ಪರಿಣಾಮ ಬೀರದ ಮೀಸಲಾತಿ ವಿರೋಧಿ ಬಂದ್‌

7

ಪರಿಣಾಮ ಬೀರದ ಮೀಸಲಾತಿ ವಿರೋಧಿ ಬಂದ್‌

Published:
Updated:
ಪರಿಣಾಮ ಬೀರದ ಮೀಸಲಾತಿ ವಿರೋಧಿ ಬಂದ್‌

ಭೋಪಾಲ್‌/ ಜೈಪುರ/ ಲಖನೌ: ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ಜಾತಿ ಆಧರಿತ ಮೀಸಲಾತಿ ವಿರೋಧಿಸಿ ಮಂಗಳವಾರ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೊಲೀಸರ ಸರ್ಪಗಾವಲಿನ ನಡುವೆ ನಡೆದ ಭಾರತ ಬಂದ್‌ ಜನಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಪ್ರತಿಭಟನಾ ರ‍್ಯಾಲಿಗಳಿಗೆ ಅವಕಾಶ ನೀಡದ ಕಾರಣ ಜನರಿಗೆ ಬಂದ್‌ ಬಿಸಿ ತಾಗಲಿಲ್ಲ.

ಮುನ್ನೆಚ್ಚರಿಕಾ ಕ್ರಮವಾಗಿ ಹಲವು ರಾಜ್ಯಗಳಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಗುಜರಾತ್‌, ಉತ್ತರ ಪ್ರದೇಶದಲ್ಲಿ ವಾಹನ ಸಂಚಾರ, ಜನಜೀವನ ಸಹಜವಾಗಿತ್ತು.

ಮಧ್ಯ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೆಲ ಗಂಟೆ ಮಾತ್ರ ಅಂಗಡಿಗಳನ್ನು ಮುಚ್ಚಲಾಗಿತ್ತು. ವದಂತಿ ತಡೆಯಲು ಅಂತರ್ಜಾಲ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಶಾಲೆ, ಕಾಲೇಜುಗಳು ತೆರೆದಿದ್ದವು.

ಬ್ಯಾಂಕ್‌, ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿದವು. ಬಿಹಾರದಲ್ಲಿ ಗುಂಪೊಂದು ರೈಲು ತಡೆಗೆ ನಡೆಸಿದ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಪಂಜಾಬ್‌ ಮತ್ತು ಹರಿಯಾಣಗಳಲ್ಲಿ ಭಾಗಶಃ ಬಂದ್‌ ಆಗಿತ್ತು.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ದಲಿತ ಸಂಘಟನೆಗಳು ಕಳೆದ ವಾರ ದೇಶವ್ಯಾಪಿ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಈ ಬಂದ್‌ಗೆ ಕರೆ ನೀಡಲಾಗಿತ್ತು.

ಸಾಮಾಜಿಕ ಜಾಲತಾಣದ ಮೂಲಕ ಬಂದ್‌ಗೆ ಕರೆ ನೀಡಲಾಗಿತ್ತು. ಯಾವುದೇ ಸಂಘಟನೆಗಳೂ ಇದರ ಹೊಣೆ ಹೊತ್ತಿರಲಿಲ್ಲ.

‘ಅಂಗಡಿ ಮುಚ್ಚಿ ಬಂದ್‌ನಲ್ಲಿ ಭಾಗವಹಿಸಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ಗುಜರಾತ್‌ನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ವರ್ತಕರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಕಾಂಗ್ರೆಸ್‌ ಶಾಸಕರು ಆರೋಪಿಸಿದ್ದಾರೆ.

ದಲಿತ ಸಂಘಟನೆಗಳ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆದ ಸೂಕ್ಷ್ಮಪ್ರದೇಶಗಳಲ್ಲಿ ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿತ್ತು. ಎಲ್ಲಿಯೂ ಹಿಂಸಾಚಾರ ಮತ್ತು ಅಹಿತಕರ ಘಟನೆ ವರದಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry