ಶುಕ್ರವಾರ, ಡಿಸೆಂಬರ್ 13, 2019
19 °C
ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರ: ಪ್ರಬಲ ಆಕಾಂಕ್ಷಿ ಶಾರದಾ ನಾಯ್ಕಗೆ ನಿರಾಸೆ

ರಾಷ್ಟ್ರೀಯ ಪಕ್ಷದಿಂದ ಮೊದಲ ಬಾರಿಗೆ ಮಹಿಳಾ ಸ್ಪರ್ಧಿ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಪಕ್ಷದಿಂದ ಮೊದಲ ಬಾರಿಗೆ ಮಹಿಳಾ ಸ್ಪರ್ಧಿ!

ಕಾರವಾರ:  ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ಅತ್ಯಂತ ಪ್ರತಿಷ್ಠೆಯ ಕಣಗಳಲ್ಲಿ ಒಂದು ಎಂದೇ ಪರಿಗಣಿಸಿರುವ ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಭಾನುವಾರ ರಾತ್ರಿ ಪ್ರಕಟವಾದ ಪಕ್ಷದ ಮೊದಲ ಪಟ್ಟಿಯಲ್ಲೇ ರೂಪಾಲಿ ನಾಯ್ಕ ಅವರ ಹೆಸರನ್ನು ಪಕ್ಷದ ವರಿಷ್ಠರು ಸೇರಿಸಿದ್ದಾರೆ. ಈ ಮೂಲಕ ಈ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಪಕ್ಷದ ಟಿಕೆಟ್ ಯಾರಿಗೆ ಎಂದು ಕಾರ್ಯಕರ್ತರು ವರಿಷ್ಠರು ಸಿಕ್ಕಲ್ಲೆಲ್ಲ ಪ್ರಶ್ನಿಸುತ್ತಿದ್ದರು. ಜೆಡಿಎಸ್‌ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಸುಮಾರು ಒಂದು ತಿಂಗಳಿಂದ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈಗಾಗಲೇ ಕ್ಷೇತ್ರದಾದ್ಯಂತ ಒಂದು ಬಾರಿ ಸಂಚಾರ ಮುಗಿಸಿದ ಅವರು, ಎರಡನೇ ಸುತ್ತಿನ ಪ್ರಚಾರ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಕಾಂಗ್ರೆಸ್

ಟಿಕೆಟ್ ನಿರೀಕ್ಷೆಯಲ್ಲಿರುವ ಶಾಸಕ ಸತೀಶ್ ಸೈಲ್ ಕೂಡ ಅಂಕೋಲಾ ಭಾಗದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಹೀಗಿರುವಾಗ ಅಭ್ಯರ್ಥಿ ಘೋಷಣೆ ಮತ್ತಷ್ಟು ತಡವಾದರೆ ಪ್ರಚಾರಕ್ಕೆ ತೊಡಕಾಗಲಿದೆ ಎಂಬುದು ಬಿಜೆಪಿ ಕಾರ್ಯಕರ್ತರ ಆತಂಕವಾಗಿತ್ತು.

ಮುಖಂಡರಾದ ಗಣಪತಿ ಉಳ್ವೇಕರ್, ನಾಗರಾಜ ನಾಯ್ಕ, ರಾಮು ರಾಯ್ಕರ್, ಗಂಗಾಧರ ಭಟ್, ಶಾರದಾ ನಾಯ್ಕ ಅವರ ಹೆಸರು ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿತ್ತು. ಈ ನಡುವೆ, ಇವರು ಯಾರೂ ಅಲ್ಲದೇ ಹೊಸ ಮುಖವೊಂದನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಬಹುದು ಎಂಬ ಸುದ್ದಿಯೂ ಕಾರ್ಯಕರ್ತರ ನಡುವೆ ಕೇಳಿಬಂದಿತ್ತು.

ಈ ಬಗ್ಗೆ ಮಾತನಾಡಿದ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕ, ‘ರೂ‍ಪಾಲಿ ನಾಯ್ಕ ಆರು ತಿಂಗಳಿನಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಕೊಂಡಿದ್ದರು. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ರೂ‍ಪಾಲಿ ಅವರು ಇದೇ 17ರ ನಂತರ ಒಳ್ಳೆಯ ಮುಹೂರ್ತ ನೋಡಿ ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಹೇಳಿದರು.

