ಬೆಂಗರೆಯಲ್ಲಿ ಯುವಕರ ಮೇಲೆ ಹಲ್ಲೆ

7
ತಲವಾರಿನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

ಬೆಂಗರೆಯಲ್ಲಿ ಯುವಕರ ಮೇಲೆ ಹಲ್ಲೆ

Published:
Updated:

ಮಂಗಳೂರು: ನಗರದ ತಣ್ಣೀರುಬಾವಿ ಕಡಲ ತೀರದ ಕಸಬಾ ಬೆಂಗರೆಯಲ್ಲಿ ಭಾನುವಾರ ತಡರಾತ್ರಿ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಗಾಯಗೊಳಿಸಿದೆ.

ದಾಳಿಯಲ್ಲಿ ಕಸಬಾ ಬೆಂಗರೆ ನಿವಾಸಿಗಳಾದ ಅನ್‌ವೀಝ್‌, ಸಿರಾಝ್‌ ಮತ್ತು ಇಝಾದ್‌ ಗಾಯಗೊಂಡಿದ್ದಾರೆ. ಅನ್‌ವೀಝ್‌ ಗಂಭೀರವಾಗಿ ಗಾಯಗೊಂಡಿದ್ದು, ಯೂನಿಟಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಇಬ್ಬರನ್ನು ಎ.ಜೆ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭಾನುವಾರ ರಾತ್ರಿ 11.30ರ ಸುಮಾರಿಗೆ ಅನ್‌ವೀಝ್‌, ಸಿರಾಝ್ ಮತ್ತು ಇಝಾದ್‌ ಕಸಬಾ ಬೆಂಗರೆ ಫುಟ್‌ಬಾಲ್‌  ಮೈದಾನದಲ್ಲಿ ಮಾತನಾಡುತ್ತಾ ಕುಳಿತಿದ್ದರು. ಆಗ ಅಲ್ಲಿಗೆ ಬಂದ ಆರು ಮಂದಿ ಮುಸುಕುಧಾರಿ ಯುವಕರು ತಲವಾರು ಮಾದರಿಯ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಒಂದೆರಡು ಹೊಡೆತ ಬೀಳುತ್ತಿದ್ದಂತೆ ಸಿರಾಝ್‌ ಮತ್ತು ಇಝಾದ್‌ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಕೈಗೆ ಸಿಕ್ಕಿದ್ದ ಅನ್‌ವೀಝ್‌ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಸಿರಾಝ್‌ ಮತ್ತು ಇಝಾದ್‌ ಮೊಬೈಲ್‌ ಮೂಲಕ ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ಅಲ್ಲಿಗೆ ಬಂದ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ತೀವ್ರವಾಗಿ ಗಾಯಗೊಂಡಿದ್ದ ಅನ್‌ವೀಝ್‌ ಮೈದಾನದಲ್ಲೇ ಕುಸಿದುಬಿದ್ದಿದ್ದ. ಮೀನುಗಾರಿಕೆಗೆ ತೆರಳುತ್ತಿದ್ದ ಸ್ಥಳೀಯರು ಗಾಯಾಳುವನ್ನು ಗಮನಿಸಿ, ಆಸ್ಪತ್ರೆಗೆ ಕರೆತಂದಿದ್ದರು.

‘ಘಟನೆಗೆ ಸಂಬಂಧಿಸಿದಂತೆ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಾಯಾಳುಗಳು ನೀಡಿರುವ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಸ್ನೇಹಿತರು ಅಥವಾ ಒಂದೇ ಗುಂಪಿನ ಯುವಕರ ನಡುವೆ ಘರ್ಷಣೆ ನಡೆದಿರುವುದು ದಾಳಿಗೆ ಕಾರಣವಿದ್ದಂತೆ ಕಂಡುಬಂದಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry