12 ಮಕ್ಕಳು, ನಾಲ್ವರು ಶಿಕ್ಷಕರಿಗೆ ಗಾಯ

7
ಮತದಾನ ಜಾಗೃತಿ ವೇಳೆ ಹೆಜ್ಜೇನು ದಾಳಿ

12 ಮಕ್ಕಳು, ನಾಲ್ವರು ಶಿಕ್ಷಕರಿಗೆ ಗಾಯ

Published:
Updated:

ಬಾಗಲಕೋಟೆ: ಮತದಾನ ಜಾಗೃತಿಗಾಗಿ ಜಿಲ್ಲಾಡಳಿತದಿಂದ ಮಂಗಳವಾರ ಇಲ್ಲಿ ಶಾಲಾ ಮಕ್ಕಳಿಂದ ಆಯೋಜಿಸಿದ್ದ ಕಾಲ್ನಡಿಗೆ ಜಾಥಾ ಉದ್ಘಾಟನೆ ಸಂದರ್ಭದಲ್ಲಿ ಹೆಜ್ಜೇನು ದಾಳಿ ಮಾಡಿವೆ. ಈ ವೇಳೆ 12 ಮಕ್ಕಳು ಹಾಗೂ ನಾಲ್ವರು ಶಿಕ್ಷಕರು ಗಾಯಗೊಂಡಿದ್ದಾರೆ.

ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಂಜೆ ಇಲ್ಲಿನ ನವನಗರದ ಜಿಲ್ಲಾ ಕ್ರೀಡಾಂಗಣದಿಂದ ವಿದ್ಯಾಗಿರಿಯ ಕಾಲೇಜು ವೃತ್ತದವರೆಗೂ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿತ್ತು. ನಗರದ ವಿವಿಧ ಶಾಲೆಗಳ ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳು ಕ್ರೀಡಾಂಗಣದಲ್ಲಿ ನೆರೆದಿದ್ದರು ಈ ವೇಳೆ ಘಟನೆ ನಡೆದಿದೆ.

‘ಜಾಥಾಗೆ ಚಾಲನೆ ನೀಡಲು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಬರಬೇಕಿತ್ತು.ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದವು. ಯಾರೊ ಕಿಡಿಗೇಡಿಗಳು ಜೇನು ಗೂಡಿಗೆ ಕಲ್ಲು ಹೊಡೆದಿರಬಹುದು. ಇಲ್ಲವೇ ಗದ್ದಲದ ಕಾರಣ ಅವೇ ದಾಳಿ ನಡೆಸಿರಬಹುದು’ ಎಂದು ನವನಗರದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಸ್.ಟಿ.ಬೆಳಕೊಪ್ಪ ಹೇಳಿದರು.

‘ಜೇನು ಕಡಿತಕ್ಕೊಳಗಾದವರನ್ನು ಕೂಡಲೇ ಆ್ಯಂಬುಲೆನ್ಸ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ಎಲ್ಲರೂ ಚೇತರಿಸಿಕೊಂಡಿದ್ದಾರೆ. ಅಪಾಯದಿಂದ ಪಾರಾಗಿದ್ದಾರೆ’ ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಅನಂತರಡ್ಡಿ ರಡ್ಡೇರ ಮಾಧ್ಯಮದವರಿಗೆ ತಿಳಿಸಿದರು.

ಈ ವೇಳೆ ಸಜ್ಜಲಶ್ರೀ ಶಾಲೆ ಶಿಕ್ಷಕಿ ವೀಣಾ ಸೋರಗಾವಿ, ಕಾಳಿದಾಸ ಶಿಕ್ಷಣ ಸಂಸ್ಥೆ ಶಿಕ್ಷಕ ಎಚ್.ಪಿ. ಹಚ್ಚೊಳ್ಳಿ ಹಾಗೂ ವಿದ್ಯಾರ್ಥಿಗಳಾದ ಶಶಿಕಲಾ ಸಜ್ಜನ, ಅಪರ್ಣಾ ಹಳಬರ, ಸುಷ್ಮಾ ಕಾಟಿ, ಅಂಜಲಿ ಹಳಬರ, ನಾಗವೇಣಿ ಶಿರಾಳಶೆಟ್ಟಿ, ಭಾಗ್ಯಶ್ರೀ ಮಾಗಿ, ಚೇತನ್ ರಾಠೋಡ, ವಿಶಾಲ್ ರಾಠೋಡ, ಉಮರ್ ಫಾರೂಕ್‌ ನದಾಫ್, ಮಹೇಶ ತೋಟಗೇರ ಗಾಯಗೊಂಡವರು. ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಯಿತು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಎಚ್.ವೈ. ಮೇಟಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಕ್ಕಳು ಹಾಗೂ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry