ಶುಕ್ರವಾರ, ಡಿಸೆಂಬರ್ 13, 2019
19 °C

ನೀರು ಬಿಡಲು ಸಿಎಂಬಿ ಅಡ್ಡಿ ಅಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ನೀರು ಬಿಡಲು ಸಿಎಂಬಿ ಅಡ್ಡಿ ಅಲ್ಲ

ನವದೆಹಲಿ: ತಮಿಳುನಾಡಿಗೆ ಕಾವೇರಿ ನದಿಯಿಂದ ಈಗ ನೀರು ಬಿಡದಿರುವುದಕ್ಕೆ ಕಾವೇರಿ ನಿರ್ವಹಣಾ ಮಂಡಳಿ (ಸಿಎಂಬಿ) ರಚನೆ ಆಗದಿರುವುದು ಕಾರಣ ಅಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಫೆಬ್ರುವರಿಯಿಂದ ಮೇವರೆಗಿನ ಅವಧಿಯಲ್ಲಿ ಪರಿಸರ ಸಂರಕ್ಷಣೆಗಾಗಿ ಎಷ್ಟು ಅಗತ್ಯವೋ ಅಷ್ಟು ನೀರನ್ನು ಮಾತ್ರ ಅಣೆಕಟ್ಟೆಯಿಂದ ಬಿಡಬೇಕು. ಬೇರೆ ಯಾವುದೇ ಉದ್ದೇಶಕ್ಕೂ ನೀರು ಬಿಡಬಾರದು ಎಂದು ಕಾವೇರಿ ಜಲವಿವಾದ ಪರಿಹಾರ ನ್ಯಾಯಮಂಡಳಿ ಸ್ಪಷ್ಟವಾಗಿ ಹೇಳಿದೆ.

ಆದರೆ, ‘ಈಗ, ತುರ್ತಾಗಿ ನೀರು ಬಿಡುವ ಅಗತ್ಯ ಇದೆ. ಸಿಎಂಬಿ ರಚನೆ ಆಗದಿರುವುದು ನೀರು ಬಿಡಲು ಅಡ್ಡಿಯಾಗಿದೆ’ ಎಂಬ ಭಾವನೆ ಮೂಡಿ

ಸಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ ಫೆಬ್ರುವರಿ–ಮೇ ಅವಧಿಯಲ್ಲಿ ನೀರು ಬಿಡಲು ಅವಕಾಶವೇ ಇಲ್ಲ ಎಂದು ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಯು.ಪಿ. ಸಿಂಗ್‌ ಹೇಳಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ನೀರೇ ದೊರೆಯುತ್ತಿಲ್ಲ. ಸಿಎಂಬಿ ತಕ್ಷಣವೇ ರಚನೆಯಾಗಬೇಕು ಎಂದು ಒತ್ತಾಯಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿರುವುದರ ನಡುವೆ ಸಿಂಗ್‌ ಈ ಸ್ಪಷ್ಟನೆ ಕೊಟ್ಟಿದ್ದಾರೆ.

ನೀರಾವರಿ ಉದ್ದೇಶಕ್ಕೆ ನೀರು ಬಿಡಲು ಅವಕಾಶ ಇರುವುದು ಜೂನ್‌ನಿಂದ ಜನವರಿ ನಡುವಣ ಅವಧಿಯಲ್ಲಿ ಮಾತ್ರ. ನೀರು ಹಂಚಿಕೆಗೆ ಸಂಬಂಧಿಸಿ ಯಾವುದಾದರೂ ಸಮಸ್ಯೆಗಳು ಇದ್ದರೆ ಅದನ್ನು ಪರಿಹರಿಸಲು ತಮ್ಮ ನೇತೃತ್ವದ ಮೇಲ್ವಿಚಾರಣಾ ಸಮಿತಿ ಇದೆ ಎಂದೂ ಅವರು ಹೇಳಿದ್ದಾರೆ.

ರಾಜ್ಯಗಳ ಜತೆ ಮತ್ತೆ ಚರ್ಚೆ ಇಲ್ಲ

ಕರ್ನಾಟಕ, ತಮಿಳುನಾಡು, ಕೇರಳ, ಮತ್ತು ಪುದುಚೇರಿಗಳು ಯೋಜನೆಗೆ ಸಂಬಂಧಿಸಿ ತಮ್ಮ ನಿಲುವು ಏನು ಎಂಬುದನ್ನು ಕೇಂದ್ರಕ್ಕೆ ಸಲ್ಲಿಸಿವೆ. ಯೋಜನೆಯ ಕರಡು ಸಿದ್ಧಪಡಿಸುವುದಕ್ಕೆ ಸಂಬಂಧಿಸಿ ರಾಜ್ಯಗಳ ಜತೆ ಮತ್ತೆ ಚರ್ಚೆ ಇಲ್ಲ. ಈಗಾಗಲೇ ಸಲ್ಲಿಸಲಾಗಿರುವ ನಿಲುವುಗಳನ್ನು ಗಣನೆಗೆ ತೆಗೆದುಕೊಂಡು ಯೋಜನೆ ಸಿದ್ಧಪಡಿಸಲಾಗುವುದು. ಎಲ್ಲರ ಅಭಿಪ್ರಾಯವನ್ನೂ ಸೇರಿಸಿಕೊಳ್ಳಲಾಗುವುದು ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ವಿಧಾನಸಭೆ ಚುನಾವಣೆ ಅಡ್ಡಿ ಅಲ್ಲ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಸುಪ್ರೀಂ ಕೋರ್ಟ್‌ನಿಂದ ಕಾಲಾವಕಾಶ ಕೋರಿಲ್ಲ ಎಂದು ಸಿಂಗ್‌ ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತರುವ ಕೆಲಸವನ್ನು ಮಾತ್ರ ಮಾಡಲಾಗಿದೆ. ಕಾವೇರಿ ನೀರು ಹಂಚಿಕೆಯು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅತ್ಯಂತ ಸೂಕ್ಷ್ಮವಾದ ವಿಚಾರ. ಚುನಾವಣೆ ನಡೆಯುವಾಗ ಇದು ಇನ್ನಷ್ಟು ಸೂಕ್ಷ್ಮವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಆಡಳಿತಾತ್ಮಕ ಅಥವಾ ನ್ಯಾಯಾಂಗೀಯ ವ್ಯವಸ್ಥೆ

ಕೇಂದ್ರ ಸರ್ಕಾರ ರೂಪಿಸಲಿರುವ ಕಾವೇರಿ ನಿರ್ವಹಣಾ ಯೋಜನೆಯು ನ್ಯಾಯಾಂಗೀಯ ವ್ಯವಸ್ಥೆ ಆಗಿರಬಹುದು ಅಥವಾ ಆಡಳಿತಾತ್ಮಕ ವ್ಯವಸ್ಥೆ ಆಗಿರಬಹುದು. ಕೇಂದ್ರ ಸರ್ಕಾರ ರೂಪಿಸುವ ವ್ಯವಸ್ಥೆಯು ಮಂಡಳಿ ಅಥವಾ ಪ್ರಾಧಿಕಾರ ಎಂಬ ಹೆಸರಿನಿಂದ ಕರೆಸಿಕೊಳ್ಳಬಹುದು. ಇದು ಹೆಸರಿನ ವ್ಯತ್ಯಾಸ ಮಾತ್ರ. ಒಟ್ಟಿನಲ್ಲಿ ಯೋಜನೆಯ ಅಡಿಯಲ್ಲಿ ಒಂದು ಚೌಕಟ್ಟು ಅಸ್ತಿತ್ವದಲ್ಲಿರುತ್ತದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಹೇಳಿದ್ದಾರೆ.

ಕಾವೇರಿ ನಿರ್ವಹಣಾ ಯೋಜನೆಯ ಕರಡು ರೂಪಿಸಿ ಮೇ 3ರೊಳಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಈಗಾಗಲೇ ಸೂಚಿಸಿದೆ.

ಪ್ರತಿಕ್ರಿಯಿಸಿ (+)