ಮಂಗಳವಾರ, ಆಗಸ್ಟ್ 11, 2020
27 °C
‘ಎಸ್ಎಎ ಬಾಹಾ’ ಸ್ಪರ್ಧೆಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಸಾಧನೆ

ಕಾರು ನಿರ್ಮಿಸಿ ದೇಶಕ್ಕೆ ನಂ. 1 ರ‍್ಯಾಂಕ್

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

ಕಾರು ನಿರ್ಮಿಸಿ ದೇಶಕ್ಕೆ ನಂ. 1 ರ‍್ಯಾಂಕ್

ಮೈಸೂರು: ಅಮೆರಿಕದ ಪ್ರತಿಷ್ಠಿತ ‘ಎಸ್‌ಎಇ ಬಾಹಾ’ ಕಾರು ನಿರ್ಮಾಣ ಸ್ಪರ್ಧೆಯಲ್ಲಿ ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ದೇಶಕ್ಕೆ ನಂ. 1 ರ‍್ಯಾಂಕ್‌ ಗಳಿಸಿ ಸಾಧನೆ ಮಾಡಿದ್ದಾರೆ.

ಭಾರತೀಯ ಎಂಜಿನಿಯರುಗಳ ಸಂಸ್ಥೆ ಆಹ್ವಾನದ ಮೇರೆಗೆ ‘ಎಸ್‌ಎಇ ಬಾಹಾ’ ಸ್ಪರ್ಧೆ ನಡೆದಿತ್ತು. ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜು ಗಳ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.

ಏನಿದು ಸ್ಪರ್ಧೆ?: ಇದು ‘ಆಫ್‌ ರೋಡ್‌’ನಲ್ಲಿ (ಕಚ್ಚಾ ರಸ್ತೆ) ಸಂಚರಿಸುವ ವಾಹನಗಳನ್ನು ತಯಾರಿಸಿ ಚಾಲನೆ ಮಾಡುವ ರಾಷ್ಟ್ರಮಟ್ಟದ ಸ್ಪರ್ಧೆ. ವಿದ್ಯಾರ್ಥಿಗಳು ಹೊಚ್ಚ ಹೊಸ ವಿನ್ಯಾಸವನ್ನು ರೂಪಿಸಿ, ಅದರಂತೆ ಕಾರ್ ನಿರ್ಮಿಸಬೇಕು. ಈ ಕಾರು ಅಂತರರಾಷ್ಟ್ರೀಯ ‘ಆಫ್‌ ರೋಡ್‌’ ಮಾನದಂಡಗಳಿಗೆ ಅನುಗುಣವಾಗಿರಬೇಕು. ಹೀಗೆ ತಯಾರಾದ ವಾಹನಗಳ ಪೈಕಿ ಯಾವ ಕಾರು ಮೊದಲ ಸ್ಥಾನದಲ್ಲಿ ನಿಲ್ಲುವುದೊ ಅದು ಸ್ಪರ್ಧೆಯಲ್ಲಿ ಗೆದ್ದಂತೆ.

ಇದಕ್ಕಾಗಿ ಮೈಸೂರಿನ ವಿದ್ಯಾರ್ಥಿಗಳು ಒಟ್ಟು ₹ 6 ಲಕ್ಷ ಖರ್ಚು ಮಾಡಿ ‘ಸೇನಿಕ್ಸ್‌’ (SAENIEKS) ಎಂಬ ಕಾರನ್ನು ನಿರ್ಮಿಸಿದ್ದರು. ಮೊದಲ ಸುತ್ತಿನ ಸ್ಪರ್ಧೆಯು ಚಂಡೀಗಡದಲ್ಲಿ ನಡೆದಿತ್ತು. ಅಲ್ಲಿ ದೇಶದ 450 ಕಾಲೇಜುಗಳು ಭಾಗವಹಿಸಿದ್ದವು. ಮಾರುತಿ ಸುಜುಕಿ, ಶವರ್ಲೆ ಕಂಪನಿಗಳ ಎಂಜಿನಿಯರುಗಳು ತೀರ್ಪುದಾರರಾಗಿದ್ದರು. ಈ ಸ್ಪರ್ಧೆಯಲ್ಲಿ ವಿನ್ಯಾಸ ಪ್ರದರ್ಶಿಸಿ, ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು.

ಮಾರ್ಚ್‌ 9ರಿಂದ 11ರ ವರೆಗೆ ಚಂಡೀಗಡದ ರೂಪನಗರದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಎಂಜಿನಿಯರಿಂಗ್‌ ವಿಭಾಗದಲ್ಲಿ ಎನ್‌ಐಇ ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಗಳಿಸಿದ್ದಾರೆ. ಈ ವಿಭಾಗದಲ್ಲಿ ಕಾರಿನ ಕಾರ್ಯಕ್ಷಮತೆ, ಮೈಲೇಜ್‌, ಸುರಕ್ಷತೆ ಮಾನದಂಡಗಳನ್ನು ಅಳೆಯಲಾಗುತ್ತದೆ. ‘ದೇಶದ 150 ಕಾಲೇಜುಗಳ ಕಾರುಗಳನ್ನು ಹಿಂದಿಕ್ಕಿದ ನಮ್ಮ ಕಾರು ಮುಂಚೂಣಿಯಲ್ಲಿ ನಿಂತಿತು’ ಎಂದು ‘ಸೇನಿಕ್ಸ್’ ತಯಾರಿಸಿದ ತಂಡದ ನಾಯಕ ಸಂಕೇತ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದಿಷ್ಟೇ ಅಲ್ಲದೇ, ಸತತ 4 ಗಂಟೆ ಕಾಲ ನಡೆಯುವ ‘ಡರ್ಟ್‌ ಟ್ರ್ಯಾಕ್‌’ ರೇಸಿನಲ್ಲಿ ‘ಸೇನಿಕ್ಸ್‌’ 13ನೇ ಸ್ಥಾನವನ್ನು ಪಡೆದಿದೆ. ತೂಕ ಎಳೆಯುವ ಸಾಮರ್ಥ್ಯ ಪರೀಕ್ಷೆಯಲ್ಲಿ ಟ್ರ್ಯಾಕ್ಟರ್‌ ಎಳೆದು ದೇಶಕ್ಕೆ ಮೂರನೇ ಸ್ಥಾನ ಗಳಿಸಿದ ಹೆಗ್ಗಳಿಕೆ ಈ ಕಾರಿನದಾಗಿದೆ.

ಈ ಕಾರಿಗೆ ಅಮೆರಿಕದ ‘ಬ್ರಿಗ್ಸ್ ಅಂಡ್‌ ಸ್ಟ್ರಾಟನ್‌’ ಕಂಪನಿಯ 303 ಸಿಸಿ ಪೆಟ್ರೋಲ್‌ ಎಂಜಿನ್‌ ಅಳವಡಿಸಲಾಗಿದೆ. ಕಾರು ತಯಾರಿಸಿದ ತಂಡದಲ್ಲಿ ಉಪ ನಾಯಕ ತನುಷ್ ಶೆಟ್ಟಿ, ವಿನ್ಯಾಸ ವಿಭಾಗ ಮುಖ್ಯಸ್ಥ ಶರತ್‌, ಸಸ್ಪೆನ್ಷನ್‌ ಮುಖ್ಯಸ್ಥ ಪೂರ್ಣಚಂದು, ಮಾರ್ಗದರ್ಶಕರಾಗಿ ಶ್ರೀರಾಮ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.