ಕಾಂಗ್ರೆಸ್‌ ಟಿಕೆಟ್‌ ಯಾರಿಗೆ?

7
ಸಿರುಗುಪ್ಪ: ಟಿಕೆಟ್‌ ದೊರಕುವ ವಿಶ್ವಾಸದಲ್ಲಿ ನಾಗರಾಜ

ಕಾಂಗ್ರೆಸ್‌ ಟಿಕೆಟ್‌ ಯಾರಿಗೆ?

Published:
Updated:

ಬಳ್ಳಾರಿ: ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಘೋಷಣೆ ದಿನ ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ ಸಿರುಗುಪ್ಪ ಕ್ಷೇತ್ರದಲ್ಲಿ ಕುತೂಹಲ ಹೆಚ್ಚಿದೆ. ಹಾಲಿ ಶಾಸಕ ಬಿ.ಎಂ.ನಾಗರಾಜ ಅವರಿಗೇ ಟಿಕೆಟ್‌ ದೊರಕುತ್ತದೆಯೇ ಅಥವಾ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನೀಡಿರುವ ತೆಕ್ಕಲಕೋಟೆಯ ಎಚ್‌.ಎಂ.ಮಲ್ಲಿಕಾರ್ಜುನ ಅವರ ಕೈ ಮೇಲಾಗುತ್ತದೆಯೇ ಎಂಬ ಪ್ರಶ್ನೆಗಳೂ ಮೂಡಿವೆ.

ನಾಗರಾಜ ಅವರ ಪತ್ನಿ ಬಿ.ಎಂ.ಅಂಬಿಕಾ, ಸಹೋದರ ಬಿ.ಎಂ.ವೆಂಕಟೇಶ ನಾಯಕ್‌, ಅವರ ಪತ್ನಿ ಬಿ.ಎಂ.ಮಂಗಳಾ, ಮತ್ತೊಬ್ಬ ಸಹೋದರ ಬಿ.ಎಂ.ಸತೀಶ ಅವರೂ ಅರ್ಜಿ ಸಲ್ಲಿಸಿದ್ದರು. ಈ ಕುಟುಂಬಕ್ಕೆ ಪೈಪೋಟಿ ನೀಡುವಂತೆ, ತೆಕ್ಕಲಕೋಟೆಯ ಎಚ್‌.ಎಂ.ಮಲ್ಲಿಕಾರ್ಜುನ ಮತ್ತು ಪಿ.ತಿಮ್ಮಪ್ಪ ಹಾಗೂ ಕಮಲಾ ಮರಿಸ್ವಾಮಿ ಸೇರಿದಂತೆ ಒಂಭತ್ತು ಮಂದಿ ಅರ್ಜಿ ಸಲ್ಲಿಸಿದ್ದರು.

ನಿರುತ್ಸಾಹ ವರ್ಸಸ್‌ ಆತ್ಮವಿಶ್ವಾಸ: ‘ಪಕ್ಷದ ವರಿಷ್ಠರು ನಗರಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಶಾಸಕ ನಾಗರಾಜ ಅವರು ಕುಟುಂಬದ ಸದಸ್ಯರೊಂದಿಗೆ ಅರ್ಜಿ ಸಲ್ಲಿಸಿದ್ದನ್ನು ಬಿಟ್ಟರೆ, ಟಿಕಟ್‌ ಪಡೆಯಲು ಹೆಚ್ಚಿನ ಉತ್ಸಾಹ ತೋರಿಲ್ಲ. ಪ್ರಯತ್ನವನ್ನೂ ನಡೆಸಿಲ್ಲ. ಹೈಕಮಾಂಡ್‌ ಕರೆದು ಟಿಕೆಟ್‌ ಕೊಟ್ಟರೆ ಮಾತ್ರ ಸ್ಪರ್ಧಿಸುವ ಮನಸ್ಥಿತಿಯಲ್ಲಿದ್ದಾರೆ’ ಎಂಬ ಮಾತುಗಳು ಪ್ರಬಲವಾಗಿ ಕೇಳಿ ಬಂದಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಹಿಂದಿನ ಚುನಾವಣೆಯಲ್ಲಿ 21,814 ಮತಗಳ ಅಂತರದಲ್ಲಿ ಗೆದ್ದಿರುವುದರಿಂದ, ಪಕ್ಷ ನನಗೇ ಟಿಕೆಟ್‌ ಕೊಡುವುದೆಂಬ ಭರವಸೆ ಇದೆ. ಹೀಗಾಗಿ ಟಿಕೆಟ್‌ಗಾಗಿ ಹೆಚ್ಚಿನ ಲಾಬಿ ನಡೆಸಲು ಹೋಗಿಲ್ಲ’ ಎಂದು ತಿಳಿಸಿದರು.

‘ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದುಕೊಂಡಿದ್ದೆ. ಆದರೆ ಪಕ್ಷದ ಮುಖಂಡರು ಕರೆದು ಸ್ಪರ್ಧಿಸಲು ಹೇಳಿದರು. ಹೀಗಾಗಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವೆ. ನಮ್ಮ ಕುಟುಂಬದ ಸದಸ್ಯರು ಟಿಕೆಟ್‌ಗೆ ಅರ್ಜಿ ಹಾಕಬಾರದು ಎಂದು ಇದೆಯೇ? ಹಾಲಿ ಶಾಸಕರಿಗೇ ಮತ್ತೆ ಟಿಕೆಟ್‌ ಕೊಡಬೇಕು ಎಂಬ ನಿಯಮವೇನೂ ಪಕ್ಷದಲ್ಲಿ ಇಲ್ಲ. ಆದರೆ ಗೆಲ್ಲುವವರಿಗೆ ಮಾತ್ರ ಟಿಕೆಟ್‌ ನೀಡಲಾಗುತ್ತದೆ. ನನಗೇ ಟಿಕೆಟ್‌ ದೊರಕುವ ವಿಶ್ವಾಸವಿದೆ’ ಎಂದರು.

ಮುಖ್ಯಮಂತ್ರಿ ಭೇಟಿ: ಈ ನಡುವೆ, ಮತ್ತೊಬ್ಬ ಆಕಾಂಕ್ಷಿ ಮಲ್ಲಿಕಾರ್ಜುನ ಅವರು ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ್ದಾರೆ.

ಅವರು 2008ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ, 2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಮೊದಲ ಬಾರಿ ಸೋತ ಬಳಿಕ ಅವರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು. ನಂತರ ಟಿಕೆಟ್‌ ದೊರಕಿದ ಕಾರಣ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಸೋತ ಬಳಿಕ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

‘ಎರಡು ಬಾರಿ ಸೋತಿದ್ದರೂ ಕ್ಷೇತ್ರದ ಲಿಂಗಾಯತರು ಮತ್ತು ರೆಡ್ಡಿ ಸಮುದಾಯದವರಿಗೆ ನನ್ನ ಮೇಲೆ ಅಭಿಮಾನವಿದೆ. ಹೀಗಾಗಿ ನಾನೂ ಪ್ರಬಲ ಆಕಾಂಕ್ಷಿಯಾಗಿರುವೆ’ ಎಂದು ಅವರು ಹೇಳಿದರು.

**

ಎಲ್ಲರಂತೆ ನಾನೂ ಅರ್ಜಿ ಹಾಕಿದ್ದೇನೆ. ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ಬದ್ಧನಾಗಿರುತ್ತೇನೆ – ಬಿ.ಎಂ.ನಾಗರಾಜ, ಶಾಸಕ.

**

ಹಾಲಿ ಶಾಸಕರು ತಾವು ಸ್ಪರ್ಧಿಸಲ್ಲ ಎಂದು ವರ್ಷದ ಹಿಂದೆ ಘೋಷಿಸಿದ್ದರು.ಹೀಗಾಗಿ ಸಚಿವ ಲಾಡ್‌ ಸೇರಿದಂತೆ ಹಲವರು ಸ್ಪರ್ಧಿಸಲು ಸಲಹೆ ನೀಡಿದ್ದರು – ಎಚ್‌.ಎಂ.ಮಲ್ಲಿಕಾರ್ಜುನ, ಆಕಾಂಕ್ಷಿ‌’

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry