ಅಖಾಡಕ್ಕಿಳಿದ ಯತೀಂದ್ರ, ವಿಜಯೇಂದ್ರ

7
ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಚಾರಕ್ಕೆ ಚಾಲನೆ; ಬಿಜೆಪಿಯಿಂದ ಇಂದು ಮತಯಾಚನೆ

ಅಖಾಡಕ್ಕಿಳಿದ ಯತೀಂದ್ರ, ವಿಜಯೇಂದ್ರ

Published:
Updated:

ಮೈಸೂರು: ವರುಣಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾದ ಕಾಂಗ್ರೆಸ್‌ನ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಬಿಜೆಪಿಯ ಬಿ.ವೈ.ವಿಜಯೇಂದ್ರ ಅವರು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.

ಡಾ.ಯತೀಂದ್ರ ಅವರು ವರುಣಾ ಕ್ಷೇತ್ರದಲ್ಲಿ ಸೋಮವಾರ ಪ್ರಚಾರಕ್ಕೆ ಚಾಲನೆ ನೀಡಿದರೆ, ವಿಜಯೇಂದ್ರ ಅವರು ಸ್ಥಳೀಯ ಮುಖಂಡರು, ನಾಯಕ ಸಮುದಾಯದವರ ಸಭೆ ನಡೆಸಿದರು.

ಡಾ.ಯತೀಂದ್ರ ಅವರು ನಂಜನಗೂಡು ತಾಲ್ಲೂಕು ತಗಡೂರು ಬ್ಲಾಕ್‌ನ ರಾಂಪುರ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು. ಮರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡರಹುಂಡಿ, ಅಹಲ್ಯ, ಕೆಂಬಾಲು, ಬಿದರಗೂಡು, ಹಳ್ಳಿಕೆರೆಹುಂಡಿ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಕೆಲವೆಡೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

‘ಬೇರೆ ಪಕ್ಷದ ಅಭ್ಯರ್ಥಿಗಳು ಯಾರಾದರೂ ನಿಲ್ಲಲಿ. ಅವರ ಬಗ್ಗೆ ಯೋಚನೆ ಮಾಡಿಲ್ಲ. ಜನರ ಆಶೀರ್ವಾದ ಕಾಂಗ್ರೆಸ್ ಪಕ್ಷದ ಮೇಲಿದೆ’ ಎಂದರು. ಮುಖಂಡರಾದ ಎಸ್‌.ಸಿ.ಬಸವರಾಜು, ಧರ್ಮೇಂದ್ರರಾಜು, ಗೋವಿಂದರಾಜು, ಗುರುಪಾದಸ್ವಾಮಿ ಇದ್ದರು.

ಮಂಗಳವಾರ ತಗಡೂರು ಬ್ಲಾಕ್‌, ಮರಳೂರು ಹಾಗೂ ತಾಂಡವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಳೂರು, ಗೊದ್ದನಪುರ, ಏಚಗಳ್ಳಿ, ಹಳ್ಳಿದಿಡ್ಡಿ, ತಾಂಡವಪುರ, ಬಚ್ಚಹಳ್ಳಿ ಛತ್ರ, ಅಡಕನಗುಂಡಿ, ಹೆಬ್ಯಾ ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಮುಖಂಡರೊಂದಿಗೆ ಸಭೆ: ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಪ್ರ‌ಧಾನ ಕಾರ್ಯದರ್ಶಿ ಅಪ್ಪಣ್ಣ ಅವರ ನಿವಾಸದಲ್ಲಿ ನಾಯಕ ಸಮುದಾಯದ ಪ್ರಮುಖರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಆದಿಚುಂಚನಗಿರಿ ಮಠದಲ್ಲಿ ಸೋಮೇಶ್ವರನಾಥ ಸ್ವಾಮೀಜಿ ಭೇಟಿ ಮಾಡಿದರು. ಮುಖಂಡರಾದ ಸಂದೇಶ್‌ ಸ್ವಾಮಿ, ಎಲ್‌.ನಾಗೇಂದ್ರ ಇದ್ದರು.

ಅವರು ಮಂಗಳವಾರ ಮತಯಾಚನೆಗೆ ಮುನ್ನುಡಿ ಬರೆಯಲಿದ್ದಾರೆ. ನಂಜನಗೂಡು ತಾಲ್ಲೂಕಿನ ಅರಳಿಕಟ್ಟೆಹುಂಡಿ ಗ್ರಾಮದಿಂದ ಪ್ರಚಾರ ಆರಂಭಿಸುವುದಾಗಿ ಹೇಳಿದ್ದಾರೆ.

‘ದಲಿತರ ಹಿತ ಕಾಯಲು ಬಿಜೆಪಿ ಬದ್ಧವಾಗಿದೆ. ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದೆ’ ಎಂದು ವಿಜಯೇಂದ್ರ ಹೇಳಿದರು.

ಬಿಜೆಪಿ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್‌.ರಘು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಸ್‌.ಸಿ.ಅಶೋಕ್‌, ಪುಟ್ಟಣ್ಣ, ಸಿದ್ದರಾಜು, ಚಿನ್ನಸ್ವಾಮಿ, ವಿಕ್ರಾಂತ್‌ ಗೋವಿಂದ, ಗೋಪಾಲಕೃಷ್ಣ, ನಗರ್ಲೆ ಸಿದ್ದಪ‍್ಪ, ನಾರಾಯಣಸ್ವಾಮಿ ಇದ್ದರು.

‘ಜನರೊಂದಿಗೆ ಬೆರೆಯಲು ಮನೆ ಬಾಡಿಗೆ’

‌ಮೈಸೂರು: ವರುಣಾ ಕ್ಷೇತ್ರದ ಜನರೊಂದಿಗೆ ಬೆರೆಯುವ ಉದ್ದೇಶದಿಂದ ಮನೆಯನ್ನು ಬಾಡಿಗೆಗೆ ಪಡೆದಿರುವುದಾಗಿ ಬಿ.ವೈ.ವಿಜಯೇಂದ್ರ ಹೇಳಿದರು.‘ಯಡಿಯೂರಪ್ಪ ಅಭಿಮಾನಿ ಈ ಮನೆಯನ್ನು ನನಗೆ ಬಾಡಿಗೆಗೆ ನೀಡಿದ್ದಾರೆ. ಶಾಶ್ವತವಾಗಿ ಕೊಡುವುದಾಗಿಯೂ ಹೇಳಿದ್ದಾರೆ. ಹಾಗಾದಲ್ಲಿ ಮುಂದಿನ ದಿನಗಳಲ್ಲಿ ಇಲ್ಲಿಯೇ ವಾಸ್ತವ್ಯ ಹೂಡುತ್ತೇನೆ. ಕ್ಷೇತ್ರದ ಜನರೊಂದಿಗೆ ಬೆರೆಯಲು ಸಹಾಯವಾಗುತ್ತದೆ. ಸುತ್ತಲಿನ ಪರಿಸರವೂ ಚೆನ್ನಾಗಿದೆ. ಶಿಕಾರಿಪುರ ನನಗೆ ಜನ್ಮ ನೀಡಿದ್ದರೂ ಇಲ್ಲಿನ ಜನರ ಪ್ರೀತಿಗೆ ಮನಸೋತಿದ್ದೇನೆ’ ಎಂದರು.ವರುಣಾ ಗ್ರಾಮದಲ್ಲಿ ಈ ನಿವಾಸವಿದೆ. ಇದು ಐದು ಕೊಠಡಿಗಳನ್ನು ಒಳಗೊಂಡಿದೆ.

‘ವಾತಾವರಣ ನೋಡಿ ತೀರ್ಮಾನ’

ಮೈಸೂರು: ‘ರಾಜಕೀಯ ವಾತಾವರಣ ನೋಡಿಕೊಂಡು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂಬ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ, ಕಾಂಗ್ರೆಸ್‌ ಮುಖಂಡ ಎಲ್‌.ರೇವಣ್ಣಸಿದ್ಧಯ್ಯ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆಗೆ ಸಿದ್ಧನಿದ್ದೇನೆ. ಕಾಂಗ್ರೆಸ್‌ನಲ್ಲಿ ಕೆಲಸ ಮಾಡಲು ಪ್ರೋತ್ಸಾಹ ಸಿಗುತ್ತಿಲ್ಲ. 2006 ಹಾಗೂ 2013ರಲ್ಲಿ ಸಿದ್ದರಾಮಯ್ಯ ಜೊತೆಗೂಡಿ ಉತ್ತಮ ಕೆಲಸ ಮಾಡಿದ್ದೆ. ಪ್ರಜ್ಞಾವಂತ ಮತದಾರರನ್ನ ಮನವೊಲಿಸಿ ಮತ ಹಾಕುವಂತೆ ಮಾಡಿದ್ದೆ’ ಎಂದರು.

**

ಪ್ರಚಾರದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜನರ ಕಷ್ಟಸುಖಗಳಿಗೆ ಸ್ಪಂದಿಸಿದ್ದೇನೆ  – ಡಾ.ಯತೀಂದ್ರ ಸಿದ್ದರಾಮಯ್ಯ,ಕಾಂಗ್ರೆಸ್‌ ಸಂಭವನೀಯ ಅಭ್ಯರ್ಥಿ.

**

ಹೆಚ್ಚು ಮಾತನಾಡದೆ ಕೆಲಸಗಳ ಮೂಲಕ ತಂತ್ರ ರೂಪಿಸುತ್ತೇನೆ. ಮಂಗಳವಾರ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸುತ್ತೇನೆ‌ – ಬಿ.ವೈ.ವಿಜಯೇಂದ್ರ, ಬಿಜೆಪಿ ಸಂಭವನೀಯ ಅಭ್ಯರ್ಥಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry