ಮಂಗಳವಾರ, ಆಗಸ್ಟ್ 4, 2020
26 °C
ಉರಿಯೂತ ಮತ್ತು ಮೈಕೈ ನೋವಿಗೆ ಬಳಲಿದ ಜನರು; ಕೊಡಿಗೇನಹಳ್ಳಿ ಸುತ್ತಮುತ್ತ ನರಕ ಯಾತನೆ

ಫ್ಲೋರೊಸಿಸ್‌ಗೆ ಹೆದರಿ ಊರು ಬಿಡುತ್ತಿರುವ ಜನ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ಲೋರೊಸಿಸ್‌ಗೆ ಹೆದರಿ ಊರು ಬಿಡುತ್ತಿರುವ ಜನ...

ಕೊಡಿಗೇನಹಳ್ಳಿ: ಮೊಣಕಾಲು ನೋವು ಮತ್ತು ಮೈ ಕೈ ನೋವು ಎಂಬ ಕಾಯಿಲೆ ಈ ಭಾಗದ ಹಲವು ಭಾಗಗಳಲ್ಲಿ ವಯೋವೃದ್ಧರನ್ನಲ್ಲದೆ ಯುವಕರನ್ನು ಕೂಡ ಬಿಡದೆ ಕಾಡುತ್ತಿದೆ.

ಯಾವುದೇ ಜೀವನದಿ ಮತ್ತು ಶಾಶ್ವತ ನೀರಾವರಿ ಯೋಜನೆಯ ಅನುಕೂಲವಿಲ್ಲದೆ ಮಧುಗಿರಿ ತಾಲ್ಲೂಕಿನಲ್ಲಿ ಸಕಾಲಕ್ಕೆ ಮಳೆ ಬಾರದೆ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದೆ.

ಪರಿಣಾಮ ಸಾವಿರ ಅಡಿಗಿಂತಲೂ ಆಳಕ್ಕೆ ಕೊರೆದ ಕೊಳವೆ ಬಾವಿಗಳಿಂದ ಬರುವ ನೀರನ್ನು ಕುಡಿಯುವುದರಿಂದಲೋ ಅಥವಾ ಹವಾಮಾನ ವೈಪರೀತ್ಯದಿಂದಲೋ ನಾನಾ ಕಾಯಿಲೆಗಳ ಜತೆಗೆ ಮೈಕೈ ಹಾಗೂ ಮೊಣಕಾಲು ನೋವು ಹೆಚ್ಚಾಗಿ ಕಾಣಿಸಿಕೊಂಡಿದೆ. ಕೆಲವರ ಕಾಲುಗಳು ಬೆಂಡಾಗಿ ಬಾಗುತ್ತಿವೆ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಸೂಕ್ತ ಪರಿಹಾರ ಹುಡಕಬೇಕಿದೆ ಎಂದು 68 ವರ್ಷದ ಮೈದನಹೊಸಹಳ್ಳಿ ಸಂಜೀವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚೆಗೆ ಮೊಣಕಾಲು ನೋವು ಕಾಣಿಸಿದ್ದು, ದಿನದಿಂದ ದಿನಕ್ಕೆ ನೋವು ಜಾಸ್ತಿಯಾಗಿ ರಾತ್ರಿ ವೇಳೆ ನಾನು ಅನುಭವಿಸುವ ಯಾತನೆ ಕಂಡು ನಮ್ಮ ತಂದೆ- ತಾಯಿಯವರ ಕಣ್ಣಲ್ಲಿ ಕೂಡ ನೀರು ಬರುತ್ತದೆ. ಇದರಿಂದ ನನಗೆ ಮತ್ತಷ್ಟು ಮಾನಸಿಕವಾಗಿ ನೋವು ಪಡುವ ಪರಿಸ್ಥಿತಿಯಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ 28 ವರ್ಷದ ಗೃಹಿಣಿ ನೋವು ತೋಡಿಕೊಂಡರು.

ನೋವು ನಿವಾರಣೆ ಹೇಗೆ?: ನೋವು ಉಲ್ಬಣಗೊಳ್ಳುವ ಯಾವುದೇ ಚಟುವಟಿಕೆ ಮಾಡಬಾರದು. ನೋವಿನ ಸಂದರ್ಭದಲ್ಲಿ ವಿಶ್ರಾಂತಿ ಪಡೆಯಬೇಕು. ಊತವನ್ನು ಕಡಿಮೆ ಮಾಡಲು ಮೊಣಕಾಲನ್ನು ಎಷ್ಟು ಸಾಧ್ಯವೋ ಅಷ್ಟು ಎತ್ತರದಲ್ಲಿಡಬೇಕು. ಮಲಗುವಾಗ ಮೊಣಕಾಲಿನ ಕೆಳಗೆ ಅಥವಾ ಮಧ್ಯದಲ್ಲಿ ದಿಂಬನ್ನ ಇರಿಸಬೇಕು. ದಪ್ಪಗಿರುವವರು ತೂಕ ಕಡಿಮೆ ಮಾಡಿಕೊಳ್ಳಬೇಕು. ಹೆಚ್ಚು ಕಾಲದವರೆಗೆ ನಿಂತುಕೊಳ್ಳಬಾರದು. ಸಾಧ್ಯವಾದ ಮಟ್ಟಿಗೆ ಮೆತ್ತನೆಯ ಮತ್ತು ಆರಾಮದಾಯಕ ಫ್ಲಾಟ್ ಚಪ್ಪಲಿಯನ್ನೇ ಧರಿಸಿದಾಗ ತಾತ್ಕಾಲಿಕವಾಗಿ ಸ್ವಲ್ಪ ನೋವು ಕಡಿಮೆ ಮಾಡಿಕೊಳ್ಳಬಹುದು ಎಂದು ಕೊಡಗೇನಹಳ್ಳಿ ಸಾರ್ವಜನಿಕ ಆಸ್ಪತ್ರೆ ವೈದ್ಯ ಶ್ರೀನಿವಾಸ್‌ ತಿಳಿಸಿದರು.

ಮುಕ್ತಿ ಸಿಕ್ಕಿಲ್ಲ

ಹತ್ತು ವರ್ಷಗಳಿಂದ ಮೊಣಕಾಲು ನೋವು. ಎರಡೂ ಕಾಲುಗಳು ಬೆಂಡಾಗಿವೆ. ಹೇಳಿದವರೆಲ್ಲರ ಮಾತು  ಕೇಳಿ ಹಲವು ಆಸ್ಪತ್ರೆ ಮತ್ತು ನಾಟಿ ಆಸ್ಪತ್ರೆಗಳಿಗೆ ತಿರುಗಿ ಔಷಧಿ ಪಡೆದರೂ ನೋವಿನಿಂದ ಮುಕ್ತಿ ಸಿಕ್ಕಿಲ್ಲ. ಪ್ರಾಣವೂ ಹೋಗದು ಅತ್ತ ಕಾಲುಗಳು ಸರಿಹೋಗದೆ ಮಾನಸಿಕವಾಗಿ ಕೊರಗುವಂತಾಗಿದೆ – ಎನ್.ವೆಂಕಟಪ್ಪ, ರೆಡ್ಡಿಹಳ್ಳಿ ಗ್ರಾಮಸ್ಥ

ಶುದ್ಧ ನೀರು ಘಟಕ ಆರಂಭ

ಮಂಡಿ ನೋವು ಮತ್ತು ಮೈ ಕೈ ನೋವು ಬರುವುದಕ್ಕೆ ಹಲವಾರು ಕಾರಣಗಳಿರಬಹುದು. ಅದರಲ್ಲಿ ಫ್ಲೋರೈಡ್ ನೂರೆಂಟು ಕಾರಣಗಳಲ್ಲಿ ಒಂದು. ನಾವೂ ಪ್ರತಿ ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅಲ್ಲಿನ ಜನರ ಮೂತ್ರ ಪರೀಕ್ಷಿಸಿ ಫ್ಲೋರೈಡ್ ನೆಗೆಟೀವ್ ಬಂದ ಕಡೆಯೆಲ್ಲ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಶಾಸಕರ ಗಮನಕ್ಕೆ ತಂದು ಅವರಿಂದ ಪ್ರಾರಂಭಿಸಿದ್ದೇವೆ – ರಮೇಶ್, ತಾಲ್ಲೂಕು ಆರೋಗ್ಯಾಧಿಕಾರಿ, ಮಧುಗಿರಿ.

ಹಳಬರಲ್ಲಿ ಹೆಚ್ಚಿದ ಸಮಸ್ಯೆ

ಹಿಂದೆ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದರಿಂದ ಈ ಸಮಸ್ಯೆ ಹಳಬರಲ್ಲಿ ಹೆಚ್ಚಿದೆ. ಈಗ ಪ್ರತಿಯೊಂದು ಕಡೆ ಶುದ್ಧ ನೀರಿನ ಘಟಕ ಪ್ರಾರಂಭಿಸಿ ಕುಡಿಯುತ್ತಿರುವುದರಿಂದ ಈಗಿನ ಪೀಳಿಗೆಗೆ ಅನುಕೂಲವಾಗಬಹುದೆಂಬ ಆಶಾಭಾವನೆ ನನ್ನದು. ಇನ್ನೆರಡು ತಿಂಗಳಲ್ಲಿ ಈ ಕಾಯಿಲೆಗೆ ಸಂಬಂಧಪಟ್ಟ ನುರಿತ ವೈದ್ಯರನ್ನು ಕರೆಸಿ ದೊಡ್ಡ ಕಾರ್ಯಕ್ರಮ ಮಾಡಬೇಕು ಎಂದು ನಿರ್ಧರಿಸಿರುವೆ – ಮಂಜುಳಾ ಆದಿನಾರಾಯಣರೆಡ್ಡಿ, ಕೊಡಿಗೇನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯೆ.

**

ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಿದ್ದರಿಂದ ಕೀಲು ನೋವು ಆರಂಭವಾಯಿತು. ಎಲ್ಲ ರೀತಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಊರು ಬಿಟ್ಟು ಈಗ ತುಮಕೂರಿನಲ್ಲಿ ನೆಲೆಸಿದ್ದೇವೆ – ಪಾಲಮ್ಮ, ಗೃಹಿಣಿ, ಗುಟ್ಟೆ.

**

ಚಳಿಗಾಲದಲ್ಲಿ ಪ್ರಾಣ ಹೋಗುವಷ್ಟು ನೋವು. ಚಿಕಿತ್ಸೆಗಾಗಿ ತುಮಕೂರಿಗೆ ಬಂದು ಇಲ್ಲೇ ವಾಸಿಸುತ್ತಿದ್ದೇವೆ – ಶಬೀನಾ,ಗೃಹಿಣಿ, ಕೊಡಿಗೇನಹಳ್ಳಿ.

**

–ಗಂಗಾಧರ್ ವಿ.ರೆಡ್ಡಿಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.