ಮಂಗಳವಾರ, ಡಿಸೆಂಬರ್ 10, 2019
23 °C
ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳ 33 ನೇ ಪುಣ್ಯಾರಾಧನೆಯಲ್ಲಿ ರಂಭಾಪುರಿ ಶ್ರೀಗಳ ಹೇಳಿಕೆ

ಉಜ್ವಲ ಜೀವನಕ್ಕೆ ಧರ್ಮಾಚರಣೆ ಅವಶ್ಯ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಜ್ವಲ ಜೀವನಕ್ಕೆ ಧರ್ಮಾಚರಣೆ ಅವಶ್ಯ: ಸ್ವಾಮೀಜಿ

ಹಾವೇರಿ: ‘ಉತ್ತಮ ಜೀವನ ಮತ್ತು ಉಜ್ವಲ ಭವಿಷ್ಯಕ್ಕೆ ಬದುಕಿನಲ್ಲಿ ಧರ್ಮಾಚರಣೆ ಅತ್ಯವಶ್ಯ’ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ನಗರದ ಹರಸೂರು ಬಣ್ಣದಮಠದಲ್ಲಿ ಭಾನುವಾರ ಜರುಗಿದ ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳ 33 ನೇ ಪುಣ್ಯಾರಾಧನೆ ಹಾಗೂ ಪ್ರಸ್ತುತ ಶ್ರೀಗಳ 8 ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜೀವನದ ಹಾದಿಯಲ್ಲಿ ಹಲವಾರು ಎಡರು- ತೊಡರುಗಳು, ಕಷ್ಟ -ನಷ್ಟಗಳು ಸಹಜ. ಆದರೆ ಅವುಗಳನ್ನೆಲ್ಲ ತಾಳ್ಮೆಯಿಂದ ಎದುರಿಸಿ ಸಾರ್ಥಕ ಜೀವನ ನಡೆಸಬೇಕು ಎಂದ ಅವರು, ದಶವಿಧ ಸೂತ್ರಗಳನ್ನು ಧರ್ಮಾಚರಣೆಗೋಸ್ಕರವಾಗಿ ರೇಣುಕ ಭಗವತ್ಪಾದರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಅವರ ದಾರ್ಶನಿಕ ಗುಣಮೌಲ್ಯಗಳನ್ನು ಅರಿತು ನಡೆಯುವಲ್ಲಿ ನಿಜವಾದ ಶಾಂತಿ, ನೆಮ್ಮದಿ ಇದೆ’ ಎಂದರು

‘ಇತಿಹಾಸವನ್ನು ಅರಿಯದವರು ಹೊಸ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದ ಅವರು, ಈಗ ಕೆಲವರಿಂದ ನೈಜ ತಾತ್ವಿಕ ಮೌಲ್ಯಗಳನ್ನು ಮರೆಮಾಚುವ ಕೆಲಸವಾಗುತ್ತಿದೆ. ಆದರೆ, ಪಂಚಪೀಠಗಳು ಧರ್ಮ ಮತ್ತು ಸಂಸ್ಕಾರವನ್ನು ಜನಮಾನಸಕ್ಕೆ ಅನಾದಿ ಕಾಲದಿಂದಲೂ ನೀಡುತ್ತಾ ಬರುತ್ತಿವೆ’ ಎಂದರು.

‘ಯಾರದೋ ಮಾತುಗಳಿಗೆ ಬೆಲೆ ಕೊಡುವ ಅವಶ್ಯಕತೆಯಿಲ್ಲ. ಹಿರಿಯರ ಆದರ್ಶ ಮತ್ತು ಜೀವನವನ್ನು ಅನುಸರಿಸಿ ಮುನ್ನಡೆಯಬೇಕಿದೆ. ಮಠದ ಪ್ರಸ್ತುತ ಶ್ರೀಗಳು ಕಿರಿ ವಯಸ್ಸಿನವರಾದರೂ ಹಿರಿದಾದ ಸಾಧನೆ ಮಾಡುತ್ತಿರುವುದು ಸಂತೋಷ ತಂದಿದೆ’ ಎಂದರು.

ಅಕ್ಕಿಆಲೂರ ಚಂದ್ರಶೇಖರ ಶಿವಾಚಾರ್ಯರು ಮಾನಾಡಿ, ‘ಸೌಗಂಧ ಬೀರುವ ಸುಂದರ ಹೂವುಗಳು ಇಂದು ಕಣ್ಮರೆಯಾಗಿ ರಂಗು ರಂಗಿನ ಪ್ಲಾಸ್ಟಿಕ್ ಹೂವುಗಳು ಹೆಚ್ಚಾಗುತ್ತಿವೆ. ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ಪ್ರಜ್ಞಾವಂತರಾದ ಸಮೂಹ ನಿರ್ಧಾರ ಮಾಡಿ, ಧರ್ಮ ರಕ್ಷಕರನ್ನು ಮೇಲೆತ್ತುವ ಕಾರ್ಯ ಮಾಡಬೇಕಿದೆ’ ಎಂದು ಮಾರ್ಮಿಕವಾಗಿ ನುಡಿದರು.

ಬಂಕಾಪುರ ರೇವಣಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ‘ಮನೆ ಗುರುಗಳನ್ನು ಮತ್ತು ಮನೆ ದೇವರನ್ನು ಮರೆತು ನಡೆದರೆ ಜೀವನ ಬೆಂಗಾಡಾಗುತ್ತದೆ’ ಎಂದರು.

ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ‘ಧರ್ಮ, ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಗಳು ಉಳಿದು ಬೆಳೆದು ಬರುವಲ್ಲಿ ಎಲ್ಲರ ಜವಾಬ್ದಾರಿಗಳು ಹೆಚ್ಚಿವೆ’ ಎಂದರು.

ಪ್ರೊ. ಗುರುಪಾದಯ್ಯ ಸಾಲಿಮಠ ಮಾತನಾಡಿ, ‘ಒಂದಾಗಿದ್ದ ಧರ್ಮವನ್ನು ಎರಡಾಗಿಸುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ’ ಎಂದರು. ಡಾ. ಜಿ. ಬಿ. ಹೂಲಿಕಟ್ಟಿ ರಚಿಸಿದ ‘ನಮ್ಮ ಹಾವೇರಿ ಜಿಲ್ಲೆ ಜಾನಪದ ಮಠ ಮಂದಿರ ಸಾಹಿತಿಗಳ ತವರೂರು’ ಹಾಗೂ ಪ್ರೊ. ಗುರುಪಾದಯ್ಯ ವೀ. ಸಾಲಿಮಠ ವಿರಚಿತ ‘ಸಿದ್ಧಾಂತ ಶಿಖಾಮಣಿ ದಶಧರ್ಮಸೂತ್ರ’ ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಚೌಡೇಶ್ವರಿ ಮಹಿಳಾ ಮಂಡಳದ ಸದಸ್ಯರಿಗೆ ಸಸಿ ನೀಡಿ ಗೌರವಿಸಲಾಯಿತು. ದೀಪಾ ಮುದ್ದಿ ಹಾಗೂ ಶಿಗ್ಗಾವಿಯ ಶ್ರೀಧರ ಬಡ್ಡಿ ಭರತನಾಟ್ಯ ಜರುಗಿದವು.

ಕಲಾದಗಿ ಗಂಗಾಧರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಸಿ. ಸಿ. ಪ್ರಭುಗೌಡ್ರ, ಎಂ. ಬಿ. ಹಿರೇಮಠ, ಚಂದ್ರಣ್ಣ ಪಟ್ಟಣಶೆಟ್ಟಿ, ಸುಭಾಷ ಕಂಬಳಿ, ಪ್ರಕಾಶ ಜೈನ್, ವೀಣಾ ಹಲಗಣ್ಣವರ, ಮಹಾಲಿಂಗಯ್ಯಸ್ವಾಮಿ ಹಿರೇಮಠ, ಮಡಿವಾಳಪ್ಪ ಸಾತೇನಹಳ್ಳಿ, ಬಸವರಾಜ ಜಾಬಿನ್, ವಿಜಯಕುಮಾರ ಕೂಡ್ಲಪ್ಪನವರ, ಎಂ. ಪಿ. ಹಿರೇಮಠ, ಶಿವಬಸಪ್ಪ ಮತ್ತಿಹಳ್ಳಿ, ವಿರೂಪಾಕ್ಷಪ್ಪ ಹತ್ತಿಮತ್ತೂರ, ಶಿವರಾಜ ಮತ್ತಿಹಳ್ಳಿ, ಜಗದೀಶ ಕನವಳ್ಳಿ, ಕೊಟ್ರೇಶಪ್ಪ ಅಂಗಡಿ, ಶಿವಬಸಪ್ಪ ಚೌಶೆಟ್ಟಿ, ಮಲ್ಲಣ್ಣ ಸಾತೇನಹಳ್ಳಿ, ತಮ್ಮಣ್ಣ ಮುದ್ದಿ, ಕರಬಸಪ್ಪ ಹಲಗಣ್ಣವರ, ಸೌಭಾಗ್ಯ ಹಿರೇಮಠ, ಲಲಿತಮ್ಮ ಹೊರಡಿ, ಮಮತಾ ಜಾಬಿನ್, ನಾಗರಾಜ ನಡುವಿನಮಠ ಇದ್ದರು.

ಧರ್ಮ ರಕ್ಷಣೆ ಎಲ್ಲರ ಜವಾಬ್ದಾರಿ

‘ಧರ್ಮ, ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಗಳು ಉಳಿದು ಬೆಳೆದು ಬರುವಲ್ಲಿ ಎಲ್ಲರ ಜವಾಬ್ದಾರಿಗಳು ಹೆಚ್ಚಿವೆ’ ಎಂದು ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.ಪ್ರೊ. ಗುರುಪಾದಯ್ಯ ಸಾಲಿಮಠ ಮಾತನಾಡಿ, ‘ಒಂದಾಗಿದ್ದ ಧರ್ಮವನ್ನು ಎರಡಾಗಿಸುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ’ ಎಂದರು.

**

ಒಗ್ಗಟ್ಟಿನ ಧರ್ಮವನ್ನು ಇಬ್ಭಾಗ ಮಾಡುವ ದುಷ್ಟ ಶಕ್ತಿಗಳು ಹೆಚ್ಚಾಗಿವೆ. ಇವುಗಳ ವಿರುದ್ಧ ಜನತೆ ಜಾಗೃತರಾಗಿ ಧರ್ಮ ಮಾರ್ಗದತ್ತ ಸಾಗಬೇಕಾಗಿದೆ – ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು,ಬಾಳೆಹೊನ್ನೂರು ರಂಭಾಪುರಿ ಮಠ

**

ಪ್ರತಿಕ್ರಿಯಿಸಿ (+)