ಆನ್‌ಲೈನ್‌, ಸಂಶೋಧನೆಗೆ ಒತ್ತು

7

ಆನ್‌ಲೈನ್‌, ಸಂಶೋಧನೆಗೆ ಒತ್ತು

Published:
Updated:

ಬೆಂಗಳೂರು: ಆಡಳಿತದಲ್ಲಿ ಪಾರದರ್ಶಕತೆ ತರಲು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಮಂಗಳವಾರ ಇಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಎಂ.ಕೆ.ರಮೇಶ್‌, ‘ಡಿಜಿಟಲ್‌ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ. ಬೇರೆ ವಿಶ್ವವಿದ್ಯಾಲಯಗಳೂ ಈ ಪದ್ಧತಿ ಅಳವಡಿಸಿಕೊಂಡಿವೆ’ ಎಂದರು.

ಸ್ನಾತಕೋತ್ತರ ವಿದ್ಯಾರ್ಥಿಗಳು ಸಲ್ಲಿಸಬೇಕಾದ ಪ್ರೌಢಪ್ರಬಂಧ ಹಾಗೂ ಸಾರಾಂಶದ ಪ್ರತಿಗಳನ್ನು ಆನ್‌ಲೈನ್‌ ಮುಖಾಂತರವೇ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಬಂಧ ತಿದ್ದುಪಡಿ, ಮೌಲ್ಯಮಾಪನ ಬೇಗನೆ ನಡೆದು ಶೀಘ್ರವಾಗಿ ಫಲಿತಾಂಶ ನೀಡಲು ಸಾಧ್ಯವಾಗಿದೆ. ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕಾಲೇಜುಗಳ ಶಿಕ್ಷಕರ ವಿವರ ಅಂತರ್ಜಾಲದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗಾಗಿ, ಆನ್‌ಲೈನ್‌ ಮೂಲಕ ಅರ್ಹತಾ ಪ್ರಮಾಣ ಪತ್ರ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಸುಲಭವಾಗಿ ಸಿಗುವ ವ್ಯವಸ್ಥೆ ರೂಪಿಸುವ ಯೋಜನೆ ಜಾರಿಯಲ್ಲಿದೆ.

ಪ್ರಸಕ್ತ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಸಸಿಯನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ಹೊರಬೇಕು. ಕೋರ್ಸ್‌ ಮುಗಿದ ನಂತರ ಈ ಕುರಿತ ಶ್ಲಾಘನಾ ಪ್ರಮಾಣ ಪತ್ರ ನೀಡಲಾಗುವುದು.

ಆರೋಗ್ಯ ಕಾಳಜಿ, ಹಳ್ಳಿ ದತ್ತು:ಹಿಂದುಳಿದ ಗ್ರಾಮವೊಂದನ್ನು ದತ್ತು ಪಡೆದು ಅದನ್ನು ‘ಸ್ಮಾರ್ಟ್‌ ವಿಲೇಜ್‌’ ಆಗಿ ಅಭಿವೃದ್ಧಿ ಪಡಿಸುವ ಯೋಜನೆ ವಿಶ್ವವಿದ್ಯಾಲಯಕ್ಕಿದೆ. ಜೊತೆಗೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಅಡಿ ಸರ್ಕಾರೇತರ ಸಂಸ್ಥೆಗಳೊಂದಿಗೆ ಸೇರಿಕೊಂಡು ದೊಡ್ಡಬಳ್ಳಾಪುರದಲ್ಲಿ ಆರೋಗ್ಯ ಸೇವಾ ಚಟುವಟಿಕೆ ನಡೆಸಲಿದೆ. ತಾಯಿ ಹಾಗೂ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ತಪಾಸಣೆ ನಡೆಸಲಾಗುವುದು. ಇದು ಯಶಸ್ವಿಯಾದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿಯೂ ಈ ಯೋಜನೆಯನ್ನು ಜಾರಿಮಾಡಲಾಗುವುದು ಎಂದರು.

ಸಂಶೋಧನೆಗೆ ₹20 ಕೋಟಿ ಮೀಸಲು

ವಿಶ್ವವಿದ್ಯಾಲಯವು 2018–19ನೇ ಸಾಲಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಕೈಗೊಳ್ಳಲು ₹20 ಕೋಟಿ ಮೀಸಲಿರಿಸಿದೆ. 31 ಸಂಶೋಧನಾ ಯೋಜನೆಗಳನ್ನು ಈಗಾಗಲೇ ಹಮ್ಮಿಕೊಂಡಿದೆ.

‘ಡೆಂಗಿ ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಈ ಕಾಯಿಲೆ ಕುರಿತ ಸಮಗ್ರ ಅಧ್ಯಯನ ನಡೆಸಲು ಮೂರು ಕೋಟಿ ರೂಪಾಯಿಗಳ ಯೋಜನೆ ಕೈಗೆತ್ತಿಕೊಂಡಿದೆ. ವಿಶ್ವವಿದ್ಯಾಲಯ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಹಾಗೂ ಸಂಯೋಜಿತ ಸಂಸ್ಥೆಗಳ ಸಹಯೋಗದಲ್ಲಿ ಡೆಂಗಿ ಕುರಿತು ಅಧ್ಯಯನ ನಡೆಸಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry