ಮಂಗಳವಾರ, ಡಿಸೆಂಬರ್ 10, 2019
26 °C
ತಿಕೋಟಾ ಸುತ್ತಮುತ್ತ ಸುರಿದ ಅಕಾಲಿಕ ಮಳೆ; ದ್ರಾಕ್ಷಿ ಕಣಜದ ರೈತರ ಕನಸು ನುಚ್ಚು ನೂರು

ಆಲಿಕಲ್ಲಿನ ಅಬ್ಬರ; ದ್ರಾಕ್ಷಿ ಬೆಳೆಗಾರ ತತ್ತರ..!

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಆಲಿಕಲ್ಲಿನ ಅಬ್ಬರ; ದ್ರಾಕ್ಷಿ ಬೆಳೆಗಾರ ತತ್ತರ..!

ವಿಜಯಪುರ: ‘ಮೂರು ದಶಕದಿಂದ ದ್ರಾಕ್ಷಿ ಬೆಳೆಯುತ್ತಿರುವೆ. ಪ್ರತಿ ವರ್ಷ ಏನಾದ್ರೂ ಒಂದು ಇದ್ದಿದ್ದೇ. ಆದ್ರೇ ಈ ಬಾರಿ ಲುಕ್ಸಾನ್‌ ಆದಸ್ಟ್‌ ಯಾವ ವರ್ಸಾನೂ ಆಗಿರಲಿಲ್ಲ...’

‘ಶನಿವಾರ ಸಂಜೆ ಸುರಿದ ಆಲಿಕಲ್ಲು ಮಳೆಯ ಒಡೆತಕ್ಕೆ ದ್ರಾಕ್ಷಿ ಬೆಳೆ ಹಾನಿಗೀಡಾಗಿದೆ. ಗೊಂಚಲಲ್ಲೇ ದ್ರಾಕ್ಷಿ ಒಡೆದಿದ್ದು, ಪಡದೊಳಗೆ (ತೋಟ) ಕಾಲಿಡಲು ಆಗದಂತ ದುರ್ವಾಸನೆ ಹಬ್ಬಿದೆ. ಕಣ್ಣೆದುರೇ ಮೈದುಂಬಿದ್ದ ಗೊಂಚಲು ನೆಲಕ್ಕುರುಳಿರುವುದನ್ನು ನೋಡಲಾಗುತ್ತಿಲ್ಲ...’

ದ್ರಾಕ್ಷಿ ಕಣಜ ಎಂದೇ ಮನೆಮಾತಾಗಿರುವ ತಿಕೋಟಾ ಭಾಗದ ಬೆಳೆಗಾರರಾದ ರಾಜು ಮೇತ್ರಿ, ಮಹೇಶ ಮಿಸಾಳ ಆಲಿಕಲ್ಲು ಮಳೆಯಿಂದ ತಮ್ಮ ಪಡಗಳಲ್ಲಿನ ದ್ರಾಕ್ಷಿ ಹಾಳಾಗಿರುವುದಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಸೋಮವಾರ ಪ್ರತಿಕ್ರಿಯಿಸಿದ ಪರಿಯಿದು.

‘ಹತ್ತು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದೆ. ಈಚೆಗಷ್ಟೇ 30 ಟನ್‌ ಹಸಿ ದ್ರಾಕ್ಷಿಯನ್ನು ಒಂದು ಕೆ.ಜಿ.ಗೆ ₹ 39ರಂತೆ ಪಡದಲ್ಲೇ ಮಾರಾಟ ಮಾಡಿದ್ದೆ. ಔಷಧಿ, ಗೊಬ್ಬರ, ಕಾರ್ಮಿಕರ ಕೂಲಿ ಸೇರಿದಂತೆ ಆರಂಭದಿಂದ ಕನಿಷ್ಠ ₹ 15 ಲಕ್ಷ ಖರ್ಚಾಗಿತ್ತು. ₹ 11 ಲಕ್ಷ ಕೈಗೆ ಮರಳಿತ್ತು.

ಒಂದೆರೆಡು ವಾರ ಕಳೆದಿದ್ದರೆ ಪಡದಲ್ಲಿನ 70 ಟನ್‌ಗೂ ಹೆಚ್ಚಿನ ಹಸಿ ದ್ರಾಕ್ಷಿ ಸಂಪೂರ್ಣ ಮಾರಾಟವಾಗುತ್ತಿತ್ತು. ಕನಿಷ್ಠ ₹ 25ರಿಂದ 30 ಲಕ್ಷ ಆದಾಯ ಕೈಗೆ ಸೇರುತ್ತಿತ್ತು. ಆದ್ರೇ ಒಂದೇ ಒಂದು ತಾಸಿನ ಮಳೆ ನಮ್ಮ ಆರು ತಿಂಗಳ ಪರಿಶ್ರಮವನ್ನು ಒಮ್ಮೆಲೇ ನುಚ್ಚು ನೂರಾಗಿಸಿತು’ ಎಂದು ಮಹೇಶ ಮಿಸಾಳೆ ಗದ್ಗದಿತರಾದರು.

‘ಒಂದೊಂದು ದ್ರಾಕ್ಷಿ ಗೊಂಚಲಿನಲ್ಲಿ ಕನಿಷ್ಠ 200 ಹಣ್ಣುಗಳಿದ್ದವು. ಆಲಿಕಲ್ಲಿನ ಒಡೆತಕ್ಕೆ ಸರಾಸರಿ 150 ಹಣ್ಣು ಒಡೆದಿವೆ. ಉಳಿದ ಹಣ್ಣುಗಳನ್ನು ಕೊಳ್ಳಲು ವ್ಯಾಪಾರಿಗಳು ಬರಲ್ಲ. ಏನು ಮಾಡಬೇಕು ಎಂಬುದೇ ತೋಚದಾಗಿದೆ. ಗೊಂಚಲಲ್ಲಿ ಉಳಿದ 50ರಿಂದ 60 ಹಣ್ಣುಗಳನ್ನು ಪ್ರತ್ಯೇಕಿಸಿ ಮಣೂಕ (ಒಣ ದ್ರಾಕ್ಷಿ) ಉತ್ಪನ್ನ ಮಾಡಬೇಕು ಎಂದು ನಿರ್ಧರಿಸಿರುವೆ. ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಈಗಲೇ ಹೇಳಲಾಗಲ್ಲ’ ಎಂದು ಮಿಸಾಳೆ ಹೇಳಿದರು.

‘12 ಎಕರೆಯಲ್ಲಿ ದ್ರಾಕ್ಷಿ ಬೆಳೆಯಿದೆ. ಎಕರೆಗೆ ₹ 1.5 ಲಕ್ಷ ಖರ್ಚು ಮಾಡಿರುವೆ. ಚಾಟ್ನಿ ಮಾಡಿದ ಆರಂಭದಲ್ಲೇ ಒಂದೆರೆಡೆಕರೆ ಬೆಳೆ ದವಣಿ ರೋಗಕ್ಕೆ ತುತ್ತಾಯಿತು. ಐದು ಎಕರೆಯಲ್ಲಿನ ಬೆಳೆ ಕಟಾವಿಗೆ ಬಂದಿತ್ತು. ಮುಂಜಾನೆಯಷ್ಟೇ 40 ಟನ್‌ ಹಣ್ಣನ್ನು ಒಂದು ಕೆ.ಜಿ.ಗೆ ₹ 40ರಂತೆ ಮಾರಾಟ ಮಾಡಿದ್ದೆ. ₹ 14ರಿಂದ 15 ಲಕ್ಷ ಸಿಕ್ಕಿತ್ತು.

ಪಡದಲ್ಲಿ ಕನಿಷ್ಠ 50 ಟನ್‌ ಹಣ್ಣು ಉಳಿದಿತ್ತು. ಈ ವರ್ಸವಾದರೂ ನೆಮ್ಮದಿಯಿಂದ ಹಸಿ ದ್ರಾಕ್ಷಿಯನ್ನೇ ಮಾರಿ ಕಾಸು ಗಳಿಸಬಹುದು ಎಂಬ ಆಸೆ ಚಿಗುರಿತ್ತು. ಒಂದು ತಾಸಿನ ಮಳೆ ಇಡೀ ಪಡವನ್ನೇ ನಾಶ ಮಾಡಿದೆ. ಮುಂದೇನು ಎಂಬುದೇ ತೋಚದಂತಾಗಿದೆ’ ಎಂದು ತಿಕೋಟಾದ ರಾಜು ಮೇತ್ರಿ ಅಸಹಾಯಕತೆ ವ್ಯಕ್ತಪಡಿಸಿದರು.

ಹಾನಿಯ ಸರ್ವೇ

‘ತಿಕೋಟಾ, ತಾಜಪುರ, ರತ್ನಾಪುರ, ಹಂಚನಾಳ ಭಾಗದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಭಾನುವಾರದಿಂದಲೇ ಅಧಿಕಾರಿಗಳ ತಂಡ ಜಂಟಿ ಸರ್ವೇ ನಡೆಸಿದೆ. ಇಲ್ಲಿವರೆಗೂ ಕನಿಷ್ಠ 26 ಹೆಕ್ಟೇರ್‌ ದ್ರಾಕ್ಷಿ ಹಾನಿಯಾದ ವರದಿ ಬಂದಿದೆ. 26ಕ್ಕೂ ಹೆಚ್ಚು ರೈತರು ನಷ್ಟಕ್ಕೀಡಾಗಿದ್ದಾರೆ. ಒಂದೆರೆಡು ದಿನದಲ್ಲಿ ಸಂಪೂರ್ಣ ವರದಿ ಸಿಗಲಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

**

ಪಡದಲ್ಲಿದ್ದ ಬೆಳೆ ಸಂಪೂರ್ಣ ಹಾನಿಗೀಡಾದರೆ, ಮಣೂಕ (ಒಣ ದ್ರಾಕ್ಷಿ) ತಯಾರಿಕೆ ಉತ್ಪನ್ನಕ್ಕೂ ಮಳೆಯ ನೀರು ತಗುಲಿದ್ದು, ಗುಣಮಟ್ಟ ಕಳೆದುಕೊಳ್ಳಲಿದೆ – ಸಂಗಮೇಶ ಬಾಗಲಕೋಟ, ಸೋಮದೇವರಹಟ್ಟಿ.

**

ಪ್ರತಿಕ್ರಿಯಿಸಿ (+)