ಶುಕ್ರವಾರ, ಡಿಸೆಂಬರ್ 13, 2019
19 °C
ಭ್ರಷ್ಟಾಚಾರ ನಿಗ್ರಹ ದಳ ಅಸ್ತಿತ್ವಕ್ಕೆ ಬಂದ ತರುವಾಯ ಬಲಹೀನವಾದ ಪೊಲೀಸ್ ವಿಭಾಗ

ಲೋಕಾಯುಕ್ತಕ್ಕೆ ಬಲ ತುಂಬಲು ಎಲ್ಲರಿಗೂ ಭಯ!

ವಿ.ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಲೋಕಾಯುಕ್ತಕ್ಕೆ ಬಲ ತುಂಬಲು ಎಲ್ಲರಿಗೂ ಭಯ!

ಇತ್ತೀಚಿನ ವರ್ಷಗಳಲ್ಲಿ ಲೋಕಾಯುಕ್ತ ಸಂಸ್ಥೆಗೂ ಕರ್ನಾಟಕದ ರಾಜಕಾರಣಕ್ಕೂ ಬಿಡದ ನಂಟು. ಆಗಾಗ ಲೋಕಾಯುಕ್ತದ ವಿಚಾರ ರಾಷ್ಟ್ರ ರಾಜಕಾರಣದವರೆಗೂ ವ್ಯಾಪಿಸಿದ್ದು ಉಂಟು. ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಚಾರದ ಪ್ರಮುಖ ‘ವಸ್ತು’ವಾಗಿ ಬಳಕೆಯಾಗಿತ್ತು. 2013ರ ಚುನಾವಣೆಯಲ್ಲಂತೂ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ತಂದುಕೊಡುವಲ್ಲಿ ಲೋಕಾಯುಕ್ತ ಮಹತ್ವದ ಪಾತ್ರ ವಹಿಸಿತ್ತು.

ಹಿಂದಿನ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ್ದ ತನಿಖಾ ವರದಿ ಮತ್ತು ಅದರ ಫಲಶ್ರುತಿ ಎಂಬಂತೆ ನಡೆದ ಸಿಬಿಐ ತನಿಖೆಯ ಸುತ್ತವೇ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಗಿರಕಿ ಹೊಡೆಯುತ್ತಿತ್ತು. ಶಾಸಕ ವೈ. ಸಂಪಂಗಿ, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವು ಘಟಾನುಘಟಿ ನಾಯಕರು ಲೋಕಾಯುಕ್ತ ಪೊಲೀಸರಿಂದ ಜೈಲು ಪಾಲಾಗಿದ್ದ ವಿಚಾರವೂ ಚುನಾವಣಾ ಪ್ರಚಾರದುದ್ದಕ್ಕೂ ಮಾರ್ದನಿಸಿತ್ತು. ಲೋಕಾಯುಕ್ತರು ಮತ್ತು ಲೋಕಾಯುಕ್ತ ಪೊಲೀಸರು ನಡೆಸಿದ್ದ ತನಿಖೆಯ ಫಲಿತಾಂಶಗಳೇ ರಾಜಕೀಯವಾಗಿ ಬಿಜೆಪಿಯ ನಡು ಮುರಿಯಲು ಕಾರಣವಾಗಿದ್ದುದು ಈಗ ಇತಿಹಾಸ.

1986ರಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ವಾಗ್ದಾನವನ್ನು ಈಡೇರಿಸುವ ಸಲುವಾಗಿ ಲೋಕಾಯುಕ್ತ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದರು. ಅದು ತನ್ನ ಮೂರು ದಶಕಗಳ ನಡಿಗೆಯಲ್ಲಿ ದೇಶದಲ್ಲೇ ಅತ್ಯುತ್ತಮ ‘ಓಂಬುಡ್ಸ್‌ಮನ್‌’ ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎಂಬಷ್ಟರ ಮಟ್ಟಿಗೆ ಪ್ರಚಾರ, ಜನಪ್ರಿಯತೆಯ ಉತ್ತುಂಗಕ್ಕೇರಿತ್ತು. 32 ವರ್ಷಗಳಲ್ಲಿ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಎಂಟನೆಯ ಲೋಕಾಯುಕ್ತರು. ಬೇರೆ ಬೇರೆ ಲೋಕಾಯುಕ್ತರ ಅವಧಿಯಲ್ಲಿ ವಿಭಿನ್ನ ಬಗೆಯ ಕಾರ್ಯಾಚರಣೆಗಳಿಗೆ ಈ ಸಂಸ್ಥೆ ಸಾಕ್ಷಿಯಾಗಿತ್ತು. ದೀರ್ಘಕಾಲ ತನಿಖೆಯ ಸಕಾರಾತ್ಮಕ ಫಲಿತಾಂಶಗಳು, ಜನಸಾಮಾನ್ಯರ ಕಣ್ಣೀರು ಒರೆಸುವ ಕೆಲಸಗಳಿಂದಲೇ ಕರ್ನಾಟಕ ಲೋಕಾಯುಕ್ತ ಸಂಸ್ಥೆ ದೇಶದೆಲ್ಲೆಡೆ ಹೆಸರು ಗಳಿಸಿತ್ತು.

ಆದರೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಿಂದ ಇಳಿಯುವ ಎರಡು ತಿಂಗಳ ಮೊದಲು ನ್ಯಾಯಮೂರ್ತಿ ವೈ. ಭಾಸ್ಕರ್‌ ರಾವ್‌ ಅವರನ್ನು ಲೋಕಾಯುಕ್ತರ ಹುದ್ದೆಗೆ ಆಯ್ಕೆ ಮಾಡಿತು. ಅವರು ಲೋಕಾಯುಕ್ತರಾದ ಬಳಿಕ ಈ ಸಂಸ್ಥೆ ದಿಢೀರನೆ ನಾಟಕೀಯ ಬೆಳವಣಿಗೆ

ಗಳಿಗೆ ಸಾಕ್ಷಿಯಾಯಿತು. ಲೋಕಾಯುಕ್ತರು ಮತ್ತು ಅವರ ಮಗನ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿಬಂತು. ಕಳಂಕಿತ ಲೋಕಾಯುಕ್ತರನ್ನು ಸಂಸ್ಥೆಯಿಂದ ಹೊರಗಟ್ಟಲು ಆರಂಭವಾದ ಚಳವಳಿಯ ಜೊತೆಯಲ್ಲೇ ಲೋಕಾಯುಕ್ತದ ಸುಧಾರಣೆಯ ಬಗ್ಗೆಯೂ ಚರ್ಚೆ ಆರಂಭವಾಯಿತು. 32 ವರ್ಷಗಳ ನಡಿಗೆಯುದ್ದಕ್ಕೂ ಈ ಸಂಸ್ಥೆಯ ಆಡಳಿತಾತ್ಮಕ ಮತ್ತು ತನಿಖಾ ವಿಧಾನಗಳಲ್ಲಿದ್ದ ಲೋಪಗಳು, ಕೊರತೆಗಳು ಆಗ ದಿಢೀರನೆ ಎದ್ದು ನಿಂತವು.

ಲೋಕಾಯುಕ್ತ ಕಾಯ್ದೆಯ ಪ್ರಕಾರ, ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988’ರ ಅನುಷ್ಠಾನದ ವಿಚಾರದಲ್ಲಿ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ಯಾವ ಅಧಿಕಾರವೂ ಇಲ್ಲ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಅಸ್ತಿತ್ವಕ್ಕೆ ಬಂದ ಅಥವಾ ನಿಯೋಜಿತ ಪೊಲೀಸ್‌ ವಿಭಾಗವೇ ಈ ಕೆಲಸವನ್ನು ಮಾಡಬೇಕು. ಸಾರ್ವಜನಿಕರ ಕುಂದು ಕೊರತೆಗಳು ಮತ್ತು ಸರ್ಕಾರಿ ನೌಕರರು, ಚುನಾಯಿತ ಪ್ರತಿನಿಧಿಗಳಿಂದ ಆಗುವ ಕರ್ತವ್ಯಲೋಪ, ಸೇವೆಗಳ ವಿತರಣೆಯಲ್ಲಿ ಉದ್ದೇಶಪೂರ್ವಕ ವಿಳಂಬ, ಸ್ವಜನ ಪಕ್ಷಪಾತದಂತಹ ದೂರುಗಳ ಕುರಿತು ವಿಚಾರಣೆ ನಡೆಸಿ, ಕ್ರಮಕ್ಕೆ ಶಿಫಾರಸು ಮಾಡುವಂತಹ ಅಧಿಕಾರವನ್ನು ಲೋಕಾಯುಕ್ತ ಸಂಸ್ಥೆ ಹಿಂದೆಯೂ ಹೊಂದಿತ್ತು, ಈಗಲೂ ಹೊಂದಿದೆ. ಆದರೆ, ಲೋಕಾಯುಕ್ತ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಸಮಯದಲ್ಲಿ ಅಂದಿನ ಸರ್ಕಾರ ಭ್ರಷ್ಟಾಚಾರ ನಿಗ್ರಹಕ್ಕಾಗಿ ರೂಪಿಸಿದ ಪೊಲೀಸ್‌ ವಿಭಾಗವನ್ನೂ ಅದರೊಂದಿಗೆ ಜೋಡಿಸಿತ್ತು. ಕಾರ್ಯನಿರ್ವಹಣೆಯಲ್ಲಿ ಬೇರೆ ಬೇರೆ ಇದ್ದರೂ, ಒಂದೇ ಸಂಸ್ಥೆಯಲ್ಲಿದ್ದ ಕಾರಣದಿಂದ ಲೋಕಾಯುಕ್ತ ಪೊಲೀಸ್‌ ವಿಭಾಗ ಲೋಕಾಯುಕ್ತದ ನಿಜವಾದ ‘ಬಲ’ ಆಗಿ ಬೆಳೆದಿತ್ತು.

ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಯಿಂದ ಭ್ರಷ್ಟಾಚಾರ ನಿಗ್ರಹ ಪೊಲೀಸ್ ವಿಭಾಗವನ್ನು ಹೊರ ತರಬೇಕೆಂಬ ಬೇಡಿಕೆ ಎರಡು ದಶಕಗಳ ಕಾಲದಿಂದಲೂ ಇತ್ತು. ಅಕ್ರಮ ಆಸ್ತಿ ಸಂಪಾದನೆ, ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸ್‌ ವಿಭಾಗದಲ್ಲಿ ಮೊಕದ್ದಮೆ ಎದುರಿಸುತ್ತಿದ್ದ ಹಲವರು ಈ ಸಂಬಂಧ ನ್ಯಾಯಾಲಯದಲ್ಲೂ ಹೋರಾಟ ನಡೆಸುತ್ತಿದ್ದರು. 1998ರಲ್ಲಿ ಸಿ.ರಂಗಸ್ವಾಮಯ್ಯ ಮತ್ತು ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದಲ್ಲಿ ಪ್ರತ್ಯೇಕವಾದ ಭ್ರಷ್ಟಾಚಾರ ನಿಗ್ರಹ ದಳವನ್ನು ಅಸ್ತಿತ್ವಕ್ಕೆ ತರುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. 18 ವರ್ಷಗಳ ಕಾಲ ಈ ಬಗ್ಗೆ ಯಾವ ಕ್ರಮವೂ ಆಗಿರಲಿಲ್ಲ. 2016ರ ಮಾರ್ಚ್‌ನಲ್ಲಿ ಪ್ರತ್ಯೇಕವಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಸ್ತಿತ್ವಕ್ಕೆ ತಂದ ಈಗಿನ ರಾಜ್ಯ ಸರ್ಕಾರ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರಿಗೆ ಇದ್ದ ಎಲ್ಲ ಅಧಿಕಾರಗಳನ್ನು ಹಿಂದಕ್ಕೆ ಪಡೆಯಿತು. ಪೊಲೀಸ್ ವಿಭಾಗ ಬಲಹೀನವಾಗುವುದರ ಜೊತೆಯಲ್ಲೇ ಇಡೀ ಲೋಕಾಯುಕ್ತವೂ ಶಕ್ತಿಗುಂದಿತು.

‘ನಿಜವಾಗಿಯೂ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗಳು ಬೇರೆ ಬೇರೆಯೇ ಆಗಿವೆ. ಲೋಕಾಯುಕ್ತರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ನು ಬಳಸಿ ಕೆಲಸ ಮಾಡುವಂತಿಲ್ಲ. ಆದರೆ, ಜನರ ದೂರುಗಳಿಗೆ ಸ್ಪಂದಿಸುವಾಗ ನೆರವಾಗಲಿ ಎಂಬ ಸದುದ್ದೇಶದಿಂದ ಆಗಿನ ಸರ್ಕಾರ ಪೊಲೀಸ್‌ ವಿಭಾಗವನ್ನು ಲೋಕಾಯುಕ್ತ ಸಂಸ್ಥೆಯ ಒಳಗಡೆ ಇರಿಸಿತ್ತು. ಪೊಲೀಸ್‌ ಬಲವೇ ಲೋಕಾಯುಕ್ತ ಸಂಸ್ಥೆ ಮತ್ತು ಲೋಕಾಯುಕ್ತರ ಕುರಿತು ಸರ್ಕಾರಿ ನೌಕರರು, ಚುನಾಯಿತ ಪ್ರತಿನಿಧಿಗಳಲ್ಲಿ ಭಯವನ್ನು ಸೃಷ್ಟಿಸಿತ್ತು. ಈ ಕಾರಣಕ್ಕಾಗಿಯೇ ಲೋಕಾಯುಕ್ತದ ನಿರ್ದೇಶನಗಳು, ಆದೇಶಗಳು ಪಾಲನೆ ಆಗುತ್ತಿದ್ದವು’ ಎನ್ನುತ್ತಾರೆ ಲೋಕಾಯುಕ್ತದ ಉನ್ನತ ಹುದ್ದೆಯಲ್ಲಿ ದೀರ್ಘಕಾಲ ಕೆಲಸ ಮಾಡಿ ನಿವೃತ್ತರಾದ ನ್ಯಾಯಮೂರ್ತಿಯೊಬ್ಬರು.

(ಭಾಸ್ಕರ್‌ ರಾವ್‌)

‘ಲೋಕಾಯುಕ್ತದಲ್ಲಿ ‍ಪೊಲೀಸರೂ ಇದ್ದಾರೆ ಎಂಬ ಭಯದ ಕಾರಣಕ್ಕಾಗಿಯೇ ಈ ಸಂಸ್ಥೆಯ ಬಗ್ಗೆ ಹೆದರಿಕೆ ಇತ್ತು. ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹಕ್ಕಾಗಿ ಅಸ್ತಿತ್ವದಲ್ಲಿದ್ದ ಪೊಲೀಸ್‌ ಘಟಕವನ್ನು ಪ್ರತ್ಯೇಕಿಸಿದ್ದು ಕಾನೂನಿನ ಪ್ರಕಾರ ತಪ್ಪೇನೂ ಅಲ್ಲ. ಆದರೆ, ಯಾರಿಗೂ ತೊಂದರೆ ಆಗದಿದ್ದಂತಹ ವ್ಯವಸ್ಥೆಯೊಂದನ್ನು ಕಾನೂನಿನ ಸಣ್ಣ ವಿಚಾರವನ್ನು ಮುಂದಿಟ್ಟು ಬದಲಾವಣೆ ಮಾಡಿರುವ ಕಾರಣದಿಂದಾಗಿ ಸಾಮಾನ್ಯ ಜನರಿಗೆ ಅನ್ಯಾಯವಾಗಿದೆ. ಈಗ ಲೋಕಾಯುಕ್ತ ಸಂಸ್ಥೆ ಒಂದು ತಾಲ್ಲೂಕು ಕಚೇರಿಗಿಂತಲೂ ಕಡೆಯಾಗಿದೆ. ದೂರು ಬಂದರೆ ಸರ್ಕಾರಿ ನೌಕರರಿಗೆ ನೋಟಿಸ್‌ ನೀಡುವುದು ಮತ್ತು ಕ್ರಮ ಕೈಗೊಳ್ಳಿ ಎಂದು ಪತ್ರ ಬರೆಯುವುದಕ್ಕಷ್ಟೇ ಸಂಸ್ಥೆಯ ಶಕ್ತಿ ಸೀಮಿತಗೊಂಡಿದೆ. ಲೋಕಾಯುಕ್ತವೆಂದರೆ ಭಯವೇ ಇಲ್ಲದ ಸ್ಥಿತಿ ಈಗಿನದ್ದು’ ಎಂದು ಅವರು ಹೇಳುತ್ತಾರೆ.

(ವಿಶ್ವನಾಥ ಶೆಟ್ಟಿ)

ಲೋಕಾಯುಕ್ತ ವ್ಯವಸ್ಥೆ ಮತ್ತು ಅದರೊಳಗಿನ ಪೊಲೀಸ್ ವಿಭಾಗವನ್ನು ಒಂದೆಡೆ ಇರಿಸುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬ ವಾದ ಬಹಳ ಹಿಂದಿನಿಂದಲೂ ಇತ್ತು. 1998ರ ಸಿ.ರಂಗಸ್ವಾಮಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅದನ್ನು ಅನುಮೋದಿಸಿತು. 2014 ಮತ್ತು 2015ರಲ್ಲಿ ಹೈಕೋರ್ಟ್‌ನಲ್ಲಿ ದಾಖಲಾದ ಕೆಲವು ಪ್ರಕರಣಗಳಲ್ಲೂ ಇದೇ ವಿಷಯ ಬಲವಾಗಿ ಮಂಡನೆಯಾಯಿತು. ಆಗ ಹೈಕೋರ್ಟ್‌ ನೀಡಿದ ಮಧ್ಯಂತರ ಆದೇಶಗಳಲ್ಲಿನ ಒಂದು ಭಾಗವನ್ನು ಆಧರಿಸಿ ಲೋಕಾಯುಕ್ತ ಪೊಲೀಸ್‌ ವಿಭಾಗದ ಅಧಿಕಾರವನ್ನು ಮೊಟಕುಗೊಳಿಸಿ ಪ್ರತ್ಯೇಕವಾದ ಭ್ರಷ್ಟಾಚಾರ ನಿಗ್ರಹ ದಳ ಅಸ್ತಿತ್ವಕ್ಕೆ ತರಲಾಯಿತು.

ಇದಕ್ಕೂ ಮೊದಲು ಲೋಕಾಯುಕ್ತ ಸಂಸ್ಥೆಯ ಒಳಗೆ ಸಾಕಷ್ಟು ವೈರುಧ್ಯಗಳಿದ್ದವು. ಆದರೆ, ಈ ಬಗ್ಗೆ ರಾಜಕೀಯ ಪಕ್ಷಗಳು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಯಾರೊಬ್ಬರೂ ಚರ್ಚೆ ನಡೆಸುವ ಗೋಜಿಗೆ ಹೋಗಿರಲಿಲ್ಲ. ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ

ಎಸ್‌.ಪಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಇಂತಹ ಸೂಕ್ಷ್ಮವೊಂದನ್ನು ಗುರುತಿಸಿದ್ದ ಐಪಿಎಸ್‌ ಅಧಿಕಾರಿ ಡಾ. ಕೆ.ಮಧುಕರ್‌ ಶೆಟ್ಟಿ, ಲೋಕಾಯುಕ್ತ ಪೊಲೀಸರು ನಿಯಮಾವಳಿಗಳ ಚೌಕಟ್ಟು ಇಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಲೋಕಾಯುಕ್ತರ ಮೂಲಕವೇ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದರು. ಆಳವಾದ ಅಧ್ಯಯನದ ಬಳಿಕ, ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಪ್ರತ್ಯೇಕ ಕೈಪಿಡಿಯೊಂದನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಕಳುಹಿಸಿದ್ದರು. ಯಾವ ರಾಜಕೀಯ ಪಕ್ಷವೂ ಈ ಬಗ್ಗೆ ಮಾತನ್ನೇ ಆಡಲಿಲ್ಲ. ಕಾರ್ಯಾಂಗದ ಮುಂಚೂಣಿ ಅಧಿಕಾರಿಗಳೂ ಅದನ್ನು ಬದಿಗೆ ತಳ್ಳಿದರು.

ಲೋಕಾಯುಕ್ತ ಪೊಲೀಸ್‌ ವಿಭಾಗವೇ ಭ್ರಷ್ಟಾಚಾರ ನಿಗ್ರಹ ದಳದ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಹೆಚ್ಚು ಅವಕಾಶಗಳಿರಲಿಲ್ಲ. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಅಲ್ಲಿದ್ದಾರೆ ಎಂಬ ಕಾರಣಕ್ಕಾಗಿ ನೇರವಾಗಿ ಹಸ್ತಕ್ಷೇಪ ಮಾಡಲು ಸರ್ಕಾರದಲ್ಲಿದ್ದವರು ಹೆದರುತ್ತಿದ್ದರು. ಆದರೆ, ಈಗಿನ ಎಸಿಬಿಯ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ಹೆಚ್ಚು ಅವಕಾಶಗಳಿವೆ. ನೇರವಾಗಿ ಸರ್ಕಾರದ ಹಿಡಿತದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳ ಸಂಪೂರ್ಣವಾಗಿ ಒಂದು ಸ್ವಾಯತ್ತ ತನಿಖಾ ಸಂಸ್ಥೆಯಾಗಿ ಕೆಲಸ ಮಾಡೀತೇ ಎಂಬ ಪ್ರಶ್ನೆ ವಿರೋಧ ಪಕ್ಷಗಳಿಗೂ ರುಚಿಸುವಂತೆ ಕಾಣುವುದಿಲ್ಲ. ಕೆಲವು ವರ್ಷಗಳಿಂದ ಈಚೆಗೆ ಲೋಕಾಯುಕ್ತ ಸಂಸ್ಥೆಯ ತನಿಖಾ ವರದಿಗಳ ಪರಿಣಾಮವಾಗಿ ರಾಜಕೀಯವಾಗಿ ಏಟು ತಿಂದವರು ಮತ್ತು ಅದರ ಪರಿಣಾಮಗಳ ಲಾಭದಿಂದ ಗದ್ದುಗೆ ಏರಿದವರು ಇಬ್ಬರೂ ಈ ವಿಚಾರದಲ್ಲಿ ಒಂದೇ ಬಣದಲ್ಲಿರುವಂತೆ ಕಾಣುತ್ತಿದ್ದಾರೆ.

‘ಮುಚ್ಚುವುದಕ್ಕೂ ಧೈರ್ಯವಿಲ್ಲ’

ಲೋಕಾಯುಕ್ತ ಸಂಸ್ಥೆ ಯಾವುದೇ ಕಾರ್ಯಾಚರಣೆ ಮತ್ತು ತನಿಖೆ ನಡೆಸಿದರೂ ಅದು ಸರ್ಕಾರದ ವಿರುದ್ಧವೇ ಆಗಿರುತ್ತದೆ. ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧವೇ ಇರುತ್ತದೆ. ಈ ಕಾರಣದಿಂದ ಯಾವುದೇ ರಾಜಕೀಯ ಪಕ್ಷಗಳಿಗೂ ಈಗ ಬಲಿಷ್ಠವಾದ ಲೋಕಾಯುಕ್ತ ಬೇಡ. ತಮ್ಮ ಮೇಲೆ ತಾವೇ ಸೀಮೆಎಣ್ಣೆ ಎರಚಿಕೊಳ್ಳುವುದು ಬೇಡ ಎಂಬ ಭಾವನೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದೆ.

ನಾನು ಲೋಕಾಯುಕ್ತ ಹುದ್ದೆಯಿಂದ ನಿವೃತ್ತನಾದ ನಂತರ ಆ ಸಂಸ್ಥೆಯನ್ನು ಬಲಹೀನಗೊಳಿಸಲು ಸಾಕಷ್ಟು ಪ್ರಯತ್ನ ನಡೆದಿದೆ. ಭಾಸ್ಕರ್‌ ರಾವ್‌ ಅವರನ್ನು ಲೋಕಾಯುಕ್ತ ಹುದ್ದೆಗೆ ಆಯ್ಕೆ ಮಾಡದಂತೆ ಬಾರ್‌ ಅಸೋಸಿಯೇಷನ್‌ ನಿರ್ಣಯ ಕೈಗೊಂಡು ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರಿಗೆ ಸಲ್ಲಿಸಿತ್ತು. ಆದರೆ, ಅದನ್ನು ಲೆಕ್ಕಿಸದೇ ಆಯ್ಕೆ ಮಾಡಿದರು. ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಸಭೆ ಅಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಸಭಾಪತಿಗಳು ಇಂತಹ ನಿರ್ಣಯ ಕೈಗೊಳ್ಳುವಲ್ಲಿ ಇದ್ದರು. ಆನಂತರ ಲೋಕಾಯುಕ್ತರು ಮತ್ತು ಅವರ ಮಗನ ವಿರುದ್ಧವೇ ಭ್ರಷ್ಟಾಚಾರದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತವನ್ನು ನಾಶ ಮಾಡುವುದಕ್ಕಾಗಿಯೇ ಈ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರು ಎಂಬುದನ್ನು ಇದು ತೋರಿಸುತ್ತದೆ.

ನಂತರ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಲೋಕಾಯುಕ್ತ ಪೊಲೀಸ್‌ ವಿಭಾಗದ ಅಧಿಕಾರವನ್ನು ಹಿಂಪಡೆಯಲು ಯತ್ನಿಸಿತ್ತು. ಆಗ ಜನರಿಂದ ವಿರೋಧ ವ್ಯಕ್ತವಾದಾಗ ಪ್ರಯತ್ನ ಕೈಬಿಟ್ಟರು. 2016ರಲ್ಲಿ ಯಾವ ಚರ್ಚೆಯೂ ಇಲ್ಲದೆ ಎಸಿಬಿ ಸ್ಥಾಪಿಸಿದರು. ಲೋಕಾಯುಕ್ತ ಪೊಲೀಸರ ಅಧಿಕಾರವನ್ನು ಮೊಟಕು ಮಾಡಿದರು. ಎಸಿಬಿ ಕೂಡ ಸ್ವತಂತ್ರ ತನಿಖೆಯ ಅಧಿಕಾರ ಹೊಂದಿಲ್ಲ. ತನಿಖೆಗೂ ಮುನ್ನ ಅನುಮತಿ ಪಡೆಯಬೇಕಾದ ಅಗತ್ಯವಿದೆ. ಇತ್ತೀಚೆಗೆ ಹಿರಿಯ ಅಧಿಕಾರಿಯೊಬ್ಬರ ವಿಚಾರಣೆಗೆ ಅನುಮತಿ ನಿರಾಕರಿಸಲಾಗಿದೆ. ಪಿ.ವಿಶ್ವನಾಥ ಶೆಟ್ಟಿ ಅವರನ್ನು ನೇಮಕ ಮಾಡಿದರೂ ಸರಿಯಾದ ಸಹಕಾರ ನೀಡಲಿಲ್ಲ.

ಲೋಕಾಯುಕ್ತವನ್ನು ಮುಚ್ಚುವುದಕ್ಕೂ ರಾಜಕೀಯ ಪಕ್ಷಗಳಿಗೆ ಧೈರ್ಯವಿಲ್ಲ. ನೆಪಮಾತ್ರಕ್ಕೆ ಅದನ್ನು ಉಳಿಸಲಾಗಿದೆ. ಈಗ ಎಸಿಬಿ ಸ್ಥಾಪನೆಯ ಆದೇಶವನ್ನು ಹಿಂದಕ್ಕೆ ಪಡೆದು ಲೋಕಾಯುಕ್ತ ಪೊಲೀಸ್‌ ವಿಭಾಗವನ್ನು ಸ್ವತಂತ್ರ ತನಿಖಾ ಸಂಸ್ಥೆಯಾಗಿ ಮರುಸ್ಥಾಪಿಸಿದರೆ ಲೋಕಾಯುಕ್ತಕ್ಕೆ ತಾನಾಗಿಯೇ ಬಲ ಬರುತ್ತದೆ.

–ಎನ್‌.ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತ

* ನೀವು ಅಧಿಕಾರಕ್ಕೆ ಬಂದರೆ ಲೋಕಾಯುಕ್ತಕ್ಕೆ ಮತ್ತೆ ಬಲ ತುಂಬಲು, ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್‌ ವಿಭಾಗ ಸ್ವತಂತ್ರವಾಗಿ ಕೆಲಸ ಮಾಡಲು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಮೂರು ಪಕ್ಷಗಳ ಮುಖಂಡರು ನೀಡಿರುವ ಉತ್ತರ ಇಲ್ಲಿದೆ:

ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ದುರ್ಬಲಗೊಳಿಸಿದೆ ಎಂಬುದು ತಪ್ಪು ಕಲ್ಪನೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ- 1984 ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ- 1988 ಎರಡೂ ಪ್ರತ್ಯೇಕವಾದವು. ಲೋಕಾಯುಕ್ತ ಕಾಯ್ದೆಯ ಅನುಸಾರ ಲೋಕಾಯುಕ್ತ ಸಂಸ್ಥೆ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಸ್ವತಂತ್ರವಾದ ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಲಾಗಿದೆ. ಇದರಿಂದ ಲೋಕಾಯುಕ್ತದ ಬಲ ಕುಗ್ಗುವ ಪ್ರಶ್ನೆಯೇ ಉದ್ಭವಿಸದು.

ಲೋಕಾಯುಕ್ತ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷ ಹೆಚ್ಚಿನ ಆಸಕ್ತಿ ಹೊಂದಿದೆ. ಹೆಚ್ಚಿನ ಅಧಿಕಾರ ನೀಡುವಂತೆ ಲೋಕಾಯುಕ್ತರು ಹಲವು ಸಂದರ್ಭಗಳಲ್ಲಿ ಕೋರಿಕೆಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಈ ಎಲ್ಲ ಪ್ರಸ್ತಾವಗಳನ್ನು ಪರಿಶೀಲಿಸಿ, ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ತೀರ್ಮಾನ ಕೈಗೊಳ್ಳುತ್ತದೆ.

– ಟಿ.ಬಿ.ಜಯಚಂದ್ರ, ಕಾನೂನು ಸಚಿವ

ಲೋಕಾಯುಕ್ತ ಸಂಸ್ಥೆಗೆ ಇರಬೇಕಾದ ಘನತೆಯನ್ನು ಮರಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಬಿಜೆಪಿ ಕೈಗೊಳ್ಳುತ್ತದೆ. ಅಧಿಕಾರಕ್ಕೆ ಬಂದ ತಕ್ಷಣವೇ, ರಾಜಕೀಯಪ್ರೇರಿತ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದು ಮಾಡಿ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಮತ್ತೆ ಅಧಿಕಾರ ನೀಡುತ್ತೇವೆ. ಲೋಕಾಯುಕ್ತವನ್ನು ನಿಜವಾದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯನ್ನಾಗಿ ಮಾಡಲಾಗುವುದು.

1986ರಿಂದಲೂ ಕರ್ನಾಟಕ ಲೋಕಾಯುಕ್ತ ಒಂದು ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ ಹೇಗೆ ಇರಬೇಕು ಎಂಬುದಕ್ಕೆ ಮಾದರಿಯಾಗಿತ್ತು. ಭಾಸ್ಕರ್‌ ರಾವ್‌ ಲೋಕಾಯುಕ್ತರಾದ ಬಳಿಕ ಒಂದು ಸಂಸ್ಥೆ ಹೇಗೆ ಇರಬಾರದು ಎಂಬುದಕ್ಕೆ ಮಾದರಿಯಾಯಿತು. ಹಳೆಯ ವೈಭವವನ್ನು ಮರಳಿಸುವ ಕೆಲಸ ಆಗಬೇಕಿದೆ. ಇದಕ್ಕೆ ಕಾಯ್ದೆ ತಿದ್ದುಪಡಿಯ ಅಗತ್ಯವೇನೂ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎಸಿಬಿ ರಚಿಸಲು ಹೊರಡಿಸಿದ ಆದೇಶವನ್ನು ರದ್ದು ಮಾಡಿ, ಲೋಕಾಯುಕ್ತ ಪೊಲೀಸರಿಗೆ ಅಧಿಕಾರ ನೀಡಿದರೆ ಸಾಕು.

-ಎಸ್‌. ಸುರೇಶ್‌ ಕುಮಾರ್, ಬಿಜೆಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ‌

ಲೋಕಾಯುಕ್ತ ಪೊಲೀಸರಿಗೆ ಭ್ರಷ್ಟಾಚಾರ ನಿಗ್ರಹದ ಅಧಿಕಾರ ಕೊಡುವುದು ಮಾತ್ರವಲ್ಲ, ಭ್ರಷ್ಟಾಚಾರದ ಆರೋಪ ಹೊತ್ತ ಸರ್ಕಾರಿ ನೌಕರರು, ಚುನಾಯಿತ ಪ್ರತಿನಿಧಿಗಳ ವಿರುದ್ಧ ವಿಚಾರಣೆ ಪ್ರಾರಂಭಿಸುವ ವಿಚಾರದಲ್ಲಿ ತೀರ್ಮಾನಕ್ಕೆ ಬರುವ ಅಧಿಕಾರವನ್ನು ಲೋಕಾಯುಕ್ತರಿಗೆ ನೀಡಬೇಕು ಎಂಬ ಬೇಡಿಕೆಯೂ ಈ ಹಿಂದೆ ಇತ್ತು. ಜೆಡಿಎಸ್‌ ಅದನ್ನು ಪೂರ್ಣವಾಗಿ ಬೆಂಬಲಿಸುತ್ತದೆ. ವಿಚಾರಣೆಗೆ ಅನುಮತಿ ನೀಡದಿರುವ ಮೂಲಕ, ಭ್ರಷ್ಟಾಚಾರದ ಆರೋಪ ಹೊತ್ತವರನ್ನು ರಕ್ಷಿಸುವ ಅಧಿಕಾರ ಸರ್ಕಾರದ ಬಳಿ ಇರಲು ಬಿಡುವುದಿಲ್ಲ.

ಎಸಿಬಿ ರಚನೆ ವಿರುದ್ಧ ಜೆಡಿಎಸ್‌ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಲೋಕಾಯುಕ್ತದ ಜೊತೆಯಲ್ಲೇ ಅದೂ ಉಳಿಯಬೇಕೇ ಎಂಬುದರ ಕುರಿತು ಮುಂದೆ ತೀರ್ಮಾನ ಪ್ರಕಟಿಸಲಾಗುವುದು.

-ರಮೇಶ್‌ ಬಾಬು, ಜೆಡಿಎಸ್‌ ವಕ್ತಾರ

ಪ್ರತಿಕ್ರಿಯಿಸಿ (+)