ಶುಕ್ರವಾರ, ಡಿಸೆಂಬರ್ 6, 2019
26 °C

ಪುಣ್ಯ-ಪಾಪವೆಂಬವು ತಮ್ಮಿಷ್ಟ ಕಂಡಿರೇ

Published:
Updated:
ಪುಣ್ಯ-ಪಾಪವೆಂಬವು ತಮ್ಮಿಷ್ಟ ಕಂಡಿರೇ

ಪುಣ್ಯ-ಪಾಪಗಳ ಬಗ್ಗೆ ಇರುವ ಅರಿವು, ಆತಂಕ, ಭಯ-ಭೀತಿಗಳು ಒಮ್ಮೊಮ್ಮೆ ವ್ಯಕ್ತಿಯನ್ನು ವಿಚಲಿತಗೊಳಿಸುವುದು ಸ್ವಾಭಾವಿಕ. ಕರ್ಮಗಳನ್ನಾಚರಿಸದೆ ಯಾರೂ ಜೀವಿಸಲು ಸಾಧ್ಯವಿಲ್ಲ. ಸತ್ಕಾರ್ಯಗಳನ್ನು ಮಾಡಿದರೆ ಪುಣ್ಯ ಲಭಿಸುತ್ತದೆ  ಎಂದು ಅನೇಕರು ನಂಬಿಕೊಂಡಿರುತ್ತಾರೆ.

ಹಾಗೆಯೇ ಕೆಟ್ಟ ಕೆಲಸಗಳನ್ನು ಮಾಡಿದವರು ಪಾಪಿಗಳೆಂದೂ, ಅವರು ದುಃಖವನ್ನು ಅನುಭವಿಸುತ್ತಾರೆಂದೂ ಜನರು ಭಾವಿಸಿರುತ್ತಾರೆ. ಪಾಪ-ಪುಣ್ಯಗಳ ಈ ಭಯದಿಂದ ಜನರು ಒಳ್ಳೆಯ ಕಾರ್ಯಗಳನ್ನು ಹೆಚ್ಚೆಚ್ಚು ಮಾಡಲಿ ಎಂಬ ಆಶಯ ಇರಬಹುದು. ಆದರೆ ಜೀವನದಲ್ಲಿ ಅರಿತೊ ಅರಿಯದೆಯೋ ಒಮ್ಮೊಮ್ಮೆ ತಪ್ಪು ಕಾರ್ಯಗಳನ್ನು ಮಾಡುತ್ತಾರೆ. ಅದರಿಂದ ನಿಸ್ಸಹಾಯಕರಾಗಿ, ಆತಂಕಿತರಾಗಿ ಗೋಳಾಡುತ್ತಾರೆ. ಇಂಥ ಸಂದರ್ಭದಲ್ಲಿ ಅವರು ಪುರೋಹಿತಶಾಹಿಗಳ ಕೈಯಲ್ಲಿ ಸಿಲುಕಿ ಶೋಷಣೆಗೊಳಗಾಗುತ್ತಾರೆ.

ಪುರೋಹಿತರು ಸುವರ್ಣದಾನ, ಭೂದಾನ ಮುಂತಾದ ಅನೇಕ ದಾನಗಳಿಂದ ಆತಂಕಿತರನ್ನು ಸುಲಿಯುತ್ತಾರೆ. ಎಲವೋ ಎಲವೋ ಪಾಪಕರ್ಮವ ಮಾಡಿದವನೇ, ಎಲವೋ ಎಲವೋ ಬ್ರಹ್ಮಹತ್ಯವ ಮಾಡಿದವನೇ ಒಮ್ಮೆ ಶರಣೆನ್ನೆಲವೋ, ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು, ಸರ್ವ ಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದುವು ಎನ್ನುವ ಬಸವಣ್ಣನವರು ಸುವರ್ಣದಾನ, ಭೂದಾನಗಳಿಂದ ಪಾಪದ ಪ್ರಾಯಶ್ಚಿತ್ತ ಸಾಧ್ಯವಿಲ್ಲ. ಹಾಗೆ ಮಾಡ ಹೊರಟರೆ ಚಿನ್ನದ ಪರ್ವತಗಳೇ ಸಾಕಾಗುವುದಿಲ್ಲ ಎನ್ನುತ್ತಾರೆ.

ಅವರ ದೃಷ್ಟಿಯಲ್ಲಿ ನಿರ್ಮಲ ಮನಸ್ಸಿನಿಂದ ಭಗವಂತನಿಗೆ ಶರಣಾಗುವುದಕ್ಕಿಂತ ದೊಡ್ಡ ಪ್ರಾಯಶ್ಚಿತ ಮತ್ತೊಂದಿಲ್ಲ. ಹಿಂದೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡದಿರುವ ದೃಢನಿಷ್ಠೆ ಇದ್ದರೆ ಎಲ್ಲ ಪಾಪಗಳೂ ತಾನಾಗಿಯೇ ಕರಗಿ ಹೋಗುತ್ತವೆ.

