ಬುಧವಾರ, ಆಗಸ್ಟ್ 5, 2020
21 °C
ವಿದ್ಯಾಗಿರಿ: ಮೊಂಬತ್ತಿ ಬೆಳಗಿಸಿ ಗಮನ ಸೆಳೆದ ಶಾಲಾ ಮಕ್ಕಳು

ಮತದಾನ ಜಾಗೃತಿಗೆ ಮಾನವ ಸರಪಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾನ ಜಾಗೃತಿಗೆ ಮಾನವ ಸರಪಳಿ

ಬಾಗಲಕೋಟೆ: ಜಿಲ್ಲಾ ಸ್ವೀಪ್ ಕಾರ್ಯಕ್ರಮದಡಿ ಮತದಾನ ಜಾಗೃತಿಗಾಗಿ ನಗರದ ವಿದ್ಯಾಗಿರಿ ಕಾಲೇಜು ವೃತ್ತದಲ್ಲಿ ಮಂಗಳವಾರ ಶಾಲಾ ಮಕ್ಕಳು ಮೊಂಬತ್ತಿ ಬೆಳಕಿನಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.

ಜಿಲ್ಲಾಡಳಿತದಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್ ಅಧಿಕಾರಿಯೂ ಆದ ಸಿಇಒ ವಿಕಾಸ್ ಸುರಳಕರ್ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಮಕ್ಕಳು ನವನಗರದ ಕಲಾಭವನದ ಆವರಣದಿಂದ ಕಾಲ್ನಡಿಗೆಯಲ್ಲಿ ಕಾಲೇಜು ವೃತ್ತಕ್ಕೆ ತೆರಳಿ ಅಲ್ಲಿ ಬೃಹತ್ ಆಕಾರದ ಮಾನವ ಸರಪಳಿ ನಿರ್ಮಿಸಿದರು.

ಈ ವೇಳೆ ಮಾತನಾಡಿದ ವಿಕಾಸ್ ಸುರಳಕರ್, ‘ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇದೆ. ಅದೊಂದು ಮಹತ್ವದ ಕರ್ತವ್ಯ. ಹಾಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಬೇಕು’ ಎಂದು ಮನವಿ ಮಾಡಿದರು.

‘ಮೇ 12ರಂದು ಸಮೀಪದ ಮತಗಟ್ಟೆಗೆ ತೆರಳಿ ತಪ್ಪದೇ ಮತದಾನ ಮಾಡುವಂತೆ ಮನೆಯಲ್ಲಿ ಹಿರಿಯರ ಮನವೊಲಿಸುವ ಜೊತೆಗೆ ಸುತ್ತಲಿನ ಪರಿಸರದಲ್ಲೂ ಜಾಗೃತಿ ಮೂಡಿಸುವಂತೆ’ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.

18 ವರ್ಷ ತುಂಬಿದ ಎಲ್ಲರಿಗೂ ಏಪ್ರಿಲ್‌ 14ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶವಿದೆ. ಅರ್ಹರು ಇದ್ದಲ್ಲಿ ಕೂಡಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.

ಜಾಗೃತಿ ಜಾಥಾದಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿದ್ದರು. ಮಕ್ಕಳು ಹಾಗೂ ಶಿಕ್ಷಕರು ತಮ್ಮ ಎದೆ ಹಾಗೂ ಬೆನ್ನ ಮೇಲೆ ಮತದಾನ ಜಾಗೃತಿ ಕುರಿತಾದ ಸ್ಟಿಕ್ಕರ್ ಅಂಟಿಸಿಕೊಂಡು ಗಮನ ಸೆಳೆದರು. ದಾರಿಯುದ್ದಕ್ಕೂ ಮತದಾರರಲ್ಲಿ ಜಾಗೃತಿಗಾಗಿ ಘೋಷಣೆಗಳನ್ನು ಕೂಗಿದರು. ಅಲ್ಲದೇ ಭಿತ್ತಿಪತ್ರ ಪ್ರದರ್ಶಿಸಿದರು.

ಜಾಥಾದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್‌.ಕಾಮಾಕ್ಷಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ಎಸ್.ಶಿರೂರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.