ಶುಕ್ರವಾರ, ಡಿಸೆಂಬರ್ 13, 2019
19 °C

ಅತ್ಯಾಚಾರ ಆರೋಪ ಪ್ರಕರಣ: ಶಾಸಕನ ಸೋದರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಅತ್ಯಾಚಾರ ಆರೋಪ ಪ್ರಕರಣ: ಶಾಸಕನ ಸೋದರ ಬಂಧನ

ಲಖನೌ: ಬಾಂಗರಮವು ಕ್ಷೇತ್ರದ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ವಿರುದ್ಧದ ಅತ್ಯಾಚಾರ ಆರೋಪ ‍ಹಾಗೂ ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣ ಸಂಬಂಧ, ಶಾಸಕನ ಸೋದರನನ್ನು ಪೊಲೀಸರು ಬಂಧಿಸಿದ್ದಾರೆ.

‘ಪ್ರಕರಣದ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಲಖನೌ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ತಂಡದ ನೇತೃತ್ವ ವಹಿಸುತ್ತಾರೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ) ಆನಂದ್‌ ಕುಮಾರ್ ತಿಳಿಸಿದ್ದಾರೆ.

‘ಸಂತ್ರಸ್ತೆಯ ತಂದೆಯ ಸಾವು ಪೊಲೀಸ್‌ ವಶದಲ್ಲಿದ್ದ ವೇಳೆ ಸಂಭವಿಸಿಲ್ಲ. ಅವರ ಮೇಲೆ ಹಲ್ಲೆ ನಡೆದಿದ್ದು ಗ್ರಾಮದಲ್ಲಿ. ಪೊಲೀಸರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಯಾರನ್ನೂ ಆರೋಪ ಮುಕ್ತಗೊಳಿಸಿಲ್ಲ. ದೋಷಿಗಳನ್ನು ಎಸ್‌ಐಟಿ ಪತ್ತೆ ಮಾಡಲಿದೆ. ಶಾಸಕ ಸೇರಿದಂತೆ ಪ್ರಕರಣದಲ್ಲಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಆಘಾತ ಮತ್ತು ರಕ್ತಕ್ಕೆ ಸೋಂಕಾಗಿರುವುದರಿಂದ ಸಾವು ಸಂಭವಿಸಿರಬಹುದು’ ಎಂದು ಉನ್ನಾವ್ ಮುಖ್ಯ ವೈದ್ಯಕೀಯ ಅಧಿಕಾರಿ ಎಸ್.‍‍‍ಪಿ. ಚೌಧರಿ ತಿಳಿಸಿದ್ದಾರೆ.

**

ರಾಜ್ಯ ಸರ್ಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

ಸಂತ್ರಸ್ತ ಯುವತಿಯ ತಂದೆಯ ಸಾವಿನ ಕುರಿತು ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಪೊಲೀಸ್ ಮುಖ್ಯಸ್ಥರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್‌ಆರ್‌ಸಿ) ನೋಟಿಸ್ ನೀಡಿದೆ.

‘ಸಂಕಷ್ಟದಲ್ಲಿರುವ ಕುಟುಂಬ ಮತ್ತಷ್ಟು ಶೋಷಣೆಗೆ ಒಳಗಾಗದಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಎನ್ಎಚ್‌ಆರ್‌ಸಿ ಸೂಚಿಸಿದೆ.

ಆರೋಪ ನಿಜವಾಗಿದ್ದಲ್ಲಿ, ಸಂತ್ರಸ್ತೆಯ ಕುಟುಂಬದ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಆಗಿದೆ ಎಂದು ಎನ್ಎಚ್‌ಆರ್‌ಸಿ ಹೇಳಿದೆ.

ಪ್ರತಿಕ್ರಿಯಿಸಿ (+)