ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರು ಗಳಿಸಿದ ಅಂಕ ಎಷ್ಟು ಗೊತ್ತಾ?

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸೇಂಟ್‌ ಆಲ್ಬರ್ಟಸ್‌ ಹೈಸ್ಕೂಲ್‌ನ ಆವರಣದಲ್ಲಿ ಆರನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆಯ ಬಿಸಿ ವಾತಾವರಣ. ಟೆನ್ಷನ್‌ನ ಬೇಗುದಿಯಲ್ಲಿ ತಹತಹಿಸುತ್ತಿರುವ ತಂದೆ ತಾಯಿ, ಅವರಿಂದಾಗಿ ಬೆವತಿರುವ ವಿದ್ಯಾರ್ಥಿಗಳು ಓಡುನಡಿಗೆಯಲ್ಲೇ ಬರುತ್ತಿರುತ್ತಾರೆ.

‘ನಂಗೊತ್ತು ನೀನು ಈ ಸಲ ಮರ್ಯಾದೆ ತೆಗೀತೀಯಾ’ ಅಂತ ಮಗಳನ್ನು ಹಂಗಿಸುವ ತಾಯಿ, ‘ಪಪ್ಪ ಮೂರು ಸಲ ಓದಿಯಾಗಿದೆ, ಚೆನ್ನಾಗಿ ಬರೀತೀನಿ ನೀನು ಮಾತ್ರ ನಂಗೆ ಕಂಪ್ಯೂಟರ್ ಕೊಡಿಸ್ಬೇಕು’ ಎಂದು ಗೋಗರೆಯುವ ಬಾಲಕ, ಓದುತ್ತಿರುವ ಮಗಳಿಗೆ ಒಂದಿಡೀ ಚಪಾತಿಯನ್ನು ಬಾಯಿಗೆ ತುರುಕಲು ಹೋಗಿ ‘ಇವತ್ತು ನೀನು ಚೆನ್ನಾಗಿ ತಿನ್ಬೇಕು ಕಣೇ’ ಎಂದು ಅನುನಯದಿಂದಲೇ ಆಗ್ರಹಿಸುವ ತಾಯಿ, ಅಷ್ಟೂ ಹೊತ್ತು ಮಗಳ ಮೇಲೆ ರೇಗುತ್ತಲೇ ಇದ್ದ ತಾಯಿ ಪರೀಕ್ಷೆಯ ಬೆಲ್‌ ಹೊಡೆಯುತ್ತಲೇ ಮುದ್ದು ಸುರಿದು ಆಲ್‌ ದಿ ಬೆಸ್ಟ್‌ ಎನ್ನುವುದು...

ಎಲ್ಲಾ ಮಕ್ಕಳು ಆರನೇ ತರಗತಿಯ ಆ ಪರೀಕ್ಷೆಗಾಗಿ ಕೊಠಡಿಗೆ ತೆರಳುತ್ತಿರುವಂತೆ ಪೋಷಕರೆಲ್ಲರೂ ಇನ್ನಷ್ಟು ದುಗುಡದಿಂದ ಹಿಂತಿರುಗಲು ಬೆನ್ನು ಹಾಕುತ್ತಾರೆ. ಅಷ್ಟರಲ್ಲಿ ಒಬ್ಬ ಶಿಕ್ಷಕಿ ಕರೆಯುತ್ತಾರೆ: ‘ಎಲ್ಲರೂ ಒಂದ್ನಿಮಿಷ ಹಾಲ್‌ಗೆ ಬನ್ನಿ ನಿಮ್ಮೊಂದಿಗೆ ಮಾತಾಡೋದಿದೆ’.

ಎಲ್ಲರೂ ಹೋಗಿ ಒಂದೊಂದು ಕುರ್ಚಿಯಲ್ಲಿ ಕೂರುತ್ತಾರೆ. ‘ನಾನು ನಿಮ್ಮನ್ನು ಪೋಷಕರ ಸಭೆಗಾಗಿ ಕರೆದಿಲ್ಲ. ನಿಮ್ಮ ಮಕ್ಕಳು ಇವತ್ತು ಬರೆಯಲಿರುವ ಪ್ರಶ್ನೆಪತ್ರಿಕೆಯನ್ನು ನಿಮಗೂ ಕೊಡುತ್ತೇನೆ. ನೀವೂ ಪರೀಕ್ಷೆ ಬರೆಯಬೇಕು’ ಎಂದು ಶಿಕ್ಷಕಿ ಹೇಳುತ್ತಾಳೆ. ಒಬ್ಬೊಬ್ಬ ಪೋಷಕರೂ ಅವಾಕ್ಕಾಗುತ್ತಾರೆ. ಉಗುಳು ನುಂಗುವ, ಟೈ ಸರಿಪಡಿಸಿಕೊಳ್ಳುವ, ಕತ್ತನ್ನು ವೃತ್ತಾಕಾರವಾಗಿ ತಿರುಗಿಸುವ, ಉಫ್‌ ಎಂದು ಉಸಿರುಬಿಡುವ, ಕೆನ್ನೆ ಉಜ್ಜಿಕೊಳ್ಳುವ... ಶಿಕ್ಷಕಿಯ ಮಾತು ಬೀರಿದ ಪರಿಣಾಮಗಳ ಬಿಂಬಗಳು ವರ್ತನೆಗಳಾಗಿ ಪ್ರಕಟಗೊಳ್ಳುತ್ತವೆ.

ಪರೀಕ್ಷೆ ಶುರುವಾಗುತ್ತದೆ. ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯುವ ದೃಶ್ಯ ಒಮ್ಮೆ, ಪೋಷಕರ ಚಡಪಡಿಕೆಯ ನೋಟಗಳು ಇನ್ನೊಮ್ಮೆ ಹಾದುಹೋಗುತ್ತವೆ. ಬೆಲ್‌ ಆಗುತ್ತದೆ. ಪರೀಕ್ಷಾರ್ಥಿ ಪೋಷಕರು ಬೆವರು ಒರೆಸಿಕೊಂಡು ಹೊರನಡೆಯುತ್ತಾರೆ.

ಆರಂಭದಲ್ಲಿ ಎದುರಾದ ಪೋಷಕರು ಮತ್ತೊಂದು ಕೊಠಡಿಯ ಖಾಲಿ ಕುರ್ಚಿಗಳಲ್ಲಿ ತಮ್ಮ ತಮ್ಮ ಮಕ್ಕಳೊಂದಿಗೆ ಮುಖಾಮುಖಿಯಾಗುತ್ತಾರೆ. ಇಬ್ಬರ ಕೈಗಳಲ್ಲಿ ತಮ್ಮ ತಮ್ಮ ಉತ್ತರಪತ್ರಿಕೆಗಳು. ‘ನಿಂಗೆಷ್ಟು ಅಂಕ ಬಂದಿದೆ? ಎಂದು ಕೇಳುವ ಆತ್ಮಸ್ಥೈರ್ಯ ಯಾವ ತಂದೆ ತಾಯಿಯಲ್ಲೂ ಇರಲಿಲ್ಲ! 25ಕ್ಕೆ ಮೂರೇ ಅಂಕ ಗಳಿಸಿದ ತಾಯಿ, ‘ಓದಿಕೊಳ್ಳಲು ಸಮಯವಿದ್ದಿದ್ದರೆ ನಾನು ಒಳ್ಳೆ ಅಂಕ ಗಳಿಸ್ತಿದ್ದೆ’ ಎಂದು ಮಗನ ಮುಂದೆ ಹೇಳಿಕೊಳ್ಳುತ್ತಾಳೆ. 21 ಅಂಕ ಗಳಿಸಿದ ತಾಯಿಯನ್ನು ‘ಅಮ್ಮ, ನಾಲ್ಕು ಅಂಕ ಏನಾಯ್ತು?’ ಎಂದು ಮಗಳು ಗದರಿಸುತ್ತಾಳೆ.

***

ಪರೀಕ್ಷಾ ಸಮಯದಲ್ಲಿ ಮಕ್ಕಳ ಮೇಲೆ ಪೋಷಕರು ಹೇರುವ ಒತ್ತಡ ಮತ್ತು ಅದರ ಪರಿಣಾಮ ಹೇಗಿರುತ್ತದೆ ಎಂಬುದರ ಬಗ್ಗೆ ಲೇಖನ ಸಾಮಗ್ರಿಗಳ ತಯಾರಕ ಕಂಪನಿ ಬಿ.ಐ.ಸಿ. ಸೆಲ್ಲೊ (ಇಂಡಿಯಾ) ಕಂಪನಿ ನಿರ್ಮಿಸಿರುವ ಕಿರುಚಿತ್ರ ‘ಸರ್‌ಪ್ರೈಸ್‌ ಟೆಸ್ಟ್‌’ನ ತುಣುಕುಗಳಿವು.

ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆ ತೋರುವಂತೆ ಮಕ್ಕಳ ಮೇಲೆ ಹೇಗೆ ಒತ್ತಡ ಹೇರಲಾಗುತ್ತಿದೆ ಎಂಬುದನ್ನು ಪೋಷಕರಿಗೆ ತೋರಿಸಿಕೊಡುವ ಪ್ರಯತ್ನವಿದು. ಮಕ್ಕಳು ಎಷ್ಟರಮಟ್ಟಿಗೆ ಒತ್ತಡವನ್ನು ಅನುಭವಿಸಬಹುದು ಎಂಬುದನ್ನು ಸ್ವತಃ ಪೋಷಕರೇ ಅನುಭವಿಸಿದಾಗ ಅವರಿಗೆ ತಪ್ಪಿನ ಅರಿವಾದೀತು ಎಂಬ ಲೆಕ್ಕಾಚಾರ ತಮ್ಮದು  ಎಂದು, ಸೆಲ್ಲೊದ ನಿರ್ದೇಶಕ (ಮಾರ್ಕೆಟಿಂಗ್‌) ತನ್ವೀರ್‌ ಖಾನ್‌ ಹೇಳಿದ್ದಾರೆ.

ಈ ಕಿರುಚಿತ್ರವನ್ನು ಫೇಸ್‌ಬುಕ್‌ನಲ್ಲಿ 94ಸಾವಿರ ಮಂದಿ ಹಂಚಿಕೊಂಡಿದ್ದರೆ, ಸುಮಾರು 90 ಲಕ್ಷ ಮಂದಿ ನೋಡಿದ್ದಾರೆ.

ಕಿರುಚಿತ್ರ ನೋಡಲು: https://bit.ly/2qhQyLz

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT