ಶುಕ್ರವಾರ, ಡಿಸೆಂಬರ್ 13, 2019
19 °C
ದಶಕದಿಂದ ದಶಕಕ್ಕೆ ಬದಲಾಗುತ್ತಾ ಬಂದಿದೆ ಮತದಾರನ ಚಿತ್ತ

‘ಸುಶಿಕ್ಷಿತರ ಮಲೆನಾಡಿನಲ್ಲಿ‌’ ಬಾಕಿ ಉಳಿದಿವೆ ನಿರೀಕ್ಷೆಗಳು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

‘ಸುಶಿಕ್ಷಿತರ ಮಲೆನಾಡಿನಲ್ಲಿ‌’ ಬಾಕಿ ಉಳಿದಿವೆ ನಿರೀಕ್ಷೆಗಳು

ವಾರಾಹಿ, ಶರಾವತಿ ಅಣೆಕಟ್ಟುಗಳ ನಿರ್ಮಾಣದ ಮುಳುಗಡೆ ಹೊಮ್ಮಿಸಿದ ಬಿಸಿಯುಸಿರಿನ ಕಾವು ಇನ್ನೂ ಇದೆ. ತಮ್ಮೂರಿನ ಮರಳನ್ನು ಸಲೀಸಾಗಿ ಚೀಲಕ್ಕೆ ತುಂಬಿಸಿಕೊಂಡು ಬಂದು ಮನೆ ಕಟ್ಟಲಾಗುತ್ತಿಲ್ಲವಲ್ಲ ಎಂಬ ಕಾರಣಕ್ಕೆ ಕೆಲವರಲ್ಲಿ ಕೋಪ. ಭೂಮಿ ಹಕ್ಕು ಪಡೆಯಲು ಅರ್ಜಿ ಹಾಕಿ ಚಾತಕಪಕ್ಷಿಗಳಾದವರದ್ದೂ ನಿಟ್ಟುಸಿರೇ.

ಇಂಥ ಸಮಸ್ಯೆಗಳು ಚೆಲ್ಲಾಪಿಲ್ಲಿಯಾಗಿ ಕಾಣುವ ತೀರ್ಥಹಳ್ಳಿ ಕ್ಷೇತ್ರ ಮುಖ್ಯವೆನ್ನಿಸುವುದು ಇಲ್ಲಿನ ಪ್ರಜ್ಞಾವಂತ ಮತದಾರನಿಂದ. ‘ಸುಶಿಕ್ಷಿತರ ಮಲೆನಾಡು’ ಎಂದೇ ಹೆಸರುವಾಸಿಯಾದ ಕ್ಷೇತ್ರವಿದು. ಕಾಂಗ್ರೆಸ್‌ನ ಬೇರುಗಳನ್ನು ಬೇಗನೇ ಕಿತ್ತು, ಶಾಂತವೇರಿ ಗೋಪಾಲಗೌಡರ ಸಮಾಜವಾದದ ಹೆಜ್ಜೆಗುರುತುಗಳನ್ನು ಮೂಡಿಸಿಕೊಂಡ ಈ ಪ್ರದೇಶದಲ್ಲಿ ಡಿ.ಬಿ. ಚಂದ್ರೇಗೌಡರು ಜನತಾ ದಳಕ್ಕೂ ಅಸ್ತಿತ್ವ ದಕ್ಕಿಸಿಕೊಟ್ಟರು. ಅವರಿಂದ ಬ್ಯಾಟನ್ ಅನ್ನು ಬಿಜೆಪಿ ಕಿತ್ತುಕೊಂಡಿತು. ಆರಗ ಜ್ಞಾನೇಂದ್ರ ಮೂರು ಅವಧಿಗೆ ಶಾಸಕರಾದರು.

ಈಗ ಕಿಮ್ಮನೆ ರತ್ನಾಕರ ಇಲ್ಲಿನ ಶಾಸಕ. ಶುದ್ಧಹಸ್ತ ಎಂದು ಕಾಂಗ್ರೆಸ್‌ ಪ್ರಿಯರು ಹಾಗೂ ಅನೇಕ ಸುಶಿಕ್ಷಿತರು ಅವರನ್ನು ಬಣ್ಣಿಸು

ತ್ತಾರೆ. ಜೆಡಿಎಸ್‌ನವರ ಕಣ್ಣಿಗೆ ಅವರು ‘ಗುಡ್ ಫಾರ್ ನಥಿಂಗ್’. ಬಿಜೆಪಿ ಪ್ರಕಾರ, ಕಣ್ಣಿಗೆ ಕಾಣುವ ಅಭಿವೃದ್ಧಿ ಕೆಲಸಗಳು ಇಲ್ಲಿ ಆಗಿಲ್ಲ. ಬರೀ ತೀರ್ಥಹಳ್ಳಿ ಪಟ್ಟಣವೊಂದರ ಅಭಿವೃದ್ಧಿಯನ್ನೇ ಇಡೀ ಕ್ಷೇತ್ರದ ಬೆಳವಣಿಗೆ ಎನ್ನಲಾದೀತೇ ಎಂಬುದು ಜೆಡಿಎಸ್, ಬಿಜೆಪಿ ಎರಡೂ ಪಕ್ಷಗಳವರು ಎತ್ತುವ ಪ್ರಶ್ನೆ.

ವಾರಾಹಿ, ಶರಾವತಿ, ತುಂಗಾ ಮೇಲ್ದಂಡೆ, ಸಾವೆಹಕ್ಕಲು ಹೀಗೆ ನಾಲ್ಕು ಅಣೆಕಟ್ಟೆ ನಿರ್ಮಾಣದ ಯೋಜನೆಗಳಿಂದ 32,000 ಹೆಕ್ಟೇರ್‌ನಷ್ಟು ಪ್ರದೇಶ ಮುಳುಗಡೆಯಾಯಿತು. ಅರ್ಧ ಕ್ಷೇತ್ರವೇ ಮುಳುಗಿದಂಥ ತೀವ್ರ ಸಮಸ್ಯೆ ಇದು. ಒಂಟಿ ಮನೆಗಳು ಹೆಚ್ಚಾಗಿರುವ ಗ್ರಾಮಗಳಲ್ಲಿ ಮತದಾರನ ಚಿತ್ತ ದಶಕದಿಂದ ದಶಕಕ್ಕೆ ಬದಲಾಗುತ್ತಾ ಬಂದಿರುವುದು, ನಿರೀಕ್ಷೆಗಳು ಬಾಕಿ ಉಳಿದಿವೆ ಎನ್ನುವುದರ ಸಂಕೇತ.

(ಕಿಮ್ಮನೆ ರತ್ನಾಕರ)

ಆಶ್ರಯ ಸಮಿತಿಯ ಅಧ್ಯಕ್ಷರೂ ಆಗಿರುವ ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಮೇಗರವಳ್ಳಿ ಮೂಲಕ ಹೊಸನಗರಕ್ಕೆ ಸಂಪರ್ಕ ಕಲ್ಪಿಸಿದ ಸೇತುವೆ ಕಾಮಗಾರಿಯ ಶ್ರೇಯಸ್ಸನ್ನು ಕಿಮ್ಮನೆ ಅವರಿಗೆ ಕೊಡುತ್ತಾರೆ. 70–80 ಕಿ.ಮೀ ಸುತ್ತಿಕೊಂಡು ತಾಲ್ಲೂಕು ಕೇಂದ್ರ ತಲುಪಬೇಕಿದ್ದ ಜನರಿಗೆ ಇದರಿಂದ ಆದ ಲಾಭ ದೊಡ್ಡದೆನ್ನುವುದು ಅವರ ಹೆಮ್ಮೆ. ನೂರಾರು ಶಾಲೆಗಳ ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನ ತಂದದ್ದನ್ನೂ ಅವರು ಉಲ್ಲೇಖಿಸುತ್ತಾರೆ. ತಾವೇ ಓದಿದ ತೀರ್ಥಹಳ್ಳಿ ಶಾಲೆಯ ಅಭಿವೃದ್ಧಿಗೆ ಎರಡೂಕಾಲು ಕೋಟಿ ರೂಪಾಯಿ ಖರ್ಚು ಮಾಡಿದ್ದೇ ಅಲ್ಲದೆ ಅದಕ್ಕೆ ಡಾ. ಯು.ಆರ್. ಅನಂತಮೂರ್ತಿ ಅವರ ಹೆಸರಿಟ್ಟಿದ್ದನ್ನು ಜಾತ್ಯತೀತ ನಡೆ ಎಂದು ಹೇಳುತ್ತಾರೆ. ₹ 200 ಕೋಟಿ ಮೊತ್ತವನ್ನು ಸಚಿವರು ಮೂಲಸೌಕರ್ಯಕ್ಕೆ ತಂದಿದ್ದಾರೆ ಎಂಬ ಮಾತನ್ನೂ ಸೇರಿಸುತ್ತಾರೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷರೂ ಆಗಿರುವ ಬಿಜೆಪಿಯ ಸಂದೇಶ್ ಜವಳಿ, ಅಡಿಕೆ ಸಂಶೋಧನಾ ಕೇಂದ್ರದ ಕಡೆಗೆ ಬೆರಳು ಮಾಡುತ್ತಾರೆ. ಆರಗ ಜ್ಞಾನೇಂದ್ರ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ಈ ಸಂಶೋಧನಾ ಕೇಂದ್ರಕ್ಕೆ ಕಚೇರಿ ಸಿದ್ಧವಾಗಿ, ಕೆಲವು ಸಿಬ್ಬಂದಿಯ ನೇಮಕವೂ ಆಯಿತು. ಆದರೆ ಪ್ರಯೋಗಾಲಯ ಸಾಕಾರಗೊಳ್ಳಲೇ ಇಲ್ಲ. ಒಬ್ಬಿಬ್ಬರು ಅಧಿಕಾರಿಗಳ ನೇಮಕವಾಗಿದೆ. ಕೆಲಸ ಅಲ್ಲೇ ನಿಂತಿದೆ ಎನ್ನುವುದು ಅವರ ಆರೋಪ.

(ಆರ್‌.ಎಂ.ಮಂಜುನಾಥ ಗೌಡ)

ಆಗುಂಬೆ ಘಾಟಿಯ ನವೀಕರಣಕ್ಕೆ ₹ 600 ಕೋಟಿ ತರುವ ಮಾತನಾಡಿದ ಕಿಮ್ಮನೆ, ₹ 3 ಕೋಟಿಯಲ್ಲಷ್ಟೇ ನವೀಕರಣ ಮಾಡಿದ್ದಾರೆಂದು ದೂರುತ್ತಾರೆ. ತಿರುವುಗಳನ್ನು ಕಡಿಮೆ ಮಾಡುವ ಪ್ರಸ್ತಾವ ಇನ್ನೂ ಸಾಕಾರಗೊಂಡಿಲ್ಲವೆನ್ನುವ ಅವರು, 100 ಹಾಸಿಗೆಗಳ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆಯ ಸ್ಥಿತಿ ಸುಧಾರಿಸಲು ಕ್ರಮ ಕೈಗೊಂಡಿಲ್ಲ ಎಂದು ಹೇಳುತ್ತಾರೆ. ದಾನಿಗಳೇ ಉಚಿತ ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮಾಡಿದ್ದನ್ನು ಉದಾಹರಿಸುತ್ತಾರೆ.

ಸಾವಿರ ವರ್ಷಗಳಷ್ಟು ಹಳೆಯ ರಾಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಅರ್ಧಕ್ಕೇ ನಿಂತಿರುವುದರ ಕುರಿತೂ ಅವರಿಗೆ ಬೇಸರವಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪಟ್ಟಣ ಪಂಚಾಯಿತಿಗೇ ₹ 25 ಕೋಟಿ ಅನುದಾನ ಹರಿದುಬಂದಿತ್ತು, ಈಗ ಏಳೆಂಟು ಕೋಟಿಯನ್ನೂ ತರಲು ಆಗಿಲ್ಲ ಎನ್ನುತ್ತಾ ನಗುತ್ತಾರೆ.

(ಆರಗ ಜ್ಞಾನೇಂದ್ರ)

ಚಂಗಾರು ಸೇತುವೆ ಕಾಮಗಾರಿ ಪ್ರಾರಂಭಿಸಿರುವುದು ಕಾಂಗ್ರೆಸ್‌ಗೆ ಹೆಮ್ಮೆ. ಆದರೆ, ಅದು ಎಷ್ಟು ವೇಗವಾಗಿ ಪೂರ್ಣಗೊಳ್ಳುವುದೋ ಎನ್ನುವ ಬಗೆಗೆ ಜನರಿಗೆ ಅನುಮಾನವಿದೆಯಲ್ಲ ಎಂದು ಬಿಜೆಪಿಯವರು ಪ್ರಶ್ನೆ ಹಾಕುತ್ತಾರೆ.

ಹೊನ್ನೆತಾಳು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆದ ಜೆಡಿಎಸ್‌ನ ಎನ್.ಜಿ. ಶಚೀಂದ್ರ ಹೆಗಡೆ, ಹಳ್ಳಿಗಾಡಿನ ರಸ್ತೆಗಳ ದುಃಸ್ಥಿತಿಗೆ ಕನ್ನಡಿ ಹಿಡಿಯುತ್ತಾರೆ. ಬರೀ ₹ 10-15 ಸಾವಿರ ರೂಪಾಯಿ ಸಂಬಳಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುತ್ತಿರುವ ಯುವಕ–ಯುವತಿಯರ ನಿರುದ್ಯೋಗದ ಸಮಸ್ಯೆ ನೀಗಲು ಇಲ್ಲಿ ಯಾವ ಹೆಜ್ಜೆಯನ್ನೂ ಇಟ್ಟಿಲ್ಲ ಎಂಬ ತಕರಾರು ಅವರದ್ದು. 15 ಸಾವಿರ ಬಗರ್‌ಹುಕುಂ ಅರ್ಜಿಗಳಲ್ಲಿ 200 ಮಾತ್ರ ವಿಲೇ ಆಗಿವೆ ಎನ್ನುವ ಅವರು, ಕಿಮ್ಮನೆ ರತ್ನಾಕರ ಅವರ ಮಾತನ್ನು ಅಧಿಕಾರಿಗಳು ಕೇಳುವುದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

ಬಂಗಾರಪ್ಪ ಅವರ ನಂತರ ತೀರ್ಥಹಳ್ಳಿಯ ಈಡಿಗ ಮತದಾರರನ್ನು ಸೆಳೆಯಬಲ್ಲ ‘ಮಾಸ್ ನಾಯಕ’ ಯಾರೂ ಬಂದಿಲ್ಲ ಎನ್ನುವ ಅವರು, ಪಕ್ಕದ ಕ್ಷೇತ್ರದ ಕಾಗೋಡು ತಿಮ್ಮಪ್ಪನವರ ಪ್ರಭಾವ ಇಲ್ಲಿ ಇಲ್ಲ ಎನ್ನುತ್ತಾರೆ.

ಒಕ್ಕಲಿಗ ಮತದಾರರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಿಮ್ಮನೆ ರತ್ನಾಕರ, ಬಿಜೆಪಿಯಿಂದ ಆರಗ ಜ್ಞಾನೇಂದ್ರ, ಜೆಡಿಎಸ್‌ನಿಂದ ಆರ್‌.ಎಂ. ಮಂಜುನಾಥ ಗೌಡ ಸ್ಪರ್ಧಿಸುವ ಸಾಧ್ಯತೆ ಇದ್ದು, ಮರಳು ಗಣಿಗಾರಿಕೆ ಇಲ್ಲಿ ಪ್ರಮುಖ ದಾಳವಾಗಿದೆ. ಮರಳು ನೀತಿಯಲ್ಲಿನ ಬಿಗಿಯಾದ ನಿಲುವು ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿರುವುದು ನಿಜ. 38 ಬ್ಲಾಕ್‌ಗಳ ಹರಾಜಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆ‌ದಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಕಾರಣ, ಕಿಮ್ಮನೆ ರತ್ನಾಕರ ಅವರೂ ಈ ವಿಷಯದಲ್ಲಿ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ವಿಶ್ವನಾಥ ಶೆಟ್ಟಿ ಸಮಜಾಯಿಷಿ ನೀಡುತ್ತಾರೆ.

ಅಗಲವಾದ ತೀರ್ಥಹಳ್ಳಿಯ ರಸ್ತೆಗಳ ಮೇಲೆ ನಿಂತ ಎಷ್ಟೋ ಜನರಿಗೆ ಇಲ್ಲಿನ ನೆಲದ ಸಮಸ್ಯೆಗಳ ಅರಿವಿದೆ. ತುಂಗಾ, ಮಾಲತಿ, ಶರಾವತಿ ನದಿಗಳಲ್ಲಿ ಹರಿದಿರುವ ನೀರಿನ ಘಮಲನ್ನು ಆಘ್ರಾಣಿಸಿರುವ ಜನರಿಗೆ ರಸ್ತೆ ಸಂಚಾರದ ಸಂಪರ್ಕದಲ್ಲಿನ ತೊಡರುಗಳು ಗೊತ್ತು. ಶಾಲಾ ಬಾಲಕಿ ನಂದಿತಾ ಮೃತಪಟ್ಟ ಪ್ರಕರಣದಲ್ಲಿ ನಡೆಯುತ್ತಿರುವ ರಾಜಕೀಯದ ಮರ್ಮವೂ ತಿಳಿದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನಂದಿತಾ ಮನೆಗೆ ಭೇಟಿ ನೀಡಿದ್ದನ್ನು ಕಂಡ ಮತದಾರರಲ್ಲಿ ಈ ವಿಷಯವಾಗಿ ಒಂದು ಮಟ್ಟದ ಚರ್ಚೆ ನಡೆದಿದೆ. ಕಿಮ್ಮನೆ ರತ್ನಾಕರ ಪಾದಯಾತ್ರೆ ನಡೆಸಿ ಮಾಡಿರುವ ಟೀಕೆಗಳ ಸತ್ಯಾಸತ್ಯತೆಯನ್ನೂ ಬಲ್ಲರು. ದಕ್ಷಿಣ ಕನ್ನಡದಿಂದ ವಲಸೆ ಬಂದಿರುವ 25–30 ಸಮಾಜಗಳ ಜನರ ಮತಗಳು ಮುಖ್ಯವಾಗುತ್ತವೆ ಎನ್ನುವ ಮಂದಿಯ ನಡುವೆ, ಶೇ 12ರಷ್ಟು ಯುವ ಮತದಾರರಿದ್ದಾರೆ.

‘ಭ್ರಷ್ಟನಾದನಾ ಮತದಾರ?’

1952ರಲ್ಲಿ ಕಡಿದಾಳು ಮಂಜಪ್ಪ ಅವರು ಮಾಲತಿ ನದಿಗೆ ಸೇತುವೆ ಕಟ್ಟಿದರು. ಆಮೇಲೆ ಕಲ್ಮನೆ ಸೇತುವೆ ನಿರ್ಮಾಣವಾಯಿತು. 1983ರಲ್ಲಿ ಡಿ.ಬಿ. ಚಂದ್ರೇಗೌಡರು ಗೆದ್ದ ಮೇಲೆ ರಸ್ತೆಗಳ ನಿರ್ಮಾಣವಾಯಿತು. ಸರ್ವಋತು ರಸ್ತೆಗಳ ಸಮಸ್ಯೆ ಈಗಲೂ ಇದೆ. ಉದ್ಯೋಗ ಸೃಷ್ಟಿ ಆಗಬೇಕು. ಬೆಂಗಳೂರಿನ ಗಾರ್ಮೆಂಟ್‌ಗಳಲ್ಲಿ ಇಲ್ಲಿನ ಅಸಂಖ್ಯ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬದಲಿ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಹೆಚ್ಚು ಖರ್ಚು ಮಾಡುವವನೇ ಗೆಲ್ಲುತ್ತಾನೆ ಎಂಬ ಅಭಿಪ್ರಾಯ ಇಲ್ಲಿನ ಜನರಲ್ಲೂ ಮೂಡಿರುವುದು ಬೇಸರದ ಸಂಗತಿ. ಮತದಾರನೂ ಭ್ರಷ್ಟನಾಗಿದ್ದಾನಾ ಎಂಬ ಅನುಮಾನವನ್ನು ಇದು ಮೂಡಿಸುತ್ತದೆ.

–ನೆಂಪೆ ದೇವರಾಜ್, ಮಲೆನಾಡು ಸಂಘರ್ಷ ಸಮಿತಿಯ ಸಂಚಾಲಕ

‘ಫುಟ್‌ಪಾತ್‌ನಲ್ಲಿ ಕಿರಿಕಿರಿ’

ಆಜಾದ್‌ ರಸ್ತೆ ಕೆಲಸ ಚೆನ್ನಾಗಿ ಆಗಿದ್ದರೂ ಫುಟ್‌ಪಾತ್‌ನಲ್ಲಿ ಸಾರ್ವಜನಿಕರ ಓಡಾಟಕ್ಕೆ ಕಿರಿಕಿರಿಯುಂಟಾಗುತ್ತಿದೆ. ಫುಟ್‌ಪಾತ್‌ ನಡುವೆ ವಿದ್ಯುತ್‌ ಕಂಬ ಉಳಿಸಲಾಗಿದೆ. ಓಡಾಟಕ್ಕೆ ಬಿಟ್ಟ ರಸ್ತೆಯನ್ನು ಕೆಲವು ವ್ಯಾಪಾರಸ್ಥರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಿದರೆ ಒಳ್ಳೆಯದು.

–ಶೈಲಾ ಎಲ್‌.ಡಿ.ನಾಗರಾಜ್‌, ಕೈಮರ, ತೀರ್ಥಹಳ್ಳಿ

ಪ್ರತಿಕ್ರಿಯಿಸಿ (+)