ಮಂಗಳವಾರ, ಡಿಸೆಂಬರ್ 10, 2019
26 °C
ಹಿಬಾಟ್ ಅವರನ್ನು ಹಿಮ್ಮೆಟ್ಟಿಸಿದ ಆಸ್ಟ್ರೇಲಿಯಾದ ಈಜುಪಟು

ಚಿನ್ನ ಗೆದ್ದ ಆಯರ್ನ್‌ ಟಿಟ್‌ಮಸ್‌

Published:
Updated:
ಚಿನ್ನ ಗೆದ್ದ ಆಯರ್ನ್‌ ಟಿಟ್‌ಮಸ್‌

ಗೋಲ್ಡ್ ಕೋಸ್ಟ್‌: ಆಸ್ಟ್ರೇಲಿಯಾದ ಆಯರ್ನ್‌ ಟಿಟ್‌ಮಸ್‌ ಅವರು ರೋಚಕ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಈ ಮೂಲಕ ಕಾಮನ್‌ವೆಲ್ತ್‌ ಕೂಟದ ಈಜಿನಲ್ಲಿ ಎರಡು ಚಿನ್ನ ಗಳಿಸಿದ ಸಾಧನೆ ಮಾಡಿದರು.

ಮಂಗಳವಾರ ನಡೆದ ಮಹಿಳೆಯರ 400 ಮೀಟರ್ಸ್ ಫ್ರೀಸ್ಟೈಲ್‌ ಫೈನಲ್‌ನಲ್ಲಿ ಅವರು ಇಂಗ್ಲೆಂಡ್‌ನ ಹೋಲಿ ಹಿಬಾಟ್ ಮತ್ತು ಎಲೀನರ್ ಫಾಕ್ನರ್ ಅವರನ್ನು ಹಿಮ್ಮೆಟ್ಟಿಸಿದರು.

ಟರ್ಮಿನೇಟರ್ ಎಂದೇ ಅಡ್ಡ ಹೆಸರು ಗಳಿಸಿರುವ 17 ವರ್ಷದ ಆಯರ್ನ್‌ ಟಿಟ್‌ಮಸ್‌ ಸೋಮವಾರ 800 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲೂ ಚಿನ್ನ ಗೆದ್ದಿದ್ದರು.

ಉತ್ತಮ ಆರಂಭ ಕಂಡ ಟಿಟ್‌ಮಸ್‌ಗೆ ನಂತರ ಭಾರಿ ಸವಾಲು ಎದುರಾಯಿತು. 4:00.93 ನಿಮಿಷದಲ್ಲಿ ಗುರಿ ಮುಟ್ಟಿದ ಅವರು 400 ಮೀಟರ್‌ ಫ್ರೀಸ್ಟೈಲ್‌ನಲ್ಲಿ ವೇಗವಾಗಿ ಈಜಿದ ಆರನೇ ಅಥ್ಲೀಟ್ ಎನಿಸಿಕೊಂಡರು. ಹಿಬಾಟ್ ಐದು ಸೆಕೆಂಡು ತಡವಾಗಿ ಗುರಿ ಸೇರಿದರು.

‘ಇದು ಅತ್ಯಂತ ರೋಚಕ ಸ್ಪರ್ಧೆ ಆಗಿತ್ತು. ಹಿಂದೆಂದೂ ಇಷ್ಟು ಪ್ರಬಲ ಪೈಪೋಟಿ ಎದುರಿಸಿದ್ದಿಲ್ಲ. ಕೊನೆಯಲ್ಲಿ ಚಿನ್ನ ಗೆಲ್ಲಲು ಸಾಧ್ಯವಾದದ್ದು ಖುಷಿ ನೀಡಿತು’ ಎಂದು ಟಿಟ್‌ಮಸ್‌ ಹೇಳಿದರು.

ಸಾಜನ್‌ ಪ್ರಕಾಶ್‌ಗೆ ಏಳನೇ ಸ್ಥಾನ: ಪುರುಷರ 1500 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಭಾರತದ ಸಾಜನ್‌ ಪ್ರಕಾಶ್‌ (15:52.84 ನಿ) ಏಳನೇ ಸ್ಥಾನ ಗಳಿಸಿದರು. ಆಸ್ಟ್ರೇಲಿಯದ ಜಾಕ್ ಮೆಕ್‌ಲೆಗಾನಿನ್‌ (14:47.09 ನಿಮಿಷ) ಚಿನ್ನ ಗೆದ್ದರು. ವೇಲ್ಸ್‌ನ ಡ್ಯಾನಿಯೆಲ್ ವೆರ್ವಿಸ್‌ ಮತ್ತು ಆಸ್ಟ್ರೇಲಿಯಾದ ಮಾರ್ಕ್ ಹಾರ್ಟನ್‌ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು.

ಮಹಿಳೆಯರ 50 ಮೀಟರ್ಸ್ ಫ್ರೀಸ್ಟೈಲ್‌ ವಿಭಾಗದಲ್ಲಿ ಭಾರತದ ವೈಷ್ಣವಿ ವಿನೋದ್ ಜಗತಾಪ್‌ (42.03 ಸೆಕೆಂಡು) ಆರನೇ ಸ್ಥಾನ ಗಳಿಸಿದರು. ಆಸ್ಟ್ರೇಲಿಯಾದ ಲಕೇಶಾ ಪೀಟರ್ಸನ್‌ (30.14ಸೆ), ಕೆನಡಾದ ಮಾರ್ಗಮ್ ಬರ್ಡ್‌ ಮತ್ತು ಅಬಿಗೈಲ್‌ ಟ್ರಿಪ್‌ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದರು.

 

ಪ್ರತಿಕ್ರಿಯಿಸಿ (+)