ಶನಿವಾರ, ಡಿಸೆಂಬರ್ 14, 2019
20 °C
ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್– ಬಿಜೆಪಿ ಜಿದ್ದಾಜಿದ್ದಿ ಇತಿಹಾಸ

ಇನ್ನೊಂದು ಸ್ಪರ್ಧೆಗೆ ಸಜ್ಜಾದ ಎರಡೂ ಪಕ್ಷದ ನಾಯಕರು

ಎಂ. ನವೀನ್ ಕುಮಾರ್‌ Updated:

ಅಕ್ಷರ ಗಾತ್ರ : | |

ಇನ್ನೊಂದು ಸ್ಪರ್ಧೆಗೆ ಸಜ್ಜಾದ ಎರಡೂ ಪಕ್ಷದ ನಾಯಕರು

ಉಡುಪಿ: ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಭಾರಿ ಪೈಪೋಟಿ ಇರುವ ಜಿಲ್ಲೆಯ ಇನ್ನೊಂದು ಕ್ಷೇತ್ರ ಬೈಂದೂರು. ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಹಾಗೂ ನಯನ ಮನೋಹರ ಎನಿಸುವ ಸೋಮೇಶ್ವರ, ಮರವಂತೆ ಕಡಲ ಕಿನಾರೆಯನ್ನು ಇದು ಒಳಗೊಂಡಿದೆ. ಉಡುಪಿ ಜಿಲ್ಲೆಯಲ್ಲಿದ್ದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇದು ಒಳಪಡುವುದು ವಿಶೇಷ.

ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿಯಿಂದ ಬಿ.ಎಂ.ಸುಕುಮಾರ ಶೆಟ್ಟಿ ಅವರು ಸ್ಪರ್ಧೆ ಗಿಳಿಯುವ ಸಾಧ್ಯತೆ ಇದೆ. ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸಹ ಕಣಕ್ಕಿಳಿಯಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಯಾರೇ ಅಭ್ಯರ್ಥಿಯಾದರೂ ಅದು ಎರಡು ಪಕ್ಷಗಳ ನಡುವೆ ದೊಡ್ಡ ಮಟ್ಟದಲ್ಲಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

ಜಿಲ್ಲೆಯ ಹಿರಿಯ ನಾಯಕರಾದ ಮಂಜಯ್ಯ ಶೆಟ್ಟಿ, ಎ.ಜಿ.ಕೊಡ್ಗಿ, ಜಿ.ಎಸ್.ಆಚಾರ್ ಹಾಗೂ ಹಾಲಿ ಶಾಸಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಅವರನ್ನು ಕನಿಷ್ಠ ಎರಡೆರಡು ಬಾರಿ ಚುನಾವಣೆಯಲ್ಲಿ ಈ ಕ್ಷೇತ್ರದ ಜನರು ಆಯ್ಕೆ ಮಾಡಿದ್ದಾರೆ. ಒಂದು ಉಪ ಚುನಾವಣೆಯೂ ಸೇರಿ ಐದು ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿರುವ ಪೂಜಾರಿ ಅವರು ಒಂದು ಬಾರಿ ಸೋತಿದ್ದಾರೆ.

ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಕರ್ನಾಟಕ, ಕೇರಳ ಹಾಗೂ ಹೊರ ರಾಜ್ಯಗಳ ಸಾವಿರಾರು ಭಕ್ತರು ಪ್ರತಿ ದಿನ ಇಲ್ಲಿಗೆ ಭೇಟಿ ನೀಡುತ್ತಾರೆ. ಜಿಲ್ಲೆಯ ಸುಂದರ ಕಡಲ ಕಿನಾರೆಗಳಲ್ಲೇ ವಿಶಿಷ್ಟ ಎನಿಸುವ, ಕಡಿಮೆ ಆಳದ ಮರವಂತೆ ಬೀಚ್‌ ಪ್ರಮುಖ ಪ್ರವಾಸಿ ತಾಣವಾಗಿದೆ.

ಕೃಷಿ, ತೋಟಗಾರಿಕೆ, ಮೀನುಗಾರಿಕೆ ಈ ಕ್ಷೇತ್ರದ ಜನರ ಪ್ರಮುಖ ಕಸುಬಾಗಿದೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ನಾಡದೋಣಿ ಮೀನುಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮತ್ಸ್ಯ ಕ್ಷಾಮ ಹಾಗೂ ಸೀಮೆಎಣ್ಣೆ ಸಮಸ್ಯೆಯನ್ನು ಇಲ್ಲಿನ ಮೀನುಗಾರರು ಎದುರಿಸು

ತ್ತಿದ್ದಾರೆ. ಅದಕ್ಕಾಗಿ ಹಲವಾರು ಬಾರಿ ಹೋರಾಟ ಮಾಡಿದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಕಾಡುಪ್ರಾಣಿಗಳ ಹಾವಳಿ ಕೃಷಿಗೆ ಎರವಾಗಿದೆ.

ಅಭಿವೃದ್ಧಿ ವಿಷಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಮಧ್ಯೆ ವಾಗ್ವಾದಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ಅನುದಾನದಿಂದ ಹೆಚ್ಚಿನ ಅಭಿವೃದ್ಧಿಯಾಗಿದೆ ಎಂಬುದು ಸುಕುಮಾರ ಶೆಟ್ಟಿ ಅವರ ವಾದ. ರಾಜ್ಯ ಸರ್ಕಾರವೂ ಸಾವಿರಾರು ಕೋಟಿ ಅನುದಾನ ನೀಡಿದೆ, ಅಲ್ಲದೆ ಕ್ಷೇತ್ರದ ಎಲ್ಲ ಅಭಿವೃದ್ಧಿ ಕಾರ್ಯಗಳ ಶ್ರೇಯಸ್ಸು ತನಗೇ ಸಿಗಬೇಕು ಎಂಬುದು ಗೋಪಾಲ ಪೂಜಾರಿ ಅವರ ಮಾತು. ಒಟ್ಟಾರೆ ಬೈಂದೂರು ಕ್ಷೇತ್ರದಲ್ಲಿ ದೊಡ್ಡ ಮಟ್ಟಿನ ಚುನಾವಣಾ ಕದನದ ನಿರೀಕ್ಷೆ ಇದೆ.

 

ಪ್ರತಿಕ್ರಿಯಿಸಿ (+)