ಶುಕ್ರವಾರ, ಆಗಸ್ಟ್ 14, 2020
26 °C

ನೆರವಿಗಾಗಿ ‘ಗಾರ್ಡ್‌ಆನ್‌’ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆರವಿಗಾಗಿ ‘ಗಾರ್ಡ್‌ಆನ್‌’ ಆ್ಯಪ್‌

ಬೆಂಗಳೂರು: ಅಪಾಯ, ಅನಾಹುತ ಸಂಭವಿಸಿದಾಗ, ಆರೋಗ್ಯದಲ್ಲಿ ಏರುಪೇರಾದಾಗ ತಕ್ಷಣವೇ ಕುಟುಂಬ ಸದಸ್ಯರು, ಸ್ನೇಹಿತರು, ಪೊಲೀಸರು ಹಾಗೂ ಆಂಬುಲೆನ್ಸ್‌ಗಳನ್ನು ಸಂಪರ್ಕಿಸಲು ‘ಐಯಾನ್‌ಐಡಿಯಾ‘ ಸಾಫ್ಟ್‌ವೇರ್‌ ಕಂಪನಿ ‘ಗಾರ್ಡ್‌ಆನ್‌’ ಹೆಸರಿನ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದೆ.

‘ಕೆಲಸಕ್ಕೆ ಹೋಗುವ ಮಹಿಳೆಯೊಂದಿಗೆ ಕಿಡಿಗೇಡಿಗಳು ಅನುಚಿತವಾಗಿ ವರ್ತಿಸಿದಾಗ, ಪಾಲಕರು ಕಚೇರಿಗೆ ಹೋದಾಗ ಮನೆಯಲ್ಲಿ ಮಕ್ಕಳಿಗೆ ತೊಂದರೆ ಎದುರಾದಾಗ, ದರೋಡೆ ನಡೆದಾಗ, ವೈದ್ಯಕೀಯ ನೆರವು ಅಗತ್ಯವಿದ್ದಾಗ, ಮಾರ್ಗ ಮಧ್ಯೆ ವಾಹನ ಕೆಟ್ಟು ನಿಂತಾಗ ನೆರವಿಗಾಗಿ ಆ್ಯಪ್‌ ಕ್ಷಣಮಾತ್ರದಲ್ಲಿ ಮಾಹಿತಿ ರವಾನಿಸುತ್ತದೆ’ ಎಂದು ಕಂಪನಿ ಸಿಇಒ ಕಿಶನ್‌ ಅನಂತರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಕ್ಷಣೆಗಾಗಿ ಧಾವಿಸುವ ವ್ಯವಸ್ಥೆಯ ಬಗ್ಗೆ ಮೂರು ಹಂತಗಳಲ್ಲಿ ಸಂವಹನ ಕಲ್ಪಿಸುವ ವ್ಯವಸ್ಥೆಯನ್ನು ಆ್ಯಪ್‌ ಹೊಂದಿದ್ದು, ಇತರ ಆ್ಯಪ್‌ಗಳಿಗಿಂತ ಭಿನ್ನವಾಗಿರುವ ಕಾರ್ಯಕ್ಷಮತೆ ಹೊಂದಿದೆ’ ಎಂದರು.

ಗಾರ್ಡಿಯನ್ ಏಂಜಲ್ಸ್‌: ಗಾರ್ಡ್‌ಆನ್‌ ಸಮುದಾಯದ ಸ್ವಯಂ ಸೇವಕರನ್ನು ‘ಗಾರ್ಡಿಯನ್ ಏಂಜಲ್ಸ್‌‘ ಎಂದು ಕರೆಯಲಾಗಿದೆ. ಆ್ಯಪ್‌ ಬಳಕೆದಾರರು ತಾವು ಅಪಾಯದಲ್ಲಿರುವ ಸೂಚನೆ ನೀಡಿದ ತಕ್ಷಣ ಸ್ವಯಂ ಚಾಲಿತ ವ್ಯವಸ್ಥೆಯ ಮೂಲಕ ಸ್ವಯಂ ಸೇವಕರಿಗೆ ಮೊದಲು ಮಾಹಿತಿ ಹೋಗುತ್ತದೆ. ಘಟನೆ ನಡೆದ ಸ್ಥಳಕ್ಕೆ ಸಮೀಪವಿದ್ದ ಸ್ವಯಂ ಸೇವಕರು ನೆರವಿಗೆ ಧಾವಿಸುತ್ತಾರೆ.

ಫಸ್ಟ್‌ ರೆಸ್ಪಾಂಡರ್ಸ್‌ (ಮೊದಲ ಪ್ರತಿಸ್ಪಂದಕರು): ಪೊಲೀಸ್‌, ಆಂಬುಲೆನ್ಸ್‌, ಅಗ್ನಿಶಾಮಕ, ಭದ್ರತೆ ಸೇವೆ ಒದಗಿಸುವ ಸಂಸ್ಥೆಗಳನ್ನೂ ಆ್ಯಪ್‌

ನೊಂದಿಗೆ ಜೋಡಿಸಲು ಕಂಪನಿ ನಿರ್ಧರಿಸಿದೆ. ಬಳಕೆದಾರರು ತೊಂದರೆಯಲ್ಲಿದ್ದಾಗ ಈ ಸಂಸ್ಥೆಗಳೂ ತಕ್ಷಣ ಸ್ಪಂದಿಸಲಿವೆ.

ಟ್ರಸ್ಟಡ್‌ ಕಾಂಟೆಕ್ಟ್ಸ್‌ (ಹತ್ತಿರದವರ ಸಂಪರ್ಕಗಳು): ಆ್ಯಪ್‌ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಸೇರ್ಪಡೆ ಮಾಡಿಕೊಂಡಿರುವ ಸ್ನೇಹಿತರ, ಕುಟುಂಬ ಸದಸ್ಯರ, ಸಹೋದ್ಯೋಗಿಗಳ ಮೊಬೈಲ್‌ ಸಂಖ್ಯೆಗೆ ಅಪಾಯದ ಬಗ್ಗೆ ಸಂದೇಶ ರವಾನೆಯಾಗುವ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಆ್ಯಪ್‌ನೊಂದಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ಸಾಧನವನ್ನೂ (ಪ್ಯಾನಿಕ್ ಬಟನ್) ಕಂಪನಿ ಅಭಿವೃದ್ಧಿಪಡಿಸಿದೆ. ಧರಿಸಬಹುದಾದ ಈ ಸಾಧನದ ಬಟನ್‌ಅನ್ನು ಅಪಾಯ ಎದುರಾದಾಗ ಒತ್ತಿದರೆ ರಕ್ಷಣೆಗೆ ಧಾವಿಸುವವರಿಗೆ ಆ್ಯಪ್‌ ಮೂಲಕ ಸಂದೇಶ ರವಾನೆಯಾಗುತ್ತದೆ.

ಇದಕ್ಕೆ ಸ್ಥಳದ ಮಿತಿ ಇಲ್ಲ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಆ್ಯಪ್‌ ಕಾರ್ಯನಿರ್ವಹಿಸಲಿದೆ. ಇದೇ 22ರ ನಂತರ ಐಒಎಸ್‌ ಆ್ಯಪ್‌ ಸ್ಟೋರ್‌, ಆ್ಯಡ್ರಾಂಯ್ಡ್‌ ಪ್ಲೇ ಸ್ಟೋರ್‌ ಮೂಲಕ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.