ಶುಕ್ರವಾರ, ಡಿಸೆಂಬರ್ 6, 2019
25 °C

ನಾನೇಕೆ ಕಾಂಗ್ರೆಸ್‌ಗೆ ಹೋಗಬೇಕು: ಕೃಷ್ಣ ಪ್ರಶ್ನೆ

Published:
Updated:
ನಾನೇಕೆ ಕಾಂಗ್ರೆಸ್‌ಗೆ ಹೋಗಬೇಕು: ಕೃಷ್ಣ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ್ದ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ, ಮಾತೃ ಪಕ್ಷಕ್ಕೆ ಮರಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಮಂಗಳವಾರ ಬೆಳಿಗ್ಗೆ ಹರಿದಾಡಿತು.

ಆದರೆ, ಮಾಧ್ಯಮಗಳಿಗೆ ಮಧ್ಯಾಹ್ನ ಪ್ರತಿಕ್ರಿಯೆ ನೀಡಿದ ಕೃಷ್ಣ, ‘ಬಿಜೆಪಿ ಬಿಡುವ ಯೋಚನೆ ಮಾಡಿಲ್ಲ. ನಾನೇಕೆ ಕಾಂಗ್ರೆಸ್‌ಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಕೃಷ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ತಮ್ಮ ಪುತ್ರಿಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರುತ್ತಿದ್ದಾರೆ, ಕಾಂಗ್ರೆಸ್‌ ಪ್ರಮುಖರ ಜತೆ ಈ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ ಎಂದು ಖಾಸಗಿ ಸುದ್ದಿ ವಾಹಿನಿಗಳು ವರದಿ ಬಿತ್ತರಿಸಿದ್ದವು.

ಚುನಾವಣೆ ಎದುರಾಗಿರುವುದರಿಂದ ಮತ್ತೆ ಕಾಂಗ್ರೆಸ್‌ಗೆ ಮರಳುವ ಒಲವು ತೋರಿ ಕೃಷ್ಣ ತಮ್ಮ ಆಪ್ತರಾದ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಜತೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿತ್ತು.

ದೆಹಲಿಯಲ್ಲಿರುವ ಶಿವಕುಮಾರ್ ಮತ್ತು ಪರಮೇಶ್ವರ, ‘ಈ ರೀತಿಯಾಗಿ ಯಾವುದೇ ಮಾತುಕತೆ ನಡೆದಿಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ’ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಮುಂಬೈಯಲ್ಲಿರುವ ಕೃಷ್ಣ, ಮಾಧ್ಯಮಗಳಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ‘ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆಂಬುದು ವದಂತಿ. ಗಾಳಿ ಸುದ್ದಿಗೆ ಯಾರೂ ಕಿವಿಗೊಡಬಾರದು’ ಎಂದು ಸ್ಪಷ್ಟಪಡಿಸಿದರು.

‘ನನ್ನ ಕುಟುಂಬದ ಯಾವುದೇ ಸದಸ್ಯರಿಗೆ ಟಿಕೆಟ್ ನೀಡಬೇಕೆಂದು ನಾನಾಗಲಿ ಅಥವಾ ಬೇರೆ ಯಾರೂ ಲಾಬಿ ನಡೆಸಿಲ್ಲ. ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪಕ್ಷದ ಮುಖಂಡರು ಟಿಕೆಟ್ ನೀಡುತ್ತಾರೆ. ನನ್ನ ಪುತ್ರಿ ಅಥವಾ ಬೇರೆ ಯಾರೇ ರಾಜಕೀಯಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಷಯ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ’ ಎಂದರು.

‘ನನ್ನ ಆರೋಗ್ಯ ಸಹಕರಿಸಿದರೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ. ನಮಗಾಗದವರು ಇಂತಹ ವದಂತಿಗಳನ್ನು ಹಬ್ಬಿಸುತ್ತಾರೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ’ ಎಂದೂ ಹೇಳಿದರು.

ಕೇಳಿದಲ್ಲಿ ಟಿಕೆಟ್: ಅಶೋಕ

‘ಕಾಂಗ್ರೆಸ್‌ಗೆ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಹೀಗಾಗಿ, ಎಸ್‌.ಎಂ. ಕೃಷ್ಣ ಮತ್ತೆ ಕಾಂಗ್ರೆಸ್‌ಗೆ ಮರಳುತ್ತಾರೆ ಎಂಬ ವದಂತಿ ಹಬ್ಬಿಸಿದೆ. ಯಾವುದೇ ಕಾರಣಕ್ಕೂ ಅವರು ಬಿಜೆಪಿ ತೊರೆಯುವುದಿಲ್ಲ’ ಎಂದು ಬಿಜೆಪಿ ಪ್ರಮುಖ ಆರ್‌. ಅಶೋಕ ವಿಶ್ವಾಸ ವ್ಯಕ್ತಪಡಿಸಿದರು.

‘ಮುಂಬೈಯಲ್ಲಿರುವ ಕೃಷ್ಣ, ಇದೇ 13ರಂದು ರಾಜ್ಯಕ್ಕೆ ವಾಪಸಾಗಲಿದ್ದಾರೆ. ಅವರ ಕುಟುಂಬ ಸದಸ್ಯರು ಚುನಾವಣೆಗೆ ಸ್ಪರ್ಧಿಸುವುದಾದರೆ, ಬೆಂಗಳೂರು ಅಥವಾ ಮಂಡ್ಯದಲ್ಲಿ ಅವರು ಕೇಳಿದ ಕ್ಷೇತ್ರದಿಂದ ಟಿಕೆಟ್ ನೀಡಲು ಪಕ್ಷ ಸಿದ್ಧವಿದೆ’ ಎಂದೂ ಹೇಳಿದರು.

‘ಬಿಜೆಪಿಯಿಂದ ಬಂದರೆ ಸ್ವಾಗತ’

ನವಲಗುಂದ (ಧಾರವಾಡ ಜಿಲ್ಲೆ): ‘ಬಿಜೆಪಿಯಲ್ಲಿರುವ ಎಸ್‌.ಎಂ.ಕೃಷ್ಣ ಅವರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅವರು ಜೆಡಿಎಸ್‌ಗೆ ಬರುವುದಾದರೆ ಸ್ವಾಗತ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿರಿಯರ ಮಾರ್ಗದರ್ಶನದ ಅವಶ್ಯಕತೆ ನಮ್ಮ ಪಕ್ಷಕ್ಕೆ ಇದೆ’ ಎಂದರು.

‘ಬೈಲಹೊಂಗಲದ ಬಿಜೆಪಿ ಮುಖಂಡ ಜಗದೀಶ ಮೆಟಗುಡ್‌ ಅವರು ಮೊದಲಿನಿಂದಲೂ ನನಗೆ ಸ್ನೇಹಿತರು. ಅವರ ಗೆಳೆಯರು ನನಗೆ ಕರೆ ಮಾಡಿದ್ದರು. ಮೆಟಗುಡ್‌ ಅವರು ಜೆಡಿಎಸ್‌ ಸೇರುವ ಬಗ್ಗೆ ನೇರವಾಗಿ ಮಾತನಾಡಿಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)