ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುತ್ತೀರ್ಣರಾದ ಅಧಿಕಾರಿಗಳು ಉದಾಸೀನ ಧೋರಣೆ ಅಕ್ಷಮ್ಯ

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚುನಾವಣಾಧಿಕಾರಿ (ಆರ್‍ಒ) ಹಾಗೂ ಸಹಾಯಕ ಚುನಾವಣಾಧಿಕಾರಿ (ಎಆರ್‍ಒ) ಹುದ್ದೆಗಳಿಗೆ ನಿಯೋಜಿತರಾಗಿರುವ ಅಧಿಕಾರಿಗಳ ಪೈಕಿ ಅನೇಕರು ಚುನಾವಣಾ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬುದು ಗಂಭೀರವಾದ ವಿಚಾರ. ಅನುತ್ತೀರ್ಣಗೊಂಡವರಲ್ಲಿ ಕೆಎಎಸ್ ಶ್ರೇಣಿಯ ಅಧಿಕಾರಿಗಳೇ ಹೆಚ್ಚಿದ್ದಾರೆ ಎಂಬುದಂತೂ ಈ ವಿಚಾರವನ್ನು ಮತ್ತಷ್ಟು ಗಂಭೀರವಾಗಿಸಿದೆ. ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿರುವ 224 ಅಧಿಕಾರಿಗಳ ಪೈಕಿ 87 ಮಂದಿ ಅನುತ್ತೀರ್ಣರಾಗಿದ್ದಾರೆ. ಇನ್ನು ಸಹಾಯಕ ಚುನಾವಣಾಧಿಕಾರಿಗಳಾಗಿ ನಿಯೋಜನೆಗೊಂಡಿರುವ 300 ಅಧಿಕಾರಿಗಳ ಪೈಕಿ 223ರಷ್ಟು ಹೆಚ್ಚಿನ ಮಂದಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿಲ್ಲ ಎಂಬುದು ನಾಚಿಕೆಗೇಡು. ಈ ಪರೀಕ್ಷೆಗೂ ಮೊದಲು ಈ ಅಧಿಕಾರಿಗಳಿಗೆ ತರಬೇತಿ ಬೇರೆ ನೀಡಲಾಗಿರುತ್ತದೆ. ಹೀಗಿದ್ದೂ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುತ್ತಿರುವ ಅಧಿಕಾರಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದರೆ  ಇದು ಉದಾಸೀನ, ನಿರ್ಲಕ್ಷ್ಯದ ಪರಾಕಾಷ್ಠೆ ಎನ್ನಬಹುದು. ಉಪವಿಭಾಗಾಧಿಕಾರಿ, ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ, ಮುಖ್ಯ ಯೋಜನಾಧಿಕಾರಿ, ವಿವಿಧ ಇಲಾಖೆಗಳ ನಿರ್ದೇಶಕರು, ಜಂಟಿ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಪಾಲಿಕೆ ಆಯುಕ್ತ, ಪರಿಸರ ಅಧಿಕಾರಿ, ವಿಶೇಷ ಭೂ ಸ್ವಾಧೀನಾಧಿಕಾರಿಗಳಂತಹ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿರುವವರನ್ನು ಚುನಾವಣಾಧಿಕಾರಿಗಳಾಗಿ ನಿಯೋಜಿಸಲಾಗಿದೆ. ಹಾಗೆಯೇ ತಹಶೀಲ್ದಾರ್, ವಿಶೇಷ ತಹಶೀಲ್ದಾರ್, ಸಹಾಯಕ ಕಂದಾಯ ಅಧಿಕಾರಿ, ಪಾಲಿಕೆಗಳ ಕೌನ್ಸಿಲ್ ಕಾರ್ಯದರ್ಶಿಗಳು, ಸಹಾಯಕ ಕಾರ್ಮಿಕ ಆಯುಕ್ತರಂತಹ ಅಧಿಕಾರಿಗಳನ್ನು ಸಹಾಯಕ ಚುನಾವಣಾಧಿಕಾರಿಗಳಾಗಿ ನಿಯೋಜಿಸಲಾಗಿದೆ. ಚುನಾವಣೆ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪರೀಕ್ಷೆಯನ್ನು ಪಾಸು ಮಾಡಲಾಗದ ಈ ಅಧಿಕಾರಿಗಳು ತಂತಮ್ಮ ಹುದ್ದೆಗಳಿಗೆ ಏನು ನ್ಯಾಯ ಒದಗಿಸುತ್ತಿದ್ದಾರೆ? ಎಂಬುದು ಸಹಜವಾಗಿ ಮೂಡುವ ಪ್ರಶ್ನೆ.

ತೇರ್ಗಡೆಯಾಗದ ಅಧಿಕಾರಿಗಳಿಗೆ ಮತ್ತೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಅಧಿಕಾರಿಗಳು ಈಗ ನಿರ್ವಹಿಸುತ್ತಿರುವ ಕಾರ್ಯಗಳಿಗಿಂತಲೂ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕ್ಲಿಷ್ಟಕರವಾಗಿದೆಯೇ? ಈ ಮಟ್ಟಿಗಿನ ಅದಕ್ಷತೆ ನಮ್ಮ ಅಧಿಕಾರಿಗಳಲ್ಲಿದೆ ಎಂದರೆ ಅದು ಆಡಳಿತ ವ್ಯವಸ್ಥೆಯ ಬಗ್ಗೆ ಜನರ ವಿಶ್ವಾಸವನ್ನು ಕುಂದಿಸುವಂತಹದ್ದು. ಮುಕ್ತ ಹಾಗೂ ನ್ಯಾಯುಯುತ ಚುನಾವಣೆಗಳನ್ನು
ನಡೆಸುವುದಕ್ಕಾಗಿ ಮತದಾನ, ಮತ ಎಣಿಕೆ ಪ್ರಕ್ರಿಯೆ ಸೇರಿದಂತೆ ಚುನಾವಣೆ ಪ್ರಕ್ರಿಯೆಯ ವಿವಿಧ ವಿಚಾರಗಳ ಬಗ್ಗೆ  ಈ ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ನಂತರ ಪರೀಕ್ಷೆಯನ್ನೂ ನಡೆಸುತ್ತಿರುವುದು ಇದೇ ಮೊದಲು. ಚುನಾವಣೆ ಪ್ರಕ್ರಿಯೆಯಲ್ಲಿ ವಿಶೇಷ ಅಧಿಕಾರವನ್ನು ಹೊಂದುವ ಈ ಅಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿ ಸೂಕ್ಷ್ಮವಾದದ್ದು. ನಿರ್ಣಯಗಳನ್ನು ಕೈಗೊಳ್ಳಬೇಕಾದ ಶಕ್ತಿಯನ್ನು ಪಡೆದುಕೊಂಡಿರಬೇಕಾಗುತ್ತದೆ.

ಹೀಗಾಗಿ, ಪ್ರಜಾಪ್ರತಿನಿಧಿ ಕಾಯಿದೆ, ಅಭ್ಯರ್ಥಿಗಳ ವೆಚ್ಚ, ಚುನಾವಣೆ ನೀತಿ ಸಂಹಿತೆ, ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂ) ಹಾಗೂ ಮತದಾನ  ಖಾತ್ರಿಗಾಗಿ ವಿವಿಪ್ಯಾಟ್ ಯಂತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಚುನಾವಣೆ ಪ್ರಕ್ರಿಯೆಯ ಇತರ ವಿಷಯಗಳ ಬಗ್ಗೆಯೂ ಸೂಕ್ಷ್ಮ ಅರಿವು ಹೊಂದಿರುವಂತೆ ಅಧಿಕಾರಿಗಳನ್ನು ಸಜ್ಜುಗೊಳಿಸಲಾಗುತ್ತದೆ. ನಿಷ್ಪಕ್ಷಪಾತ ರೀತಿಯಲ್ಲಿ ಚುನಾವಣೆಗಳನ್ನು ನಡೆಸಲು ಇಡೀ ಚುನಾವಣೆ ಪ್ರಕ್ರಿಯೆ ಬಗ್ಗೆ ಈ ಅಧಿಕಾರಿಗಳಲ್ಲಿ ಸಂವೇದನಾಶೀಲತೆ ಮೂಡಿಸುವುದು ಈ ತರಬೇತಿ ಹಾಗೂ ಪರೀಕ್ಷೆಯ ಉದ್ದೇಶ. ಮತದಾರರ ಪಟ್ಟಿ ಪರಿಶೀಲನೆ, ಮತಗಟ್ಟೆ ಭದ್ರತೆ ಹಾಗೂ ಭದ್ರತಾ ಕೊಠಡಿ ಸುರಕ್ಷತೆ ವಿಚಾರಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ಹೀಗಿರುವಾಗ, ಈ ಬಗ್ಗೆ ಅಧಿಕಾರಿಗಳ ಲಘು ಧೋರಣೆ ಖಂಡಿತಾ ಸಲ್ಲದು. ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರೂರುವಲ್ಲಿ ಚುನಾವಣೆಗಳದ್ದು ಮಹತ್ವದ ಪಾತ್ರ. ಚುನಾವಣೆಯನ್ನು ನಿರ್ಭೀತ ವಾತಾವರಣದಲ್ಲಿ ಪಾರದರ್ಶಕವಾಗಿ ನಡೆಸುವುದಕ್ಕಾಗಿ ಅಗತ್ಯ ಕೌಶಲಗಳೊಂದಿಗೆ ಸಜ್ಜುಗೊಳ್ಳಲು ಅಧಿಕಾರಿಗಳ ಪಡೆ ಉತ್ಸುಕತೆ ತೋರಬೇಕಾದುದು ವೃತ್ತಿಧರ್ಮ. ಈ ಕುರಿತ ಕರ್ತವ್ಯ ಪ್ರಜ್ಞೆ ನಮ್ಮ ಅಧಿಕಾರಿಗಳಲ್ಲಿ ಮೂಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT