ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮುಲು ಸ್ಪರ್ಧೆಗೆ ಪರ, ವಿರೋಧ

Last Updated 10 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಬಿಜೆಪಿ ಮುಖಂಡ ಹಾಗೂ ಸಂಸತ್ ಸದಸ್ಯ ಬಿ. ಶ್ರೀರಾಮುಲು ಅವರಿಗೆ ಮೊಳಕಾಲ್ಮುರು ಕ್ಷೇತ್ರದಿಂದ ಟಿಕೆಟ್‌ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಕ್ಷೇತ್ರದಾದ್ಯಂತ ಪರ, ವಿರೋಧ ಚಟುವಟಿಕೆಗಳು ನಡೆದವು.

‘ಕಳೆದ ಚುನಾವಣೆಯಲ್ಲಿ ಬಿಎಸ್‌ಆರ್ ಪಕ್ಷದಿಂದ ಜಯ ಗಳಿಸಿದ್ದ ಎಸ್‌. ತಿಪ್ಪೇಸ್ವಾಮಿ ಅವರಿಗೆ ಮೊಳಕಾಲ್ಮುರಿನಿಂದ ಟಿಕೆಟ್‌ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಏಕಾಏಕಿ ಶ್ರೀರಾಮುಲು ಅವರಿಗೆ ಟಿಕೆಟ್‌ ಘೋಷಿಸಿರುವುದು ಸರಿಯಲ್ಲ. ಕೆಲವರ ಒತ್ತಡ, ಕುತಂತ್ರವೇ ಇದಕ್ಕೆ ಕಾರಣ. ಕೂಡಲೇ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ತಿಪ್ಪೇಸ್ವಾಮಿ ಬೆಂಬಲಿಗರು ತಳಕಿನ ಗರಣಿ ಕ್ರಾಸ್‌ನಲ್ಲಿ ಕೆಲಕಾಲ ಹೆದ್ದಾರಿ ತಡೆ ನಡೆಸಿದರು.

‘ಯಡಿಯೂರಪ್ಪ ಯಾತ್ರೆಯಲ್ಲಿ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ಘೋಷಣೆಯಾಗಿತ್ತು. ಆಗ ಅಭಿವೃದ್ಧಿ ಮಾಡಿದ್ದಾರೆ ಎಂದು ಚಪ್ಪಾಳೆ ಹೊಡೆಸಲಾಗಿತ್ತು. ಕೇವಲ ಎರಡು ತಿಂಗಳಿನಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿ ಟಿಕೆಟ್‌ ನೀಡಿಲ್ಲ. ಇದು ಕಾರ್ಯಕರ್ತರು, ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೈಕಮಾಂಡ್‌ ಯಾರಿಗಾದರೂ ಟಿಕೆಟ್‌ ನೀಡಿದರೆ ಅವರ ಪರ ಕೆಲಸ ಮಾಡಲು ನಾವೇನು ಕುರಿಗಳೇ’ ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿದರು.

ಇನ್ನೊಂದೆಡೆ, ಶ್ರೀರಾಮುಲು ಪರ ತಾಲ್ಲೂಕಿನ ರಾಂಪುರ, ಮೊಳಕಾಲ್ಮುರು. ಕೋನಸಾಗರ, ಕೊಂಡ್ಲಹಳ್ಳಿಯಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.

ಸ್ಪರ್ಧೆ ವದಂತಿ

ಎಚ್.ಡಿ.ಕೋಟೆ: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ತಾಲ್ಲೂಕಿನಲ್ಲಿ ಹರಿದಾಡುತ್ತಿದೆ.

ಪ್ರಚಾರ ಆರಂಭಿಸಿದ್ದ ಪಕ್ಷದ ಸಂಭಾವ್ಯ ಅಭ್ಯರ್ಥಿ ಸಿದ್ಧರಾಜು ಅವರು ಮಂಗಳವಾರ ಪ್ರಚಾರ ಮೊಟುಕುಗೊಳಿಸಿ ಬೆಂಗಳೂರಿಗೆ ತೆರಳಿದ್ದಾರೆ. ‘ಎಚ್.ಡಿ.ಕೋಟೆಯಿಂದ ಶ್ರೀರಾಮುಲು ಸ್ಪರ್ಧಿಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಇಲ್ಲಿಗೆ ಬಂದರೆ ಅವರ ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತೇನೆ. ಬುಧವಾರ ಬೆಂಗಳೂರಿನಲ್ಲಿ ಸಭೆ ಇರುವುದರಿಂದ ತೆರಳುತ್ತಿದ್ದೇನೆ’ ಎಂದು ಸಿದ್ಧರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT