‘ಭರವಸೆ ಈಡೇರಿಸುವಲ್ಲಿ ಬಿಜೆಪಿ ವಿಫಲ’

7
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ವಿಜಯ ಶಂಕರ್ ಆರೋಪ

‘ಭರವಸೆ ಈಡೇರಿಸುವಲ್ಲಿ ಬಿಜೆಪಿ ವಿಫಲ’

Published:
Updated:

ಮಡಿಕೇರಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಚುನಾವಣೆ ಸಂದರ್ಭ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಚ್‌.ವಿಜಯಶಂಕರ್ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಸಾಧನೆಯನ್ನು ಹೇಳಿಕೊಂಡು ಜನರ ಮುಂದೆ ಬರಲಿದೆ ಎಂಬುದನ್ನು ಬಿಜೆಪಿ ನಾಯಕರು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು.

‘ರಾಜ್ಯದಲ್ಲಿ ಬಿಜೆಪಿ ಬರುವುದು ಕನಸಿನ ಮಾತು, ಕಳೆದ ಬಾರಿಯ ಆಡಳಿತ ವೈಫಲ್ಯದ ಬಗ್ಗೆ ಜನರಲ್ಲಿ ಅರಿವಿದೆ. ಹಿಂದೆ ಬಿಜೆಪಿಯ ನಿಷ್ಠಾವಂತ ನಾಯಕರನ್ನು ಕೈ ಬಿಟ್ಟಿದ್ದರು, ಕೆಲವು ಶಾಸಕರು, ಸಚಿವರು ಜೈಲಿಗೆ ಹೋಗಿದ್ದರು, ನನಗೂ ಬಿಜೆಪಿಯಲ್ಲಿದ್ದಾಗ ಬೆಲೆ ಕೊಟ್ಟಿರಲಿಲ್ಲ. ಇದೆಲ್ಲವೂ ರಾಜ್ಯ ಬಿಜೆಪಿ ನಾಯಕರ ಹೆಗ್ಗಳಿಕೆ‌’ ಎಂದು ವ್ಯಂಗ್ಯವಾಡಿದರು.

‘ಲೋಕಪಾಲ್ ಮಸೂದೆ ಮಂಡನೆ, ಗಂಗಾ ಕಾವೇರಿ ನದಿ ಜೋಡಣೆ, ನಿರುದ್ಯೋಗ ನಿವಾರಣೆ, ಗೋಹತ್ಯೆ ನಿಷೇಧ, ಭ್ರಷ್ಟಾಚಾರ ನಿರ್ಮೂಲನೆ, ವಿದೇಶದಿಂದ ಕಪ್ಪು ಹಣ ತರುವುದಾಗಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಮೋದಿ ನೀಡಿದ್ದ ಆಶ್ವಾಸನೆಗಳು ಇಂದು ಸತ್ಯಕ್ಕೆ ದೂರವಾಗಿವೆ. ಜತೆಗೆ ಬಿಜೆಪಿ ರೈತರ ಹಾಗೂ ಗ್ರಾಮೀಣಾಭಿವೃದ್ಧಿ ವಿರೋಧಿ ಸರ್ಕಾರ ಎಂದು ಜನರಿಗೆ ಅರ್ಥವಾಗಿದೆ‌’ ಎಂದು ವಿಜಯಶಂಕರ್‌ ಹೇಳಿದರು.

ಮೋದಿ ಬಂಡವಾಳಶಾಹಿ ಪರ: ‘ನರೇಂದ್ರ ಮೋದಿ ಅವರು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ₹ 2 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುತ್ತಾರೆ. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದರೆ, ರಾಜ್ಯ ಸರ್ಕಾರರ ಮೇಲೆ ಬೊಟ್ಟು ಮಾಡುತ್ತಾರೆ. ಬಂಡವಾಳಶಾಹಿಗಳಿಗೆ ಕೊಟ್ಟಿರುವ ಸಾಲದ ಶೇ 25 ಭಾಗವನ್ನು ರೈತರಿಗೆ ನೀಡಿದ್ದರೆ ರೈತರು ಇಂದು ನೆಮ್ಮದಿಯ ಜೀವನ ಸಾಗಿಸಬಹುದಿತ್ತು’ ಎಂದು ವಿಜಯ ಶಂಕರ್ ಅಸಮಾಧಾನ ವ್ಯಕ್ತ ಪಡಿಸಿದರು.

‘ರೈತ ಬೆಳೆದ ಕಾಫಿ, ಶುಂಠಿ, ತಂಬಾಕು ಬೆಳೆಗಳ ಮೇಲೆ ಕೇಂದ್ರ ಸರ್ಕಾರ ತೆರಿಗೆ ಹೆಚ್ಚಳ ಮಾಡಿದೆ. ಸೇವಾ ತೆರಿಗೆ ಹಾಕಿದ ಮೊದಲ ಸರ್ಕಾರ ಮೋದಿ ಅವರದ್ದು’ ಎಂದು ಆರೋಪಿಸಿದರು.

ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳು ಬಡ ಜನರ ಕೈತಲುಪಿ ಜನಮನ್ನಣೆ ಗಳಿಸಿರುವುದರಿಂದ ರಾಜ್ಯದಲ್ಲಿ ಅಧಿಕ ಸ್ಥಾನವನ್ನು ಗಳಿಸಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದು ವಿಜಯ ಶಂಕರ್ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಪ್ರಮುಖರಾದ ಅಪ್ರು ರವೀಂದ್ರ, ಜಾನ್ಸನ್ ಪಿಂಟೊ ಹಾಜರಿದ್ದರು.

ಸಹದ್ಯೋಗಿಗಳಿಗೆ ಗೌರವ ಇಲ್ಲ

‘ಸಂಪುಟದಲ್ಲಿರುವ ಮಹಿಳಾ ಸಹೋದ್ಯೋಗಿಗಳಿಗೆ ಪ್ರಧಾನಿ ಮೋದಿ ಗೌರವ ಕೊಡುತ್ತಿಲ್ಲ. ಪತ್ನಿಗೂ ಗೌರವ ನೀಡಿಲ್ಲ, ಪತ್ನಿ ಯಶೋಧ ಬೇನ್ ಅಂಜನಾದ್ರಿಯಲ್ಲಿ ಅಪಘಾತಕ್ಕಿಡಾದ ಸಂದರ್ಭ ಸಾಂತ್ವನ ಹೇಳದ ಮೋದಿ ಹೃದಯ ಹೀನ ಮನಸ್ಥಿತಿ ಉಳ್ಳವರು, ಇಂತವರು ದೇಶದಲ್ಲಿ ಮಹಿಳೆಯರಿಗಾಗಿ ಯಾವ ಅಭಿವೃದ್ಧಿ ಯೋಜನೆ ತರಲಿದ್ದಾರೆ ಎಂದು ವಿಜಯ ಶಂಕರ್ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry