ಸೋಮವಾರ, ಆಗಸ್ಟ್ 10, 2020
26 °C

ಮಾರುಕಟ್ಟೆಯಲ್ಲಿ ಮಾವಿನ ಹವಾ

ಶಶಿಕುಮಾರ್‌ ಸಿ. Updated:

ಅಕ್ಷರ ಗಾತ್ರ : | |

ಮಾರುಕಟ್ಟೆಯಲ್ಲಿ ಮಾವಿನ ಹವಾ

ಮಾವಿನ ಹಣ್ಣಿನ ಸ್ವಾದವೇ ಅಂಥದ್ದು. ದೊಡ್ಡವರಿರಲಿ, ಚಿಕ್ಕವರಿರಲಿ. ಹಣ್ಣಿನ ಹೋಳು ಬಾಯಲ್ಲಿ ಬಿದ್ದರೆ ಸಾಕು ಲಾಲಾರಸ ಗ್ರಂಥಿಗಳು ತಾವಾಗೇ ಅರಳಿಕೊಳ್ಳುತ್ತವೆ. ಅಂಥದ್ದೊಂದು ಆನಂದಮಯ ರಸಾನುಭೂತಿಗೆ ವಯಸ್ಸು ಅಡ್ಡಿಯಾಗದು. ಅದೇ ಕಾರಣಕ್ಕೆ ಎಲ್ಲ ವಯಸ್ಸಿನವರೂ ಮಾವಿನ ರಸಾಸ್ವಾದದಲ್ಲಿ ಮೈಮರೆಯುತ್ತಾರೆ. ಮತ್ತೆ ಮಾವಿನ ಋತು ಆರಂಭವಾಗಿದೆ. ಮಾವು ಚಪ್ಪರಿಸುವ ಆ ಸುಂದರ ಸವಿಗಾಲ ಮತ್ತೆ ಬಂದಿದೆ.

ಹೌದು, ಈಗಾಗಲೇ ಹಲವಾರು ಬಗೆಯ ಮಾವಿನ ತಳಿಗಳು ಸದ್ದಿಲ್ಲದೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ ಹಾಗೂ ಬೀದಿ ಬದಿಯ ಹಣ್ಣಿನ ಅಂಗಡಿಗಳಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಬಾದಾಮಿ, ಸಕ್ಕರೆಗುತ್ತಿ, ಮಲ್ಲಿಕಾ, ಮಲಗೋವಾ, ಬಂಗನಪಲ್ಲಿ, ರಸಪುರಿ ಹಣ್ಣುಗಳು ಮುಂದಿನ ಮೂರು ತಿಂಗಳು ನಮ್ಮದೇ ಹವಾ ಎನ್ನುತ್ತಿವೆ.

ಬೆಲೆ ಕೇಳಿದರೆ ಒಮ್ಮೆ ಮುಖ ಬಾಡುತ್ತದೆ. ಬೆಲೆ ಕೈಸುಡುವಂತಿದೆ. ಹಾಗಂತ ವರ್ಷದ ಅತಿಥಿಯನ್ನು ಯಾರಾದರೂ ಹಾಗೆಯೇ ಬಿಡುವುದುಂಟೆ. ದುಬಾರಿಯಾದರೂ ಹಣ್ಣು ಖರೀದಿಸಿ ಸವಿದು ಆಸೆ ನೀಗಿಸಿಕೊಳ್ಳುತ್ತಿದ್ದಾರೆ ಮಾವುಪ್ರಿಯರು. ಈ ಬಾರಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದ ಮಾವು ಬಂದಿದೆ. ದರ ಹೆಚ್ಚಳಕ್ಕೆ ಇದೇ ಪ್ರಮುಖ ಕಾರಣ. ರಾಮನಗರದಿಂದ ಅಲ್ಪಪ್ರಮಾಣದ ಹಣ್ಣು ಮಾರುಕಟ್ಟೆಗೆ ಬಂದಿದೆ. ಉಳಿದಂತೆ ಸದ್ಯದ ಮಾರುಕಟ್ಟೆಯಲ್ಲಿರುವ ಬಹುತೇಕ ಮಾವು ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳದವು.

‘ನನಗೂ, ನನ್ನ ಕುಟುಂಬದ ಎಲ್ಲ ಸದಸ್ಯರಿಗೂ ಮಾವು ಪ್ರಿಯವಾದದ್ದು. ಕಳೆದ ಬಾರಿಯ ಸೀಸನ್‌ನಲ್ಲಿ ಮಾವು ಸವಿಯುವುದನ್ನು ಮಿಸ್ ಮಾಡಿಕೊಂಡೆ. ಈ ಬಾರಿ ಕಳೆದ ಸಲದ ಪಾಲನ್ನೂ ಸೇರಿಸಿ ಮಾವು ಸವಿಯುವೆ’ ಎಂದು ನಗುತ್ತಾರೆ ಚಿಕ್ಕಜಾಲದ ತೇಜಸ್ವಿನಿ ಬಸವರಾಜ್.

ಇನ್ನೂ ಒಂದು ತಿಂಗಳು ಬೇಕು: ‘ಏಪ್ರಿಲ್‌ನಿಂದ ಮೂರು ತಿಂಗಳವರೆಗೆ ಮಾವಿನ ಸೀಸನ್. ಸೀಸನ್ ಆರಂಭಕ್ಕೂ ಮುನ್ನ ಸಾಮಾನ್ಯವಾಗಿ ರಾಜ್ಯದ ಮಾವು ಮಾರುಕಟ್ಟೆ ಪ್ರವೇಶಿಸುವುದು ವಾಡಿಕೆ. ರಾಮನಗರ, ಬೆಂಗಳೂರು ಗ್ರಾಮಾಂತರ, ಗದಗ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಬೆಳಗಾವಿ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಮಾವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮಾವು ಬೆಳೆಗೆ ಕೋಲಾರ ಖ್ಯಾತಿ ಪಡೆದಿದೆ. ಈ ಭಾಗಗಳನ್ನು ಒಳಗೊಂಡು ರಾಜ್ಯದ ಹಲವೆಡೆ ಇತ್ತೀಚೆಗೆ ಆಲಿಕಲ್ಲು ಸಹಿತ ಮಳೆ ಸುರಿದು ಸಾಕಷ್ಟು ಪ್ರಮಾಣದಲ್ಲಿ ಮಾವಿನ ಹೂಗಳು ಉದುರಿವೆ. ಹೀಗಾಗಿ, ಇಳುವರಿ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಣನೀಯವಾಗಿ ಇಳಿಮುಖವಾಗಿದೆ. ಅಲ್ಲದೆ ಈ ವರ್ಷ ಮಾವು ಮಾರುಕಟ್ಟೆ ಪ್ರವೇಶಿಸುವುದು ಇನ್ನೂ ತಿಂಗಳಾಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ (ಹಣ್ಣಿನ ವಿಭಾಗ) ಪರಶಿವಮೂರ್ತಿ.

ಮಾವು ಮೇಳಕ್ಕೆ ಸಿನಿ ಕಲರವ!

ಪ್ರತಿ ಬಾರಿಯಂತೆ ಈ ಬಾರಿಯೂ ನಗರದ ಹಲವೆಡೆ ಮಾವು ಮೇಳ ನಡೆಸಲಿದ್ದೇವೆ. ನಟರಾದ ಶಿವರಾಜ್‌ ಕುಮಾರ್, ಸುದೀಪ್, ದರ್ಶನ್ ಹಾಗೂ ಯಶ್ ಸೇರಿದಂತೆ ಹಲವರು ರೈತರ ಬಗ್ಗೆ ಕಾಳಜಿ ಹೊಂದಿದ್ದಾರೆ. ಹೀಗಾಗಿ, ಅವರನ್ನೇ ಈ ಬಾರಿಯ ಮಾವು ಮೇಳಕ್ಕೆ ಕರೆತಂದು ಪ್ರಚಾರ ನೀಡುವ ಬಗ್ಗೆ ಚಿಂತಿಸಲಾಗಿದೆ ಎನ್ನುತ್ತಾರೆ ಪರಶಿವಮೂರ್ತಿ.

ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಳೆದ ಬಾರಿಯಿಂತೆ ಈ ಬಾರಿ ನಗರದ ಮೆಟ್ರೊ ರೈಲು ನಿಲ್ದಾಣಗಳು, ಪ್ರಮುಖ ಬಸ್‌ ನಿಲ್ದಾಣಗಳು ಹಾಗೂ ಪ್ರಮುಖ ಸಾಫ್ಟ್‌ವೇರ್ ಕಂಪೆನಿಗಳ ಬಳಿ ಮಾವಿನ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ವ್ಯಾಪಾರಿಗಳ ಮುಖದಲ್ಲಿ ಮಂದಹಾಸ

ಮಾವು ಮಾರುಕಟ್ಟೆಗೆ ಬಂದ ದಿನದಿಂದಲೇ ಹೆಚ್ಚು ಬೇಡಿಕೆ ಇದೆ. ರೈತರಿಂದ ನೇರವಾಗಿ ಆಮದು ಮಾಡಿಕೊಂಡು ನೈಸರ್ಗಿಕವಾಗಿ  ಹಣ್ಣಾಗಿಸುತ್ತೇವೆ. ಇದೇ ಕಾರಣಕ್ಕೆ ಹೆಚ್ಚು ಗ್ರಾಹಕರು ನಮ್ಮ ಅಂಗಡಿಗೆ ಬರುತ್ತಾರೆ. ಸೀಕರಣೆಗೆ ಹಾಗೂ ಮಿಲ್ಕ್‌ ಶೇಕ್‌ಗೆ ರಸಪುರಿ ಹೆಚ್ಚು ಸೂಕ್ತವಾದದ್ದು. ಹೀಗಾಗಿ ಈ ಹಣ್ಣಿಗೆ ಬೇಡಿಕೆ ಹೆಚ್ಚು. ವ್ಯಾಪಾರವೂ ಚೆನ್ನಾಗಿ ಆಗುತ್ತಿದೆ.

– ಎನ್.ರಾಜೇಶ್, ಗಾಂಧಿಬಜಾರ್‌

ಕಡಿಮೆ ಪ್ರಮಾಣದ ಮಾವು ಮಾರುಕಟ್ಟೆಗೆ ಬಂದಿದೆ. ಅದೇ ಕಾರಣಕ್ಕೆ ದರ ಗಗನಕ್ಕೆ ಏರಿದೆ. ಆದರೂ, ಬೇಡಿಕೆ ಮಾತ್ರ ಕುಗ್ಗಿಲ್ಲ. ಮಳೆ ಬಿದ್ದರೆ ಮಾವು ಮತ್ತಷ್ಟು ಸಿಹಿ ಬರುತ್ತದೆ. ಹೀಗಾಗಿ, ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಬಳಿಕ ಮಾವು ಕಟಾವು ಮಾಡಲಿದ್ದಾರೆ. ಮುಂದಿನ ಕೆಲ ವಾರಗಳಲ್ಲಿಯೇ ರಾಜ್ಯದ ಮಾವು ಮಾರುಕಟ್ಟೆಗೆ ಲಗ್ಗೆ ಇಡಲಿದೆ

–ಎಸ್‌.ಸಿದ್ದರಾಜು, ಗಾಂಧಿ ಬಜಾರ್

ಮಾವನ್ನು ನೆಲ್ಲು ಹುಲ್ಲಿನಲ್ಲಿ ಇಟ್ಟು, ಗಾಳಿಯಾಡದಂತೆ ಟಾರ್ಪಲ್‌ನಿಂದ ಮುಚ್ಚಿಡುತ್ತೇವೆ. ಕಾವಿನಿಂದಲೇ ಕಾಯಿಗಳನ್ನು ಹಣ್ಣಾಗಿಸುತ್ತೇವೆ. ಹೀಗಾಗಿ, ಈ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ ಯಾವುದೇ ತೊಂದರೆಯಾಗದು. ನಮ್ಮ ಮಳಿಗೆಯಲ್ಲಿ ಇರುವುದು ರಾಜ್ಯದ ಮಾವುಗಳು ಮಾತ್ರ.

–ಕೃಷ್ಣಪ್ಪ, ಹಾಪ್‌ಕಾಮ್ಸ್ ಮಳಿಗೆ, ಹಡ್ಸನ್‌ ವೃತ್ತ

ಮಾವಿನ ಗುಣಮಟ್ಟವನ್ನು ಅದರ ಬಣ್ಣ ಹಾಗೂ ತಾಜಾತನದಿಂದ ಗುರುತಿಸುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ಅದರ ಜತೆಗೆ ಮಾವಿನ ತೊಟ್ಟಿನ ಸುತ್ತ ಉಬ್ಬು (ಭುಜ) ಇರುವುದನ್ನು ಗಮನಿಸಿ ಹಣ್ಣು ಖರೀದಿಸಬೇಕು. ಉಬ್ಬು ಇದ್ದ ಹಣ್ಣು ತಿನ್ನಲು ಯೋಗ್ಯ.

– ನಾಗರಾಜ್, ವ್ಯವಸ್ಥಾಪಕ ನಿರ್ದೇಶಕರು, ಮಾವು ಅಭಿವೃದ್ಧಿ ನಿಗಮ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.