ಭಾನುವಾರ, ಡಿಸೆಂಬರ್ 15, 2019
25 °C
ಐಆರ್‌ಸಿಟಿಸಿ ಹಗರಣ: ತೇಜಸ್ವಿ ಯಾದವ್ ವಿಚಾರಣೆ

ರಾಬ್ಡಿದೇವಿ ಮನೆ ಮೇಲೆ ಸಿಬಿಐ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಬ್ಡಿದೇವಿ ಮನೆ ಮೇಲೆ ಸಿಬಿಐ ದಾಳಿ

ಪಟ್ನಾ: ಐಆರ್‌ಸಿಟಿಸಿ ಹೋಟೆಲ್‌ ಹಗರಣ ಸಂಬಂಧ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪತ್ನಿ ರಾಬ್ಡಿದೇವಿ ಅವರ ಇಲ್ಲಿನ ನಿವಾಸದ ಮೇಲೆ ಮಂಗಳವಾರ ಸಿಬಿಐ ದಾಳಿ ನಡೆಸಿದೆ.

‘ಭೂಮಿಗಾಗಿ ಹೋಟೆಲ್‌ ಹಸ್ತಾಂತರ’ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐನ 7 ಅಧಿಕಾರಿಗಳ ತಂಡ, ರಾಬ್ಡಿದೇವಿ ಮತ್ತು ಅವರ ಪುತ್ರ ತೇಜಸ್ವಿ ಯಾದವ್‌ ಅವರನ್ನು ಪ್ರತ್ಯೇಕವಾಗಿ ನಾಲ್ಕು ತಾಸು ವಿಚಾರಣೆಗೆ ಒಳಪಡಿಸಿತು.

ದಾಳಿ ನಡೆಸಿರುವುದನ್ನು ತನಿಖಾ ಸಂಸ್ಥೆ ಅಲ್ಲಗಳೆದಿದೆ. ಆದರೆ ರಾಬ್ಡಿದೇವಿಯವರನ್ನು ಸಿಬಿಐ ವಿಚಾರಣೆ ನಡೆಸಿರುವುದನ್ನು ಮೂಲಗಳು ಖಚಿತಪಡಿಸಿವೆ.

‘ಲಾಲು ಅವರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯ ಪುತ್ರ ತೇಜ್‌ ಪ್ರತಾಪ್‌ ಮದುವೆ ತಯಾರಿಯಲ್ಲಿ ರಾಬ್ಡಿದೇವಿ ಇದ್ದಾರೆ. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ದಾಳಿ ನಡೆಸಿ ಹೇಡಿತನ ಪ್ರದರ್ಶಿಸಿದೆ’ ಎಂದು ಆರ್‌ಜೆಡಿ ಉಪಾಧ್ಯಕ್ಷ ಶಿವಾನಂದ ತಿವಾರಿ ಕಿಡಿಕಾರಿದ್ದಾರೆ.

ಯುಪಿಎ–1 ಸರ್ಕಾರದಲ್ಲಿ ಲಾಲು ರೈಲ್ವೆ ಸಚಿವರಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿರುವ ರೈಲ್ವೆಯ ಮಾಲೀಕತ್ವದ ಬಿಎನ್‌ಆರ್ ಹೋಟೆಲ್‌ಗಳ ನಿಯಂತ್ರಣವನ್ನು ವಿನಯ್‌ ಮತ್ತು ವಿಜಯ್‌ ಕೊ‌ಚ್ಚರ್ ಅವರ ಮಾಲೀಕತ್ವದ ಸುಜಾತಾ ಹೋಟೆಲ್ ಪ್ರೈ.ಲಿ. ಎಂಬ ಕಂಪನಿಗೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಪಟ್ನಾದಲ್ಲಿ ಆಯಕಟ್ಟಿನ ಸ್ಥಳದಲ್ಲಿ ಬೆಲೆಬಾಳುವ ಮೂರು ಎಕರೆ ಜಮೀನನ್ನು ಬೇನಾಮಿ ಕಂಪನಿ ಡಿಲೈಟ್‌ ಮಾರ್ಕೆಟಿಂಗ್‌ಗೆ ನೀಡಲಾಗಿತ್ತು.

ಈ ಹಗರಣ ಸಂಬಂಧ ಲಾಲು, ರಾಬ್ಡಿ ದೇವಿ ಮತ್ತು ಮಗ ತೇಜಸ್ವಿ ಯಾದವ್ ಹಾಗೂ ಕೇಂದ್ರದ ಮಾಜಿ ಸಚಿವ ಪ್ರೇಮ್‌ಚಂದ್‌ ಗುಪ್ತಾ ಅವರ ಪತ್ನಿ ಸರಳಾ ಗುಪ್ತಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಹೋಟೆಲ್‌ ಗುತ್ತಿಗೆ ಪ್ರಕ್ರಿಯೆ ಮುಗಿದ ಮರು ಕ್ಷಣವೇ, ಡಿಲೈಟ್‌ ಮಾರ್ಕೆಂಟಿಂಗ್‌ ಕಂಪನಿ ಮಾಲೀಕತ್ವವು ಸರಳಾ ಗುಪ್ತಾ ಅವರಿಂದ ರಾಬ್ಡಿದೇವಿ ಮತ್ತು ಪುತ್ರ ತೇಜಸ್ವಿ ಅವರ ಹೆಸರಿಗೆ 2010ರಿಂದ 2014ರ ಅವಧಿಯಲ್ಲಿ ವರ್ಗವಾಗಿತ್ತು.

ಐಆರ್‌ಸಿಟಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗೋಯಲ್‌, ಸುಜಾತಾ ಹೋಟೆಲ್ಸ್‌ ನಿರ್ದೇಶಕರು ಮತ್ತು ಚಾಣಕ್ಯ ಹೋಟೆಲ್ಸ್‌ ಮಾಲೀಕರಾದ ವಿಜಯ್‌ ಮತ್ತು ವಿನಯ್‌ ಕೊಚ್ಚರ್‌ ಸಹ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಪ್ರತಿಕ್ರಿಯಿಸಿ (+)