ಶುಕ್ರವಾರ, ಡಿಸೆಂಬರ್ 6, 2019
26 °C
ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿ: ಇ ಗುಂಪಿನಲ್ಲಿ ಸತತ ಮೂರನೇ ಜಯ

ನಿಶು ಗೋಲು: ಬಿಎಫ್‌ಸಿಗೆ ಜಯ

Published:
Updated:
ನಿಶು ಗೋಲು: ಬಿಎಫ್‌ಸಿಗೆ ಜಯ

ಬೆಂಗಳೂರು: ನಿಶುಕುಮಾರ್ ಕಾಲ್ಚಳಕದ ಬಲದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಮಂಗಳವಾರ ಇಲ್ಲಿ ನಡೆದ ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯ ಇ ಗುಂಪಿನ ಪಂದ್ಯದಲ್ಲಿ ಮಾಲ್ಡೀವ್ಸ್‌ನ ನ್ಯೂ ರೇಡಿಯಂಟ್ ತಂಡವನ್ನು ಸೋಲಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 90 ನಿಮಿಷಗಳಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಅದರಿಂದಾಗಿ ಯಾರಿಗೂ ಗೋಲು  ಒಲಿಯಲಿಲ್ಲ. ಆದರೆ ಹೆಚ್ಚುವರಿ ಸಮಯದ ಮೊದಲ ನಿಮಿಷದಲ್ಲಿ (90+1) ಡಿಫೆಂಡರ್ ನಿಶು ಕುಮಾರ್ ಚೆಂಡನ್ನು ಗೋಲುಪೆಟ್ಟಿಗೆಗೆ ನುಗ್ಗಿಸಿದರು.

ಬಿಎಫ್‌ಸಿ 1–0 ಯಿಂದ ಗೆದ್ದಿತು. ಎರಡು ಗ್ಯಾಲರಿಗಳಲ್ಲಿ ತುಂಬಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ತಮ್ಮ ದೇಶದ ತಂಡವನ್ನು ಹುದಿದುಂಬಿಸಲು ಬಂದಿದ್ದ ಮಾಲ್ಡೀವ್ಸ್‌ ಅಭಿಮಾನಿಗಳು ನಿರಾಸೆಯಲ್ಲಿ ಮುಳುಗಿದರು. ನಂತರ ಉಳಿದಿದ್ದ ಎರಡು ನಿಮಿಷಗಳಲ್ಲಿ ರೇಡಿಯಂಟ್ ತಂಡದ ಪ್ರಯತ್ನಕ್ಕೆ ಬಿಎಫ್‌ಸಿ ಬಳಗವು ಅಡ್ಡಿಯಾಯಿತು.

ಬಿಎಫ್‌ಸಿ ತಂಡವು ಇದುವರೆಗೆ ರೇಡಿಯಂಟ್ ತಂಡದ ವಿರುದ್ಧ ಆಡಿರುವ ಎಲ್ಲ ಏಳು ಪಂದ್ಯಗಳನ್ನು ಗೆದ್ದ ದಾಖಲೆ ಬರೆಯಿತು. ಈ ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಗೆದ್ದ ಬಿಎಫ್‌ಸಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಒಟ್ಟು  ಐದು ಗೋಲುಗಳು ತಂಡದ ಖಾತೆಯಲ್ಲಿವೆ. ಒಂದು ಗೋಲು ಬಿಟ್ಟುಕೊಟ್ಟಿದೆ. ರೇಡಿಯಂಟ್ ತಂಡವೂ ಮೊದಲಿನ ಎರಡೂ ಪಂದ್ಯಗಳಲ್ಲಿ ಗೆದ್ದಿತ್ತು.  ಈ ಪಂದ್ಯದಲ್ಲಿಯೂ ಬಿಎಫ್‌ಸಿಗೆ ದಿಟ್ಟ ಪೈಪೋಟಿ ನೀಡಿತು.

ಬೆಂಗಳೂರು ಫುಟ್‌ಬಾಲ್ ಅಭಿಮಾನಿಗಳ ಕಣ್ಮಣಿ ಸುನಿಲ್ ಚೆಟ್ರಿ ಅವರು ಈ ಪಂದ್ಯದ ಆರಂಭದ ಅವಧಿಯಲ್ಲಿ ಕಣಕ್ಕಿಳಿಯಲಿಲ್ಲ. ಅವರ ಬದಲಿಗೆ ಗೋಲ್‌ಕೀಪರ್ ಲಾಲ್‌ತುಮಾವಿಯಾ ರಾಲ್ಟೆ ಅವರು ತಂಡವನ್ನು ಮುನ್ನಡೆಸಿದರು. ಗೋಲ್‌ಕೀಪರ್ ಗುರುಕೀರತ್ ಸಂಧು ವಿಶ್ರಾಂತಿ ಪಡೆದಿದ್ದರು. 

ಮೊದಲಾರ್ಧದಲ್ಲಿ ಎರಡು ಬಾರಿ ಸಿಕ್ಕ ಸನಿಹದ ಅವಕಾಶಗಳನ್ನು ಬಿಎಫ್‌ಸಿ ಸ್ಟ್ರೈಕರ್‌ಗಳು ಬಳಸಿಕೊಳ್ಳಲಿಲ್ಲ. ರೇಡಿಯಂಟ್ ತಂಡದ ಗೋಲ್‌ಕೀಪರ್ ಮೊಹಮ್ಮದ್ ಇಮ್ರಾನ್ ಅವರ ಚುರುಕಿನ ಆಟದಿಂದ ಬಿಎಫ್‌ಸಿಗೆ ಯಶಸ್ಸು ಲಭಿಸಲಿಲ್ಲ. ರಾಲ್ಟೆ ಕೂಡ ಎದುರಾಳಿ ತಂಡದ ಆಸೆಗೆ ತಣ್ಣೀರು ಎರಚಿದರು. ಈ ಅವಧಿಯಲ್ಲಿ ಚೆಂಡು ಹೆಚ್ಚು ಹೊತ್ತು ಆತಿಥೇಯರ ಹಿಡಿತದಲ್ಲಿ ಇತ್ತು.

ವಿರಾಮದ ನಂತರವೂ ಉಭಯ ತಂಡಗಳ ಗೋಲು ಹೊಡೆಯುವ ಯತ್ನಗಳು ಫಲಿಸಲಿಲ್ಲ. ಆದರೆ, 69ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಅವರು ಹಾಕಿಫ್ ತೋಂಗಶಾಮ್ ಬದಲಿಗೆ ಕಣಕ್ಕಿಳಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿತು. ಚಪ್ಪಾಳೆ, ಕೇಕೆ. ಸಿಳ್ಳೆಗಳು ಪ್ರತಿಧ್ವನಿಸಿದವು. ಆತಿಥೇಯ ತಂಡದ ಆಟಗಾರರು ಮತ್ತಷ್ಟು ಹುರುಪುಗೊಂಡರು.

ಇದರ ಫಲವಾಗಿ ಎದುರಾಳಿ ತಂಡದ ರಕ್ಷಣಾ ಆಟಗಾರರು ಕಠಿಣ ಸವಾಲು ಎದುರಿಸಬೇಕಾಯಿತು. ಆದರೂ ನಿಗದಿತ ಅವಧಿಯಲ್ಲಿ ಗೋಲು ದಾಖಲಾ ಗಲಿಲ್ಲ. ನಂತರದ ನಿಮಿಷದಲ್ಲಿ ನಿಶು ಮಿಂಚಿದರು.

ಪ್ರತಿಕ್ರಿಯಿಸಿ (+)