ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಮರುಪೂರಣದ ಭಗೀರಥರು

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಓ ಆದ್ಮಿ ಹಮ್ಕೊ ಪಾನಿ ದಿಯಾ ಹೈ. ಹಮೆ ಪೈಸೆ ನೈ ಲೇತೆ (ಇವರು ನಮಗೆ ನೀರು ಕೊಟ್ಟಿದ್ದಾರೆ. ಎಳೆನೀರು ಕೊಟ್ಟಿದ್ದಕ್ಕೆ ನಾವು ನಿಮ್ಮಿಂದ ದುಡ್ಡು ತೆಗೆದುಕೊಳ್ಳುವುದಿಲ್ಲ)– ಕೋಲಾರ ಜಿಲ್ಲೆಯ ಕೊಳವೆ ಬಾವಿಗಳ ಮರುಪೂರಣದ ಗುತ್ತಿಗೆ ಕೆಲಸದ ಪರಾಮರ್ಶೆಗೆ ಬಂದಿದ್ದ ‘ಇಫ್ಕೊ’ದ ನಿಯೋಗಕ್ಕೆ ರೈತನೊಬ್ಬ ಹೇಳಿದ ಮಾತು. ಜನರ ಹೃದಯದಲ್ಲಿ ನಮಗೆ ಸ್ಥಾನ ಸಿಕ್ಕಿದೆ. ಜನರ ಪ್ರೀತಿಗೆ, ಅಭಿಮಾನಕ್ಕೆ ನಾವು ಋಣಿಯಾಗಿದ್ದೇವೆ. ಅದೇ ನಮಗೆ ಸಿಕ್ಕಿರುವ ದೊಡ್ಡ ಪ್ರಶಸ್ತಿ. ಇದರ ಮುಂದೆ ಇತರ ಪ್ರಶಸ್ತಿಗಳು ನಗಣ್ಯ’ ಎಂದು ಫಾರ್ಮ್‌ಲ್ಯಾಂಡ್‌  ರೇನ್‌ವಾಟರ್‌ ಹಾರ್ವೆಸ್ಟಿಂಗ್‌ ಸಿಸ್ಟಮ್ಸ್‌ನ ನಿರ್ದೇಶಕ ಮೈಕಲ್‌ ಸದಾನಂದ ಬ್ಯಾಪ್ಟಿಸ್ಟ್‌ ಅವರು ಹೇಳುವಾಗ ಅವರ ಮಾತಿನಲ್ಲಿ ಕೃತಾರ್ಥತೆ ಇತ್ತು.

ಬೆಂಗಳೂರಿನ ಅವರ ಕಚೇರಿಯಲ್ಲಿ ನಾನು ಮಾತಿಗೆ ಕುಳಿತುಕೊಳ್ಳುವ ಕೆಲ ನಿಮಿಷಗಳ ಮೊದಲೇ,  ಶಿವಮೊಗ್ಗದಲ್ಲಿ ಇರುವ ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ನಿಂದ ಬಂದ ದೂರವಾಣಿಯು ಮಳೆ ನೀರು ಸಂಗ್ರಹಿಸುವುದನ್ನು ಸಂಸ್ಥೆಗೆ ಒಪ್ಪಿಸುವ ಸಂಬಂಧ ಮಾತುಕತೆ ನಡೆಸಿದ್ದನ್ನೂ ಮೈಕಲ್‌ ಜ್ಞಾಪಿಸಿಕೊಂಡರು. ಹಿಂದಿನ ದಿನವಷ್ಟೇ ಚೆನ್ನೈನಲ್ಲಿ ಇರುವ ಇನ್ಫೊಸಿಸ್‌ ಕ್ಯಾಂಪಸ್‌ಗೆ ಭೇಟಿ ಕೊಟ್ಟು ಅಲ್ಲಿನ ಯೋಜನೆಯ  ಪ್ರಗತಿ ವೀಕ್ಷಿಸಿ ಮರಳಿದ್ದರು. ಇನ್ಫೊಸಿಸ್‌ನ ಎಲ್ಲ ಕ್ಯಾಂಪಸ್‌ಗಳಲ್ಲಿ ಸಂಸ್ಥೆಯ ತಂತ್ರಜ್ಞಾನ ಬಳಕೆಯಲ್ಲಿ ಇದೆ. ಇದು ಸಂಸ್ಥೆಯು, ರೈತರ ಹೊಲದಿಂದ ಹಿಡಿದು ನಗರಗಳಲ್ಲಿನ ಮನೆಗಳ ಚಾವಣಿ ಮಳೆ ನೀರು ಸಂಗ್ರಹ ಮತ್ತು ದೊಡ್ಡ ಉದ್ದಿಮೆಗಳ ಕ್ಯಾಂಪಸ್‌ನಲ್ಲಿನ ನೀರು ಅಲ್ಲಿಯೇ ಇಂಗುವ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿರುವುದಕ್ಕೆ ನಿದರ್ಶನಗಳಾಗಿವೆ.

ಹದಿನೈದು ವರ್ಷಗಳಿಂದ ಜಲ ಮರುಪೂರಣ ಮತ್ತು ಮಳೆ ನೀರು ಸಂಗ್ರಹ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಈ ಸಂಸ್ಥೆ ಈಗಾಗಲೇ 9 ದೇಶಗಳಿಗೆ ತನ್ನ ವಹಿವಾಟು ವಿಸ್ತರಿಸಿದೆ. ಸ್ವಂತ ಜಮೀನಿನಲ್ಲಿ ಕೊರೆದ ಕೊಳವೆ ಬಾವಿಗಳು ಕೈಕೊಟ್ಟಾಗ, ಅವುಗಳ ಮರುಪೂರಣಕ್ಕೆ ನಡೆಸಿದ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡದಿದ್ದಾಗ ಅಂತರ್ಜಾಲ ಜಾಲಾಡಿ ಮಾಹಿತಿ ಕಲೆಹಾಕಿ ತಾವೇ ಸ್ವತಃ ಹೊಸ ವಿಧಾನ ಶೋಧಿಸಿ ಯಶಸ್ವಿಯಾದ ಯುವಕರ ಯಶೋಗಾಥೆ ಇದಾಗಿದೆ. ತಪ್ಪುಗಳಿಂದ ಪಾಠ ಕಲಿತು ಮಳೆ ನೀರು ಸಂಗ್ರಹ ಮತ್ತು ಅಂತರ್ಜಲ ಮರುಭರ್ತಿ ಕ್ಷೇತ್ರದಲ್ಲಿ ಪರಿಶ್ರಮಪಟ್ಟು ಪಟ್ಟು ಬಿಡದೆ ಸಂಶೋಧನೆ ನಡೆಸಿ ಹೊಸ ತಂತ್ರಜ್ಞಾನ ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಉದ್ದಿಮೆ ಸ್ಥಾಪಿಸಿ ಮುನ್ನಡೆದಿರುವ ಇವರು ಒಂದರ್ಥದಲ್ಲಿ ಅಂತರ್ಜಲದ ಆಧುನಿಕ ಭಗೀರಥರಾಗಿದ್ದಾರೆ.

2002ರಲ್ಲಿ ಚಿಕ್ಕಮಗಳೂರು ಬಳಿಯ ಸ್ವಂತ ಜಮೀನಿನಲ್ಲಿ  ಕೊರೆದ 28 ಕೊಳವೆಬಾವಿಗಳು ಒಂದರ ಹಿಂದೆ ಒಂದರಂತೆ ವಿಫಲವಾಗಿದ್ದವು. ಸಾಂಪ್ರದಾಯಿಕ ವಿಧಾನದಲ್ಲಿ ಇಂಗುಗುಂಡಿ ತೋಡಿ ಬೋರ್‌ವೆಲ್‌ನ ಕೈಸಿಂಗ್‌ ಪೈಪ್‌ಗೆ ರಂಧ್ರ ಕೊರೆದು ನೀರು ಸೋಸುವ ಸಾಧನ ಅಳವಡಿಸಿ ನೀರು ಹರಿ ಬಿಟ್ಟಿದ್ದರು. ಈ ಸಾಧನ ಗಡಸು ಮಣ್ಣು ಫಿಲ್ಟರ್‌ ಮಾಡುವಷ್ಟು ಸೂಕ್ಷ್ಮವಾಗಿರಲಿಲ್ಲ. ನೀರಿನ ಜತೆ ಕೆಸರು, ಕಸ ಕಡ್ಡಿ ಸೇರಿಕೊಂಡು ಇವರು ನಡೆಸಿದ ಪ್ರಯೋಗ ವಿಫಲವಾಗಿತ್ತು. ಈ ವೈಫಲ್ಯವೇ ಹೊಸ ತಂತ್ರಜ್ಞಾನದ ಸಂಶೋಧನೆಗೆ ಹಾದಿ ಮಾಡಿಕೊಟ್ಟಿತ್ತು.

ಇದು ಮರುಪೂರಣಕ್ಕೆ ಸೂಕ್ತ ವ್ಯವಸ್ಥೆಯಲ್ಲ ಎನ್ನುವುದನ್ನು ಮೈಕೆಲ್‌ ಅವರು ಮನಗಂಡರು. ಕೊಳವೆಬಾವಿಗಳಿಗೆ ನೀರು ಕಲುಷಿತಗೊಳ್ಳದ ರೀತಿಯಲ್ಲಿ ಮರುಪೂರಣ ಮಾಡಬೇಕು. ನೇರವಾಗಿ ನೀರು ಭರ್ತಿ ಮಾಡುವ ಬದಲಿಗೆ ಪರೋಕ್ಷ ರೀತಿಯಲ್ಲಿ ನೀರು ಭೂಮಿಯ ಆಳಕ್ಕೆ ಇಂಗಬೇಕು. ಈ ಪ್ರಕ್ರಿಯೆ ನೈಸರ್ಗಿಕವಾಗಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎನ್ನುವುದನ್ನು ಮನಗಂಡರು. ಆ ನಿಟ್ಟಿನಲ್ಲಿ ಸಂಶೋಧನೆ ನಡೆಸಿ ಹೊಸ ಮಾರ್ಗೋಪಾಯ ಕಂಡುಕೊಂಡರು.

ಕಾಫಿ ಪ್ಲಾಂಟೇಷನ್‌ ಹನಿ ನೀರಾವರಿ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದ, ಮೆಕ್ಯಾನಿಕಲ್‌ ಎಂಜಿನಿಯರ್‌ ಮೈಕಲ್‌ ಅವರು ತಮ್ಮ ಇನ್ನಿಬ್ಬರು ಸ್ನೇಹಿತರ ಜತೆ ಸೇರಿಕೊಂಡು ಹೊಸ ತಂತ್ರಜ್ಞಾನ ಆವಿಷ್ಕರಿಸುವಲ್ಲಿ ಸಫಲರಾಗಿದ್ದರು.

ನೀರು ಕಲುಷಿತಗೊಳ್ಳದಂತೆ ಪರ್ಯಾಯ ವಿಧಾನದಲ್ಲಿ ಭೂಮಿಯಲ್ಲಿ ಇಂಗಬೇಕು ಎನ್ನುವುದನ್ನು ಕಾರ್ಯಗತಗೊಳಿಸಲು ಭೂಮಿಯ ವಿವಿಧ ಪದರುಗಳನ್ನು ಅಧ್ಯಯನ ಮಾಡಿದರು.  ಮಣ್ಣಿನ ಭೂ ರಚನೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಅದನ್ನು ಅರ್ಥೈಸಿಕೊಂಡರೆ ಮಾತ್ರ ನಾವು ಈ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ ಎನ್ನುವುದನ್ನು ಅವರು ಮನಗಂಡರು. ಭೂಮಿಯ ಬೇರೆ, ಬೇರೆ ಪದರಗಳ ಪೈಕಿ ಕೆಲ ಭಾಗದಲ್ಲಿ ಮಾತ್ರ ನೀರು ಸಂಗ್ರಹವಾಗಿರುತ್ತದೆ. ಅಲ್ಲಿಗೆ ನೀರು ಇಂಗುವಂತೆ ಮಾಡಿದರೆ ಯಶಸ್ಸು ದೊರೆಯಲಿದೆ ಎನ್ನುವುದನ್ನು ತಿಳಿದುಕೊಂಡು ಕಾರ್ಯಪ್ರವೃತ್ತರಾಗಿದ್ದರು.

ಇದೇ ವೇಳೆಗೆ  ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ ಅವರೇ ಇವರಿಗೊಂಡು ಸವಾಲು ಒಡ್ಡಿದ್ದರು. ನಾನೇ ನಿಮಗೆ ಬತ್ತಿದ ಕೊಳವೆ ಬಾವಿಯನ್ನು ನಿಮ್ಮ ಸುಪರ್ದಿಗೆ ಒಪ್ಪಿಸುತ್ತೇನೆ. ಅದಕ್ಕೆ ಜೀವ ತುಂಬಿದರೆ ನಿಮ್ಮ ತಂತ್ರಜ್ಞಾನ ಮನ್ನಿಸುತ್ತೇನೆ ಎಂದು ಹೇಳಿದ್ದ  ಅಧಿಕಾರಿ ನವೀನ್‌ರಾಜ್‌ ಸಿಂಗ್‌ ಅವರು ತುಮಕೂರು ಜಿಲ್ಲೆಯ ಗ್ರಾಮವೊಂದರ ಒಣಗಿ ಹೋಗಿದ್ದ ಕೊಳವೆ ಬಾವಿಯನ್ನು ಇವರ ವಶಕ್ಕೆ ಒಪ್ಪಿಸಿದ್ದರು. ಮರು ಪೂರಣ ಕೆಲಸದ ಪ್ರತಿಯೊಂದು ಹಂತದಲ್ಲಿ ಸ್ಥಳಕ್ಕೆ ಬಂದು ಹೋಗುತ್ತಿದ್ದ ಅಧಿಕಾರಿಯು ಕೆಲಸದ ಪ್ರಗತಿಯನ್ನು ಗಮನಿಸುತ್ತಿದ್ದರು. ಕೆಲ ತಿಂಗಳುಗಳ ನಂತರ ಬೋರ್‌ವೆಲ್‌ನ ನೀರಿನ ಮಟ್ಟ ಹೆಚ್ಚಳಗೊಂಡು ನೀರು ಬರಲಾರಂಭಿಸಿತು. ಸೌರ ವಿದ್ಯುತ್‌ ಮೂಲಕವೇ ನೀರು ಮೇಲೆತ್ತಿ ನೀರಾವರಿ ಮಾಡತೊಡಗಿದ್ದರು. ಇದನ್ನು ಕಂಡ ಅಧಿಕಾರಿಯು ಇವರ ತಂಡಕ್ಕೆ ಶಹಬ್ಬಾಸ್‌ಗಿರಿ ಕೊಡಲು ಮರೆಯಲಿಲ್ಲ.

ಸಂಸ್ಥೆಯ ಹೊಸ ತಂತ್ರಜ್ಞಾನವು ಕ್ರಮೇಣ ಜನಪ್ರಿಯವಾಗತೊಡಗಿತು. ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿ ನೋಡಿ ಸರ್ಕಾರಿ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸತೊಡಗಿದರು. ಈ ಫಲ ನೀಡಿದ ಯಶಸ್ಸು ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ (ಇಫ್ಕೊ), ಕೇಂದ್ರೀಯ ಅಂತರ್ಜಲ ಮಂಡಳಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲಿ ಈ ತಂತ್ರಜ್ಞಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಉದ್ದೇಶವೇನೂ ಈ ಯುವಕರ ತಂಡಕ್ಕೆ ಇದ್ದಿರಲಿಲ್ಲ. ರೈತರಿಗೆ ಒಳಿತಾಗಲಿ ಎನ್ನುವದಷ್ಟೇ ಅವರ ಆಶಯವಾಗಿತ್ತು. ಹೊಸ ತಂತ್ರಜ್ಞಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ ಎನ್ನುವ ಕೆಲವರ ಬುದ್ಧಿಮಾತಿಗೆ ಓಗೊಟ್ಟು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಕೋಲಾರ್‌ ಜಿಲ್ಲೆಯ 650 ಕೊಳವೆಬಾವಿಗಳಿಗೆ ಚಾಲನೆ ನೀಡುವ ಗುತ್ತಿಗೆಯನ್ನು ‘ಇಫ್ಕೊ’ ಇವರಿಗೆ ಒಪ್ಪಿಸಿತು.

ಇದೊಂದು ಆ ಸಂಸ್ಥೆಯ ಪ್ರಾಯೋಜಿತ ಯೋಜನೆಯಾಗಿತ್ತು. ಇದನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿತ್ತು. ಇದು ಸಂಸ್ಥೆಯು ಪ್ರಗತಿ ಪಥದಲ್ಲಿ ಮುನ್ನಡೆಯಲು ತಿರುವು ನೀಡಿತು. ತಂತ್ರಜ್ಞಾನ ಜನಪ್ರಿಯಗೊಳಿಸಲು ಹಲವಾರು ವಿಚಾರ ಸಂಕಿರಣದಲ್ಲಿ ಮೈಕಲ್‌ ಅವರು ಭಾಗಿಯಾಗಿದ್ದಾರೆ. ಈ ವಿಧಾನ ಅಳವಡಿಕೆಯಲ್ಲಿ ಸ್ಥಳೀಯರೂ ಸುಲಭವಾಗಿ ಪಾಲ್ಗೊಳ್ಳಬಹುದಾಗಿದೆ. ಇದು ಈ ತಂತ್ರಜ್ಞಾನದ ಯಶಸ್ಸಿಗೆ ಇನ್ನೊಂದು ಕಾರಣವಾಗಿದೆ.

ರೇನಿ ಫಿಲ್ಟರ್ಸ್‌

‘ವಿ–ವೈರ್‌ ಇಂಜೆಕ್ಷನ್‌ ವೆಲ್‌ ಟೆಕ್ನಾಲಜಿ’ ತಂತ್ರಜ್ಞಾನವು ನಿಧಾನವಾಗಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಂತೆ, ಇನ್ನೊಂದೆಡೆ ನಗರಗಳಲ್ಲಿ ಮನೆಗಳ ಚಾವಣಿ ಮೇಲೆ ಬೀಳುವ ನೀರನ್ನು ಸಂಗ್ರಹಿಸುವ ಬಗ್ಗೆಯೂ ಸಂಸ್ಥೆ ಗಮನ ಹರಿಸತೊಡಗಿತು. ಕೊಳವೆಬಾವಿಗೆ ಮತ್ತು ಸಂಪ್‌ಗಳಲ್ಲಿ ಸಂಗ್ರಹಿಸುವ ಮಳೆ ನೀರಿಗೆ ಫಿಲ್ಟರ್‌ ಬೇಕು ಎನ್ನುವ ಬೇಡಿಕೆ ಈಡೇರಿಸಿದ ಸಂಸ್ಥೆ, ನಂತರ ಕಸಕಡ್ಡಿ ಬೇರ್ಪಡಿಸುವ ಫಿಲ್ಟರ್ ಬೇಕು ಎನ್ನುವ ಬೇಡಿಕೆ ಕೇಳಿ ಬಂದಾಗ ಅದನ್ನೂ ಈಡೇರಿಸಿತು. ಆದರೆ, ಇದರಿಂದ ಅರ್ಧರ್ಧಕ್ಕ ನೀರು ವ್ಯರ್ಥವಾಗುತ್ತಿದೆ. ಜತೆಗೆ ಕಸ ತೆಗೆಯಲು ನಮಗೆ ಸಮಯ ಇಲ್ಲ. ಸ್ವಯಂ ಚಾಲಿತ ಫಿಲ್ಟರ್‌ ಬೇಕು ಎನ್ನುವ ಬೇಡಿಕೆ ಕೇಳಿ ಬಂದಿತು. ಸಂಸ್ಥೆಯು ಕೈಚೆಲ್ಲಿ ಕೂರಲಿಲ್ಲ. ಅವಿರತ ಪ್ರಯತ್ನ ಮತ್ತು ಸಂಶೋಧನೆ ಮೂಲಕ ಅಂತಹ ಫಿಲ್ಟರ್‌ ಅನ್ನೂ ಸಂಶೋಧಿಸಿತು. ಭಾರಿ ಮಳೆಯಿಂದ ರಭಸದಿಂದ ಹರಿಯುವ ನೀರಿನ ಒತ್ತಡವನ್ನೂ ನಿಭಾಯಿಸುವ ರೀತಿಯಲ್ಲಿ ಇವುಗಳ ವಿನ್ಯಾಸ ರೂಪಿಸಲಾಗಿದೆ. 500 ರಿಂದ 6,000 ಚದರ ಅಡಿ ಪ್ರದೇಶಕ್ಕೂ ಬಳಕೆಯಾಗುವ ನಾಲ್ಕು ಬಗೆಯ ಫಿಲ್ಟರ್‌ ಅಭಿವೃದ್ಧಿಪಡಿಸಲಾಗಿದೆ. ಸದ್ಯಕ್ಕೆ ಈ ಫಿಲ್ಟರ್‌ಗಳನ್ನು  9 ದೇಶಗಳಿಗೆ ಪೂರೈಕೆ ಮಾಡಲಾಗುತ್ತಿದೆ. ದಕ್ಷಿಣ ಅಮೆರಿಕದ ಕೊಲಂಬಿಯಾ ಮತ್ತು ನೆದರ್ಲೆಂಡ್‌ನಿಂದಲೂ ಬೇಡಿಕೆ ಬಂದಿದೆ.

ಸಂಶೋಧನಾ ಕೇಂದ್ರ

ಚಿಕ್ಕಮಗಳೂರು ಬಳಿಯ ಹಾದಿಹಳ್ಳಿ ಯಲ್ಲಿ 6 ಎಕರೆಯಷ್ಟು ಪ್ರದೇಶದಲ್ಲಿ ತಯಾರಿಕಾ ಘಟಕ ಮತ್ತು ಸಂಶೋಧನೆ – ಅಭಿವೃದ್ಧಿ ಕೇಂದ್ರ ಆರಂಭಿಸಲಾಗುತ್ತಿದೆ. ಆರಂಭದಲ್ಲಿ ಯೋಜನಾ ವೆಚ್ಚ ₹ 25 ಕೋಟಿಗಳಷ್ಟಿದೆ. ಈ ಯೋಜನೆಯಲ್ಲಿ ಒಟ್ಟು ₹ 200 ಕೋಟಿಗಳಷ್ಟು ಬಂಡವಾಳ ತೊಡಗಿಸಲು ಉದ್ದೇಶಿಸಲಾಗಿದೆ. ಈ ಕೇಂದ್ರವು ಇಡೀ  ವಿಶ್ವಕ್ಕೆ ಮಾದರಿಯಾಗಿ ಇರಬೇಕು ಎನ್ನುವುದು ಅವರ ಕನಸಾಗಿದೆ. ಮಳೆ, ನೀರು ಸಂಗ್ರಹ ಸಂಬಂಧಿತ ವಿಷಯಗಳಲ್ಲಿ ಆಸಕ್ತರಿಗೆ ಉಚಿತ ತರಬೇತಿ ನೀಡಲೂ ಇಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಮಳೆ ನೀರು ಸಂಗ್ರಹದಲ್ಲಿ ಈ ಸಂಸ್ಥೆಯ ಫಿಲ್ಟರ್‌ಗಳನ್ನೇ ಬಳಸುವುದನ್ನು ಒಡಿಶಾ ಸರ್ಕಾರ ಕಡ್ಡಾಯ ಮಾಡಿದೆ. ಜತೆಗೆ ಸಬ್ಸಿಡಿಯನ್ನೂ ನೀಡುತ್ತಿದೆ. ಸೌರವಿದ್ಯುತ್‌ಗೆ ಶೇ 5ರಷ್ಟು ಜಿಎಸ್‌ಟಿ ಇದ್ದರೆ, ಅದಕ್ಕಿಂತ ಹೆಚ್ಚು ಮಹತ್ವದ ಮಳೆ ನೀರು ಸಂಗ್ರಹಕ್ಕೆ ಬಳಸುವ ಫಿಲ್ಟರ್‌ಗಳಿಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ತೆರಿಗೆ ಹೊರೆ ತಗ್ಗಿದರೆ ಫಿಲ್ಟರ್‌ಗಳ ಬೆಲೆಯೂ ಕಡಿಮೆಯಾಗಿ ಅವುಗಳ ಅಳವಡಿಕೆ ಹೆಚ್ಚಲಿದೆ ಎಂದು ಮೈಕಲ್‌ ಹೇಳುತ್ತಾರೆ.ಹೊಸ ಮನೆಗಳನ್ನು ಕಟ್ಟುವಾಗ ಮಳೆ ಸಂಗ್ರಹಕ್ಕೆ ಸಂಸ್ಥೆಯ ರೇನಿ ಫಿಲ್ಟರ್‌ಗಳ ಅಳವಡಿಕೆಗೆ ₹ 15ರಿಂದ ₹ 16 ಸಾವಿರ ಖರ್ಚಾಗಲಿದೆ. ಮನೆ ಕಟ್ಟಿಸಿದವರೂ ಆನಂತರ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ಬಯಸಿದ್ದರೆ ಅದಕ್ಕೆ ₹ 10 ಸಾವಿರದವರೆಗೆ ವೆಚ್ಚ ತಗುಲಲಿದೆ. ಸಂಸ್ಥೆಯ ಈ ಉತ್ಪನ್ನಗಳು 20 ವರ್ಷಗಳ ಬಾಳಿಕೆ ಬರಲಿವೆ ಎಂದು ಅವರು ಹೇಳುತ್ತಾರೆ.

ಪಾಲುದಾರಿಕೆ ಸಂಸ್ಥೆ

ಫಾರ್ಮ್‌ಲ್ಯಾಂಡ್‌ ರೇನ್‌ ವಾಟರ್‌ ಹಾರ್ವೆಸ್ಟಿಂಗ್‌ ಸಿಸ್ಟಮ್ಸ್‌, ಪಾಲುದಾರಿಕೆ ಸಂಸ್ಥೆಯಾಗಿದ್ದು 2002ರಲ್ಲಿ ಸ್ಥಾಪನೆಗೊಂಡಿದೆ. ಮಳೆ ನೀರು ಸಂಗ್ರಹ ಮತ್ತು ಅಂತರ್ಜಲ ಮರುಭರ್ತಿಗೆ ಸಂಬಂಧಿಸಿದಂತೆ ಸಂಸ್ಥೆಯು ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಫಿಲ್ಟರ್‌ ತಯಾರಿಕೆ, ಅಳವಡಿಕೆ ಕಾರ್ಯದಲ್ಲಿ ತೊಡಗಿಕೊಂಡಿದೆ.

ಅಂತರ್ಜಲ ಮಟ್ಟ ಹೆಚ್ಚಿಸಿ ಬತ್ತಿದ ಕೊಳವೆ ಬಾವಿಗಳಿಗೆ ವೈಜ್ಞಾನಿಕ ನೆಲೆಯಲ್ಲಿ ಮರು ಜೀವ ನೀಡುವ ಮತ್ತು ಚಾವಣಿ ಮಳೆ ನೀರು ಸಂಗ್ರಹಿಸುವ ಕೆಲಸದಲ್ಲಿ 15 ವರ್ಷಗಳಿಂದ ತೊಡಗಿಕೊಂಡಿದೆ. ಕೊಳವೆಬಾವಿಗಳ ಅಂತರ್ಜಲ ಮರುಭರ್ತಿಗೆ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ವಿ–ವೈರ್‌ ಇಂಜೆಕ್ಷನ್‌ ವೆಲ್‌ ಟೆಕ್ನಾಲಜಿ' ( V-Wire Injection Well Technology ) ಮತ್ತು ಚಾವಣಿ ಮೇಲೆ ಬೀಳುವ ಮಳೆ ನೀರು ಸಂಗ್ರಹ ಉದ್ದೇಶಕ್ಕೆ ಸಂಶೋಧಿಸಿರುವ ರೇನಿ ಫಿಲ್ಟರ್ (Rainy Filters) ತಂತ್ರಜ್ಞಾನ ಮತ್ತು ಉತ್ಪನ್ನಕ್ಕೆ ದೇಶ ವಿದೇಶಗಳಲ್ಲಿ ಮಾನ್ಯತೆ ಸಿಕ್ಕಿದೆ.

‘ವಿ –ವೈರ್‌’ ತಂತ್ರಜ್ಞಾನ
ಸಾಂಪ್ರದಾಯಿಕ ವಿಧಾನಕ್ಕಿಂತ ಭಿನ್ನವಾಗಿರುವ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಈ ತಂತ್ರಜ್ಞಾನವನ್ನು ಸ್ಥಳೀಯವಾಗಿ ಲಭ್ಯ ಇರುವ ಪ್ಲಂಬರ್‌ಗಳ ಮೂಲಕವೇ ಅಳವಡಿಸಬಹುದು. ಕೊಳವೆ ಬಾವಿ ಸುತ್ತ ನೀರು ಇಂಗುವಂತೆ ಮಾಡಿ ನೆಲದಾಳದ ನೈಸರ್ಗಿಕ ವಿಧಾನದಲ್ಲಿಯೇ ನೀರು ಸೋಸಿ ಹೋಗಲು ಅನುವು ಮಾಡಿಕೊಟ್ಟು ಅಂತರ್ಜಲ ಮಟ್ಟವು ಸಹಜವಾಗಿ ಹೆಚ್ಚಿಸುವ ಪ್ರಯತ್ನ ಇದಾಗಿದೆ.

ಈ ತಂತ್ರಜ್ಞಾನವು ರಾಜ್ಯದ ಬರಪೀಡಿತ ಪ್ರದೇಶದಲ್ಲಿ ಗಮನಾರ್ಹ ಯಶಸ್ಸು ಕಂಡಿದೆ. ಈ ವೈಜ್ಞಾನಿಕ ಮತ್ತು ದಕ್ಷ ವಿಧಾನವು ಅಂತರ್ಜಲವು ಯಾವುದೇ ಬಗೆಯಲ್ಲಿಯೂ ಕಲುಷಿತಗೊಳ್ಳದಂತೆ ತಡೆಯಲು ನೆರವಾಗುತ್ತಿದೆ. ಇದರಿಂದ ನೀರಿನ ಗುಣಮಟ್ಟ ಮತ್ತು ಪ್ರಮಾಣವೂ ವೃದ್ಧಿಯಾಗುತ್ತದೆ.

ಪ್ರಶಸ್ತಿಗಳು

ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಕೊಡಮಾಡಿದ ವಿನೂತನ ನೀರು ಉಳಿತಾಯ ಉತ್ಪನ್ನ ಪ್ರಶಸ್ತಿ, ಸ್ವಯಂಚಾಲಿತವಾಗಿ ಕಸ ಹೊರಹಾಕುವ ರೇನಿ ಫಿಲ್ಟರ್‌ಗೆ ಅರ್ಥ ಕೇರ್ ಪ್ರಶಸ್ತಿ, ಪರಿಸರ ಸ್ನೇಹಿ ಉತ್ಪನ್ನ ಮತ್ತು ಸದುದ್ದೇಶಕ್ಕಾಗಿ ಕೊಡಮಾಡುವ ಇಂಡಿಯನ್‌ ಗ್ರೀನ್‌ ಬಿ‌ಲ್ಡಿಂಗ್‌ ಕೌನ್ಸಿಲ್‌ನ (ಐಜಿಬಿಸಿ) ‘ಗ್ರೀನ್‌ ಚಾಂಪಿಯನ್ಸ್‌’ ರಾಷ್ಟ್ರೀಯ ಪ್ರಶಸ್ತಿಗಳು ಸಂಸ್ಥೆಯನ್ನು ಹುಡುಕಿಕೊಂಡು ಬಂದಿರುವುದು ಇದರ ಕಾರ್ಯದಕ್ಷತೆಗೆ ಸಂದ ಗೌರವವಾಗಿದೆ.

ಪಾಲುದಾರಿಕೆ ಸಂಸ್ಥೆ
ಫಾರ್ಮ್‌ಲ್ಯಾಂಡ್‌ ರೇನ್‌ ವಾಟರ್‌ ಹಾರ್ವೆಸ್ಟಿಂಗ್‌ ಸಿಸ್ಟಮ್ಸ್‌, ಪಾಲುದಾರಿಕೆ ಸಂಸ್ಥೆಯಾಗಿದ್ದು 2002ರಲ್ಲಿ ಸ್ಥಾಪನೆಗೊಂಡಿದೆ. ಮಳೆ ನೀರು ಸಂಗ್ರಹ ಮತ್ತು ಅಂತರ್ಜಲ ಮರುಭರ್ತಿಗೆ ಸಂಬಂಧಿಸಿದಂತೆ ಸಂಸ್ಥೆಯು ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಫಿಲ್ಟರ್‌ ತಯಾರಿಕೆ, ಅಳವಡಿಕೆ ಕಾರ್ಯದಲ್ಲಿ ತೊಡಗಿಕೊಂಡಿದೆ.

ಅಂತರ್ಜಲ ಮಟ್ಟ ಹೆಚ್ಚಿಸಿ ಬತ್ತಿದ ಕೊಳವೆ ಬಾವಿಗಳಿಗೆ ವೈಜ್ಞಾನಿಕ ನೆಲೆಯಲ್ಲಿ ಮರು ಜೀವ ನೀಡುವ ಮತ್ತು ಚಾವಣಿ ಮಳೆ ನೀರು ಸಂಗ್ರಹಿಸುವ ಕೆಲಸದಲ್ಲಿ 15 ವರ್ಷಗಳಿಂದ ತೊಡಗಿಕೊಂಡಿದೆ. ಕೊಳವೆಬಾವಿಗಳ ಅಂತರ್ಜಲ ಮರುಭರ್ತಿಗೆ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ವಿ–ವೈರ್‌ ಇಂಜೆಕ್ಷನ್‌ ವೆಲ್‌ ಟೆಕ್ನಾಲಜಿ' ( V-Wire Injection Well Technology ) ಮತ್ತು ಚಾವಣಿ ಮೇಲೆ ಬೀಳುವ ಮಳೆ ನೀರು ಸಂಗ್ರಹ ಉದ್ದೇಶಕ್ಕೆ ಸಂಶೋಧಿಸಿರುವ ರೇನಿ ಫಿಲ್ಟರ್ (Rainy Filters) ತಂತ್ರಜ್ಞಾನ ಮತ್ತು ಉತ್ಪನ್ನಕ್ಕೆ ದೇಶ ವಿದೇಶಗಳಲ್ಲಿ ಮಾನ್ಯತೆ ಸಿಕ್ಕಿದೆ. ಕೆಸರು, ಮರಳು, ಕಸಕಡ್ಡಿ ಮತ್ತು ಶುದ್ಧ ನೀರನ್ನು ಪ್ರತ್ಯೇಕಗೊಳಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯತೆಯಾಗಿದೆ. ಸಂಸ್ಥೆಯು ಈ ತಂತ್ರಜ್ಞಾನಕ್ಕೆ ಪೇಟೆಂಟ್‌ ಪಡೆದುಕೊಂಡಿದೆ. ಮಳೆ ತೀವ್ರತೆ ಹೆಚ್ಚಿದ್ದರೂ ‘ರೇನಿ ಫಿಲ್ಟರ್‌’ಗಳು ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸುವ ಬಗೆಯಲ್ಲಿ ಅವುಗಳ ವಿನ್ಯಾಸ ರೂಪಿಸಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT