ಭಾನುವಾರ, ಡಿಸೆಂಬರ್ 15, 2019
17 °C

ದೀಪಿಕಾ – ರಣವೀರ್‌ ಮದುವೆ ಸ್ವಿಟ್ಜರ್‌ಲೆಂಡ್‌ನಲ್ಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಿಕಾ – ರಣವೀರ್‌ ಮದುವೆ ಸ್ವಿಟ್ಜರ್‌ಲೆಂಡ್‌ನಲ್ಲಿ?

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಅವರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಗಾಳಿಸುದ್ದಿಯನ್ನು ಇವರಿಬ್ಬರೂ ಖಚಿತಪಡಿಸಿಲ್ಲ. ಬಾಲಿವುಡ್‌ ಗಾಳಿಸುದ್ದಿಗಳ ಪ್ರಕಾರ, ಈ ಜೋಡಿ ಸೆಪ್ಟೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಮದುವೆಯಾಗಲಿದ್ದಾರೆ. ಮದುವೆ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಈ ಜೋಡಿ ಸ್ವಿಟ್ಜರ್‌ಲೆಂಡ್‌ನಲ್ಲಿ ಮದುವೆಯಾಗಲಿದೆ ಎಂಬುದು ಹೊಸ ಸುದ್ದಿ.

ರಣವೀರ್‌ ಸಿಂಗ್‌ ಸ್ವಿಟ್ಜರ್‌ಲೆಂಡ್‌ ಪ್ರವಾಸೋದ್ಯಮದ ಭಾರತೀಯ ರಾಯಭಾರಿಯಾಗಿರುವುದರಿಂದ ಅಲ್ಲಿಯೇ ಮದುವೆಯಾಗುವಂತೆ ಅವರಿಗೆ ಆಫರ್‌ಗಳು ಬಂದಿವೆಯಂತೆ. ಈ ಸುದ್ದಿಗೂ ಈ ಪ್ರಣಯಪಕ್ಷಿಗಳು ಪ್ರತಿಕ್ರಿಯಿಸಿಲ್ಲ! ‘ರಾಮ್‌– ಲೀಲಾ’ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ದೀಪಿಕಾ– ರಣವೀರ್‌ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಲ್ಲಿಂದೀಚೆ ಡೇಟಿಂಗ್‌, ಔಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೂ ಮದುವೆ ವಿಷಯ ಬಂದಾಗ ಗಪ್‌ಚುಪ್‌ ಅಂತ ಉಳಿದುಬಿಡುತ್ತಾರೆ.

ಅನುಷ್ಕಾ– ವಿರಾಟ್‌ ಮದುವೆ ಸುದ್ದಿ ಬಳಿಕ ಸೋನಂ ಕಪೂರ್‌– ಆನಂದ್‌ ಅಹುಜಾ ಹಾಗೂ ದೀಪಿಕಾ– ರಣವೀರ್‌ ಸಿಂಗ್‌ ಮದುವೆ ಸುದ್ದಿ ಹೆಚ್ಚು ಪ್ರಚಾರದಲ್ಲಿದೆ. ಸೋನಂ– ಆನಂದ್‌ ಮೇನಲ್ಲಿ ನಡೆಯುವ ಚಿತ್ರೋತ್ಸವದ ಬಳಿಕ ಹಾಗೂ ದೀಪಿಕಾ– ರಣವೀರ್‌ 2018ರ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ‘ಪದ್ಮಾವತ್‌’ ಜೋಡಿಯ ಮದುವೆ ಹಿಂದೂ ಸಂಪ್ರದಾಯದಂತೆ ನಡೆಯಲಿದ್ದು ಆಪ್ತರಿಗಷ್ಟೇ ಸೀಮಿತವಾಗಿರುತ್ತದೆ ಎನ್ನಲಾಗಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ದೀಪಿಕಾ ತಮ್ಮ ಭವಿಷ್ಯದ ಬಗ್ಗೆ ಮಾತನಾಡಿದ್ದರು. ‘ಮದುವೆ ಎಂಬುದು ಬಹುಮುಖ್ಯ ಘಟ್ಟ. ನಾನು ನನ್ನ ತಂದೆ– ತಾಯಿಯ ಅನುರೂಪ ದಾಂಪತ್ಯವನ್ನು ನೋಡುತ್ತಾ ಬೆಳೆದವಳು. ಮದುವೆಯಾಗಲು ಇದು ಸರಿಯಾದ ಸಮಯ ಎಂದು ನನಗನಿಸುತ್ತಿದೆ. ಯಾವಾಗ ಏನು ನಡೆಯಬೇಕೋ ಅದೇ ನಡೆಯುತ್ತದೆ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದರು.

‘ಮದುವೆಯಾದರೂ ಕೆಲಸ ಮಾಡದೇ ಇರಲು ನನ್ನಿಂದ ಸಾಧ್ಯವಿಲ್ಲ. ಉದ್ಯೋಗಸ್ಥ ಮಹಿಳೆ, ತಾಯಿಯಾಗಿ ನನ್ನನ್ನು ನಾನು ನೋಡಲು ಇಷ್ಟಪಡುತ್ತೇನೆ. ನಾನು ಉದ್ಯೋಗ ಮಾಡದೇ ಇದ್ದರೆ ನನಗೇ ಹುಚ್ಚೇ ಹಿಡಿಯಬಹುದು’ ಎಂದು ಎರಡನೇ ಇನಿಂಗ್ಸ್‌ನ ಸುಳಿವೂ ಕೊಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)