ಬಿಎಸ್‌ವೈ ಮೇಲುಗೈ; ಯತ್ನಾಳ ಬೆಂಬಲಿಗರು ಅಖಾಡಕ್ಕೆ!

7
ನಾಲ್ಕು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ; ಎರಡು ಕ್ಷೇತ್ರಗಳಲ್ಲಿ ಅಸಮಾಧಾನ ಆಸ್ಫೋಟ

ಬಿಎಸ್‌ವೈ ಮೇಲುಗೈ; ಯತ್ನಾಳ ಬೆಂಬಲಿಗರು ಅಖಾಡಕ್ಕೆ!

Published:
Updated:

ವಿಜಯಪುರ: ವಿಜಯಪುರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಹುರಿಯಾಳುಗಳ ಹೆಸರನ್ನು ಕಮಲ ಪಾಳೆಯ ಭಾನುವಾರ ತಡರಾತ್ರಿ ಪ್ರಕಟಿಸಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಉಚ್ಚಾಟಿತ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ಕ್ರಮವಾಗಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ, ಮುದ್ದೇಬಿಹಾಳದಿಂದ ಸ್ಪರ್ಧೆಗೆ ಕಮಲ ಪಡೆ ಅವಕಾಶ ಮಾಡಿಕೊಟ್ಟಿದೆ.

ಇದರ ಬೆನ್ನಿಗೆ ಎರಡೂ ಕ್ಷೇತ್ರಗಳಲ್ಲಿ ಅಸಮಾಧಾನ ಆಸ್ಫೋಟಗೊಂಡಿದೆ. ಮುದ್ದೇಬಿಹಾಳ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಪರವಾಗಿ ಮಂಗಳಾದೇವಿ ಬಿರಾದಾರ ಖಾರವಾಗಿ ಪ್ರತಿಕ್ರಿಯಿಸಿದ್ದರೆ, ಮಾಜಿ ಸಚಿವ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿರುದ್ಧ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಅತೀವ ಯತ್ನ ನಡೆಸಿದ್ದ ಬಿಎಸ್‌ವೈ, ಅಂತಿಮವಾಗಿ ದಶಕದಿಂದ ಪಾಟೀಲಗೆ ಸಂಪ್ರದಾಯಬದ್ಧ ವೈರಿಯಾಗಿ ಚುನಾವಣಾ ಅಖಾಡದಲ್ಲಿ ಸೆಣಸುತ್ತಿರುವ ವಿಜುಗೌಡ ಪಾಟೀಲರನ್ನು ಹುರಿಯಾಳಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಪಕ್ಷದ ಹಾಲಿ ಶಾಸಕ ರಮೇಶ ಭೂಸನೂರ ಅವರಿಗೆ ಟಿಕೆಟ್‌ ಅಂತಿಮಗೊಂಡಿದೆ.

ಬಿಎಸ್‌ವೈ ನಿಷ್ಠರಿಗೆ ಮಣೆ

‘ವಿಜಯಪುರ ನಗರ, ಮುದ್ದೇಬಿಹಾಳ, ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ತಮ್ಮ ನಿಷ್ಠ ಪಡೆಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ನಾಲ್ಕು ಕ್ಷೇತ್ರಗಳಲ್ಲೂ ಇದಕ್ಕಿಂತ ಬೇರೆ ಫಲಿತಾಂಶ ಬರಲು ಸಾಧ್ಯವಿಲ್ಲ ಎಂಬುದು ಬಹುತೇಕರಿಗೆ ಮನದಟ್ಟಾಗಿದೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗಲೇ ಕೆಲ ಕಾಲ ಮೂಲೆಗುಂಪಾಗಿದ್ದರು. ಆ ಸಂದರ್ಭ ತಮಗೆ ನಿಷ್ಠರಾಗಿದ್ದವರಿಗೆ ಮಾತ್ರ ಇದೀಗ ಮಣೆ ಹಾಕಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿದ್ದವರನ್ನು ಗೆಲುವಿನ ಹೆಸರಿನಲ್ಲಿ, ತ್ಯಾಗದ ಹೆಸರಿನಲ್ಲಿ ಸಂಪೂರ್ಣ ಕಡೆಗಣಿಸಿದ್ದಾರೆ. ಉದ್ದೇಶಪೂರ್ವಕವಾಗಿ ದೂರವಿಟ್ಟಿದ್ದಾರೆ.

ಇದಕ್ಕೆ ಏಕೈಕ ಕಾರಣ, ಈ ಬಾರಿಯೂ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದರೇ, ಹಿಂದಿನ ಘಟನಾವಳಿಗಳು ಪುನರಾವರ್ತನೆಯಾಗಬಾರದು. ಪಕ್ಷದ ಹಿಡಿತ ನನ್ನ ಕೈನಲ್ಲೇ ಇರಲಿ ಎಂಬ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ’ ಎಂದು ವಿವಿಧ ಕ್ಷೇತ್ರಗಳಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಪಕ್ಷ ನಿಷ್ಠರು, ಹಿರಿಯರು ‘ಪ್ರಜಾವಾಣಿ’ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಯೋಗಾಲಯದ ಬಲಿ ಪಶು

‘ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಯಾರೊಬ್ಬರಿಗೂ ಬಿಜೆಪಿ ಸಂಘಟನೆಯ ಸ್ವರೂಪದ ಮಾಹಿತಿಯೇ ಗೊತ್ತಿಲ್ಲ. ಅವರ್‌್ಯಾರು ಎಂದೆಂದೂ ಸಂಘಟಕರಿಗೆ ಗೌರವ ನೀಡಲ್ಲ. ಪಕ್ಷದ ಪದಾಧಿಕಾರಿಗಳ ಸಲಹೆ ಪಡೆಯಲ್ಲ. ತಮ್ಮ ಹಿಂಬಾಲಕ ಪಡೆ ಮೂಲಕವೇ ಪಕ್ಷದ ಕಚೇರಿಗೂ ಭೇಟಿ ನೀಡದೆ, ತಮ್ಮ ವೈಯಕ್ತಿಕ ಕಚೇರಿ ತೆರೆದುಕೊಂಡು ಕಾರ್ಯಾಚರಿಸಲಿದ್ದಾರೆ.

ನಾವುಗಳು ಮಾತ್ರ ಪ್ರಯೋಗಾಲಯದಲ್ಲಿ ಮೊದಲ ಪರೀಕ್ಷೆಗೆ ಬಲಿಯಾಗುವ ಪ್ರಾಣಿಗಳಿದ್ದಂತೆ. ಈ ಐದು ವರ್ಷ ನಮ್ಮ ಹಿರಿಯರು ಇದೇ ಕೆಲಸ ಮಾಡಿದರು. ಬಾಯಿ ಬಿಟ್ಟರೆ ಸಂಘಟನೆ, ದೇಶ ಭಕ್ತಿ, ದೇಶ ಸೇವೆ ಎಂದು ಹೇಳಿದರು. ಇದುವರೆಗೂ ನಾವು ಮಾಡಿದ ಸೇವೆ ಯಾರದ್ದು? ಎಂಬುದೇ ಅರಿವಾಗದಾಗಿದೆ’ ಎಂದು ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ಬಂದು ಮಂಡಲವೊಂದರಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಪ್ರಮುಖರೊಬ್ಬರು ತಮ್ಮ ಮನದಾಳದ ನೋವು ಹಂಚಿಕೊಂಡರು.

ಎಚ್ಚರಿಕೆಯಿಂದಿರಿ... ಮನವರಿಕೆ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಬಸನಗೌಡ ಪಾಟೀಲ ಯತ್ನಾಳಗೆ ಘೋಷಣೆಯಾಗುತ್ತಿದ್ದಂತೆ, ಸೋಮವಾರ ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಗೌಡರ ಬೆಂಬಲಿಗ ಪಡೆ ಸಮಾಲೋಚನಾ ಸಭೆ ನಡೆಸಿತು.

‘ಮತದಾರರ ಪಟ್ಟಿ ಪರಿಶೀಲಿಸಿ. ಹೆಸರಿಲ್ಲದವರನ್ನು ಸೇರ್ಪಡೆಗೊಳಿಸಿ. ಹಿಂದಿನ ಬಾರಿಯ ತಪ್ಪು ಮರುಕಳಿಸಲೇಬಾರದು. ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಯಾವುದಕ್ಕೂ ಪ್ರತಿಕ್ರಿಯಿಸಬೇಡಿ.

ಅನಗತ್ಯ ವಿವಾದ ಈ ಹೊತ್ತಲ್ಲಿ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣ ತೊರೆದು ನೆಲೆಗಟ್ಟಿನ ಕಾರ್ಯಾಚರಣೆಗೆ ಇಳಿಯಿರಿ. ಅಳಿವು–ಉಳಿವಿನ ಪ್ರಶ್ನೆ. ನಾವೇ ಅಭ್ಯರ್ಥಿ ಎಂಬಂತೆ ಎಲ್ಲರೂ ಸಂಘಟನೆಗೆ ಮುಂದಾಗಿ. ಮತದಾನದ ದಿನ ಮತದಾರರನ್ನು ಮತಗಟ್ಟೆಗೆ ಕರೆತರಲು ಈಗಿನಿಂದಲೇ ಸಿದ್ಧರಾಗಿ’ ಎಂದು ಸಭೆಯಲ್ಲಿ ನೆರೆದಿದ್ದ ಜನಸ್ತೋಮಕ್ಕೆ ರಾಘವ ಅಣ್ಣಿಗೇರಿ ಸಲಹೆ, ಸೂಚನೆ ನೀಡುವ ಜತೆ ಮನವಿ ಮಾಡಿದರು ಎಂಬುದು ತಿಳಿದು ಬಂದಿದೆ.

ಮಹಾನಗರ ಪಾಲಿಕೆ ಮೇಯರ್‌ ಸಂಗೀತಾ ಪೋಳ, ಮಾಜಿ ಉಪ ಮೇಯರ್, ಹಾಲಿ ಸದಸ್ಯೆ ಲಕ್ಷ್ಮೀ ಕನ್ನೊಳ್ಳಿ ಪತಿ ಬಾಗಪ್ಪ ಕನ್ನೊಳ್ಳಿ, ಪಾಲಿಕೆ ಸದಸ್ಯ ಪರಶುರಾಮ ರಜಪೂತ ಸೇರಿದಂತೆ ಇನ್ನಿತರೆ ಪ್ರಮುಖರು ಸಭೆಯ ನೇತೃತ್ವ ವಹಿಸಿದ್ದರು ಎನ್ನಲಾಗಿದೆ.

**

ಯಡಿಯೂರಪ್ಪ ನಂಗೆ ಮೋಸ ಮಾಡಿದ್ದಾರೆ. ನೌಕರಿ, ಸಂಪತ್ತು ಕಳೆದುಕೊಂಡು ಮುದ್ದೇಬಿಹಾಳದಲ್ಲಿ ಬಿಜೆಪಿ ಸಂಘಟಿಸಿದ್ದೆ. ಯಾವ ಕಾರಣಕ್ಕೂ ಕ್ಷಮಿಸಲ್ಲ – ಮಂಗಳಾದೇವಿ ಬಿರಾದಾರ, ಬಿಜೆಪಿ ಮುಖಂಡೆ

**

ಅಸಮಾಧಾನಿತರ ಸಭೆ ಬೆಂಗಳೂರಿನಲ್ಲೇ ನಡೆದಿತ್ತು. ಉಳಿದ ನಾಲ್ಕು ಕ್ಷೇತ್ರಗಳ ಟಿಕೆಟ್‌ ಘೋಷಣೆಯಾದ ಬಳಿಕ ಎಲ್ಲರೂ ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ – ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry