ಮಂಗಳವಾರ, ಆಗಸ್ಟ್ 4, 2020
26 °C
ರಾಜಕಾಲುವೆಗಳ ಮೇಲಿದ್ದ ಬಡವರ ಮನೆ ನೆಲಸಮ; ಪ್ರತಿಷ್ಠಿತರ ಕಟ್ಟಡಗಳ ಬಗ್ಗೆ ಮೌನ

‘ಆನೆ’ ಹೊರಬಿಟ್ಟರು – ‘ಇಲಿ’ ಬಲಿ ಕೊಟ್ಟರು!

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

‘ಆನೆ’ ಹೊರಬಿಟ್ಟರು – ‘ಇಲಿ’ ಬಲಿ ಕೊಟ್ಟರು!

ಬೆಂಗಳೂರು: ರಾಜಧಾನಿಯಲ್ಲಿ ಒಂದು ಗಂಟೆ ಸುರಿಯುವ ಜೋರು ಮಳೆಗೆ ರಾಜಕಾಲುವೆಗಳೆಲ್ಲ ಉಕ್ಕಿ ಹರಿಯುತ್ತವೆ. ಅಕ್ಕಪಕ್ಕ ಮನೆಗಳೊಳಗೆ ನೀರು ನುಗ್ಗುತ್ತದೆ. ಕ್ಷಣಾರ್ಧದಲ್ಲಿ ಮನುಷ್ಯರನ್ನೂ ಸೆಳೆದುಕೊಳ್ಳುತ್ತದೆ. ಮರುದಿನವೇ ಬಿಬಿಎಂಪಿ ‘ಸಮರೋಪಾದಿ’ಯಲ್ಲಿ ರಾಜಕಾಲುವೆ ಸ್ವಚ್ಛಗೊ

ಳಿಸುವ ಕಾಮಗಾರಿ ನಡೆಸುತ್ತದೆ. ಅದೆಲ್ಲ ಒಂದೆರಷ್ಟು ದಿನಗಳಷ್ಟೇ. ಮತ್ತೆ ಅದೇ ರಾಗ, ಅದೇ ಹಾಡು.

ರಾಜಕಾಲುವೆಗಳಲ್ಲಿ ಮಳೆ ನೀರಿನ ಬದಲು ಕೊಳಚೆ ನೀರು ಹರಿಯುತ್ತಿದೆ. ಕಾಲುವೆಗಳ ದಡದಲ್ಲಿ ಗುಡಿಸಲುಗಳು ಹಾಗೂ ಮನೆಗಳು ತಲೆ ಎತ್ತಿ ಸಮಸ್ಯೆ ದುಪ್ಪಟ್ಟಾಗಿದೆ. ಹೀಗಾಗಿ 10 ಸೆಂ.ಮೀ ಮಳೆಗೆ ‘ಮಹಾಪೂರ’ ಸೃಷ್ಟಿಯಾಗುತ್ತಿದೆ. ವರ್ಷದಲ್ಲಿ ಹತ್ತಾರು ಸಲ ಪ್ರವಾಹ ಕಾಣಿಸಿಕೊಳ್ಳುತ್ತಿದೆ.

ಐದು ದಶಕಗಳಲ್ಲಿ 290 ಕಿ.ಮೀ ರಾಜಕಾಲುವೆ ಮಾಯವಾಗಿದೆ ಎಂಬ ಅಂಶ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವರದಿಯಲ್ಲಿದೆ. 1965ರಲ್ಲಿ 1,397.08 ಕಿ.ಮೀ.ನಷ್ಟು ಕಾಲುವೆಗಳಿದ್ದವು. ಈಗ ಇದು 1,105.41 ಕಿ.ಮೀ.ಗೆ ಇಳಿದಿದೆ ಎಂದು ಸಂಸ್ಥೆ ತಿಳಿಸಿದೆ. ನಗರೀಕರಣವಾದಂತೆ ಕಾಲುವೆಗಳು ಮಾಯವಾಗಿವೆ. ಇವುಗಳ ಪಕ್ಕದಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಮಳೆ ನೀರಿನ ಸಹಜ ಹರಿವಿಗೆ ಅಡ್ಡಿಯಾಗಿದೆ.

2016ರ ಜುಲೈ ತಿಂಗಳಿನಲ್ಲಿ ಸುರಿದ ಮಳೆಗೆ ಬೊಮ್ಮನಹಳ್ಳಿ ವಲಯದ ಸುಮಾರು 600 ಮನೆಗಳು ಜಲಾವೃತಗೊಂಡವು. ಮಳೆನೀರು ಹರಿದು

ಹೋಗಲು ದಾರಿಯೇ ಇಲ್ಲದೆ ರಸ್ತೆಗಳೆಲ್ಲ ನದಿಯ ರೂಪ ತಾಳಿದವು. ‘ರಾಜಕಾಲುವೆಗಳು ಒತ್ತುವರಿಯಾಗಿದ್ದೇ ಸಮಸ್ಯೆಗೆ ಕಾರಣ’ ಎಂಬ ಖಚಿತ ಅಭಿಪ್ರಾಯಕ್ಕೆ ಬಿಬಿಎಂಪಿ ಅಧಿಕಾರಿಗಳು ಬಂದರು. ಈ ಕಾಲುವೆಗಳ ಮೇಲೆ 1,110 ಮನೆಗಳು ಇವೆ ಎಂದು ನಗರ ಜಿಲ್ಲಾಧಿಕಾರಿ ಅವರು 2008ರಲ್ಲಿ ನೀಡಿದ್ದ ವರದಿಯನ್ನೇ ಮೂಲವಾಗಿ ಇಟ್ಟುಕೊಂಡರು. ಈ ಮನೆಗಳ ಪಟ್ಟಿ ಪ್ರಕಟಿಸಿದರು. ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವುಗೊಳಿಸುವ ಹೊಣೆಯನ್ನು ಪಾಲಿಕೆ ಜಂಟಿ ಆಯುಕ್ತರಿಗೆ ವಹಿಸಿದರು. ಅಧಿಕಾರಿಗಳು ರಾಜಕಾಲುವೆಗಳ ಮೇಲಿದ್ದ ಕಟ್ಟಡಗಳ ಸರ್ವೆಯನ್ನೂ ನಡೆಸಿದರು.

ಆಗಸ್ಟ್‌ 6ರಂದು ಬೆಳ್ಳಂಬೆಳಗ್ಗೆ ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರದಲ್ಲಿ ಪಾಲಿಕೆಯ ಬುಲ್ಡೋಜರ್‌ಗಳು ಮನೆಗಳ ಮೇಲೆ ಪ್ರಹಾರ ನಡೆಸಿದವು. ಸಂಜೆಯೊಳಗೆ ಎರಡು ಮನೆಗಳನ್ನು ಒಡೆದು ಹಾಕಲಾಯಿತು. ಬಳಿಕ ಕೋಡಿಚಿಕ್ಕನಹಳ್ಳಿ, ಹರಲೂರು, ಹಲಗೇವಡೇರಹಳ್ಳಿ, ದೊಡ್ಡಬೊಮ್ಮಸಂದ್ರ ಪ್ರದೇಶಗಳ ರಾಜಕಾಲುವೆಗಳ ಮೇಲೂ ಬುಲ್ಡೋಜರ್‌ಗಳು ಅಬ್ಬರಿಸಿದವು. ಬುಲ್ಡೋಜರ್‌ಗಳು ಮುಂದಿನ ಮನೆಗಳತ್ತ ಬರುವ ವೇಳೆಗೆ ಸ್ಥಳೀಯ ರಾಜಕೀಯ ಮುಖಂಡರು ಪ್ರತ್ಯಕ್ಷರಾಗಿದ್ದರು. ಪ್ರಭಾವಿಗಳ ಒತ್ತಡಕ್ಕೆ ಮಣಿದ ಬಿಬಿಎಂಪಿ ಅಧಿಕಾರಿಗಳು ರಾಜ

ಕಾಲುವೆ ದಿಕ್ಕನ್ನೇ ಬದಲಿಸಿ ಉಳಿದ ಮನೆಗಳು ಭಗ್ನಗೊಳ್ಳದಂತೆ ನಿಗಾ ವಹಿಸಿದರು. ತೆರವು ಕಾರ್ಯಾಚರಣೆಯನ್ನು ಪಾಲಿಕೆ ಬಲು ಅಬ್ಬರದಿಂದ ಆರಂಭಿಸಿತು. ಬಡವರ ಮನೆ ಒಡೆಯುವಾಗ ಬಿಬಿಎಂಪಿಗೆ ಯಾವ ಸಮಸ್ಯೆಯೂ ಎದುರಾಗಲಿಲ್ಲ. ‘ರಾಜಕಾಲುವೆಯನ್ನು ಯಾರೇ ಒತ್ತುವರಿ ಮಾಡಿರಲಿ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಒತ್ತುವರಿ ತೆರವು ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೇಯರ್‌ ಗುಡುಗಿದ್ದರು.

ಒತ್ತುವರಿದಾರರ ಪಟ್ಟಿಯಲ್ಲಿ ಮಾಲ್‌ಗಳು, ಆಸ್ಪತ್ರೆಗಳು ಹಾಗೂ ದೊಡ್ಡವರ ಮನೆಗಳು ಗೋಚರಿಸಲು ಶುರುವಾಯಿತು. ‘ಮುಲಾಜಿಲ್ಲದೆ ಎಲ್ಲ ಒತ್ತುವರಿಗಳನ್ನೂ ತೆರವುಗೊಳಿಸುತ್ತೇವೆ’ ಎಂದು ಅಧಿಕಾರಿಗಳು ಪ್ರಕಟಿಸಿದರು. ತೆರೆಮರೆಯಲ್ಲಿ ಸಂಧಾನಗಳು ನಡೆದವು. ಮರುದಿನ ಅವರ ಧ್ವನಿ ಬದಲಾಯಿತು. ‘ಸರ್ವೆ ಸರಿಯಾಗಿ ನಡೆದಿಲ್ಲ. ಮತ್ತೊಮ್ಮೆ ಸರ್ವೆ ನಡೆಸುತ್ತೇವೆ’ ಎಂದು ಘೋಷಿಸಿದರು. ಬುಲ್ಡೋಜರ್‌ಗಳು ಸಹ ಸ್ಥಳದಿಂದ ಕಾಲ್ಕಿತ್ತವು. ನೂರಾರು ಖಾಲಿ ನಿವೇಶನಗಳನ್ನು ತೋರಿಸಿ, ಇವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಬೆನ್ನು ತಟ್ಟಿಕೊಂಡರು.

ಆ ವೇಳೆಗೆ ಮನೆ ಕಳೆದುಕೊಂಡು ಬೀದಿಗೆ ಬಿದ್ದವರು, ‘ಮೊದಲೇ ಈ ನಿರ್ಧಾರ ಕೈಗೊಂಡಿದ್ದರೆ ನಮ್ಮ ಮನೆಯೂ ಉಳಿಯುತ್ತಿತ್ತಲ್ಲ’ ಎಂದು ನೋವಿನಿಂದ ಹೇಳಿಕೊಂಡರು. ಇದಕ್ಕೆ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ. ಒತ್ತುವರಿ ಆಗಿರುವ ಪ್ರದೇಶಗಳಿಗೆ ಸಂಬಂಧಿಸಿದ ಕೆಲವು ನಕ್ಷೆಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಬಿಬಿಎಂಪಿ, ಒತ್ತುವರಿದಾರರಿಗೆ ಸ್ವಯಂತೆರವು ಮಾಡಿ ಎಂಬ ಮನವಿ ಮಾಡಿ, ಮೌನ ವಹಿಸಿತು. ಕೆಲವು ಬಡಾವಣೆಗಳಿಗೆ ಹೋಗಿ ಗುರುತು ಹಾಕಿದಂತೆ ಮಾಡುವುದು, ಸ್ವಯಂ ತೆರವಿಗೆ ಮನವಿ ಮಾಡುವುದು ಇಷ್ಟಕ್ಕೇ ಅಧಿಕಾರಿಗಳ ಕಾರ್ಯಾ

ಚರಣೆ ಸೀಮಿತಗೊಂಡಿತು. ಸರ್ವೆ ವಿಷಯಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆರೋಪ–ಪ್ರತ್ಯಾರೋಪದಲ್ಲಿ ಕಾಲಹರಣ ಮಾಡಿದರು.

ಎಸ್‌.ಎಸ್‌. ಆಸ್ಪತ್ರೆ, ನಟ ದರ್ಶನ್‌ ಅವರ ಮನೆ ಒತ್ತುವರಿ ಪ್ರಕರಣಗಳನ್ನು ನಗರ ಜಿಲ್ಲಾಡಳಿತಕ್ಕೆ ವರ್ಗಾಯಿಸಿ ಕೈತೊಳೆದುಕೊಳ್ಳಲಾಯಿತು. ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ದಂಡೇ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿತು. ಕೆಲವೇ ದಿನಗಳಲ್ಲಿ ಈ ಕಟ್ಟಡಗಳನ್ನು ವಶಕ್ಕೆ ಪಡೆಯುತ್ತೇವೆ ಎಂದೂ ಅಧಿಕಾರಿಗಳು ಹೇಳಿಕೊಂಡರು. ಬಳಿಕ ಕೋರ್ಟ್ ಆದೇಶದ ನೆಪವನ್ನೂ ಹೇಳಲಾರಂಭಿಸಿದರು.

‘ಸಣ್ಣ–ಪುಟ್ಟ ಮನೆಗಳನ್ನಷ್ಟೇ ಒಡೆದು ರಾಜಕಾಲುವೆ ಒತ್ತುವರಿ ಮಾಡಿದಂತೆ ಬೀಗಲು ಬಿಬಿಎಂಪಿ ಹೊರಟಿತ್ತು. ಪ್ರತಿಷ್ಠಿತರ ಕಟ್ಟಡಗಳ ಒತ್ತುವರಿ ಪ್ರಕರಣಗಳ ಮಾಹಿತಿ ಹೊರಬೀಳುತ್ತಿದ್ದಂತೆ ಅದು ಮೌನ ವಹಿಸಿತು’ ಎಂದು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಟೀಕಿಸುತ್ತಾರೆ.

ಈ ವರ್ಷದ ‘ಮಹಾಪೂರ’ಕ್ಕೆ ಲಗ್ಗೆರೆಯಲ್ಲಿ ಶಾಂತಕುಮಾರ್‌, ಅರ್ಚಕ ವಾಸುದೇವ ಭಟ್‌, ನಿಂಗಮ್ಮ ಹಾಗೂ ಪುಷ್ಪಾ ಎಂಬುವವರು ನೀರು

ಪಾಲಾದರು. ನಾಲ್ಕೈದು ದಿನ ಕಳೆದರೂ ತಾಯಿ ಮಗಳ ಶವ ಪತ್ತೆಯಾಗಿರಲಿಲ್ಲ. ಶಾಂತಕುಮಾರ್‌ ಶವ ಇನ್ನೂ ಸಿಕ್ಕಿಲ್ಲ. ಈ ಘಟನೆ ಬೆನ್ನಲ್ಲೇ ಕೃಷ್ಣಪ್ಪ ಗಾರ್ಡನ್‌ನಲ್ಲಿ ರಾಜಕಾಲುವೆಗೆ ಬಿದ್ದು ನರಸಮ್ಮ ಎಂಬ ಬಾಲಕಿ ಮೃತಪಟ್ಟಳು. 2018ರ ಜನವರಿ 9ರಂದು ದೊಡ್ಡ ಬೊಮ್ಮಸಂದ್ರದಲ್ಲಿ ಎರಡೂವರೆ ವರ್ಷದ ಬಾಲಕಿ ರಾಜಕಾಲುವೆಯಲ್ಲಿ ಕೊಚ್ಚಿ ಹೋದಳು. ಇಂತಹ ದುರಂತಗಳು ಪದೇ ಪದೇ ಘಟಿಸುತ್ತಲೇ ಇವೆ. ರಾಜಕಾಲುವೆಗಳ ದುರಸ್ತಿಗಾಗಿ ಬಿಬಿಎಂಪಿ ನೂರಾರು ಕೋಟಿ ಸುರಿಯುತ್ತಿದೆ. ಮನುಷ್ಯರು ಜೀವ ಕಳೆದುಕೊಳ್ಳುವುದು ಹಾಗೂ ದುರಂತಕ್ಕೆ ಕೊನೆಯಿಲ್ಲದಂತಾಗಿದೆ.

ತಜ್ಞರ ಅಭಿಪ್ರಾಯ

‘ಅಧಿಕಾರಿಗಳಿಗೆ ಮೀಟರ್‌ ಇಲ್ಲ’

‘2008ರಲ್ಲಿ ರಾಜಾಜಿನಗರದಲ್ಲಿ ಒರಾಯನ್‌ ಮಾಲ್‌ ನಿರ್ಮಾಣ ಹಂತದಲ್ಲಿತ್ತು. ರಾಜಕಾಲುವೆ ಮೇಲೆ ನಿರ್ಮಾಣ ಕಾಮಗಾರಿ ನಡೆದದ್ದರಿಂದ ನೀರು ಕಟ್ಟಿಕೊಂಡಿತು. ಈ ಕಟ್ಟಡ ರಾಜಕಾಲುವೆ ಮೇಲಿದೆ ಎಂದು ಹೋರಾಟ ಆರಂಭಿಸಿದೆವು. ಇಂತಹ ಕಟ್ಟಡಗಳ ತೆರವಿಗೆ ಒತ್ತಾಯಿಸಿ ಹೈಕೋರ್ಟ್‌ ಮೊರೆ ಹೋದೆವು. ಒತ್ತುವರಿ ತೆರವಿಗೆ ಹೈಕೋರ್ಟ್‌ ನಿರ್ದೇಶನ ನೀಡಿದಾಗ ಬಡವರ ಮನೆ ಮೇಲೆ ಪ್ರಹಾರ ನಡೆಸಿದರು. ಪ್ರಭಾವಿಗಳ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಿ ಎಂದು ಒತ್ತಡ ಹೇರಿದೆವು. ಅದೂ ಪ್ರಯೋಜನವಾಗಲಿಲ್ಲ. ಕ‍ಪ್ಪ ಕಾಣಿಕೆ ಸಲ್ಲಿಕೆಯಾಗಿದ್ದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನಕ್ಕೆ ಶರಣಾದರು. ದೊಡ್ಡ ಕಟ್ಟಡಗಳನ್ನು ನೆಲಸಮ ಮಾಡಲು ಅಧಿಕಾರಿಗಳಿಗೆ ಮೀಟರ್ ಇಲ್ಲ. ನ್ಯಾಯಾಲಯದ ಆದೇಶವನ್ನು ಪರಿಪಾಲನೆ ಮಾಡದಷ್ಟು ಜಡ್ಡುಗಟ್ಟಿದೆ ನಮ್ಮ ಆಡಳಿತ ವ್ಯವಸ್ಥೆ’ ಎಂದು ಸಮರ್ಪಣಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌ ಹೊಸಮನಿ ಕಿಡಿಕಾರಿದರು.

ಜನಪ್ರತಿನಿಧಿಗಳ ಅಭಿಪ್ರಾಯ

‘ರಾಜಕೀಯ ಒತ್ತಡಕ್ಕೆ ಮಣಿಯಲ್ಲ’

ರಾಜಕಾಲುವೆ ಒತ್ತುವರಿಯಿಂದಾಗಿ ಸ್ವಲ್ಪ ಮಳೆಗೂ ಪ್ರವಾಹ ಕಾಣಿಸಿಕೊಳ್ಳುತ್ತಿದೆ. ರಾಜಕಾಲುವೆ ಪಕ್ಕದಲ್ಲಿ ಕೆಳಸ್ತರದ ಅನೇಕ ಮನೆಗಳು ಬಂದಿವೆ. ಅದನ್ನು ಗಮನದಲ್ಲಿಟ್ಟುಕೊಂಡು, ನಗರದಲ್ಲಿ ಪ್ರವಾಹ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕ್ರಮ ಜರುಗಿಸುತ್ತೇವೆ. ಈಗಿನ ಸರ್ಕಾರದ ರೀತಿಯಲ್ಲಿ ಬಡವರ ಮನೆಗೊಂದು ಕಾನೂನು ಹಾಗೂ ಶ್ರೀಮಂತರ ಮನೆಗೊಂದು ನೀತಿ ಮಾಡುವುದಿಲ್ಲ.

–ಎಸ್‌.ಸುರೇಶ್ ಕುಮಾರ್‌, ಬಿಜೆಪಿ ಶಾಸಕ  

‘ಪುನರ್ವಸತಿಗೆ ಆದ್ಯತೆ’

ಅನೇಕ ಬಡವರು ಕಾಲುವೆಗಳ ಮೇಲೆ ಮನೆ ಕಟ್ಟಿಕೊಂಡಿದ್ದಾರೆ. ಏಕಾಏಕಿ ಒತ್ತುವರಿ ತೆರವು ಮಾಡಿದರೆ ಅವರು ಎಲ್ಲಿಗೆ ಹೋಗಬೇಕು? ಅವರಿಗೆ ಪುನರ್ವಸತಿ ಕಲ್ಪಿಸಬೇಕು. ನಮ್ಮ ಸರ್ಕಾರ ಬಂದರೆ ಈ ಬಗ್ಗೆ ಗಮನ ಹರಿಸುತ್ತೇವೆ. ಒತ್ತುವರಿಯಾಗದಂತೆ ನಿಗಾ ವಹಿಸುತ್ತೇವೆ.

–ಕೆ. ಗೋಪಾಲಯ್ಯ, ಜೆಡಿಎಸ್‌ ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.