ಪಾಪನಾಶದ ಅನೇಕ ಮಾರ್ಗಗಳಿವೆ. ಭಗವಂತನ ನಾಮಸ್ಮರಣೆಯಿಂದ ಪಾಪ ನಾಶವು ಸಾಧ್ಯ. ಸದಾ ಭಗವಂತನನ್ನು ಸ್ಮರಿಸುವವರ ಪಾಪಗಳು ಉರಿಗೊಡ್ಡಿದ ಅರಗಿನಂತೆ ಕರಗಿ ಹೋಗುತ್ತವೆ. ಹಾಗೆಯೇ ಶಿವಶರಣರ ಸಂಗದಲ್ಲಿದ್ದು ಅವರ ಉಪದೇಶವನ್ನು ಕೇಳುತ್ತ ಅವುಗಳನ್ನು ಬದುಕಿನಲ್ಲಿ ಅನುಷ್ಠಾನಗೊಳಿಸುವವರ ಪಾಪಗಳೂ ಬಿಟ್ಟು ಹೋಗುವವು. ಶಿವಭಕ್ತರಿಗೆ ಶರಣೆಂದು ಬಾಗಿ ನಡೆಯುವುದೂ ಜನ್ಮಜನ್ಮಾಂತರಗಳ ಪಾಪನಾಶಕ್ಕೆ ಕಾರಣವಾಗುವುದು.

ಕೆಲವು ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಪೂರೈಸಿದವರ ಪಾಪಗಳೂ ಪರಿಹಾರಗೊಳ್ಳುತ್ತವೆ ಎನ್ನುತ್ತಾರೆ ಬಸವಣ್ಣನವರು. ಲಲಾಟದಲ್ಲಿ ವಿಭೂತಿಯ ಬರೆಯಲಿಕೆ ಪಾಪ ಪಲ್ಲಟವಾಗದೇ ಅಯ್ಯಾ, ಎನ್ನುವ ಅವರು ಕಹಿಯಾದ ಸೋರೆಕಾಯಿಗೆ ವಿಭೂತಿ ತುಂಬಿದರೆ ಸಿಹಿಯಾಗುತ್ತದೆ, ಹಾಗೆಯೇ ನಿತ್ಯವೂ ಹತ್ಯೆಗಾಗಿ ಉಪಯೋಗಿಸುವ ಸೂನೆಗಾರನ ಕತ್ತಿಯೂ ಪರುಷ ಸ್ಪರ್ಶದಿಂದ ಹೊನ್ನಾಗುವುದು ಎಂಬ ಉದಾಹರಣೆಗಳನ್ನು ನಮ್ಮ ಮುಂದಿರಿಸುತ್ತಾರೆ.

ಇವೆಲ್ಲಕ್ಕಿಂತ ಭಗವಂತನನ್ನು ಹೃದಯ ಕಮಲದಲ್ಲಿ ನೆಲೆಗೊಳಿಸಿಕೊಳ್ಳುವುದು ಬಹಳ ಮುಖ್ಯ. ಬಸವಣ್ಣನವರು ಪುಣ್ಯ-ಪಾಪವೆಂಬವು ತಮ್ಮಿಷ್ಟ ಕಂಡಿರೇ ಎನ್ನುತ್ತಾರೆ. ಪುಣ್ಯ ಪಾಪಗಳ ಈ ಅರಿವು ಮನುಷ್ಯನಿಗಿರಬೇಕಾದುದು ಅತ್ಯವಶ್ಯ. ಮರೆವು ಮನುಷ್ಯನನ್ನು ನುಂಗುವ ಭೂತ; ಅದೇ ಕತ್ತಲು. ಮನುಷ್ಯನು ಅರಿವಿನ ಬೆಳಕನ್ನು ಕಂಡರೆ ಕತ್ತಲೆ ತಾನಾಗಿಯೇ ಹರಿಯುತ್ತದೆ. ಆಗ ಪಾಪ-ಪುಣ್ಯವೆಂಬ ಕೋಳ ಕೊಡವಿ ಬೆಳಕಿಂಗೆ ಬೆಳಕಾಗಿ ಬದುಕಬಹುದು ಎಂಬುದು ಧರ್ಮಗುರು ಬಸವಣ್ಣನವರ ಆಶಯವಾಗಿದೆ.

ಪ್ರತಿಕ್ರಿಯಿಸಿ (+)