ಶುಕ್ರವಾರ, ಡಿಸೆಂಬರ್ 6, 2019
25 °C

ತಾರತಮ್ಯ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾರತಮ್ಯ ವಿರುದ್ಧ ಆಕ್ರೋಶ

ತಿರುವನಂತಪುರ: ಕೇಂದ್ರದ ತೆರಿಗೆ ವರಮಾನ ಹಂಚಿಕೆಗೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ನಿಯಮಗಳಿಗೆ ದಕ್ಷಿಣ ಭಾರತದ ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿರೋಧ ವ್ಯಕ್ತಪಡಿಸಿವೆ.ಈ ಹೋರಾಟವನ್ನು ಮುಂದುವರಿಸಲು ಮತ್ತು ಇದಕ್ಕೆ ಇನ್ನಷ್ಟು ರಾಜ್ಯಗಳ ಬೆಂಬಲ ಕ್ರೋಡೀಕರಿಸಲು ನಿರ್ಧರಿಸಿವೆ.

ಕೇರಳದ ಆತಿಥ್ಯದಲ್ಲಿ ತಿರುವನಂತಪುರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪುದುಚೇರಿ ಮುಖ್ಯಮತ್ರಿ ವಿ.ನಾರಾಯಣಸ್ವಾಮಿ, ಆಂಧ್ರಪ್ರದೇಶ ಹಣಕಾಸು ಸಚಿವ ಯನಮಲ ರಾಮಕೃಷ್ಣುಡು ಮತ್ತು ಕರ್ನಾಟಕದ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಭಾಗವಹಿಸಿದ್ದರು.

ತೆರಿಗೆ ವರಮಾನ ಹಂಚಿಕೆಯ ಪ್ರಸ್ತಾವಿತ ಸೂತ್ರವು ತಾರತಮ್ಯದಿಂದ ಕೂಡಿದೆ ಎಂಬುದರ ವಿರುದ್ಧದ ಮೊದಲ ನಡೆ ಇದಾಗಿತ್ತು.

ಕೇಂದ್ರದ ನೀತಿಯ ವಿರುದ್ಧ ಹೋರಾಟ ಮುಂದುವರಿಸುವುದಕ್ಕಾಗಿ ಏಪ್ರಿಲ್‌ ಕೊನೆ ಅಥವಾ ಮೇ ಮೊದಲ ವಾರದಲ್ಲಿ ವಿಶಾಖಪಟ್ಟಣದಲ್ಲಿ ಎರಡನೇ ಸಭೆ ನಡೆಸಲು ನಿರ್ಧರಿಸಲಾಗಿದೆ. ಪ್ರಸ್ತಾವಿತ ಸೂತ್ರದ ವಿರುದ್ಧದ ಈ ಸಭೆಯಲ್ಲಿ ಮನವಿ ಪತ್ರವನ್ನು ಸಿದ್ಧಪಡಿಸಲಾಗುವುದು. ಅದನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದು ಕೇರಳದ ಹಣಕಾಸು ಸಚಿವ ಟಿ.ಎಂ. ಥಾಮಸ್‌ ಐಸಕ್‌ ತಿಳಿಸಿದ್ದಾರೆ.

ತೆರಿಗೆ ಹಂಚಿಕೆಗೆ ಹೊಸ ಸೂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಏರುಪೇರಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಥಾಮಸ್‌ ಅವರು ಆರೋಪಿಸಿದ್ದಾರೆ.

ಮುಖ್ಯ ನಿರ್ಣಯಗಳು

* ತೆರಿಗೆ ಹಂಚಿಕೆಗೆ 1971ರ ಜನಗಣತಿ ದತ್ತಾಂಶದ ಬದಲಿಗೆ 2011ರ ಜನಗಣತಿ ಮಾಹಿತಿಯನ್ನು ಆಧಾರವಾಗಿ ಇರಿಸಿಕೊಳ್ಳುವುದರಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಜನ ಸಂಖ್ಯಾ ನಿಯಂತ್ರಣದಲ್ಲಿ ಸಾಧಿಸಿದ ಯಶಸ್ಸಿಗೆ ಶಿಕ್ಷೆ ನೀಡಿದಂತಾಗುತ್ತದೆ.

* ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಆಧಾರದಲ್ಲಿ ಹೆಚ್ಚು ಅನುದಾನ ನೀಡಿಕೆಯ ನಿಯಮವು ಒಪ್ಪತಕ್ಕದ್ದಲ್ಲ. ಇದು ರಾಜ್ಯಗಳನ್ನು ‘ವೈಭವೀಕೃತ ನಗರಪಾಲಿಕೆಗಳ’ ಮಟ್ಟಕ್ಕೆ ಇಳಿಸುತ್ತದೆ.

* ಈ ಹೋರಾಟವು ಉತ್ತರ ಭಾರತದ ವಿರುದ್ಧ ಅಲ್ಲ. ಹಾಗೆಯೇ ಇದು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ವಿರುದ್ಧ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಆಂದೋಲನವೂ ಅಲ್ಲ. ಉತ್ತರದ ರಾಜ್ಯಗಳು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳೂ ಕೈಜೋಡಿಸಬಹುದು.

ದಕ್ಷಿಣಕ್ಕೆ ಮಾರಕ: ಕೃಷ್ಣ ಬೈರೇಗೌಡ

15ನೇ ಹಣಕಾಸು ಆಯೋಗದ ಶಿಫಾರಸುಗಳು ಪ್ರಗತಿಪಥದಲ್ಲಿರುವ ದಕ್ಷಿಣ ರಾಜ್ಯಗಳ ಪ್ರಗತಿಗೆ ಮಾರಕವಾಗಿದೆ ಎಂದು ಕರ್ನಾಟಕ ಕೃಷಿ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಆರೋಪಿಸಿದ್ದಾರೆ.

ಇಲ್ಲಿ ಆರಂಭವಾದ ದಕ್ಷಿಣ ರಾಜ್ಯಗಳ ಹಣಕಾಸು ಸಚಿವರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯೇತರ ರಾಜ್ಯಗಳ ಪ್ರಗತಿಯನ್ನು ಹತ್ತಿಕ್ಕಲು ಕೇಂದ್ರ ಹಣಕಾಸು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಹರಿಹಾಯ್ದರು.

ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರಿಂದ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ಒಂದು ವೇಳೆ 2011ರ ಜನಗಣತಿಯನ್ನು ಅನುದಾನ ಹಂಚಿಕೆಗೆ ಮಾನದಂಡವಾಗಿ ಪರಿಗಣಿಸಿದರೆ ದಕ್ಷಿಣದ ರಾಜ್ಯಗಳಿಗೆ ದೊರೆಯುವ ಅನುದಾನ ಸಹಜವಾಗಿ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಿದರು.

ಆಯೋಗದ ಶಿಫಾರಸುಗಳಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಕಾಂಗ್ರೆಸ್‌ ಮುಖಂಡ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

* ಪ್ರಧಾನಿ ನರೇಂದ್ರ ಮೋದಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾರೆ. ಅನುದಾನ ಬಿಡುಗಡೆಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ರಾಜ್ಯಗಳನ್ನು ದುರ್ಬಲಗೊಳಿಸುವ ಕೇಂದ್ರದ ವಿರುದ್ಧ ಬಂಡಾಯ ಏಳಲು ಇದು ಸೂಕ್ತ ಕಾಲ.

– ವಿ. ನಾರಾಯಣ ಸ್ವಾಮಿ, ಪುದುಚೇರಿ ಮುಖ್ಯಮಂತ್ರಿ

* ದೇಶದಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್‌ಟಿ ಜಾರಿಯಾದ ನಂತರ ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ.

-ಪಿಣರಾಯಿ ವಿಜಯನ್‌, ಕೇರಳ ಸಿಎಂ

ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿದ ರಾಜ್ಯಗಳ ವಿರುದ್ಧ ಯಾವುದೇ ತಾರತಮ್ಯ ಇಲ್ಲ. ಅನಗತ್ಯ ವಿವಾದ ಸೃಷ್ಟಿಸಲಾಗಿದೆ

-ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

ಪ್ರತಿಕ್ರಿಯಿಸಿ (+)