ಬುಧವಾರ, ಜುಲೈ 15, 2020
22 °C
ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಸೂಚನೆ

ಚುನಾವಣಾ ವೆಚ್ಚ; ತೀವ್ರ ನಿಗಾ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣಾ ವೆಚ್ಚ; ತೀವ್ರ ನಿಗಾ ಇರಲಿ

ಕೊಪ್ಪಳ: ಚುನಾವಣಾ ವೆಚ್ಚದ ಮೇಲೆ ತೀವ್ರ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹೇಳಿದರು.

ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚದ ವಿವರಗಳ ಸಂಗ್ರಹಣೆ ಹಾಗೂ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಭ್ಯರ್ಥಿಗಳು ಚುನಾವಣಾ ವೆಚ್ಚ ನಿರ್ವಹಣೆಗಾಗಿಯೇ ಬ್ಯಾಂಕ್‍ನಲ್ಲಿ ಪ್ರತ್ಯೇಕವಾಗಿ ಹೊಸ ಖಾತೆ ತೆರೆಯಬೇಕು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ವೆಚ್ಚದ ಸಂಪೂರ್ಣ ವಿವರ ನಮೂದಿಸಲು ಪ್ರತ್ಯೇಕ ರಿಜಿಸ್ಟರ್‌ಗಳನ್ನು ನೀಡಲಾಗುತ್ತದೆ. ಅದರಲ್ಲಿಯೇ ಅಭ್ಯರ್ಥಿಗಳು ತಮ್ಮ ವೆಚ್ಚಗಳನ್ನು ನಮೂದಿಸಬೇಕು.

'ಪ್ರತಿ ಅಭ್ಯರ್ಥಿವಾರು ಶ್ಯಾಡೋ ವೆಚ್ಚ ರಿಜಿಸ್ಟರ್ (ಗೌಪ್ಯ ನಿರ್ವಹಣೆ) ಅನ್ನು ನಿರ್ವಹಿಸಲಾಗುವುದು. ಅಭ್ಯರ್ಥಿಗಳು ವಾಸ್ತವವಾಗಿ ಚುನಾವಣಾ ವೆಚ್ಚ ಕೈಗೊಂಡಿದ್ದು, ಅಭ್ಯರ್ಥಿ ನೀಡುವ ವಿವರದಲ್ಲಿ ನಮೂದಾಗದೇ ಇರುವ ವೆಚ್ಚದ ವಿವರಗಳನ್ನು ಚುನಾವಣಾ ಅಧಿಕಾರಿಗಳು ಶ್ಯಾಡೋ ವೆಚ್ಚ ರಿಜಿಸ್ಟರ್‌ನಲ್ಲಿ ನಮೂದಿಸಿಟ್ಟುಕೊಳ್ಳುತ್ತಾರೆ. ಇದರ ಜತೆಗೆ ವೆಚ್ಚದ ಸಂಪೂರ್ಣ ಸಾಕ್ಷ್ಯಾಧಾರಿತ ದಾಖಲೆಗಳನ್ನು ಕೂಡ ಇಂತಹ ರಿಜಿಸ್ಟರ್ ಜತೆಗೆ ಇರಿಸಿಕೊಳ್ಳುವರು. ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡಲು ಯತ್ನಿಸಿದಲ್ಲಿ, ಶ್ಯಾಡೋ ರಿಜಿಸ್ಟರ್‌ನ ಮಾಹಿತಿಯೊಂದಿಗೆ ತಾಳೆ ಹಾಕಲಾಗುವುದು. ಹೀಗಾಗಿ ಅಧಿಕಾರಿಗಳು ಶ್ಯಾಡೋ ರಿಜಿಸ್ಟರ್ ಅನ್ನು ಸರಿಯಾಗಿ ನಿರ್ವಹಿಸಬೇಕು. ಚುನಾವಣಾ ಸಂದರ್ಭದಲ್ಲಿ ಪ್ರತಿ ಅಭ್ಯರ್ಥಿ ಮೂರು ಬಾರಿ ವೆಚ್ಚದ ಸಂಪೂರ್ಣ ವಿವರವನ್ನು ಕ್ಷೇತ್ರ ಚುನಾವಣಾಧಿಕಾರಿಗೆ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ವೆಚ್ಚದ ವಿವರ ಸಲ್ಲಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳ ಮೇಲೆ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಬೇಕು' ಎಂದರು.

'ವಿವರ ಹಾಗೂ ವರದಿಗಳನ್ನು ಕ್ಷೇತ್ರ ಚುನಾವಣಾಧಿಕಾರಿಗಳು, ಕಂಟ್ರೋಲ್ ರೂಂ, ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್, ಆದಾಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ವಿಡಿಯೋ ಸರ್ವೆಲೆನ್ಸ್ ಟೀಮ್, ಮೀಡಿಯಾ ಮಾನಿಟರಿಂಗ್ ಟೀಂ, ಹಾಗೂ ಬೂತ್ ಮಟ್ಟದ ಜಾಗೃತಿ ಗುಂಪುಗಳು ಅಕೌಂಟಿಂಗ್ ಟೀಂಗೆ ತಪ್ಪದೆ ಮಾಹಿತಿ ಸಲ್ಲಿಸಬೇಕು' ಎಂದರು. ಪೇಯ್ಡ್ ನ್ಯೂಸ್ ಬಗ್ಗೆ ದೈನಂದಿನ ವರದಿ: 'ಜಿಲ್ಲೆಯಲ್ಲಿ ಪ್ರಕಟಗೊಳ್ಳುವ ಪ್ರತಿಯೊಂದು ನಿಯತಕಾಲಿಕೆ, ದಿನಪತ್ರಿಕೆಗಳು, ಕೇಬಲ್ ಟಿ.ವಿ. ಹಾಗೂ ಟಿ.ವಿ. ಸುದ್ದಿವಾಹಿನಿಗಳ ಬಗ್ಗೆ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕಣ್ಗಾವಲು ಇರಿಸಬೇಕು. ಶಂಕಾಸ್ಪದ ಪೇಯ್ಡ್‌ನ್ಯೂಸ್ ಕಂಡುಬಂದರೂ, ಸಂಬಂಧಪಟ್ಟ ಅಭ್ಯರ್ಥಿಗೆ ನೋಟಿಸ್ ಜಾರಿಗೊಳಿಸಬೇಕು. ಪೇಯ್ಡ್‌ ನ್ಯೂಸ್ ಬಗ್ಗೆ ಎಂಸಿಎಂಸಿ ಸಮಿತಿಯಿಂದ ಖಚಿತಪಟ್ಟಲ್ಲಿ, ಸಂಬಂಧಪಟ್ಟ ಮಾಧ್ಯಮದ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಚುನಾವಣಾ ಆಯೋಗ ಮೂಲಕ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ವರದಿ ಸಲ್ಲಿಕೆಯಾಗಲಿದೆ' ಎಂದರು.

ಸ್ವ-ಸಹಾಯ ಗುಂಪುಗಳು, ಸಂಘಗಳನ್ನು ರಾಜಕೀಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವುದು, ಟೋಕನ್‌ ನೀಡುವ ಸಾಧ್ಯತೆಗಳಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಕೊಪ್ಪಳ ಚುನಾವಣಾಧಿಕಾರಿ ಸಿ.ಡಿ. ಗೀತಾ, ಕುಷ್ಟಗಿ ಚುನಾವಣಾಧಿಕಾರಿ ಪ್ರಶಾಂತ್ ಪಿ.ಬಿ., ಕನಕಗಿರಿ ಚುನಾವಣಾಧಿಕಾರಿ ಎಚ್.ವಿ. ನಾಗರಾಜ್, ಗಂಗಾವತಿ ಚುನಾವಣಾಧಿಕಾರಿ ರವಿ ತಿರ್ಲಾಪುರ, ಯಲಬುರ್ಗಾ ಚುನಾವಣಾಧಿಕಾರಿ ವಿಜಯ ಮೆಕ್ಕಳಕಿ ಇದ್ದರು.

ವಿಡಿಯೊ ದಾಖಲೆ ಕಡ್ಡಾಯ

ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ನಡೆಸುವ ಸಭೆ, ಸಮಾರಂಭಗಳ ಮಾಹಿತಿಯನ್ನು ಹಾಗೂ ಕಾರ್ಯಕ್ರಮದ ವಿಡಿಯೊ ತಯಾರಿಸಿ ಚುನಾವಣಾಧಿಕಾರಿಗಳಿಗೆ ನೀಡಬೇಕು. ಒಂದೇ ಕಾರ್ಯಕ್ರಮದಲ್ಲಿ 2-3 ಅಭ್ಯರ್ಥಿಗಳು ಇದ್ದಲ್ಲಿ, ಅಂತಹ ಖರ್ಚು ವೆಚ್ಚವನ್ನು ಅಭ್ಯರ್ಥಿಗಳಿಗೆ ತಲಾ ವೆಚ್ಚದಲ್ಲಿ ಅಭ್ಯರ್ಥಿವಾರು ವಿಭಜಿಸಿ ಹಾಕಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

**

ಸ್ಟಾರ್ ಪ್ರಚಾರಕರು ವೇದಿಕೆಗಳಲ್ಲಿದ್ದರೆ ಆ ಕಾರ್ಯಕ್ರಮದ ವೆಚ್ಚವನ್ನು ಅಭ್ಯರ್ಥಿಯ ವೆಚ್ಚಕ್ಕೇ ಸೇರಿಸಬೇಕು – ಎಂ.ಕನಗವಲ್ಲಿ, ಜಿಲ್ಲಾಧಿಕಾರಿ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.