ಟಿಕೆಟ್ ನಿರೀಕ್ಷೆಯಲ್ಲಿದ್ದ ಬಿಜೆಪಿಯ ಬೆಂಗಳೂರು ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾರದಾ ನಾಯ್ಕ ಮಾತನಾಡಿ, ‘ನಾನು ಟಿಕೆಟ್ ನಿರೀಕ್ಷೆ ಮಾಡಿದ್ದು ನಿಜ. ಆದರೆ, ವರಿಷ್ಠರ ತೀರ್ಮಾನವನ್ನು ಗೌರವಿಸಿ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಮಹಿಳೆಗೆ ಇದೇ ಮೊದಲ ಬಾರಿ ಸ್ಪರ್ಧೆಗೆ ಅವಕಾಶ ನೀಡಿರುವುದು ಖುಷಿಯ ವಿಚಾರ’ ಎಂದರು.

ಜಿಲ್ಲೆಯಲ್ಲಿ ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾವಾಗ ಆಗಬಹುದು ಎಂದು ಸ್ಥಳೀಯ ಮುಖಂಡರನ್ನು ಕೇಳಿದರೆ, ‘ವರಿಷ್ಠರು ಶೀಘ್ರವೇ ಪ್ರಕಟಿಸಲಿದ್ದಾರೆ’ ಎಂದಷ್ಟೇ ಹೇಳುತ್ತಾರೆ.

‘ಟಿಕೆಟ್ ಸಿಗದಿರುವುದು ಬೇಸರವಾಗಿದೆ’

‘ಬಿಜೆಪಿ ಟಿಕೆಟ್ ನನಗೆ ಸಿಗದಿರುವುದು ಬೇಸರ ತಂದಿದೆ. ನಾನೇ ಅಭ್ಯರ್ಥಿಯಾಗುತ್ತೇನೆ ಎಂಬ ನಿರೀಕ್ಷೆ ಕೊನೆಯ ಹಂತದವರೆಗೂ ಇತ್ತು. ಆದರೆ, ಅದೇನಾಯಿತು ಎಂದು ಅರ್ಥವಾಗುತ್ತಿಲ್ಲ’ ಎಂದು ಆಕಾಂಕ್ಷಿಯಾಗಿದ್ದ ಗಣಪತಿ ಉಳ್ವೇಕರ್‌ ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು. ‘ಬಿಜೆಪಿ ಗೆಲುವೇ ನಮ್ಮ ಗುರಿ. ಆದ್ದರಿಂದ ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕೆ ಹೋಗುತ್ತೇನೆ’ ಎಂದು ಸ್ಪಷ್ಟಪಡಿಸಿದ ಅವರು, ‘ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಪಕ್ಷದ ಗೆಲುವಿಗೆ ಪೂರಕವಾಗಬಹುದಾದ ಅಂಶಗಳಲ್ಲಿ ಒಂದು. ಪ್ರಧಾನಿ ನರೇಂದ್ರ ಮೋದಿ ಅಲೆ ಕೂಡ ಸಹಕಾರಿಯಾಗಲಿದೆ’ ಎಂದರು.

ಮೂರು ಬಾರಿ ಮಹಿಳೆಯರ ಸ್ಪರ್ಧೆ

ಕಾರವಾರ– ಅಂಕೋಲಾ ಕ್ಷೇತ್ರದಲ್ಲಿ ಈ ಹಿಂದಿನ ವಿವಿಧ ಚುನಾವಣೆಗಳಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಆದರೆ, ಅವರೆಲ್ಲ ಸ್ಥಳೀಯವಾಗಿ ಅಷ್ಟೊಂದು ಪ್ರಭಾವ ಹೊಂದಿರದ ಪಕ್ಷಗಳಿಂದ ಸ್ಪರ್ಧಿಸಿದ್ದರು. 1994ರಲ್ಲಿ ಜ್ಯೋತಿ ನಾಯ್ಕ ಅವರು ಜನತಾದಳದಿಂದ, 2008ರಲ್ಲಿ ಸಂಧ್ಯಾ ಅಣ್ವೇಕರ್ ಅವರು ಬಹುಜನ ಸಮಾಜ ಪಕ್ಷದಿಂದ, 2013ರಲ್ಲಿ ಮಂಜುಳಾ ರಾಮುನಾಯ್ಕ ಬಿಎಸ್‌ಆರ್‌ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆ ಬಯಸಿದ್ದರು.

ಪ್ರತಿಕ್ರಿಯಿಸಿ (+)