ಮಂಗಳವಾರ, ಡಿಸೆಂಬರ್ 10, 2019
24 °C
ಆಯೋಗಕ್ಕೆ ದೂರು ನೀಡಿದ ಬಿಜೆಪಿ

ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಅಧಿಕಾರಿಗಳ ಕುಣಿತ

Published:
Updated:
ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಅಧಿಕಾರಿಗಳ ಕುಣಿತ

ಬೆಂಗಳೂರು: ‘ರಾಜ್ಯದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಅಧಿಕಾರಿಗಳ ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡುತ್ತಿದೆ. ಮತದಾರರಿಗೆ ಬೆಳ್ಳಿನಾಣ್ಯ ಹಾಗೂ ಕುಕ್ಕರ್‌ಗಳನ್ನು ವಿತರಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಿ ಬಿಜೆಪಿ, ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಿದೆ.

ಕೇಂದ್ರ ಸಚಿವರಾದ ಎಚ್‌.ಎನ್‌. ಅನಂತಕುಮಾರ್ ಹಾಗೂ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ಅವರನ್ನು ಭೇಟಿಯಾದ ಬಿಜೆಪಿ ನಿಯೋಗ, ಕಾಂಗ್ರೆಸ್ ಹಾಗೂ ಚುನಾವಣಾಧಿಕಾರಿಗಳ ವಿರುದ್ಧ ದೂರು ಸಲ್ಲಿಸಿತು.

‘ದೇವಾಲಯಗಳ ಮೇಲೆ ಹಾಕಲಾಗಿದ್ದ ‘ಓಂ’ ಗುರುತುಳ್ಳ ಬಾವುಟಗಳನ್ನು ತೆಗೆಸುವ ಮೂಲಕ ಚುನಾವಣಾಧಿಕಾರಿಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಹಾಗೆಯೇ, ತಮ್ಮ ತಮ್ಮ ಮನೆಗಳ ಗೋಡೆ ಮೇಲಿರುವ ‘ಕಮಲ’ದ ಗುರುತಿನ ಪೇಂಟಿಂಗ್ ಅಳಿಸುವಂತೆಯೂ ಕಾರ್ಯಕರ್ತರಿಗೆ ತಾಕೀತು ಮಾಡುತ್ತಿದ್ದಾರೆ. ಈ ಮೂಲಕ ಶಾಂತಿಯುತ ಪ್ರಚಾರದ ಹಕ್ಕನ್ನು ದಮನ ಮಾಡುತ್ತಿದ್ದಾರೆ’ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ.

‘ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಪಕ್ಷವು ಪೊಲೀಸರು ಹಾಗೂ ಚುನಾವಣಾಧಿಕಾರಿಗಳನ್ನು ಬಳಸಿಕೊಂಡು ಕುತಂತ್ರ ಮಾಡುತ್ತಿದೆ. ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಗಂಗಾವತಿಗೆ ತೆರಳಲು ಹೆಲಿಕಾಪ್ಟರ್‌ ಬಳಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದಿದ್ದರು. ಆದರೆ, ಸ್ಥಳೀಯ ಚುನಾವಣಾಧಿಕಾರಿ ಹೆಲಿಕಾಪ್ಟರ್ ಇಳಿಸಲು ಅವಕಾಶ ಕೊಡದೆ ತೊಂದರೆ ಮಾಡಿದ್ದಾರೆ. ಆ ಅಧಿಕಾರಿಯ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.

‘ಹತ್ತಕ್ಕೂ ಹೆಚ್ಚು ವಾಹನಗಳನ್ನು ರ‍್ಯಾಲಿಗೆ ಬಳಸುವಂತಿಲ್ಲ, ಆಂತರಿಕ ಸಭೆಗಳನ್ನು ನಡೆಸುವುದಕ್ಕೂ ಅನುಮತಿ ಪಡೆಯಬೇಕು, ಸಭೆಯಲ್ಲಿ ಪಾಲ್ಗೊಂಡವರಿಗೆ ಕಾಫಿ–ತಿಂಡಿಯನ್ನೂ ಕೊಡುವಂತಿಲ್ಲ. ಸಣ್ಣ ಸಣ್ಣ ವಿಷಯಗಳಿಗೂ ಚುನಾವಣಾಧಿಕಾರಿಗಳು ನಿರ್ಬಂಧ ವಿಧಿಸುತ್ತಿದ್ದಾರೆ’ ಎಂದಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಬೇಕಾದ ಪೊಲೀಸ್ ಅಧಿಕಾರಿಗಳನ್ನು ಐದಾರು ತಿಂಗಳ ಹಿಂದೆಯೇ ಆಯಕಟ್ಟಿನ ಸ್ಥಳಗಳಲ್ಲಿ ಕೂರಿಸಿದ್ದರು. ಈಗ ಅವರ ಮೂಲಕವೇ ಎದುರಾಳಿ ಪಕ್ಷಗಳ ಕಾರ್ಯಕರ್ತರನ್ನು ಹಣಿಯುತ್ತಿದ್ದಾರೆ. ಅವರ ಆದೇಶದ ಅನ್ವಯ ಚಿಲ್ಲರೆ ಕೆಲಸಕ್ಕಿಳಿದಿರುವ ಪೊಲೀಸರು, ತಾವು ಹೇಳಿದಂತೆ ಕೇಳದಿದ್ದರೆ ಗಡಿಪಾರು ಮಾಡುವುದಾಗಿ ಕರಾವಳಿ ಭಾಗದ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಒಡ್ಡಿದ್ದಾರೆ’ ಎಂದು ಆರ್.ಅಶೋಕ ದೂರಿದರು.

ಅನಂತಕುಮಾರ್ ವಿರುದ್ಧವೂ ದೂರು

‘ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಉದಯ್ ಗರುಡಾಚಾರ್ ಕೇಂದ್ರ ಸಚಿವ ಅನಂತ ಕುಮಾರ್‌ಗೆ ₹ 2 ಕೋಟಿ ಕಿಕ್ ಬ್ಯಾಕ್ ನೀಡಿದ್ದಾರೆ ಎಂದು ಅವರದ್ದೇ ಪಕ್ಷದ ಟಿಕೆಟ್ ಆಕಾಂಕ್ಷಿಯೊಬ್ಬರು ದೂರಿದ್ದಾರೆ. ಆ ದೂರನ್ನು ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಹಾಗೆಯೇ, ಕಾಂಗ್ರೆಸ್ ಸರ್ಕಾರದ ವಿರುದ್ಧ 3ನೇ ಬಾರಿ ಆಧಾರರಹಿತ ಆರೋಪಪಟ್ಟಿ ಬಿಡುಗಡೆ ಮಾಡಿರುವ ಪ್ರಕಾಶ್ ಜಾವಡೇಕರ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಸ್.ಮನೋಹರ್ ಸಹ ಮಂಗಳವಾರ ‌ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)