ಭಾನುವಾರ, ಡಿಸೆಂಬರ್ 15, 2019
25 °C

ಸಿರಿಯಾದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ದಾಳಿಗೆ ಖಂಡನೆ: ಅಮೆರಿಕಾ–ರಷ್ಯಾ ಜಟಾಪಟಿ

ಪಿಟಿಐ Updated:

ಅಕ್ಷರ ಗಾತ್ರ : | |

ಸಿರಿಯಾದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ದಾಳಿಗೆ ಖಂಡನೆ: ಅಮೆರಿಕಾ–ರಷ್ಯಾ ಜಟಾಪಟಿ

ವಿಶ್ವಸಂಸ್ಥೆ: ಸಿರಿಯಾದಲ್ಲಿನ ರಾಸಾಯನಿಕ ಶಸ್ತ್ರಾಸ್ತ್ರ ದಾಳಿ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆಯಲ್ಲಿ ಅಮೆರಿಕ ಮತ್ತು ರಷ್ಯಾ ನಡುವೆ ಜಟಾಪಟಿ ನಡೆದಿದೆ.

‘ರಷ್ಯಾದಲ್ಲಿ ಆಡಳಿತ ನಡೆಸುವವರ ಕೈಗಳು ರಕ್ತಸಿಕ್ತವಾಗಿವೆ. ಸಿರಿಯಾದಲ್ಲಿ ಮಕ್ಕಳು ಜೀವ ಕಳೆದುಕೊಂಡಿದ್ದಾರೆ’ ಎಂದು ಅಮೆರಿಕ ಆರೋಪಿಸಿದೆ. ರಷ್ಯಾ ಈ ಆರೋಪವನ್ನು ತಳ್ಳಿ ಹಾಕಿದ್ದು, ‘ಇದೊಂದು ಸುಳ್ಳು ಸುದ್ದಿ’ ಎಂದಿದೆ.

ದಾಳಿಯಲ್ಲಿ ಮೃತಪಟ್ಟ ಮಕ್ಕಳು ಮತ್ತು ಗಾಯಗೊಂಡವರ ಚಿತ್ರವನ್ನು ಸಭೆಯಲ್ಲಿ ಪ್ರದರ್ಶಿಸಿ ಕಟುವಾಗಿ ಟೀಕಿಸಿದ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ‘ಇಂತಹ ಪೈಶಾಚಿಕ ದಾಳಿ ನಡೆಸಿದವರಿಗೆ ಆತ್ಮಸಾಕ್ಷಿಯೇ ಇಲ್ಲ. ಸಾವಿಗೀಡಾದ ಮಕ್ಕಳ ಚಿತ್ರಗಳನ್ನು ನೋಡಿದರೆ ಎಂತವರಿಗೂ ಆಘಾತವಾಗುತ್ತದೆ’ ಎಂದರು.

‘ಅಮೆರಿಕವು ಈ ವಿಷಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಮತ್ತು ತಕ್ಕ ಪ್ರತಿಕ್ರಿಯೆ ನೀಡಲಿದೆ’ ಎಂದು ಎಚ್ಚರಿಕೆ ನೀಡಿದರು. ರಷ್ಯಾ ಪ್ರತಿನಿಧಿ ವಾಸಿಲಿ ನೆಬೆನ್ಜಿಯಾ ಅವರು ‘ಯಾವುದೇ ತನಿಖೆ ನಡೆಯದೆ ರಷ್ಯಾ ಮತ್ತು ಇರಾನ್‌ ಅನ್ನು ಈ ದಾಳಿಗೆ ಹೊಣೆ ಮಾಡುತ್ತಿರುವುದು ಆಶ್ಚರ್ಯ ಮೂಡಿಸುತ್ತಿದೆ’ ಎಂದರು.

ಸಿರಿಯಾದ ದೌಮಾದಲ್ಲಿ ನಾಗರಿಕರ ಮೇಲೆ ನಡೆದಿರುವ ರಾಸಾಯನಿಕ ಶಸ್ತ್ರಾಸ್ತ್ರ ದಾಳಿಯಿಂದಾಗಿ ಭದ್ರತಾ ಮಂಡಳಿ ತುರ್ತು ಸಭೆ ನಡೆಸಲಾಯಿತು. ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ರಾಸಾಯನಿಕ ಶಸ್ತ್ರಾಸ್ತ್ರ ದಾಳಿಯಿಂದ ಸಿರಿಯಾದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು. ಅಲ್ಲಿನ ನಾಗರಿಕರ ಬಗ್ಗೆ ಕಾಳಜಿ ವಹಿಸಬೇಕೆಂದು ಧ್ವನಿ ಎತ್ತಿದರು.

ಭದ್ರತಾ ಮಂಡಳಿ ನಿರ್ಣಯದಂತೆ ಸಿರಿಯಾದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ತಿಳಿಸಿದ್ದಾರೆ.

**

ಚೀನಾ ಎಚ್ಚರಿಕೆ

ಬೀಜಿಂಗ್‌ (ಎಎಫ್‌ಪಿ): ಸಿರಿಯಾದಲ್ಲಿನ ರಾಸಾಯನಿಕ ದಾಳಿಗೆ ಪ್ರತಿಯಾಗಿ ಸೇನೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿರುವ ಹೇಳಿಕೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

‌‘ಸೇನಾ ಬೆದರಿಕೆ ಖಂಡನೀಯ. ಇದನ್ನು ಚೀನಾ ಒಪ್ಪುವುದಿಲ್ಲ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್‌ ಶುಯಾಂಗ್‌ ಹೇಳಿದ್ದಾರೆ.

ದಾಳಿಯ ಹಿಂದೆ ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ಕೈವಾಡವಿರುವುದು ದೃಢಪಟ್ಟರೆ ತಕ್ಕ ಉತ್ತರ ನೀಡಲಾಗುವುದು ಎಂದು ಫ್ರಾನ್ಸ್‌ ಹೇಳಿದೆ.

**

ರಷ್ಯಾದ ಆಡಳಿತಗಾರರ ಕೈಗಳು ಮಕ್ಕಳ ರಕ್ತದಲ್ಲಿ ತೊಯ್ದಿವೆ. ಸಾವಿಗೀಡಾದ ಮಕ್ಕಳ ಚಿತ್ರಗಳನ್ನು ನೋಡಿ ನಾಚಿಕೆಯಾಗುವುದಿಲ್ಲವೇ?

-ನಿಕ್ಕಿ ಹ್ಯಾಲೆ, ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ

**

ಯಾರೂ ಕೂಡ ಪೂರ್ವಗ್ರಹ ಪೀಡಿತರಾಗಿ ವರ್ತಿಸಬಾರದು. ವಿಷಯದ ಆಳಕ್ಕೆ ಹೋಗಿ ವಸ್ತುನಿಷ್ಠ ಮತ್ತು ಪ್ರಾಮಾಣಿಕವಾಗಿ ನೋಡಬೇಕು.

-ವಾಸಿಲಿ ನೆಬೆನ್ಜಿಯಾ, ವಿಶ್ವಸಂಸ್ಥೆಯಲ್ಲಿನ ರಷ್ಯಾ ಪ್ರತಿನಿಧಿ

ಪ್ರತಿಕ್ರಿಯಿಸಿ (+)