಯಾಗಿದೆ. ಸೋಮವಾರ ಪೇಟೆಯ ತಮ್ಮ ಮನೆಯಲ್ಲಿ ಸಚಿವರು ಅಧಿಕಾರಿಗಳನ್ನು ಕರೆಸಿಕೊಂಡು ಬಗರ್‌ಹುಕುಂ ಸಾಗುವಳಿ ಫಲಾನುಭವಿಗಳ ಪಟ್ಟಿ ಸಿದ್ದ ಪಡಿಸಿದ್ದಾರೆ. ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲೂ ಸಚಿವರು ಮತ್ತು ತಹಶೀಲ್ದಾರ್‌ ಬಂದಿರುವ ಪುರಾವೆಗಳಿಲ್ಲ. ಮಂಜು ಅವರ ಅಕ್ರಮ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಸಿ.ರಾಜೇಶ್, ಮುಖಂಡರಾದ ಬೊಮ್ಮೇಗೌಡ, ಚಂದ್ರೇಗೌಡ, ವಿಶ್ವನಾಥ್, ಪಾಂಡುವಿಠಲ ಶೆಟ್ಟಿ ಇದ್ದರು.

ಶೀಘ್ರ ಎರಡನೇ ಪಟ್ಟಿ

ಬಿಜೆಪಿ ಹೈಕಮಾಂಡ್ ಕ್ಷೇತ್ರವಾರು ಸಮೀಕ್ಷೆ ನಡೆಸಿ 72 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಹಾಸನ ಅಭ್ಯರ್ಥಿಗಳ ಪಟ್ಟಿ ಇನ್ನು ಬಿಡುಗಡೆಯಾಗಿಲ್ಲ. ಪಕ್ಷ ಬಲವರ್ಧನೆ ಉದ್ದೇಶದಿಂದ ಇತರ ಪಕ್ಷದ ಮುಖಂಡರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುವುದು. ಹಿರಿಯ ವಕೀಲ ಎಚ್.ಕೆ.ಜವರೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮಾತುಕತೆ ನಡೆದಿತ್ತು. ಆದರೆ, ಅವರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಮಾಜಿ ಸಚಿವ ಬಿ.ಶಿವರಾಂ ಪಕ್ಷ ಸೇರ್ಪಡೆ ಕುರಿತು ನನಗೇನು ಮಾಹಿತಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾಧಿಕಾರಿ ಮುಂದುವರಿಸಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉತ್ತಮ ಕೆಲಸಗಳ ಮೂಲಕ ಪಾರದರ್ಶಕ ಚುನಾವಣೆಗೆ ಶ್ರಮಿಸುತ್ತಿದ್ದಾರೆ. ಅವರ ವರ್ಗಾವಣೆಗೆ ಕಾಂಗ್ರೆಸ್ ಮುಖಂಡರು ಉದ್ದೇಶಪೂರ್ವಕವಾಗಿ ಆಗ್ರಹಿಸುತ್ತಿದ್ದಾರೆ. ಯಾವ ಕಾರಣಕ್ಕೂ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬಾರದು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

**

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎ.ಮಂಜು ಅವರನ್ನು ಸೋಲಿಸಲು ಜೆಡಿಎಸ್‌ ಹಾಗೂ ಬಿಜೆಪಿ ಹೊಂದಾಣಿಕೆಯಾಗಿದೆ ಎಂಬ ಆರೋಪ ಸುಳ್ಳು – ಯೋಗಾ ರಮೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

**

ಪ್ರತಿಕ್ರಿಯಿಸಿ (+)