ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪಷ್ಟ ಬಹುಮತ ಪಡೆದು ಜೆಡಿಎಸ್ ಅಧಿಕಾರಕ್ಕೆ’

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ
Last Updated 10 ಏಪ್ರಿಲ್ 2018, 12:35 IST
ಅಕ್ಷರ ಗಾತ್ರ

ಗುರುಮಠಕಲ್: ‘ನಾನು ರಾಜ್ಯದಾದ್ಯಂತ ಪ್ರವಾಸ ಮಾಡಿದ್ದು, ಪ್ರವಾಸದ ಸಮಯದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಕಾರ್ಯಕರ್ತರು ಸ್ವಇಚ್ಛೆಯಿಂದ ಹಗಲಿರುಳೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಈ ಬಾರಿ ರಾಜ್ಯದ 204 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ’ ಎಂದು ಹೇಳಿದರು.

‘ನಾಲ್ಕು ವರ್ಷಗಳಿಂದ ಕಾಮಗಾರಿಗಳಿಗೆ ಬಿಡುಗಡೆಯಾಗದ ಹಣ ಕಳೆದ 2-3 ತಿಂಗಳಲ್ಲಿ ಆಗುತ್ತಿದೆ. ಈ ಬಾರಿ ಕಾಮಗಾರಿಗಳಿಗೆ ₹30 ಸಾವಿರ ಕೋಟಿ ಹಣ ಬಿಡುಗಡೆಯಾಗಿದೆ. ಯಾಕೆ ಎಲ್ಲವೂ ತರಾತುರಿಯಲ್ಲಿ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ಹೊಸ ನೀರಾವರಿ ಯೋಜನೆಗಳು ರೂಪಿಸಬಹುದಾದಷ್ಟು ಹಣದಲ್ಲಿ ಅವುಗಳ ಪ್ಲಾಸ್ಟರಿಂಗ್ ಕೆಲಸಕ್ಕೆ ಖರ್ಚು ಮಾಡಿದ್ದಾರೆ. ಪ್ರಚಾರಕ್ಕಾಗಿ ಜಾಹೀರಾತುಗಳಿಗೆ ಯಾವ ಸರ್ಕಾರದಲ್ಲಿಯು ಇಷ್ಟೊಂದು ಖರ್ಚು ಮಾಡಿಲ್ಲ. ಎಲ್ಲರಿಗಿಂತ 3 ಪಟ್ಟು ಹಣ ಜಾಹೀರಾತುಗಳಿಗೆ ಸಿದ್ದರಾಮಯ್ಯ ಸರ್ಕಾರ ನೀಡಿದೆ. ಕಾಂಗ್ರೆಸ್ ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡಲು ಸಿದ್ಧವಿದೆ’ ಎಂದು ಆರೋಪಿಸಿದರು.

‘ಲಿಂಗಾಯತ –ವೀರಶೈವರ ನಡುವೆ ತಿಕ್ಕಾಟ ತಂದು ಪ್ರತ್ಯೇಕ ಧರ್ಮಕ್ಕೆ ಶಿಫಾರಸು ನೀಡುವಂತೆ ಕೇಂದ್ರ ಸರ್ಕಾರ ಕಳುಹಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಲಿಂಗಾಯತ ಹಾಗೂ ವೀರಶೈವ ಎರಡು ಗುಂಪುಗಳಲ್ಲೂ ಕಾಂಗ್ರೆಸ್ ವಿಶ್ವಾಸವನ್ನು ಕಳೆದುಕೊಂಡಿದೆ. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ನಿಜವಾದ ಕಾಳಜಿ ಇದ್ದರೆ ಈ ಕಗ್ಗಂಟನ್ನು ಮೊದಲೇ ಬಗೆಹರಿಸಬೇಕಿತ್ತು’ ಎಂದು ಹೇಳಿದರು.
‘ಮಾತೆ ಮಹಾದೇವಿಯವರು ಕಾಂಗ್ರೆಸ್‌ ಬೆಂಬಲ ನೀಡುವಂತೆ ಹೇಳಿಕೆ ಕೊಡುವುದು ಸರಿಯಲ್ಲ. ಮಠಾಧೀಶರಾದವರು ಒಂದು ಪಕ್ಷಕ್ಕೆ ಬೆಂಬಲ ನೀಡುವಂತೆ ಹೇಳುವುದು ಎಷ್ಟರ ಮಟ್ಟಿಗೆ ಸರಿ? ಎಲ್ಲ ಧರ್ಮ, ಜಾತಿಗಳಲ್ಲಿ ಸಮಾನತೆ ಸಾರುವ ಹಾಗೂ ರಾಜಕೀಯ ನಾಯಕರುಗಳಿಗೆ ಪಾಠ ಹೇಳುವ ಮಠಾಧೀಶರು ಈ ರೀತಿ ಮಾಡುವುದು ಸರಿಯಲ್ಲ. ಆದರೆ ವೈಯಕ್ತಿಕವಾಗಿ ಅವರ ನಿಲುವು ಪ್ರಕಟ ಮಾಡುವ ಅಧಿಕಾರ ಅವರಿಗಿದೆ’ ಎಂದು ತಿಳಿಸಿದರು.

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಯಾದಗಿರಿ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ, ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಹಾಜರಿದ್ದರು.

‘ರೈತರು ಸತ್ತರೂ ಬಿಜೆಪಿಯವರು ಬರಲ್ಲ’

ರಾಜ್ಯದಲ್ಲಿ ಯಾರೇ ಮೃತ ಪಟ್ಟರೂ ಬಿಜೆಪಿಯವರು ಅವರನ್ನು ನಮ್ಮವರು (ಹಿಂದೂಗಳು) ಎಂದು ಹೇಳುತ್ತಾರೆ. ಆದರೆ ರೈತರು ಸತ್ತರೆ ನಮ್ಮವರೆಂದು ಅವರು ಎಂದೂ ಹೇಳಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ರಾಜ್ಯದಲ್ಲಿ ಕೋಮು ಗಲಭೆಗಳು ಮುಂದುವರೆಯಬೇಕು. ಹಾಗಾದರೆ ಮಾತ್ರ ತಮಗೆ ರಾಜಕೀಯ ಲಾಭ ಎನ್ನುವುದು ಅವರ ತಂತ್ರ. ಬಿಜೆಪಿ ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT