ಶುಕ್ರವಾರ, ಡಿಸೆಂಬರ್ 6, 2019
26 °C
ತವರಿನಲ್ಲಿ ಪಂದ್ಯ ಆಡಲಿರುವ ರಾಜಸ್ಥಾನ ರಾಯಲ್ಸ್‌ ‌ತಂಡ

ರಾಯಲ್ಸ್‌ಗೆ ಡೇರ್ ಡೆವಿಲ್ಸ್ ಎದುರಾಳಿ

Published:
Updated:
ರಾಯಲ್ಸ್‌ಗೆ ಡೇರ್ ಡೆವಿಲ್ಸ್ ಎದುರಾಳಿ

ಜೈಪುರ: ಮೊದಲ ಪಂದ್ಯದಲ್ಲಿ ನಿರಾಸೆ ಕಂಡಿದ್ದ ರಾಜಸ್ಥಾನ ರಾಯಲ್ಸ್ ತಂಡ ತವರಿನಲ್ಲಿ ಪುಟಿದೇಳುವ ಭರವಸೆಯೊಂದಿಗೆ ಬುಧವಾರ ಕಣಕ್ಕೆ ಇಳಿಯಲಿದೆ.

‌ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಈ ತಂಡ ಡೆಲ್ಲಿ ಡೇರ್ ಡೆವಿಲ್ಸ್ ಎದುರು ಸೆಣಸಲಿದೆ.

ಕೆ.ಎಲ್.ರಾಹುಲ್ ದಾಖಲೆಯ ಅರ್ಧ ಶತಕ ಗಳಿಸಿದರೂ ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋತ ಡೇರ್ ಡೆವಿಲ್ಸ್ ಕೂಡ ಗೆಲುವಿನ ಲಯಕ್ಕೆ ಮರಳಲು ‍ಪ್ರಯತ್ನಿಸಲಿದೆ.

ಎರಡು ವರ್ಷಗಳ ನಿಷೇಧದ ನಂತರ ಕಣಕ್ಕೆ ಮರಳಿದ ರಾಯಲ್ಸ್‌, ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಬೌಲಿಂಗ್ ದಾಳಿಗೆ ಕಂಗೆಟ್ಟಿತ್ತು. ನಂತರ ಒಂಬತ್ತು ವಿಕೆಟ್‌ಗಳಿಂದ ಸೋತಿತ್ತು. ಈ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ವೈಫಲ್ಯ ಅನುಭವಿಸಿದ್ದರು.

ಹೀಗಾಗಿ ತಮ್ಮ ಸಾಮರ್ಥ್ಯವನ್ನು ಪ್ರಕಟಿಸುವುದರ ಜೊತೆಯಲ್ಲಿ ತಂಡಕ್ಕೆ ಜಯ ತಂದುಕೊಡುವ ಹವಾಬ್ದಾರಿಯೂ ಅವರ ಮೇಲೆ ಇದೆ. ಬೆನ್‌ ಸ್ಟೋಕ್ಸ್ ಕೂಡ ಮೊದಲ ಪಂದ್ಯದಲ್ಲಿ ವಿಫಲರಾಗಿದ್ದರು. ಸಂಜು ಸ್ಯಾಮ್ಸನ್‌ ಮಾತ್ರ ಮಿಂಚಿದ್ದರು.

ಡೇರ್ ಡೆವಿಲ್ಸ್‌ನ ಪ್ರಮುಖ ಬ್ಯಾಟ್ಸ್‌ಮನ್‌ಗಳು ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ನಾಯಕ ಗೌತಮ್ ಗಂಭೀರ್‌ ಅರ್ಧಶತಕ ಸಿಡಿಸಿ ಮಿಂಚಿದ್ದರೆ, ರಿಷಭ್ ಪಂತ್ ಮತ್ತು ಕ್ರಿಸ್ ಮಾರಿಸ್‌ ಉಪಯುಕ್ತ ಕಾಣಿಕೆ ನೀಡಿದ್ದರು.

ಟ್ರೆಂಟ್ ಬೌಲ್ಟ್‌, ಮಹಮ್ಮದ್ ಶಮಿ, ಅಮಿತ್ ಮಿಶ್ರಾ ಮುಂತಾದವರು ಇದ್ದರೂ ಬೌಲಿಂಗ್ ವಿಭಾಗಕ್ಕೆ ಗಮನಾರ್ಹ ಸಾಧನೆ ಮಾಡಲು ಆಗಿರಲಿಲ್ಲ. ಈ ವೈಫಲ್ಯಗಳಿಂದ ಹೊರಬರಲು ತಂಡ ಬುಧವಾರ ಪ್ರಯತ್ನಿಸಲಿದೆ.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಪ್ರತಿಕ್ರಿಯಿಸಿ (+)