ಪೊಲೀಸರಿಂದಲೇ ಕಳ್ಳರಿಗೆ ಮನೆ

5

ಪೊಲೀಸರಿಂದಲೇ ಕಳ್ಳರಿಗೆ ಮನೆ

Published:
Updated:

ಬೆಂಗಳೂರು: ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಹಾಗೂ ಒಂಟಿ ಮಹಿಳೆಯರ ಸರ ದೋಚುತ್ತಿದ್ದ ಆರೋಪಿಯೊಬ್ಬನಿಗೆ ಕಾನ್‌ಸ್ಟೆಬಲ್‌ಗಳೇ ಬಾಡಿಗೆ ಮನೆ ಮಾಡಿಕೊಟ್ಟು, ಆತನಿಂದ ಪಾಲು ಪಡೆಯುತ್ತಿದ್ದರು ಎಂಬ ಸಂಗತಿ ಬಯಲಾಗಿದೆ.

ಮೈಕೊ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಲು ಹೊಂಚು ಹಾಕುತ್ತಿದ್ದ ವೇಳೆಯಲ್ಲೇ ಆರೋಪಿ ಆರ್ಮುಗಂ ಅಲಿಯಾಸ್‌ ಕರಿಯಾ (29) ಎಂಬಾತ,  ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನ ವಿಚಾರಣೆ ನಡೆಸಿದಾಗ, ಅನ್ನಪೂರ್ಣೇಶ್ವರಿ ನಗರ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಮಧು ಹಾಗೂ ತಿಪ್ಪೇಸ್ವಾಮಿ ಕಳ್ಳತನ ಎಸಗಲು ಸಹಕಾರ ನೀಡುತ್ತಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದಾನೆ.

ಯಲಹಂಕದ ನಿವಾಸಿಯಾದ ಆರ್ಮುಗಂ, ನಗರದ ಹಲವು ಠಾಣೆಗಳ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನ ನಡೆಸಿದ್ದ. ಸರಗಳವು ಮಾಡುವುದರಲ್ಲೂ ಪರಿಣಿತಿ ಪಡೆದಿದ್ದ. ಕಳೆದ ವರ್ಷ ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿ, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಜೈಲಿಗೂ ಕಳುಹಿಸಿದ್ದರು. ಜಾಮೀನು ಮೇಲೆ ಹೊರಬಂದಿದ್ದ ಆತ, ಯಲಹಂಕದಲ್ಲೇ ವಾಸವಿದ್ದುಕೊಂಡು ಕಳ್ಳತನ ನಡೆಸಲು ಸಂಚು ರೂಪಿಸುತ್ತಿದ್ದ.

ಜೈಲಿನಿಂದ ಹೊರಬಂದ ವಿಷಯ ತಿಳಿದ ಕಾನ್‌ಸ್ಟೆಬಲ್‌ ಮಧು ಹಾಗೂ ತಿಪ್ಪೇಸ್ವಾಮಿ, ಆರೋಪಿಯನ್ನು ಸಂಪರ್ಕಿಸಿದ್ದರು. ಆತನ ಕಳ್ಳತನದ ಶೈಲಿಯನ್ನು ಹೊಗಳಿದ್ದ ಅವರಿಬ್ಬರು, ‘ಮುಂದೆಯೂ ಕಳ್ಳತನ ಮಾಡು. ನಿನ್ನ ಜತೆ ನಾವಿರುತ್ತೇವೆ’ ಎಂದು ಹೇಳಿದ್ದರು. ‘ನಮ್ಮ ಠಾಣೆ (ಅನ್ನಪೂರ್ಣೇಶ್ವರಿ ನಗರ) ವ್ಯಾಪ್ತಿಯಲ್ಲಿ ಕಳ್ಳತನ ಮಾಡಬೇಡ. ಶ್ರೀಮಂತರು ಹೆಚ್ಚಿರುವ ಬೊಮ್ಮನಹಳ್ಳಿ, ಎಚ್‌ಬಿಆರ್‌ ಲೇಔಟ್‌ ಹಾಗೂ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕಳ್ಳತನ ಮಾಡು. ಹೆಚ್ಚಿನ ಆಭರಣಗಳು ಸಿಗುತ್ತವೆ’ ಎಂದು ಅವರಿಬ್ಬರು ಸಲಹೆ ನೀಡಿದ್ದರು. ಅದಕ್ಕೆ ಆರೋಪಿಯು ಒಪ್ಪಿಕೊಂಡಿದ್ದ.

ನಂತರ, ಆರೋಪಿಗೆ ಮಧುನೇ ಬೊಮ್ಮನಹಳ್ಳಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಟ್ಟಿದ್ದ. ಅದಕ್ಕೆ ಮುಂಗಡ ಹಣವನ್ನೂ ನೀಡಿದ್ದ. ಪ್ರತಿ ತಿಂಗಳು ಆತನೇ ಬಾಡಿಗೆ ಪಾವತಿಸುತ್ತಿದ್ದ. ಅದೇ ಮನೆಯಲ್ಲಿದ್ದುಕೊಂಡು ಆರೋಪಿ ಕಳ್ಳತನಕ್ಕೆ ಹೋಗುತ್ತಿದ್ದ ಎಂದು ಪೊಲೀಸರು ವಿವರಿಸಿದರು.

ಮನೆ ಗುರುತಿಸಲು ಭಾತ್ಮಿದಾರನ ಬಳಕೆ:

ಅನ್ನಪೂರ್ಣೇಶ್ವರಿ ನಗರ ನಿವಾಸಿ ಲಕ್ಷ್ಮಣ ಎಂಬಾತ, ಭಾತ್ಮಿದಾರನಾಗಿ ಕೆಲಸ ಮಾಡುತ್ತಿದ್ದ. ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಬೆಳವಣಿಗೆ ಬಗ್ಗೆ ಪೊಲೀಸರಿಗೆ ಆಗಾಗ ಮಾಹಿತಿ ನೀಡುತ್ತಿದ್ದ. ಆತನನ್ನು ಸಂಪರ್ಕಿಸಿದ್ದ ಮಧು, ಕಳ್ಳತನಕ್ಕೆ ಯೋಗ್ಯವಾದ ಮನೆಗಳನ್ನು ಗುರುತಿಸಿಕೊಡುವಂತೆ ಹೇಳಿದ್ದ. ಅದಕ್ಕೆ ಪ್ರತಿಯಾಗಿ ಹಣ ನೀಡುವುದಾಗಿ ತಿಳಿಸಿದ್ದ. ಅದಕ್ಕೆ ಲಕ್ಷ್ಮಣ ಸಹ ಒಪ್ಪಿಕೊಂಡಿದ್ದ.

‘ನಸುಕಿನಲ್ಲಿ ಬೊಮ್ಮನಹಳ್ಳಿ, ಎಚ್‌ಬಿಆರ್‌ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಚನ್ನಮ್ಮನ ಅಚ್ಚುಕಟ್ಟು ಕೆರೆ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಲಕ್ಷ್ಮಣ, ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತ್ತಿದ್ದ. ಆ ಮಾಹಿತಿಯನ್ನು ಆರ್ಮುಗಂಗೆ ಹೇಳುತ್ತಿದ್ದ. ರಾತ್ರಿ ವೇಳೆ ಆರೋಪಿ, ಆ ಮನೆಗಳಿಗೆ ಹೋಗಿ ಕೃತ್ಯ ಎಸಗುತ್ತಿದ್ದ. ಆರ್ಮುಗಂ ನೀಡಿದ್ದ ಮಾಹಿತಿ ಆಧರಿಸಿ ಲಕ್ಷ್ಮಣನನ್ನು ಬಂಧಿಸಿ

ದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಆರೋಪಿ, ಒಂಟಿ ಮಹಿಳೆಯರ ಸರಗಳವು ಮಾಡುತ್ತಿದ್ದ. ಲಕ್ಷ್ಮಣ ಸಹ ಆತನೊಂದಿಗೆ ಬೈಕ್‌ನಲ್ಲಿರುತ್ತಿದ್ದ ಎಂಬ ಮಾಹಿತಿ ಇದೆ. ಅದನ್ನು ಖಾತ್ರಿಪಡಿಸಿಕೊಳ್ಳಲು, ಅವರು ಕೃತ್ಯ ಎಸಗಿದ್ದ ಘಟನಾ ಸ್ಥಳಗಳಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದರು.

ಶೇ 50ರಷ್ಟು ಪಾಲು: ‘ನಗರದ ಹಲವು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿದ್ದ ಆರೋಪಿ, ಕದ್ದ ಆಭರಣಗಳಿಂದ ಬಂದ ಹಣದಲ್ಲಿ ಶೇ 50ರಷ್ಟು ಪಾಲನ್ನು ಕಾನ್‌ಸ್ಟೆಬಲ್‌ಗಳಿಗೆ ಕೊಡುತ್ತಿದ್ದ. ಅದೇ ಹಣದಲ್ಲೇ ಕಾನ್‌ಸ್ಟೆಬಲ್‌ಗಳು ಐಷಾರಾಮಿ ಜೀವನ ನಡೆಸುತ್ತಿದ್ದರು. ಬೆಲೆ ಬಾಳುವ ಬೈಕ್‌ಗಳನ್ನು ಕೊಂಡುಕೊಂಡಿದ್ದರು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

’ಕಾನ್‌ಸ್ಟೆಬಲ್‌ಗಳಿಬ್ಬರ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಅಧಿಕಾರಿಗಳಿಂದಲೂ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಅಧಿಕಾರ ದುರು

ಪಯೋಗ ಪಡಿಸಿಕೊಂಡು ಅವರಿಬ್ಬರು, ಕಳ್ಳತನ ಎಸಗಲು ಹಲವರಿಗೆ ಪ್ರಚೋದನೆ ನೀಡಿದ್ದರು ಎಂಬುದು ಗೊತ್ತಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry