ಬಿಜೆಪಿಯಲ್ಲಿ ಬಂಡಾಯದ ಬಾವುಟ

7
ಸಂಡೂರು ಪಟ್ಟಣದಲ್ಲಿ ಆಕಾಂಕ್ಷಿಗಳು, ಮುಖಂಡರ ಸಭೆ ಇಂದು

ಬಿಜೆಪಿಯಲ್ಲಿ ಬಂಡಾಯದ ಬಾವುಟ

Published:
Updated:

ಸಂಡೂರು: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಿ. ರಾಘವೇಂದ್ರ ಅವರ ಹೆಸರನ್ನು ಪಕ್ಷ ಘೋಷಣೆ ಮಾಡಿದ ನಂತರ, ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.

‘ಮುಂದಿನ ನಡೆ ಕುರಿತು ಚರ್ಚಿಸಲು ಪಟ್ಟಣದಲ್ಲಿ ಬುಧವಾರ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ’ ಎಂದು ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಬಂಗಾರು ಹನುಮಂತು ಮಂಗಳವಾರ ತಿಳಿಸಿದರು.

ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಘೋಷಿತ ಅಭ್ಯರ್ಥಿಯನ್ನು ಬದಲಾಯಿಸ ಬೇಕು. ಇಲ್ಲವಾದರೆ ಮೂವರು ಆಕಾಂಕ್ಷಿಗಳ ಪೈಕಿ ಒಬ್ಬರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ’ ಎಂದರು.

ಸದಸ್ಯರೇ ಅಲ್ಲ: ‘ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದ ವ್ಯಕ್ತಿಗೆ ಪಕ್ಷ ಟಿಕೆಟ್ ನೀಡಿದೆ. ಸಮೀಕ್ಷೆ ನಡೆಸಿ ಟಿಕೆಟ್ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಎಲ್ಲಾ ಸಮೀಕ್ಷೆಗಳನ್ನು ಗಾಳಿಗೆ ತೂರಲಾಗಿದೆ. ಕಾಂಗ್ರೆಸ್ನಲ್ಲಿದ್ದು, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಡಿ.ರಾಘವೇಂದ್ರ ಅವರಿಗೆ ಸ್ಪರ್ಧಿಸಲು ಅವಕಾಶ ಕೊಟ್ಟಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಈ ಬೆಳವಣಿಗೆಯನ್ನು ಗಮನಿಸಿದರೆ, ಕಾರ್ತಿಕೇಯ ಘೋರ್ಪಡೆ ಮತ್ತು ಸಂತೋಷ್ ಲಾಡ್ ಅವರ ನಡುವೆ ಒಪ್ಪಂದ ಏರ್ಪಟ್ಟಿರುವ ಅನುಮಾನ ಕಾಡುತ್ತಿದೆ’ ಎಂದು ದೂರಿದರು.

ಸ್ಪರ್ಧೆ: ‘ಗಣಿ ಮಾಲೀಕರು ಮತ್ತು ಸಾಮಾನ್ಯ ಕಾರ್ಯಕರ್ತರ ನಡುವೆ ಹೋರಾಟ ನಡೆಯಲಿದೆ. ಆಗ ಬಿಜೆಪಿಯಾಗಲಿ ಅಥವ ಕಾಂಗ್ರೆಸ್ ಆಗಲಿ ಹಣವನ್ನು ಹಂಚದೆ ಬಂಡಾಯ ಅಭ್ಯರ್ಥಿ ವಿರುದ್ಧ ಗೆದ್ದು ಬರಲಿ’ ಎಂದು ಸವಾಲೆಸೆದರು. ಟಿಕೆಟ್ ಘೋಷಣೆಯಾದ ಮೇಲೆ ಪಕ್ಷದ ಮುಖಂಡರು ಆಕಾಂಕ್ಷಿಗಳಿಗೆ ಸಾಂತ್ವಾನ ಹೇಳಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಸಮಾಧಾನ: ಪಕ್ಷ ಸಂಘಟನೆಗೆ ದುಡಿದವರನ್ನು ಪರಿಗಣಿಸದೆ ಹೊರಗಿನವರಿಗೆ ಟಿಕೆಟ್‌ ಘೋಷಿಸಿರುವುದು ಅನ್ಯಾಯ.ಪಕ್ಷಕ್ಕಾಗಿ ದುಡಿದವರಿಗೆ ಸ್ಪರ್ಧಿಸಲು ಅವಕಾಶ ಕೊಡದಿರುವುದು ತೀವ್ರ ಬೇಸರ ಮೂಡಿಸಿದೆ ಎಂದು ಆಕಾಂಕ್ಷಿಗಳಾದ ಕೆ.ಎಸ್.ದಿವಾಕರ್ ಮತ್ತು ಡಾ. ಟಿ.ಆರ್. ಶ್ರೀನಿವಾಸ್ ಪ್ರತಿಕ್ರಿಯಿಸಿದರು.

ನಾವು ಗಂಡಸರಲ್ಲವೇ?

ಬಳ್ಳಾರಿ: ‘ಶ್ರೀರಾಮುಲು ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಲು ಗಂಡಸರಿಲ್ಲ. ಬಿಜೆಪಿಯಲ್ಲಿನ ಗಂಡಸರನ್ನು ಕಾಂಗ್ರೆಸ್ ಪಕ್ಷ ತನ್ನತ್ತ ಸೆಳೆದುಕೊಂಡು ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತಿದೆ ಎಂದಿದ್ದರು. ಈಗ ಅದೇ ಬಿಜೆಪಿ ನಾವೆಲ್ಲ ಗಂಡಸರು ಇದ್ದಾಗಲೂ, ಕಾಂಗ್ರೆಸ್‌ ಪಕ್ಷದಿಂದ ಬಿಜೆಪಿಗೆ ಬಂದಿರುವ ವ್ಯಕ್ತಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವುದು ಸರಿಯಲ್ಲ’ ಎಂದು ಹನುಮಂತು ಕಿಡಿ ಕಾರಿದರು.

**

ಆಕಾಂಕ್ಷಿಗಳೊಂದಿಗೆ ಸಂಪರ್ಕದಲ್ಲಿರುವೆ. ಅವರ ಅಸಮಧಾನವನ್ನು ಶಮನಗೊಳಿಸುವ ಪ್ರಯತ್ನ ಮಾಡುತ್ತೇವೆ – ಪಿ.ಚನ್ನಬಸವನಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

**

ಎಲ್ಲ ಸಮೀಕ್ಷೆಗಳನ್ನು ಗಾಳಿಗೆ ತೂರಿ ಟಿಕೆಟ್‌ ಘೋಷಿಸಲಾಗಿದೆ – ಬಂಗಾರು ಹನುಮಂತು, ಆಕಾಂಕ್ಷಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry