ಸೋಮವಾರ, ಡಿಸೆಂಬರ್ 16, 2019
17 °C

ಕವಿ, ಗುರು ಮನೆಗಳಿಗೆ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿ, ಗುರು ಮನೆಗಳಿಗೆ ಶಾ

ಬೆಂಗಳೂರು: ‘ಕರುನಾಡ ಜಾಗೃತಿ ಯಾತ್ರೆ’ ಅಂಗವಾಗಿ ಇದೇ 12 ಮತ್ತು 13ರಂದು ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ಬಾರಿ ಕವಿ ಮನೆ ಹಾಗೂ ಗುರು ಮನೆಗಳಿಗೆ ಭೇಟಿ ಕೊಡಲಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಹೋರಾಟಗಾರರಿಗೂ ಗೌರವಾರ್ಪಣೆ ಮಾಡಲಿದ್ದಾರೆ.

ಏ.11ರಂದು ರಾತ್ರಿ ಹುಬ್ಬಳ್ಳಿಗೆ ಬರಲಿರುವ ಅವರು, ಮಾರನೇ ದಿನ ಬೆಳಿಗ್ಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ಕೊಡಲಿದ್ದಾರೆ. ಅದಾದ ಬಳಿಕ ಧಾರವಾಡದಲ್ಲಿರುವ ಕವಿ ದ.ರಾ. ಬೇಂದ್ರೆ ಸ್ಮಾರಕ ‘ಸಾಧನಕೇರಿ’ಗೆ ಭೇಟಿ ಕೊಟ್ಟು, ಗೌರವ ಅರ್ಪಿಸಲಿದ್ದಾರೆ.

ಕಾಂಗ್ರೆಸ್ ಸರ್ಕಾರದ ‘ವಿಭಜನಾ ರಾಜಕೀಯ’ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಪ್ರತಿಭಟನೆಯಲ್ಲಿ

ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ, ಗದಗದಲ್ಲಿರುವ ಪಂಡಿತ್‌ ಪುಟ್ಟರಾಜ ಗವಾಯಿ ಆಶ್ರಮ, ಗದುಗಿನ ವೀರನಾರಾಯಣಸ್ವಾಮಿ ದೇವಸ್ಥಾನ ಹಾಗೂ ಕವಿ ಕುಮಾರವ್ಯಾಸನ ಸನ್ನಿಧಿಗೆ ಭೇಟಿ ನೀಡಲಿದ್ದಾರೆ.

4.50ಕ್ಕೆ ಹುಬ್ಬಳ್ಳಿಯಲ್ಲಿರುವ ಮೂರು ಸಾವಿರ ಮಠಕ್ಕೆ ಭೇಟಿ ನೀಡಲಿರುವ ಅವರು, ಅಲ್ಲಿಂದ ದುರ್ಗದಬೈಲ್‌ವರೆಗೆ ರೋಡ್ ಷೋ ನಡೆಸಲಿದ್ದಾರೆ. ಹುಬ್ಬಳ್ಳಿ ಸಮೀಪದ ಹೆಬ್ಬಳ್ಳಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಏ.13ರಂದು ಬೆಳಿಗ್ಗೆ, ಕಿತ್ತೂರಿನಲ್ಲಿರುವ ರಾಣಿ ಚೆನ್ನಮ್ಮ ಸ್ಮಾರಕ ಹಾಗೂ ನಂದಗಡದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕಗಳಿಗೆ ಭೇಟಿ ನೀಡಿ ಗೌರವ ಅರ್ಪಿಸಲಿದ್ದಾರೆ.

ಅಲ್ಲಿಂದ ವಿಜಯಪುರ ಜಿಲ್ಲೆಯ ಮುಧೋಳಕ್ಕೆ ತೆರಳಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ರೋಡ್ ಷೋ ನಡೆಸಲಿದ್ದಾರೆ. ಬಳಿಕ, ಬೆಳಗಾವಿಯಲ್ಲಿರುವ ಕೆಎಲ್ಇ ಕಾಲೇಜು ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಲಿದ್ದಾರೆ.

‘ಮುಷ್ಟಿ ಧಾನ್ಯ’ ಸಮಾರೋಪ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಫೆಬ್ರುವರಿ 27ರಂದು ದಾವಣಗೆರೆಯಲ್ಲಿ ನಡೆದ ರೈತ ಸಮಾವೇಶದಲ್ಲಿ ರೈತರ ಮನೆಯಿಂದ ಮುಷ್ಟಿ ಧಾನ್ಯ ಸಂಗ್ರಹಿಸುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

224 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಅಭಿಯಾನ ನಡೆದಿತ್ತು. ‘ರೈತರ ಬಾಳಲ್ಲಿ ಭರವಸೆಯ ಬೆಳಕು ಮೂಡಿಸಲು ಬಿಜೆಪಿ ಬದ್ಧ’ ಎಂದು ಯಡಿಯೂರಪ್ಪ ಪ್ರತಿಜ್ಞೆ ಮಾಡಿದ ಪತ್ರವನ್ನು ರೈತರಿಗೆ ತಲುಪಿಸಿ, ಧಾನ್ಯ ಸಂಗ್ರಹಿಸಲಾಗಿದೆ. ಈ ಅಭಿಯಾನದ ಸಮಾರೋಪ ಸಮಾರಂಭ ಏ.12ರಂದು ಗದಗ ಜಿಲ್ಲೆ ರೋಣ ತಾಲ್ಲೂಕಿನ ಅನ್ನದಾನೇಶ್ವರ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ.

ಪ್ರತಿಕ್ರಿಯಿಸಿ (+)